ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಮಾಡಿ, ಇಲ್ಲ ಹೊರನಡೆಯಿರಿ: ಅಧಿಕಾರಿಗಳ ವಿರುದ್ಧ ಸಚಿವ ನಾರಾಯಣಸ್ವಾಮಿ ಗರಂ

Last Updated 9 ಜುಲೈ 2022, 5:28 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಮತ್ತೆ ಸಂಸದನಾಗುವ ಆಸೆ ನನಗಿಲ್ಲ. ಇದೇ ಆಡಳಿತ ವ್ಯವಸ್ಥೆ ಮುಂದುವರಿದರೆ ಜನ ಬೀದಿಗೆ ಬೀಳುತ್ತಾರೆ. ಉದ್ದಟತನದ ಪರವಾವಧಿ ತಲುಪಿರುವ ಅಧಿಕಾರಿಗಳಿಗೆ ಪ್ರಜಾಪ್ರಭುತ್ವ ಏನು ಎಂಬುದನ್ನು ತೋರಿಸುವೆ. ನಿದ್ದೆಯಲ್ಲಿಯೂ ಕಾಡುವೆ...’

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅವರು ಅಧಿಕಾರಿಗಳ ವಿರುದ್ಧ ಗುಡುಗಿದ ಪರಿ ಇದು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಮಾಹಿತಿ ಪಡೆಯುವ ವೇಳೆ ಹೊಸದುರ್ಗ ಭದ್ರಾ ಮೇಲ್ದಂಡೆ ವಿಭಾಗದ ಎಂಜಿನಿಯರ್‌ ಸಭೆಯಲ್ಲಿ ಇರಲಿಲ್ಲ. ಇದರಿಂದ ಕೆಂಡಾಮಂಡಲರಾದ ಸಚಿವರು ಸಭೆಗೆ ಗೈರು ಹಾಜರಾದವರಿಗೆ ನೋಟಿಸ್‌ ನೀಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ವರದಿ ರವಾನಿಸಿ ಶಿಸ್ತುಕ್ರಮಕ್ಕೆ ಸೂಚಿಸಿದರು.

‘ನನ್ನ ಆಡಳಿತ ವೈಖರಿ ಭಿನ್ನ. ರಾಜಕಾರಣಿಗಳ ಶ್ರೀರಕ್ಷೆಯಲ್ಲಿ ಸರಿಯಾಗಿ ಕೆಲಸ ಮಾಡದಿದ್ದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕಾನೂನು ವ್ಯಾಪ್ತಿಯಲ್ಲಿ ಅತ್ಯಂತ ಸೌಮ್ಯವಾಗಿ ವರ್ತಿಸುತ್ತಿದ್ದೇನೆ. ಸರಿಯಾಗಿ ಕೆಲಸ ಮಾಡದೇ ತಾಳ್ಮೆ ಪರೀಕ್ಷೆ ಮಾಡುತ್ತಿದ್ದೀರಿ. ಇದರಿಂದ ಜಿಲ್ಲಾಡಳಿತಕ್ಕೆ ಕೆಟ್ಟ ಹೆಸರು ಬರುತ್ತದೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಅವರತ್ತ ನೋಡಿದರು.

‘ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಭದ್ರಾ ಮೇಲ್ದಂಡೆ ನಾಲೆಯ ‘ವೈ’ ಜಂಕ್ಷನ್‌ ಬಳಿ ನಿರೀಕ್ಷಿತ ರೀತಿಯಲ್ಲಿ ಕೆಲಸ ನಡೆಯುತ್ತಿಲ್ಲ. ಕಾಮಗಾರಿ ಮುಂದುವರಿಸಲು ಪೊಲೀಸ್‌ ಭದ್ರತೆಯ ಅಗತ್ಯವಿದೆ ಎಂಬುದನ್ನು ಮುಖ್ಯಮಂತ್ರಿ ಗಮನ ಸೆಳೆದಿದ್ದೇನೆ. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಬದ್ಧತೆಯಿಂದ ಕೆಲಸ ಮಾಡುವುದಾರೆ ಸಹಿಸಿಕೊಳ್ಳುವೆ. ಇಲ್ಲವಾದರೆ ಜಿಲ್ಲೆಯಿಂದ ಹೊರಹೋಗಿ..’ ಎಂದು ಕಿಡಿಕಾರಿದರು.

ಈರುಳ್ಳಿ ಕ್ಲಸ್ಟರ್‌ಗೆ ಪ್ರಯತ್ನಿಸಿ: ‘ಜಿಲ್ಲೆಯಲ್ಲಿ ಈರುಳ್ಳಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಈರುಳ್ಳಿ ಬೆಳೆಯ ದಾಸ್ತಾನು, ಸಂರಕ್ಷಣೆ, ಮಾರಾಟ ಸಮಸ್ಯೆಯಾಗಿದೆ. ಇದಕ್ಕೆ ಕ್ಲಸ್ಟರ್‌ ಮಾತ್ರ ಪರಿಹಾರವಾಗಬಲ್ಲದು. 20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾದರೂ ಬೆಳೆಗಾರರ ಬಗ್ಗೆ ಕಾಳಜಿ ಇಲ್ಲವಾಗಿದೆ. ಕ್ಲಸ್ಟರ್‌ ನಿರ್ಮಾಣಕ್ಕೆ ಪ್ರಯತ್ನಿಸಿದರೆ ಬೆಳೆಗಾರರಿಗೆ ಅನುಕೂಲವಾಗಬಹುದು’ ಎಂದು ತೋಟಗಾರಿಕೆ ಉಪನಿರ್ದೇಶಕಿ ಸವಿತಾ ಅವರಿಗೆ ಸೂಚಿಸಿದರು.

ಸವಿತಾ ಪ್ರಕ್ರಿಯಿಸಿ, ‘ಜಿಲ್ಲೆಯಲ್ಲಿ 6,500 ಹೆಕ್ಟೇರ್‌ ಪ್ರದೇಶದಲ್ಲಿ ದಾಳಿಂಬೆ ಬೆಳೆ ಇದೆ. ದಾಳಿಂಬೆ ಬೆಳೆಗೆ ಅನುಕೂಲವಾಗುವ ನಿಟ್ಟಿನಲ್ಲಿ ‘ಉತ್ಕೃಷ್ಟತಾ’ ಕೇಂದ್ರವನ್ನು ₹ 5 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಅಡಿ ಈರುಳ್ಳಿ ಸಂಗ್ರಹಣಾ ಘಟಕಕ್ಕೆ ಸಹಾಯಧನ ನೀಡಲಾಗುತ್ತಿದೆ. ಘಟಕಗಳಲ್ಲಿ 90 ದಿನ ಈರುಳ್ಳಿಯನ್ನು ಕೆಡದಂತೆ ಇಡಬಹುದು’ ಎಂದು ಮಾಹಿತಿ ನೀಡಿದರು.

ಗಣಿ ಹಣ ಬಳಕೆಗೆ ಸೂಚನೆ: ಗಣಿಬಾಧಿತ ಪ್ರದೇಶಗಳ ಪುನರುಜ್ಜೀವನಕ್ಕಾಗಿ ಸಂಗ್ರಹಿಸಿದ ರಾಯಧನ 3,792 ಕೋಟಿ ಇದೆ. ಕರ್ನಾಟಕ ಗಣಿ ಪರಿಸರ ಪುನರುಜ್ಜೀವನ ನಿಗಮದಲ್ಲಿರುವ (ಕೆಎಂಇಆರ್‌ಸಿ) ಈ ನಿಧಿಯನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಬಳಸಿಕೊಳ್ಳಲು ಸಾಧ್ಯವಿದೆ. ಬಳ್ಳಾರಿ ಜಿಲ್ಲೆಯಲ್ಲಿ ಇದೇ ರೀತಿ ಬಳಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವವನ್ನು ಸಿದ್ಧಪಡಿಸಿ ಎಂದು ಸಚಿವರು ತಾಕೀತು ಮಾಡಿದರು.

‘ಡೀಮ್ಡ್‌ ಅರಣ್ಯ ಬಳಕೆಗೆ ಸರ್ಕಾರ ಅನುಮತಿ ನೀಡಿದೆ. ನಗರದ ಹೊರವಲಯದ ಇಂಗಳದಾಳ್‌ ಸಮೀಪ 100 ಎಕರೆ ಭೂಮಿ ಲಭ್ಯವಿದೆ. ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡ ಹಾಗೂ ಕಾಲೇಜು ಕ್ಯಾಂಪಸ್‌ಗೆ ಸೂಕ್ತವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಇದ್ದರು.

ಶಾಲೆ ದುರಸ್ತಿಗೆ ಗಡುವು
‘ಶಾಲೆ ದೇಗುಲಕ್ಕಿಂತ ಶ್ರೇಷ್ಠ. ಮಕ್ಕಳಿಗೆ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆ ತಲುಪಿರುವುದು ಬೇಸರದ ಸಂಗತಿ. ₹ 2 ಕೋಟಿ ಅನುದಾನದಲ್ಲಿ ಆರು ತಿಂಗಳ ಅವಧಿಯಲ್ಲಿ ಎಲ್ಲ ಶಾಲೆಗಳನ್ನು ದುರಸ್ತಿ ಮಾಡಬೇಕು ಎಂದು ಸಚಿವ ನಾರಾಯಣಸ್ವಾಮಿ ಗಡುವು ನೀಡಿದರು.

‘₹ 1 ಕೋಟಿ ಸಂಸದರ ಅನುದಾನ, ₹ 1 ಕೋಟಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ದುರಸ್ತಿ ಕಾರ್ಯ ನಡೆಯಬೇಕು. ಕ್ರಿಯಾ ಯೋಜನೆ ತಯಾರಿಸಿ ಕಾಮಗಾರಿ ಕೈಗೆತ್ತಿಕೊಳ್ಳಿ’ ಎಂದ ಸಚಿವರು ಲೋಕೋಪಯೋಗಿ ಇಲಾಖೆ, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗ, ನಿರ್ಮಿತಿ ಕೇಂದ್ರ ತಾಲ್ಲೂಕುವಾರು ಜವಾಬ್ದಾರಿ ನಿಗದಿ ಮಾಡಿದರು.

‘ಜಿಲ್ಲೆಯ 313 ಶಾಲೆಗಳಲ್ಲಿ 626 ಕೊಠಡಿಗಳು ಶಿಥಿಲಗೊಂಡಿವೆ. ಇಂತಹ ಕೊಠಡಿಗಳನ್ನು ದುರಸ್ತಿ ಮಾಡುವ ತುರ್ತು ಅಗತ್ಯವಿದೆ. ಪ್ರತಿ ಕೊಠಡಿ ದುರಸ್ತಿಗೆ ₹ 50 ಸಾವಿರ ಅನುದಾನದ ಅವಶ್ಯಕತೆ ಇದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‍ಕೆಬಿ ಪ್ರಸಾದ್ ತಿಳಿಸಿದರು.

*
ಕೆಎಂಇಆರ್‌ಸಿ ಕೆಲ ಮಾರ್ಗಸೂಚಿಗಳನ್ನು ರೂಪಿಸಿದೆ. ಗಣಿಬಾಧಿತ ಪ್ರದೇಶಲ್ಲಿ ಮಾತ್ರ ಅನುದಾನ ಬಳಕೆಗೆ ಅವಕಾಶವಿದೆ. 2018ರಲ್ಲಿ ಅನುಮೋದನೆ ಪಡೆದ ಕಾಮಗಾರಿ ಅನುಷ್ಠಾನಕ್ಕೆ ನಿಧಿ ಮಿತಿಗೊಳಿಸಲಾಗಿದೆ.
-ಕವಿತಾ ಎಸ್‌.ಮನ್ನಿಕೇರಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT