ಶುಕ್ರವಾರ, ಜನವರಿ 22, 2021
25 °C
ಧಾರಾಕಾರವಾಗಿ ಸುರಿದ ಮಳೆ * ಜಮೀನು, ತೋಟಗಳಿಗೆ ನುಗ್ಗಿದ ನೀರು

ಅಕಾಲಿಕ ಮಳೆ: ಆತಂಕದಲ್ಲಿ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಜಿಲ್ಲೆಯಾದ್ಯಂತ ಬುಧವಾರ ರಾತ್ರಿಯಿಡೀ ಧಾರಾಕಾರ ಮಳೆಯಾಗಿದ್ದು, ಅಕಾಲಿಕ ವರ್ಷಧಾರೆ ಈರುಳ್ಳಿ ಬೆಳೆಗಾರರ ನಿದ್ದೆ ಕೆಡಿಸಿದೆ. ರಾಗಿ, ಪಪ್ಪಾಯಿ, ಸಿರಿಧಾನ್ಯ ಬೆಳೆಯುವ ರೈತರಲ್ಲೂ ಆತಂಕ ಉಂಟು ಮಾಡಿದೆ.

ಹಿಂದಿನ ವರ್ಷ ಈರುಳ್ಳಿ ಬೆಲೆ ಹೆಚ್ಚಳವಾದ ಕಾರಣ ಹಿಂಗಾರು ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಈರುಳ್ಳಿ ಬೆಳೆಯಲು ರೈತರು ಉತ್ಸುಕರಾದರು. ಉತ್ತಮ ಫಸಲು ಕೈಸೇರುವ ಸಮಯದಲ್ಲಿ ಸುರಿದ ಮಳೆಯಿಂದಾಗಿ ಅನೇಕ ರೈತರಲ್ಲಿ ಆತಂಕ ಶುರುವಾಗಿದೆ. ನಾಲ್ಕೈದು ದಿನ ಹೀಗೆ ಮಳೆಯಾದರೆ ಈರುಳ್ಳಿಗೆ ಸುಳಿ ಕೊಳೆ ರೋಗ ಕಾಣಿಸಿಕೊಂಡು ಬೆಳೆ ಸಂಪೂರ್ಣ ನಾಶವಾಗಲಿದೆ. ಮುಂಗಾರಿನಲ್ಲಿ ಅತಿ ಹೆಚ್ಚು ಮಳೆ ಸುರಿದಾಗಲೂ ಈರುಳ್ಳಿ ಬೆಳೆ ನಾಶವಾಗಿತ್ತು.

ಇನ್ನೂ ತಗ್ಗು ಪ್ರದೇಶದಲ್ಲಿರುವ ಅನೇಕ ರೈತರ ಜಮೀನು, ತೋಟಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಕಡಲೆ ನೆಲ ಕಚ್ಚುವ ಸಾಧ್ಯತೆ ಇದೆ. ಪಪ್ಪಾಯಿ ಕೂಡ ಸೂಕ್ಷ್ಮ ಬೆಳೆಯಾಗಿದ್ದು, ಮಳೆ ಮುಂದುವರೆದರೆ ಬೆಳೆ ನಾಶವಾಗುವ ಭೀತಿ ರೈತರನ್ನು ಕಾಡತೊಡಗಿದೆ. ಸಿರಿಧಾನ್ಯ ಬೆಳೆಯುವ ರೈತರು ಕೂಡ ಅನಿರೀಕ್ಷಿತ ಮಳೆಯಿಂದಾಗಿ ಕಂಗಾಲಾಗಿದ್ದಾರೆ.

ಒಕ್ಕಣೆ ಸಮಯದಲ್ಲಿ ಸುರಿದ ಈ ಮಳೆಗೆ ಹಾಗೂ ಮೋಡಕವಿದ ವಾತಾವರಣದಿಂದ ಚಿತ್ರದುರ್ಗ ತಾಲ್ಲೂಕಿನ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ರಾಗಿಯೂ ಪ್ರಮುಖ ಬೆಳೆಯಾಗಿದ್ದು, ರೈತರು ರಾಗಿ ಪೈರು ಕೊಯಿಲು ಮಾಡಿ ಮೆದೆ ಹಾಕಿಕೊಂಡಿದ್ದಾರೆ. ಕಣದಲ್ಲಿ ಒಕ್ಕಣೆ ಮಾಡಿಕೊಳ್ಳಲು ತಯಾರು ಮಾಡಿಕೊಂಡಿರುವಾಗಲೇ ಮಳೆ ಸುರಿದಿರುವುದು ಅವರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ.

ಕಣದಲ್ಲಿ ತೆನೆ ರಾಶಿ ಮಾಡಿ ಒಕ್ಕಣೆಗೆ ನಿಂತಿದ್ದಾರೆ. ಇಂತಹ ಕಡೆಗಳಲ್ಲಿ ಅಕಾಲಿಕ ಮಳೆಯಿಂದಾಗಿ ನಷ್ಟವಾಗುವ ಸಾಧ್ಯತೆ ಇದೆ. ತೇವಾಂಶ ಹೆಚ್ಚಾದಷ್ಟು ರಾಗಿ ಮೊಳೆಕೆಯಾಗುವ ಸಾಧ್ಯತೆಯೂ ಇದೆ. ಹೀಗಾದಲ್ಲಿ ಕೈಗೆ ಬಂದ ಫಸಲು ಬಾಯಿಗೆ ಬರದಂತೆ ಆಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಗುರುವಾರ ಕೂಡ ಜಿಲ್ಲೆಯಲ್ಲಿ ಮೋಡಕವಿದ ವಾತಾವರಣ, ಮುಂಜಾನೆ ಜಿಟಿ-ಜಿಟಿ ಮಳೆ, ಚಳಿ ಹಾಗೂ ಶೀತಗಾಳಿ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ಮಾವು ಸೇರಿ ವಿವಿಧ ಹೂಗಳು ರೋಗ ಪೀಡಿತವಾಗುವ ಸಾಧ್ಯತೆ ಇದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

‘ಮಳೆ ಹೀಗೆಯೇ ಇನ್ನೆರಡು ದಿನ ಮುಂದುವರಿದರೂ ಶೇ 60ರಷ್ಟು ಹೂ ಬೆಳೆ ಹಾಳಾಗುತ್ತದೆ. ಅದರಲ್ಲೂ ಸೇವಂತಿ ಪುಷ್ಪ ಹೆಚ್ಚು ಉಳಿಯುವುದಿಲ್ಲ’ ಎಂದು ಚಿತ್ರದುರ್ಗ ತಾಲ್ಲೂಕಿನ ಹೂವು ಬೆಳೆಗಾರರಾದ ಶ್ರೀನಿವಾಸ್ ಆತಂಕ ವ್ಯಕ್ತಪಡಿಸಿದ್ದಾರೆ.

‘ಈಗ ಸುರಿಯುತ್ತಿರುವ ಮಳೆ ತೀರ ಅಕಾಲಿಕವಾಗಿದೆ. ಹಿಂದೆ ಎಂದೂ ಜನವರಿಯಲ್ಲಿ ಈ ರೀತಿ ಅಕಾಲಿಕ ಮಳೆ ಆಗಿರಲಿಲ್ಲ’ ಎಂದು ರೈತ ಶಿವರುದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

‘ಜಿಲ್ಲೆಯ ತುರುವನೂರು, ಐಮಂಗಲ, ಧರ್ಮಪುರ ಭಾಗದ ಕೆಲವೆಡೆ ಜಮೀನುಗಳಿಗೆ ನೀರು ನುಗ್ಗಿದೆ. ಈ ಭಾಗಗಳಲ್ಲಿ ಕಪ್ಪು ಮಣ್ಣು ಹೆಚ್ಚಿದ್ದು, ಭೂಮಿಯಲ್ಲಿ ನೀರು ಇಂಗಿದಲ್ಲಿ, ಸರಾಗವಾಗಿ ಮುಂದೆ ಹರಿದಲ್ಲಿ ಬೆಳೆಗಳಿಗೆ ತೊಂದರೆ ಆಗುವುದಿಲ್ಲ. ಒಂದೇ ಮಳೆಗೆ ಹೆಚ್ಚು ಹಾನಿ ಉಂಟಾಗುವ ಸಾಧ್ಯತೆ ಕಡಿಮೆ. ಆದರೂ ಅಧಿಕಾರಿಗಳಿಗೆ ಪರಿಶೀಲಿಸಲು ಸೂಚನೆ ನೀಡಿದ್ದೇನೆ’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಸದಾಶಿವ. 

ರಾತ್ರಿಯಿಡೀ ಮಳೆ: ಸಂಚಾರಕ್ಕೂ ತೊಂದರೆ

ಜಿಲ್ಲೆಯಲ್ಲಿ ಕೆಲ ದಿನಗಳಿಂದ ಮೋಡಕವಿದ ವಾತಾವರಣವಿತ್ತು. ಬುಧವಾರ ರಾತ್ರಿ 10ರ ಸುಮಾರಿಗೆ ಆರಂಭವಾದ ಮಳೆ ಕೆಲವೇ ಕ್ಷಣಗಳಲ್ಲಿ ವೇಗ ಪಡೆಯಿತು. ಗುರುವಾರ ಮುಂಜಾನೆವರೆಗೂ ಮಳೆಯಾಯಿತು.

ತುರುವನೂರು ರಸ್ತೆ ಮಾರ್ಗ ಸೇರಿ ರೈಲು ಸಂಚರಿಸಲು ಅವೈಜ್ಞಾನಿಕವಾಗಿ ನಿರ್ಮಿಸಿರುವ ಕೆಳಸೇತುವೆಗಳು ಮಳೆ ನೀರಿನಿಂದ ಜಲಾವ್ರತವಾದವು. ಸರಾಗವಾಗಿ ನೀರು ಹರಿಯದ ಕಾರಣ ವಾಹನ ಸವಾರರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಿದರು. ತುರುವನೂರು ಮಾರ್ಗದಲ್ಲಿ ಸಾಗುವವರು ಮುತ್ತಯ್ಯನಹಟ್ಟಿ ಮಾರ್ಗವಾಗಿ ಹೊಸಪೇಟೆ ರಸ್ತೆಯಲ್ಲಿ ಸಂಚರಿಸಬೇಕಾಯಿತು.

ಮೆದೇಹಳ್ಳಿ ರಸ್ತೆ ಮಾರ್ಗದ ಕೆಳಸೇತುವೆ ಭರ್ತಿಯಾಗಿತ್ತು. ಮಲ್ಲಾಪುರ ಕೆರೆ ಕೋಡಿ ಬಿದ್ದಿದ್ದರಿಂದ ಪಿಳ್ಳೆಕೇರನಹಳ್ಳಿ ಹಾಗೂ ಮಲ್ಲಾಪುರ ಗ್ರಾಮಗಳ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲೂ ನೀರು ರಸ್ತೆಯ ಮೇಲೆ ಹರಿದು ವಾಹನ ಸವಾರರಿಗೆ ತೊಂದರೆ ಉಂಟು ಮಾಡಿತು. ಐತಿಹಾಸಿಕ ಕೋಟೆ, ಜೋಗಿಮಟ್ಟಿ, ಚಂದ್ರವಳ್ಳಿ ಸೇರಿ ಬೆಟ್ಟದ ತಪ್ಪಲಿನಿಂದ, ಮೆಟ್ಟಿಲುಗಳಿಂದ ನೀರು ಜಲಧಾರೆಯಂತೆ ಹರಿಯಿತು.

ಚಿತ್ರದುರ್ಗದಲ್ಲಿ 10 ಸೆಂ.ಮೀ ಮಳೆ

ಚಿತ್ರದುರ್ಗ ತಾಲ್ಲೂಕಿನಲ್ಲಿ 10 ಸೆಂ.ಮೀ ಮಳೆಯಾಗಿದೆ. ತಾಲ್ಲೂಕು ವ್ಯಾಪ್ತಿಯ ಐನಹಳ್ಳಿ 2 ಸೆಂ.ಮೀ, ತುರುವನೂರು 4 ಸೆಂ.ಮೀ ಮಳೆಯಾಗಿದೆ. ಚಳ್ಳಕೆರೆ 3 ಸೆಂ.ಮೀ, ನಾಯಕನಹಟ್ಟಿ 1 ಸೆಂ.ಮೀ, ಡಿ.ಮರಿಕುಂಟೆ 2 ಸೆಂ.ಮೀ ಮಳೆಯಾಗಿದೆ.

ಹಿರಿಯೂರಿನಲ್ಲಿ 5 ಸೆಂ.ಮೀ, ಬಬ್ಬೂರು 7 ಸೆಂ.ಮೀ, ಈಶ್ವರಗೆರೆ 4 ಸೆಂ.ಮೀ, ಇಕ್ಕನೂರು 5 ಸೆಂ.ಮೀ, ಸೂಗೂರು 3 ಸೆಂ.ಮೀ ಮಳೆಯಾಗಿದೆ. ಹೊಳಲ್ಕೆರೆಯ ರಾಮಗಿರಿ 2, ಎಚ್.ಡಿ.ಪುರ 1, ಹೊಸದುರ್ಗದಲ್ಲಿ 1, ಶ್ರೀರಾಂಪುರ, ತಳಕು, ಮೊಳಕಾಲ್ಮುರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.

***

ಈ ಅವಧಿಯಲ್ಲಿ ಮಳೆ ಅಗತ್ಯವಿಲ್ಲ. ಈಗಾಗಲೇ ಕಣದಲ್ಲಿ ರಾಗಿ ತೆನೆ ರಾಶಿ ಮಾಡಿ ಒಕ್ಕಣೆಗೆ ನಿಂತಿದ್ದಾರೆ. ಶೇ 70ರಷ್ಟು ರೈತರಿಗೆ ತೊಂದರೆಯಾಗದು. ಆದರೆ, ಸಿರಿಧಾನ್ಯ ಬೆಳೆ ಹಾನಿಯಾಗುವ ಸಾಧ್ಯತೆ ಇದೆ.

ರಾಜು, ರೈತ, ಹೊಸದುರ್ಗ

***

ಪ್ರಕೃತಿ ವಿರುದ್ಧ ಸೆಣಸಾಡಲು ಯಾರಿಂದಲೂ ಸಾಧ್ಯವಿಲ್ಲ. ಬಂದಿದ್ದನ್ನು ಎದುರಿಸಬೇಕಿದೆ. ಆದ್ದರಿಂದ ಸಾಧ್ಯವಾದಷ್ಟು ರೈತರು ಬೆಳೆವಿಮೆ ಮಾಡಿಸಿಕೊಳ್ಳಬೇಕು. ನಷ್ಟವಾದಲ್ಲಿ ಒಂದಿಷ್ಟು ಪರಿಹಾರವಾದರೂ ಕೈಸೇರಲಿದೆ.

ಮಹಂತೇಶ್, ರೈತ, ಹಿರಿಯೂರು

***

ಈ ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ ಎಲ್ಲಿಯೂ ಹಾನಿಯಾಗಿರುವುದು ಕಂಡುಬಂದಿಲ್ಲ. ಎಲ್ಲಾದರೂ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದರೆ, ರೈತರು ಇಲಾಖೆಗೆ ಕೂಡಲೇ ಮಾಹಿತಿ ನೀಡಿ.

ಸವಿತಾ, ಉಪನಿರ್ದೇಶಕಿ, ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು