ಭಾನುವಾರ, ಜುಲೈ 25, 2021
22 °C
ನಿಷೇಧ, ದಂಡಕ್ಕೆ ಬೆದರದ ಜನ, ಕೊರೊನಾ ಸೋಂಕು ಹರಡುವ ಭೀತಿ

ಚಿತ್ರದುರ್ಗ | ತಂಬಾಕು ಉಗುಳುವಿಕೆಗೆ ಬೀಳದ ಕಡಿವಾಣ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆ ಮತ್ತು ಉಗುಳುವುದನ್ನು ನಿಷೇಧಿಸಿದರೂ, ಜಿಲ್ಲೆಯಲ್ಲಿ ಇದಕ್ಕೆ ಕಡಿವಾಣ ಬಿದ್ದಿಲ್ಲ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸದ ಪರಿಣಾಮ ಜನರು ಉಗುಳುವುದನ್ನು ಬಿಡುತ್ತಿಲ್ಲ.

‘ಕೋವಿಡ್‌–19’ ಹರಡುವುದನ್ನು ತಡೆಯುವ ಉದ್ದೇಶದಿಂದ ಆರೋಗ್ಯ ಇಲಾಖೆ ನಿಷೇಧದ ಆದೇಶ ಹೊರಡಿಸಿದೆ. ಲಾಕ್‌ಡೌನ್‌ ಜಾರಿಯಾದ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದಕ್ಕೆ ಜಿಲ್ಲಾಧಿಕಾರಿ ನಿಷೇಧ ಹೇರಿದ್ದರು. ತಪ್ಪು ಎಸಗಿದರೆ ₹ 1 ಸಾವಿರ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ, ದಂಡ ಹಾಕಿದ್ದು ಮಾತ್ರ ಅಪರೂಪ.

ಲಾಕ್‌ಡೌನ್ ಜಾರಿ ಇದ್ದಾಗ ತಂಬಾಕು ಉತ್ಪನ್ನ, ಸಿಗರೇಟ್‌ ಹಾಗೂ ಪಾನ್‌ ಮಸಾಲ ಮಾರಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಲಾಕ್‌ಡೌನ್‌ ನಿಯಮ ಸಡಿಲಗೊಂಡ ಬಳಿಕ ಮಾರಾಟಕ್ಕೆ ಅವಕಾಶ ಸಿಕ್ಕಿದೆ. ಆದರೆ, ವ್ಯಾಪಾರಿಗಳು ಇವುಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುದನ್ನು ಬಿಟ್ಟಿಲ್ಲ. ಸರ್ಕಾರ ವಿಧಿಸಿದ ನಿರ್ಬಂಧ, ನಿಷೇಧ ಮಾರಾಟಗಾರರಿಗೆ ಲಾಭದಾಯಕವಾಗಿಯೂ ಪರಿಣಮಿಸಿದೆ.

ಜಿಲ್ಲಾ ತಂಬಾಕು ನಿಯಂತ್ರಣ ಕೋಶ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾಯ್ದೆ (ಕೋಟ್ಪಾ) ಅನುಷ್ಠಾನದ ಹೊಣೆ ಹೊತ್ತಿದೆ. ಆರೋಗ್ಯ ಇಲಾಖೆಯ ಅಂಗವಾಗಿರುವ ಈ ಕೋಶ, ತಂಬಾಕು ಉತ್ಪನ್ನದಿಂದ ಉಂಟಾಗುವ ತೊಂದರೆಯ ಬಗ್ಗೆ ಜಾಗೃತಿ ಮೂಡಿಸಲು ಮಾತ್ರ ಸೀಮಿತವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಮಾರಾಟ, ಧೂಮಪಾನ ಮಾಡುವವರ ಮೇಲೆ ಆಗಾಗ ದಾಳಿ ನಡೆಸಿದರೂ ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗಿಲ್ಲ.

ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸುವ ಅಧಿಕಾರ ಆರೋಗ್ಯ ಇಲಾಖೆ, ಪೊಲೀಸರು ಹಾಗೂ ನಗರ ಸ್ಥಳೀಯ ಸಂಸ್ಥೆಗೆ ಇದೆ. ಆದರೆ, ನಿಯಮ ಉಲ್ಲಂಘಿಸಿದವರಿಗೆ ಮೂರು ಇಲಾಖೆ ದಂಡ ವಿಧಿಸಿದ್ದು ತೀರ ವಿರಳ. ಸಾರ್ವಜನಿಕ ಸ್ಥಳಗಳಲ್ಲಿ ಉಗಿದವರಿಗೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ನಗರ ಸ್ಥಳೀಯ ಸಂಸ್ಥೆ ಈವರೆಗೆ ದಂಡ ವಿಧಿಸಿಲ್ಲ.

‘ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಹಾಗೂ ಸೇವನೆ ತಡೆಯುವುದಕ್ಕೆ ಮಾತ್ರ ಕೋಟ್ಪಾದಲ್ಲಿ ಅವಕಾಶವಿದೆ. ಹೀಗಾಗಿ, ಉಗುಳುವವರ ವಿರುದ್ಧ ಕ್ರಮ ಜರುಗಿಸಲು ನಮಗೆ ಅಧಿಕಾರವಿಲ್ಲ. ಪೊಲೀಸರು ಮಾತ್ರ ಈ ಅಧಿಕಾರ ಹೊಂದಿದ್ದಾರೆ’ ಎಂಬುದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಯೊಬ್ಬರ ಅಭಿಪ್ರಾಯ.

‘ಸಾರ್ವಜನಿಕ ಸ್ಥಳದಲ್ಲಿ ಉಗುಳುವುದನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ. ಈ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲಾಗುತ್ತಿದೆ. ನಿಯಮ ಉಲ್ಲಂಘಿಸುವವರು ಬಹುತೇಕ ಬಡವರೇ ಆಗಿರುತ್ತಾರೆ. ಹೀಗಾಗಿ, ಯಾರೊಬ್ಬರಿಗೂ ದಂಡ ವಿಧಿಸಿಲ್ಲ’ ಎಂಬುದು ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಯೊಬ್ಬರ ಉತ್ತರ.

ಕೊರೊನಾ ಸೋಂಕು ಕಾಣಿಸಿಕೊಂಡ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ಇತರರಿಗೆ ಸುಲಭವಾಗಿ ಹರಡುತ್ತದೆ. ನಿಯಮ ಉಲ್ಲಂಘಿಸಿ ತಂಬಾಕು ಉತ್ಪನ್ನ ಉಗುಳುವವರ ವಿರುದ್ಧ ಭಾರತೀಯ ದಂಡ ಸಂಹಿತೆ 188, 268, 269 ಹಾಗೂ 270ನೇ ಸೆಕ್ಷನ್‌ಡಿ ಪ್ರಕರಣ ದಾಖಲಿಸಲು ಅವಕಾಶವಿದೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು