ಮಂಗಳವಾರ, ಡಿಸೆಂಬರ್ 7, 2021
20 °C
ಹೊಸದುರ್ಗ ತಾಲ್ಲೂಕಿನ ಹಲವು ಹಳ್ಳಿಗಳಿಗಿಲ್ಲ ಗ್ರಾಮೀಣ ಸಾರಿಗೆ ಸೌಲಭ್ಯ

ವಿದ್ಯಾರ್ಥಿಗಳಿಗೆ ತಪ್ಪದ ಸಾರಿಗೆ ಸಂಕಟ

ಎಸ್. ಸುರೇಶ್ ನೀರಗುಂದ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ತಾಲ್ಲೂಕಿನ ಗಡಿಭಾಗದಿಂದ ಪಟ್ಟಣದ ಹಲವು ಶಾಲೆ–ಕಾಲೇಜುಗಳಿಗೆ ಬಂದು ಹೋಗುವ ವಿದ್ಯಾರ್ಥಿಗಳಿಗೆ ಸಾರಿಗೆ ಸಂಪರ್ಕದ ಸಂಕಟ ತಪ್ಪಿಲ್ಲ.

ಪಟ್ಟಣದ ಪುರಸಭೆ, 33 ಗ್ರಾಮ ಪಂಚಾಯಿತಿ, 17 ತಾಲ್ಲೂಕು ಪಂಚಾಯಿತಿ, 6 ಜಿಲ್ಲಾ ಪಂಚಾಯಿತಿ ಹಾಗೂ ಒಂದು ವಿಧಾನಸಭೆ ಕ್ಷೇತ್ರ ಸೇರಿ 330ಕ್ಕೂ ಹೆಚ್ಚು ಹಳ್ಳಿ, 2,70,000ಕ್ಕೂ ಅಧಿಕ ಜನರು ಇರುವ ತಾಲ್ಲೂಕು ಇದಾಗಿದೆ. ಸ್ವಾತಂತ್ರ್ಯ ಬಂದು ಏಳೂವರೆ ದಶಕ ಕಳೆದರೂ ಬಹುತೇಕ ಹಳ್ಳಿಗಳು ಸಮರ್ಪಕವಾದ ಸಾರಿಗೆ ಸೌಲಭ್ಯದಿಂದ ವಂಚಿತವಾಗಿವೆ.

‘ಪಟ್ಟಣದಲ್ಲಿ 2016ರಲ್ಲಿ ಸರ್ಕಾರಿ ಬಸ್‌ ಡಿಪೊ ಆದಾಗ ಗ್ರಾಮೀಣ ಸಾರಿಗೆ ಸಮಸ್ಯೆ ನಿವಾರಣೆ ಆಗುತ್ತದೆ ಎಂಬ ನಿರೀಕ್ಷೆ ಜನರಲ್ಲಿ ಮೂಡಿತ್ತು. ಆದರೆ, ಆ ನಿರೀಕ್ಷೆ 6 ವರ್ಷಗಳಾದರೂ ಈಡೇರಿಲ್ಲ. ತಾಲ್ಲೂಕಿನ ಕೆಲವೆಡೆ ಗ್ರಾಮೀಣ ಭಾಗದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ಸುಗಳು ಸಹ ಕೋವಿಡ್‌ ಲಾಕ್‌ಡೌನ್‌ನಿಂದ ನಿಂತಿದ್ದವು. ಲಾಕ್‌ಡೌನ್‌ ತೆರವಾದರೂ ಹಲವು ಖಾಸಗಿ ಬಸ್‌ ಸೇವೆ ಆರಂಭವಾಗಿಲ್ಲ. ಇದರಿಂದಾಗಿ ಹಳ್ಳಿಗಳಿಂದ ಪಟ್ಟಣದ ಶಾಲೆ–ಕಾಲೇಜುಗಳಿಗೆ ಬರುವ ಸಾವಿರಾರು ವಿದ್ಯಾರ್ಥಿಗಳು ಸಾರಿಗೆ ಸೌಲಭ್ಯಕ್ಕೆ ಪರದಾಡುವಂತಾಗಿದೆ’ ಎನ್ನುತ್ತಾರೆ ಬಿ.ಇಡಿ ಪ್ರಶಿಕ್ಷಣಾರ್ಥಿ ಬಳ್ಳೇಕೆರೆ ಸಿ.ವೀಣಾ.

ಪಟ್ಟಣದಿಂದ ಸುಮಾರು 30 ಕಿ.ಮೀ ವರೆಗೂ ತಾಲ್ಲೂಕಿನ ಗಡಿ ವಿಸ್ತರಿಸಿದೆ. ಇಷ್ಟೊಂದು ವಿಸ್ತಾರವಾದ ಈ ತಾಲ್ಲೂಕಿನ ಕೇಂದ್ರ ಸ್ಥಾನ ಪಟ್ಟಣದಲ್ಲಿ ಒಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಿಯು, ಪಾಲಿಟೆಕ್ನಿಕ್‌, ಡಿಇಎಲ್‌ಇಡಿ ಹಾಗೂ ಐಟಿಐ ಕಾಲೇಜು, ತಲಾ 2 ಖಾಸಗಿ ಬಿ.ಇಡಿ ಕಾಲೇಜು, ನರ್ಸಿಂಗ್‌ ಹಾಗೂ ಪ್ಯಾರಾಮೆಡಿಕಲ್‌ ಕಾಲೇಜು, 3 ಖಾಸಗಿ ಐಟಿಐ ಹಾಗೂ 5 ಪಿಯು ಕಾಲೇಜುಗಳಿವೆ. ಹಲವು ಕಾಲೇಜುಗಳಲ್ಲಿ ನೇರ(ಆಫ್‌ಲೈನ್‌) ತರಗತಿಗಳು ಆರಂಭವಾಗಿವೆ. ತರಗತಿಗಳಿಗೆ ಬರಲು ಹಾಗೂ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಬಂದು ಹೋಗುವ ಸಾಕಷ್ಟು ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯದ ಕೊರತೆ ತುಂಬಾ ಕಾಡುತ್ತಿದೆ.

ತಾಲ್ಲೂಕಿನ ಗಡಿಗ್ರಾಮಗಳಾದ ಚಿಕ್ಕಬ್ಯಾಲದಕೆರೆ, ನಾಕಿಕೆರೆ, ಬುರುಡೇಕಟ್ಟೆ, ಕಂಗುವಳ್ಳಿ, ಆಲದಹಳ್ಳಿ, ದೊಡ್ಡತೇಕಲವಟ್ಟಿ, ದುಗ್ಗಾವರ ಗ್ರಾಮ ಸೇರಿ ನೆರೆಯ ತಾಲ್ಲೂಕಿನ ಹಳ್ಳಿಗಳಿಂದಲೂ ಬರುವ ವಿದ್ಯಾರ್ಥಿಗಳಿಗೆ ಸಿಕ್ಕ ಸಿಕ್ಕ ಬೈಕ್‌, ಟಾಟಾ ಏಸ್‌, ಲಗೇಜ್‌ ಆಟೊ, ಟೆಂಪೊಗಳೇ ಗತಿ ಎಂಬಂತಾಗಿದೆ. ಕಾಲೇಜು ಮುಗಿಸಿಕೊಂಡು ಸ್ವಗ್ರಾಮಗಳಿಗೆ ಮತ್ತೆ ವಾಪಸ್‌ ಹೋಗಲು ಬಸ್‌ ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾಯಬೇಕಿದೆ ಎಂದು ಬಿ.ಇಡಿ ಪ್ರಶಿಕ್ಷಣಾರ್ಥಿಗಳಾದ ಆರ್‌. ಹರೀಶ್‌, ಶಶಿಕುಮಾರ್‌ ಅಳಲು ತೋಡಿಕೊಂಡರು.

ಕಳೆದ ವರ್ಷ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬೈಕ್‌ನ ಹಿಂಬದಿಯಲ್ಲಿ ಕುಳಿತು ಬರುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಹಿಂಬದಿಯಿಂದ ಬಂದ ಲಾರಿ ಪಟ್ಟಣದಲ್ಲಿ ಡಿಕ್ಕಿ ಹೊಡೆದಿದ್ದರಿಂದ ಆ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇನ್ನೂ ಕಣ್ಣಿಗೆ ಕಟ್ಟುವಂತಿದೆ. ವಿದ್ಯಾರ್ಥಿಗಳ ಹಿತಕಾಯುವ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇಂತಹ ಅಪಘಾತಗಳು ಸಂಭವಿಸಲು ಕಾರಣವಾಗಿದೆ ಎಂಬುದು ವಿದ್ಯಾರ್ಥಿಗಳ ದೂರು.

ವಿದ್ಯಾರ್ಥಿ ಸ್ನೇಹಿಯಾಗದ ಸಾರಿಗೆ

ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ 2 ಕಿ.ಮೀ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಸುಮಾರು 4 ಕಿ.ಮೀ ದೂರದಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿದೆ. ವಿದ್ಯಾರ್ಥಿಗಳು ಬಂದು ಹೋಗಲು ಬಸ್‌ ಸೌಕರ್ಯವಿಲ್ಲ. ವಿದ್ಯಾರ್ಥಿಗಳು ನಡೆದುಕೊಂಡೇ ಬರುತ್ತಾರೆ. ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು. ನಗರ ಸಾರಿಗೆ ಸೌಲಭ್ಯ ಕಲ್ಪಿಸಿಕೊಡಿ ಎಂದು ಹಲವು ಬಾರಿ ಡಿಪೊ ವ್ಯವಸ್ಥಾಪಕರಿಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಸಾರಿಗೆ ವ್ಯವಸ್ಥೆ ಇನ್ನೂ ವಿದ್ಯಾರ್ಥಿ ಸ್ನೇಹಿಯಾಗಿಲ್ಲ ಎಂದು ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಪ್ರಾಂಶುಪಾಲ ಆರ್‌. ಸುನೀಲ್‌ ಬೇಸರ ವ್ಯಕ್ತಪಡಿಸಿದರು.

____

ನಮ್ಮೂರಿನ ಕಡೆಯಿಂದ ಪಟ್ಟಣದ ಕಾಲೇಜಿಗೆ ಬರಲು ಒಂದೂ ಸರ್ಕಾರಿ ಬಸ್‌ ಇಲ್ಲ. ಒಂದೆರಡು ಖಾಸಗಿ ಬಸ್ಸುಗಳಿದ್ದರೂ ಅವು ನಮ್ಮ ಸಮಯಕ್ಕೆ ಸಂಚರಿಸುತ್ತಿಲ್ಲ. ಇದರಿಂದಾಗಿ ಗಂಟೆಗಟ್ಟಲೇ ಕಾದು ಸಿಕ್ಕ ಸಿಕ್ಕ ವಾಹನಗಳಲ್ಲಿ ಬರಬೇಕಿದೆ. ಸುರಕ್ಷತೆ ಇರುವುದಿಲ್ಲ.

-ಸಿ.ವೀಣಾ, ಬಿ.ಇಡಿ ಪ್ರಶಿಕ್ಷಣಾರ್ಥಿ, ಬಳ್ಳೇಕೆರೆ

 

ಡಿಪೊ ಇದ್ದರೂ ಬಿ.ಇಡಿ ತರಬೇತಿ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ಸಕಾಲಕ್ಕೆ ಸಿಗುತ್ತಿಲ್ಲ. ಸಾಮಾನ್ಯ ಪದವಿ ಕಾಲೇಜು ಆರಂಭವಾದಾಗಷ್ಟೇ ಪಾಸ್‌ ಕೊಡುತ್ತೇವೆ ಎನ್ನುತ್ತಾರೆ. ಇದರಿಂದ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ.

-ಆರ್‌. ಹರೀಶ್‌, ಬಿ.ಇಡಿ ಪ್ರಶಿಕ್ಷಣಾರ್ಥಿ, ಹಾಗಲಕೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು