ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಳಕಾಲ್ಮುರು: ಅಪಘಾತ ವಲಯಗಳಾದ ಅಂಡರ್‌ಪಾಸ್‌ಗಳು

ಅವೈಜ್ಞಾನಿಕ ನಿರ್ಮಾಣ ಆರೋಪ, ಜೀವ ಭಯದಲ್ಲಿ ಪ್ರಯಾಣ
Published 27 ಆಗಸ್ಟ್ 2024, 5:24 IST
Last Updated 27 ಆಗಸ್ಟ್ 2024, 5:24 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ವಿವಿಧೆಡೆ ರೈಲ್ವೆ ಅಂಡರ್‌ಪಾಸ್‌ಗಳು ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಕಾರಣ ಅಪಘಾತ ವಲಯಗಳಾಗಿ ಪರಿಣಮಿಸಿದೆ.

ತಾಲ್ಲೂಕಿನ ಬಿ.ಜಿ. ಕೆರೆ, ಮೊಳಕಾಲ್ಮುರು ಪಟ್ಟಣ, ಬೆಳವಿನಮರದ ಹಟ್ಟಿ, ಮಾರಮ್ಮನ ಹಳ್ಳಿ, ಎದ್ದಲಬೊಮ್ಮಯ್ಯನ ಹಟ್ಟಿ ಗ್ರಾಮಗಳ ಬಳಿ ರೈಲು ಮಾರ್ಗವಿದೆ. ಮೊದಲಿದ್ದ ರೈಲ್ವೆ ಗೇಟ್‌ ವ್ಯವಸ್ಥೆಯಡಿ ವಾಹನ ಸವಾರರು ರೈಲು ಹೋಗುವುದನ್ನೇ ಕಾಯುತ್ತ ನಿಲ್ಲುವುದನ್ನು ತಪ್ಪಿಸಲು, 4 ವರ್ಷಗಳ ಹಿಂದೆ ಇಲ್ಲಿ ಅಂಡರ್‌ಪಾಸ್‌ ನಿರ್ಮಿಸಲಾಗಿದೆ.

ಬಿ.ಜಿ. ಕೆರೆ ಮತ್ತು ಮೊಳಕಾಲ್ಮುರು ಅಂಡರ್‌ಪಾಸ್‌ನಲ್ಲಿ ಮೊಳಕಾಲ್ಮುರು- ಮಲ್ಪೆ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಈ ಅಂಡರ್‌ಪಾಸ್‌ ನಿರ್ಮಾಣದ ವೇಳೆ ಹಲವು ದೂರುಗಳು ಕೇಳಿಬಂದರೂ ಸಂಬಂಧಪಟ್ಟವರು ಗಮನಹರಿಸಲಿಲ್ಲ. ಅಂಡರ್‌ಪಾಸ್‌ನಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡಬೇಕು ಅಥವಾ ಎರಡು ವಾಹನಗಳು ಸಂಚರಿಸುವಷ್ಟು ವಿಸ್ತರಿಸಬೇಕು ಎಂದು ಮನವಿ ಮಾಡಿದರೂ ರೈಲ್ವೆ ಅಧಿಕಾರಿಗಳು ಗಮನಹರಿಸಲಿಲ್ಲ. ಈಗ ನಿರ್ಮಿಸಿರುವ ಅಂಡರ್‌ಪಾಸ್‌ನಲ್ಲಿ ಒಂದು ವಾಹನ ಸರಾಗವಾಗಿ ಹೋಗುವುದು ಕಷ್ಟವಾಗಿದೆ ಎಂಬುದು ಸ್ಥಳೀಯರ ದೂರು.

ಈ ಅಂಡರ್‌ಪಾಸ್‌ಗಳನ್ನು ಮಂಜೂರು ಮಾಡುವ ಮುನ್ನ 10 ವರ್ಷದ ಹಿಂದೆ ವಾಹನ ಓಡಾಟದ ಗಣತಿ ನಡೆಸಲಾಗಿತ್ತು. ಇದರ ಆಧಾರದಲ್ಲಿ ಅಂಡರ್‌ಪಾಸ್‌ ನಿರ್ಮಿಸಲಾಗಿದೆ. ಗಣತಿ ವೇಳೆ ಜಿಲ್ಲಾ ಮುಖ್ಯರಸ್ತೆಯಾಗಿದ್ದ ರಸ್ತೆ ಈಗ ರಾಜ್ಯ ಹೆದ್ದಾರಿಯಾಗಿದೆ. ಅಂಧ್ರಪ್ರದೇಶಕ್ಕೆ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಹೆಚ್ಚು ವಾಹನಗಳು ಓಡಾಡುತ್ತವೆ. ಕೆಲ ಎತ್ತರದ ವಾಹನಗಳು ಈ ಅಂಡರ್‌ಪಾಸ್‌ನಲ್ಲಿ ಹೋಗುವುದು ಕಷ್ಟ ಎಂದು ಹಲವರು ಬೇರೆ ಮಾರ್ಗದಲ್ಲಿ ಓಡಾಡುತ್ತಾರೆ ಎಂದು ಸ್ಥಳೀಯ ನಿವಾಸಿ ತಿಪ್ಪೇಸ್ವಾಮಿ ಹೇಳಿದರು.

ಅಂಡರ್‌ಪಾಸ್‌ಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದು, ಎದುರು ಬರುವ ವಾಹನಗಳು ಸರಿಯಾಗಿ ಕಾಣಿಸುವುದಿಲ್ಲ. ಇದರಿಂದ ಪ್ರಾಣಭಯದಲ್ಲಿ ಓಡಾಡಬೇಕು. ನಿತ್ಯ ಸಣ್ಣಪುಟ್ಟ ಅಪಘಾತಗಳು ಸಾಮಾನ್ಯ ಎನ್ನುವಂತಾಗಿದೆ.

‘ಹಂಪ್ಸ್‌ ನಿರ್ಮಿಸಿ ಎಂದು ಮನವಿ ಮಾಡಿದರೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ರೈಲ್ವೆ ಅಧಿಕಾರಿಗಳು ಸ್ಥಳೀಯವಾಗಿ ಲಭ್ಯವಾಗುವುದಿಲ್ಲ. ಮಳೆಗಾಲದಲ್ಲಿ ನೀರು ನಿಲ್ಲುತ್ತದೆ. ಇದರಿಂದ ಸಂಚಾರ ಕಷ್ಟಕರವಾಗಿದೆ. ಆದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮರ್ಲಹಳ್ಳಿ ರವಿಕುಮಾರ್‌ ದೂರಿದರು.

ಬಿ.ಜಿ. ಕೆರೆ, ಮೊಳಕಾಲ್ಮುರು ಅಂಡರ್‌ಪಾಸ್‌ಗಳನ್ನು ಇಳಿಜಾರಿನಲ್ಲಿ ನಿರ್ಮಿಸಿರುವ ಕಾರಣ ಎದುರು ವಾಹನ ಬಂದಲ್ಲಿ ದಿಢೀರ್‌ ವಾಹನ ನಿಯಂತ್ರಿಸುವುದು ಕಷ್ಟ. ನಿತ್ಯ ಇಲ್ಲಿ ಸಾವಿರಾರು ವಾಹನ ಸಂಚರಿಸುತ್ತವೆ. ರಾತ್ರಿ ಸಂಚರಿಸುವವರಿಗೆ ಸೇತುವೆ ಅಡಿ  ದೀಪಗಳ ವ್ಯವಸ್ಥೆಯನ್ನೂ  ಮಾಡದ್ದರಿಂದ ಜೀವಭಯ ಕಾಡುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ
ಒತ್ತಾಯ.

ಬಿ.ಜಿ. ಕೆರೆಯಿಂದ ಮೊಳಕಾಲ್ಮುರುವರೆಗೆ ಅಗತ್ಯವಿರುವ ಕಡೆಗಳಲ್ಲಿ ಹಂಪ್ಸ್‌ ನಿರ್ಮಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಅಧಿಕಾರಿಗಳನ್ನೂ ಸ್ಥಳಕ್ಕೆ ಕರೆದುಕೊಂಡು ಹೋಗಿ ಸಮಸ್ಯೆ ಮನವರಿಕೆ ಮಾಡಿದ್ದೇವೆ.
–ಜಿ. ಪಾಂಡುರಂಗಪ್ಪ, ಪಿಎಸ್‌ಐ
ರೈಲ್ವೆ ಅಧಿಕಾರಿಗಳು ಅಂಡರ್‌ಪಾಸ್‌ಗಳಲ್ಲಿ ಯಾವುದೇ ಅಭಿವೃದ್ಧಿ ಅಥವಾ ದುರಸ್ತಿ ಕಾರ್ಯ ಮಾಡಲು ಅವಕಾಶ ನೀಡುತ್ತಿಲ್ಲ. ಪ್ರಕರಣ ದಾಖಲಿಸುತ್ತಾರೆ. ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಗಮನಕ್ಕೆ ತರಲಾಗುವುದು.
– ಲಕ್ಷ್ಮೀನಾರಾಯಣ್‌, ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT