ಭಾನುವಾರ, ಮೇ 9, 2021
27 °C

ಸ್ವಂತ ಕಾರು ಮಾರಾಟ ಮಾಡಿ ಚಾಲಕರಾದ ಮಾಲೀಕರು!

ಕೆ.ಎಸ್.ಪ್ರಣವಕುಮಾರ್ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಟ್ಯಾಕ್ಸಿ, ಆಟೊ ಹಾಗೂ ಟ್ರಾವೆಲ್ಸ್ ಉದ್ಯಮದಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾದವರಿಗೆ ಭವಿಷ್ಯ ಇಲ್ಲವಾಗಿದೆ. ಸಾಲದ ಕೂಪಕ್ಕೆ ಸಿಲುಕಿ ನಲುಗಿದ್ದಾರೆ. ಉದ್ಯಮ ನಂಬಿ ವರ್ಷಗಳಿಂದ ದುಡಿಮೆಯ ಹಾದಿ ಕಂಡುಕೊಂಡ ಅನುಭವಿಗಳೂ ಹೈರಾಣಾಗಿ ವಾಹನಗಳ ಮಾರಾಟ ಮಾಡುತ್ತಿದ್ದಾರೆ.

ಕೋವಿಡ್ ಕಾರಣಕ್ಕೆ ಲಾಕ್‌ಡೌನ್ ಜಾರಿಯಾದಾಗಿನಿಂದ ಅನ್‌ಲಾಕ್‌ ಶುರುವಾದ ನಂತರದ ಕಳೆದ ಏಳು ತಿಂಗಳ ಅವಧಿಯಲ್ಲಿ ಈ ಉದ್ಯಮ ಭಾರಿ ಹೊಡೆತದಿಂದ ತತ್ತರಿಸಿದೆ. ಸಂಚಾರಕ್ಕೆ ಮುಕ್ತ ಅವಕಾಶ ದೊರೆತ ನಂತರವೂ ಆಟೊ ಹಾಗೂ ಟ್ಯಾಕ್ಸಿ ಸೇವೆಯನ್ನು ಜನರು ನಿರೀಕ್ಷಿತ ಮಟ್ಟದಲ್ಲಿ ಪಡೆಯುತ್ತಿಲ್ಲ. ವಾಹನಗಳ ಮಾಲೀಕರು ಹಾಗೂ ದುಡಿಮೆ ನಂಬಿ ಜೀವನ ಸಾಗಿಸುತ್ತಿದ್ದ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವನ ನಿರ್ವಹಣೆಗಾಗಿ ಕೆಲವರು ಸೇಲ್ಸ್ ಆ್ಯಂಡ್‌ ಸರ್ವಿಸ್ ಕಂಪನಿಗಳಿಗೂ ಸೇರಿಕೊಂಡಿದ್ದಾರೆ.

ಕೊರೊನಾ ಸೋಂಕಿನ ಆತಂಕ ಜನರನ್ನು ಆವರಿಸಿಕೊಂಡಿದೆ. ಸಾರ್ವಜನಿಕ ಸಾರಿಗೆ ಬಳಕೆಗೆ ಹಿಂದೇಟು ಹಾಕುವಂತೆ ಮಾಡಿದೆ. ಟ್ಯಾಕ್ಸಿ ಹಾಗೂ ಆಟೊ ಚಾಲಕರು ಸೋಂಕು ನಿವಾರಣೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ಪ್ರಯಾಣಿಕರಿಗೆ ವಿಶ್ವಾಸ ಮೂಡುತ್ತಿಲ್ಲ. ಇದರಿಂದ ಅನೇಕರು ವಾಹನಗಳನ್ನು ಮನೆ ಮುಂದೆ ನಿಲ್ಲಿಸಿದ್ದಾರೆ.

ಹೊಸ ವಾಹನ ಖರೀದಿಸಿದವರು ಸಾಲದ ಮಾಸಿಕ ಕಂತು (ಇಎಂಐ) ಪಾವತಿಸಲು ಪರದಾಡುತ್ತಿದ್ದಾರೆ. ‌ಇಎಂಐ ಪಾವತಿಸುವಂತೆ ಖಾಸಗಿ ಬ್ಯಾಂಕ್‌ಗಳು ಹಾಗೂ ಫೈನಾನ್ಸ್‌ ಸಂಸ್ಥೆಗಳು ಒತ್ತಡ ಹೇರುತ್ತಿವೆ.‌ ರಸ್ತೆ ತೆರಿಗೆ ಹಾಗೂ ವಿಮೆ ಪಾವತಿಸುವುದು ಕಷ್ಟವಾಗಿದೆ. ಇದರಿಂದಾಗಿ ಮಾರಾಟ ಮಾಡಲು ಮಾಲೀಕರು ನಿರ್ಧರಿಸುತ್ತಿದ್ದಾರೆ. 

ಸ್ವಂತ ವಾಹನದಲ್ಲೇ ಹೆಚ್ಚು ಸಂಚಾರ: ಬಹುತೇಕ ಪ್ರವಾಸಿ ತಾಣಗಳು ತೆರೆದಿದ್ದರೂ ಕೋವಿಡ್ ಹೆಚ್ಚುತ್ತಿರುವ ಕಾರಣಕ್ಕೆ ಮೊದಲಿನಂತೆ ಜನ ಬರುತ್ತಿಲ್ಲ. ಅಂತರ ರಾಜ್ಯ ಸಂಚಾರಕ್ಕೂ ಪೂರ್ಣ ಪ್ರಮಾಣದಲ್ಲಿ ಅವಕಾಶ ನೀಡಲಾಗಿದೆ. ಆದರೂ ಬಾಡಿಗೆ ವಾಹನಗಳಿಗೆ ಜನರು ಆಸಕ್ತಿ ತೋರುತ್ತಿಲ್ಲ. ಸೆಕೆಂಡ್ ಹ್ಯಾಂಡ್‌ ಕಾರುಗಳ ಮಾರಾಟಕ್ಕೆ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ಶಕ್ತ್ಯಾನುಸಾರ ಕಾರುಗಳ ಖರೀದಿಗೆ ಜನ ಮುಂದಾಗಿದ್ದಾರೆ. ಸ್ವಂತ ವಾಹನದಲ್ಲಿ ಸಂಚರಿಸುವುದು ಹೆಚ್ಚಾಗಿದೆ. ಟ್ಯಾಕ್ಸಿ, ಟ್ರಾವೆಲ್ಸ್‌ ಬಳಕೆ ಕಡಿಮೆಯಾಗಿದೆ. ಇದು ಮಾಲೀಕರನ್ನು ಆತಂಕಕ್ಕೆ ನೂಕಿದೆ.

‘ನನ್ನ ಬಳಿ ನಾಲ್ಕು ಕಾರುಗಳಿದ್ದವು. ದುಡಿಮೆಯೇ ಇಲ್ಲದ ಕಾರಣಕ್ಕೆ ಅವುಗಳ ನಿರ್ವಹಣೆ ಕಷ್ಟವಾಯಿತು. ಅನಿವಾರ್ಯವಾಗಿ ಮಾರಾಟ ಮಾಡಬೇಕಾಯಿತು. ಯಾವುದಾದರೂ ಬಾಡಿಗೆ ಬಂದರೆ ಈಗ ಸ್ನೇಹಿತರ ಕಾರಿನ ಚಾಲಕನಾಗಿ ಹೋಗುವಂಥ ದುಃಸ್ಥಿತಿ ನಿರ್ಮಾಣವಾಗಿದೆ. ನಿಜಕ್ಕೂ ನಮ್ಮ ಬದುಕು ಅತಂತ್ರವಾಗಿದೆ’ ಎನ್ನುತ್ತಾರೆ ಕೋಟೆನಾಡು ಲಘುವಾಹನ (ಟ್ಯಾಕ್ಸಿ) ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ನಿಂಗೇಶ್‌ ಗೌಡ.

‘ಖಾಸಗಿ ಬ್ಯಾಂಕ್‌ ಹಾಗೂ ಫೈನಾನ್ಸ್ ಸಂಸ್ಥೆ ಸಾಲದ ಕಂತು ಪಾವತಿಸುವಂತೆ ಸಂದೇಶ ನೀಡುತ್ತಿವೆ. ₹ 15 ಲಕ್ಷಕ್ಕೆ ಖರೀದಿಸಿದ್ದ ಇನೋವಾ ಕಾರಿಗೆ ಈಗ ಸುಮಾರು ₹ 9.5 ಲಕ್ಷ ಮೌಲ್ಯವಿದ್ದು, ಹಣಕಾಸು ತೊಂದರೆಯಿಂದಾಗಿ ₹7.5 ಲಕ್ಷಕ್ಕೆ ಮಾರಾಟ ಮಾಡಿದೆ’ ಎಂದು ಹೆಸರು ಹೇಳಲು ಇಚ್ಛಿಸದ ವಾಹನ ಮಾಲೀಕರೊಬ್ಬರು ನೊಂದು ನುಡಿದರು.

‘ಪ್ರವಾಸೋದ್ಯಮದ ವಿಪುಲ ಅವಕಾಶ ಹೊಂದಿರುವ ಕೋಟೆನಾಡಿನಲ್ಲಿ ನೂರಾರು ಟ್ಯಾಕ್ಸಿಗಳಿವೆ. ಚಿತ್ರದುರ್ಗ ನಗರವೊಂದರಲ್ಲೇ ಸಾವಿರಕ್ಕೂ ಅಧಿಕ ಆಟೊಗಳಿವೆ. ನಿತ್ಯ ಬೆಳಿಗ್ಗೆ ಸ್ಟ್ಯಾಂಡ್‌ಗೆ ಬಂದು ಟ್ಯಾಕ್ಸಿಯನ್ನು ಪಾಳಿಗೆ ನಿಲ್ಲಿಸಲಾಗುತ್ತದೆ. ಅನ್‌ಲಾಕ್‌ ಬಳಿಕ ಆರಂಭದ ಕೆಲ ದಿನ ಒಂದಷ್ಟು ಜನರು ಬಾಡಿಗೆ ಸೇವೆ ಪಡೆದರು. ಆದರೆ, ಹಲವು ದಿನಗಳಿಂದ ಖಾಲಿ ಕುಳಿತಿದ್ದೇವೆ. ಕಾರಿನ ಮೇಲಿನ ದೂಳು ಕೊಡವಿ ಖಾಲಿ ಕೈಯಲ್ಲಿ ಮನೆಗೆ ಮರಳುತ್ತಿದ್ದೇವೆ. ದಿನ ಕಳೆದಂತೆ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ’ ಎಂದು ವೃತ್ತಿಯಲ್ಲಿರುವ ಹಲವರು ಅಳಲು ತೋಡಿಕೊಂಡರು.

ಚಾಲಕರಿಗೆ ಸಿಕ್ಕಿಲ್ಲ ಸಹಾಯಧನ

ಲಾಕ್‌ಡೌನ್‌ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಆಟೊ ಹಾಗೂ ಟ್ಯಾಕ್ಸಿ ಚಾಲಕರ ಖಾತೆಗೆ ₹ 5 ಸಾವಿರ ನೆರವು ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ನೈಜ ಚಾಲಕರ ಪೈಕಿ ನೂರಾರು ಫಲಾನುಭವಿಗಳು ಈ ಸಹಾಯಧನದಿಂದ ವಂಚಿತರಾಗುತ್ತಿದ್ದಾರೆ.

‘ಸೇವಾಸಿಂಧು’ ಜಾಲತಾಣದ ಮೂಲಕ ಆಸಕ್ತರು ಅರ್ಜಿ ಸಲ್ಲಿಸಿದ್ದರು. ಆಟೊ ಹಾಗೂ ಟ್ಯಾಕ್ಸಿಯ ದಾಖಲೆ ಒದಗಿಸಿದ್ದರು. ಬಹುತೇಕ ಆಟೊ ಮತ್ತು ಟ್ಯಾಕ್ಸಿಗಳ ಮಾಲೀಕ, ಚಾಲಕ ಬೇರೆ ಬೇರೆ ಆಗಿರುತ್ತಾರೆ. ಹೀಗಾಗಿ, ವಾಹನದ ದಾಖಲೆಗಳನ್ನು ಚಾಲಕರಿಗೆ ಒದಗಿಸಲು ಸಾಧ್ಯವಾಗಿಲ್ಲ.

‘ಕೊರೊನಾಗೆ ಹೆದರಿ ಆಟೊ ಹತ್ತುತ್ತಿಲ್ಲ’

ಹಿರಿಯೂರು: ‘ಲಾಕ್‌ಡೌನ್ ಸಮಯದಲ್ಲಿ ಎರಡು ತಿಂಗಳು ಆಟೊ ಬೀದಿಗೆ ಇಳಿದಿರಲಿಲ್ಲ. ಈಗ ಕೊರೊನಾಗೆ ಹೆದರಿರುವ ಜನ ಆಟೊ ಹತ್ತುವ ಧೈರ್ಯ ಮಾಡುತ್ತಿಲ್ಲ. ನಮ್ಮ ಸಂಕಷ್ಟಗಳಿಗೆ ಕೊನೆಯೇ ಇಲ್ಲ...’

ಸುಮಾರು 30 ವರ್ಷಗಳಿಂದದ ಆಟೊ ಓಡಿಸುತ್ತಿರುವ ಆದಿವಾಲ ಆಟೊ ನಿಲ್ದಾಣದ ರಂಗಣ್ಣ ಅವರ ನೋವಿನ ಮಾತುಗಳಿವು.

‘ಎರಡು ತಿಂಗಳು ಆಟೊ ನಿಲ್ಲಿಸಿದ್ದರಿಂದ ₹ 10 ಸಾವಿರ ಖರ್ಚಾಯಿತು. ಮಾರ್ಚ್‌ಗೆ ಮೊದಲು ಆದಿವಾಲ ಗ್ರಾಮದಿಂದ ಹಿರಿಯೂರಿಗೆ ಐದಾರು ಟ್ರಿಪ್ ಮಾಡುತ್ತಿದ್ದೆ. ಈಗ ಮೂವರು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಗಂಟೆಗಟ್ಟಲೆ ಕಾಯಬೇಕು’ ಎನ್ನುತ್ತಾರೆ ಅವರು.

ಪರಿಹಾರದ ಹಣ ಬಂದಿಲ್ಲ: ‘ಸರ್ಕಾರ ಆಟೊ ಚಾಲಕರಿಗೆ ಘೋಷಿಸಿರುವ ಪರಿಹಾರದ ಹಣ ಬಹಳಷ್ಟು ಜನರಿಗೆ ಬಂದಿಲ್ಲ. ಬೆಂಗಳೂರು, ಶಿರಾ, ಹುಳಿಯಾರು, ತುಮಕೂರುಗಳಿಂದ ನೂರಾರು ಆಟೊಗಳು ಹೊಸದಾಗಿ ಇಲ್ಲಿಗೆ ಬಂದಿವೆ. ಹಿರಿಯೂರಿಗೆ 500 ಆಟೊ ಸಾಕಾಗುತ್ತದೆ. ಆದರೆ, 1,800ಕ್ಕೂ ಹೆಚ್ಚು ಆಟೊಗಳಿವೆ. ಹೀಗಾಗಿ, ಪ್ರಯಾಣಿಕರು ಸಿಗುವುದು ಕಷ್ಟವಾಗಿದೆ’ ಎನ್ನುತ್ತಾರೆ ಜೈ ಕರ್ನಾಟಕ ಆಟೊ ನಿಲ್ದಾಣದ ಕುಮಾರ್.

‘ನಗರಕ್ಕೆ ಹೊಂದಿಕೊಂಡ ಹಳ್ಳಿಗಳ ಜನ ಆಟೊಗಳಲ್ಲಿ ಬರುತ್ತಿದ್ದರು. ಸೋಂಕಿಗೆ ಹೆದರಿ ನಗರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಇಂಧನ ದರ ಹೆಚ್ಚಿದ್ದು, ವೃತ್ತಿಯೇ ಬೇಸರ ತರಿಸಿದೆ’ ಎಂದು 15 ವರ್ಷಗಳಿಂದ ಆಟೊ ಓಡಿಸುತ್ತಿರುವ ತಿಮ್ಮಣ್ಣ ಬೇಸರ ವ್ಯಕ್ತಪಡಿಸಿದರು.

ಹಮಾಲಿ ಕೆಲಸ: ‘ಸ್ವಂತ ಆಟೊ ಖರೀದಿಸುವಷ್ಟು ಬಂಡವಾಳ ಇರಲಿಲ್ಲ. ಬಾಡಿಗೆ ಪಡೆದು ಓಡಿಸುತ್ತಿದ್ದೆ. ಮಾಲೀಕರಿಗೆ ದಿನ ಬಾಡಿಗೆ ಕೊಡುವಷ್ಟು ಹಣವೂ ಕೈಸೇರದ ಕಾರಣಕ್ಕೆ ಆಟೊ ಬಿಟ್ಟು ಲಾರಿಗಳಿಂದ ಸರಕು ಇಳಿಸುವ ಕೆಲಸ ಮಾಡುತ್ತಿರುವೆ. ಶರೀರಕ್ಕೆ ನೋವು ಎನಿಸಿದರೂ ಬಂಡವಾಳವಿಲ್ಲದ ದುಡಿಮೆ’ ಎಂದು ಯುವಕ ಮುನೀರ್ ಬೇಸರ ಹೊರಹಾಕಿದರು.

ಸಂಕಷ್ಟದಲ್ಲಿ ಚಾಲಕರ ಬದುಕು

ಚಳ್ಳಕೆರೆ: ಏಳು ತಿಂಗಳಿಂದ ಯಾವುದೇ ದುಡಿಮೆ ಇಲ್ಲದ ಕಾರಣ ಆಟೊ ಮತ್ತು ಟೆಂಪೊ ಚಾಲಕರ ಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಚಾಲಕರ ಕುಟುಂಬಗಳು ಆರ್ಥಿಕ ತೊಂದರೆ ಅನುಭವಿಸುವಂತಾಗಿದೆ.

ದಿನಕ್ಕೆ ಕನಿಷ್ಠ ₹ 500ರಿಂದ ₹ 1,500ರವರೆಗೆ ಬಾಡಿಗೆ ದುಡಿಯುತ್ತಿದ್ದ ಚಾಲಕರು, ಇಡೀ ದಿನ ಆಟೊ ಓಡಿಸಿದರೂ ಬರುವ ಬಾಡಿಗೆ ಹಣ ಸಿಲಿಂಡರ್ ತುಂಬಿಸಲು ಸಾಕಾಗುತ್ತಿಲ್ಲ. ರಾತ್ರಿ ವೇಳೆಯ ಬಾಡಿಗೆಯಂತೂ ಇಲ್ಲವೇ ಇಲ್ಲ. ಚಾಲಕರ ಬದುಕನ್ನು ಮತ್ತಷ್ಟು ಸಂಕಷ್ಟ ಸ್ಥಿತಿಗೆ ತಳ್ಳಿದೆ.

ಎಲ್ಲೆಡೆ ಹಬ್ಬುತ್ತಿರುವ ಕೊರೊನಾ ಭೀತಿಯಿಂದ ಜನಸಂಚಾರ ವಿರಳವಾಗಿದೆ. ಬಸ್, ಲಾರಿ, ಕಾರು ಸೇರಿ ಇತರೆ ವಾಹನ ಎರಡು ಪಟ್ಟು ಬಾಡಿಗೆ ಹೆಚ್ಚಳ ಮಾಡಿವೆ. ಬಾಡಿಗೆ ಏರಿಸಲು ಮುಂದಾದರೆ ಪ್ರಯಾಣಿಕರು ಆಟೊ ಹತ್ತಲು ಹಿಂಜರಿಯುತ್ತಾರೆ ಎನ್ನುತ್ತಾರೆ ಅನೇಕ ಚಾಲಕರು.

ಹಗಲು-ರಾತ್ರಿ ಆಟೊ ಓಡಿಸಿದರೂ ₹300 ಬಾಡಿಗೆ ದೊರೆಯುವುದು ಕಷ್ಟ. ಈ ದುಡಿಮೆಯಲ್ಲೇ ತಂದೆ, ತಾಯಿ, ಹೆಂಡತಿ, ಮಕ್ಕಳನ್ನು ನೋಡಿಕೊಳ್ಳಲು ತುಂಬಾ ಕಷ್ಟವಾಗುತ್ತಿದೆ ಎನ್ನುತ್ತಾರೆ ಆಟೊ ಚಾಲಕ ಚಿತ್ರಯ್ಯನಹಟ್ಟಿ ಓಬಣ್ಣ.

***

ಲಘು ವಾಹನದಿಂದ ಬದುಕು ಕಟ್ಟಿಕೊಂಡಿದ್ದೇನೆ. ಆದರೆ, ಕೋವಿಡ್‌ ನಂತರ ನಷ್ಟ ಅನುಭವಿಸುವಂತಾಗಿದೆ. ಇದ್ದ ಐದು ಕಾರುಗಳಲ್ಲಿ ಮೂರನ್ನು ಮಾರಾಟ ಮಾಡಿದ್ದೇನೆ.
– ರಾಮು, ಟ್ಯಾಕ್ಸಿ ಮಾಲೀಕ

***

ಹತ್ತು ರೂಪಾಯಿ ದರ ಪಡೆಯುತ್ತಿದ್ದ ಜಾಗದಲ್ಲಿ ₹ 20 ಪಡೆಯುತ್ತಿದ್ದೇವೆ. ಆದರೂ ದಿನವೆಲ್ಲ ದುಡಿದರೂ ₹ 200 ಉಳಿಯದು.
ರಂಗಣ್ಣ, ಆಟೊ ಚಾಲಕ

**

ಚಿತ್ರದುರ್ಗ ಜಿಲ್ಲೆಯ ಅಂಕಿ-ಅಂಶ

12,000: ಜಿಲ್ಲೆಯಲ್ಲಿರುವ ಆಟೊಗಳು

3,600: ಜಿಲ್ಲೆಯಲ್ಲಿರುವ ಟ್ಯಾಕ್ಸಿಗಳು

4,988: ಸಹಾಯಧನಕ್ಕೆ ಅರ್ಜಿ ಸಲ್ಲಿಸಿದವರು

4,394: ₹ 5 ಸಾವಿರ ಸಹಾಯಧನ ಪಡೆದವರು

 

ಆಧಾರ: ಪ್ರಾದೇಶಿಕ ಸಾರಿಗೆ ಇಲಾಖೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು