ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಭೂಮಿ ಆಗಲಿದೆ ಉತ್ತರ ಕರ್ನಾಟಕ: ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಎಚ್ಚರಿಕೆ

ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಎಚ್ಚರಿಕೆ
Last Updated 15 ಮೇ 2022, 14:41 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಪರಿಸರದ ಮೇಲೆ ಮನುಷ್ಯನ ದಬ್ಬಾಳಿಕೆ ಇದೇ ವೇಗದಲ್ಲಿ ಸಾಗಿದರೆ ಉತ್ತರ ಕರ್ನಾಟಕ ದೇಶದ ಮತ್ತೊಂದು ದೊಡ್ಡ ಮರುಭೂಮಿ ಆಗಲಿದೆ. ಇನ್ನಾದರೂ ನಮ್ಮ ಗಮನವನ್ನು ಭೂಮಿಯ ಕಡೆ ಹರಿಸಬೇಕಿದೆ’ ಎಂದು ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಎಚ್ಚರಿಸಿದರು.

ನಗರದ ಕ್ರೀಡಾ ಭವನದಲ್ಲಿ ಉಳುಮೆ ಪ್ರತಿಷ್ಠಾನದಿಂದ ಭಾನುವಾರ ಆಯೋಜಿಸಿದ್ದ ‘ಜಾಗತಿಕ ತಾಪಮಾನ ಮತ್ತು ಕೃಷಿ’ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಮನುಷ್ಯ ವಿಕಾಸದ ಬಳಿಕ ಕೇವಲ 150 ವರ್ಷಗಳಲ್ಲಿ ಭೂಮಿಯನ್ನು ಶಕ್ತಿ ಮೀರಿ ಹಾಳು ಮಾಡಿದ್ದೇವೆ. ಈ ಎಲ್ಲದರ ಪರಿಣಾಮ 10 ವರ್ಷಗಳಲ್ಲಿ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಭಾರತದ ಮಹಾ ಮರುಭೂಮಿ ಎಂದು ಕರೆಯಲ್ಪಡುವ ‘ಥಾರ್’ ಮರುಭೂಮಿಯಂತೆ ಉತ್ತರ ಕರ್ನಾಟಕ ಭಾಗವೂ ಬದಲಾಗುವ ಸಾಧ್ಯತೆಗಳು ಗೋಚರಿಸುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ತಾಪಮಾನ ಏರಿಕೆಯಿಂದಾಗಿ ಕೆರೆ, ನದಿಗಳು ಬತ್ತುತ್ತಿವೆ. ಬೃಹತ್‌ ಅರಣ್ಯಗಳಲ್ಲಿ ಊಹೆಗೂ ನಿಲುಕದ ರೀತಿ ಬೆಂಕಿ ಕಾಣಿಸಿಕೊಂಡು ಕಾಡು ನಾಶವಾಗುತ್ತಿವೆ. ಅತಿವೃಷ್ಠಿ, ಅನಾವೃಷ್ಠಿ ಉಂಟಾಗುತ್ತಿದೆ. ಈ ಸಮಸ್ಯೆಯಿಂದ ಹೊರ ಬರಬೇಕಾದರೆ ಈಗಿನಿಂದಲೇ ಗಿಡ ಮರಗಳನ್ನು ಬೆಳೆಸಬೇಕು. ಕೆರೆಗಳನ್ನು ಸಂರಕ್ಷಿಸುವ ಕೆಲಸವಾಗಬೇಕು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಎಚ್ಚರಿಸಿದರು.

‘ಅಭಿವೃದ್ಧಿ ಹೆಸರಲ್ಲಿ ನದಿಗಳಿಗೆ ಅಣೆಕಟ್ಟು ನಿರ್ಮಾಣ, ವಿದ್ಯುಚ್ಛಕ್ತಿ ಘಟಕಗಳ ಸ್ಥಾಪನೆಯಿಂದ ಸಮುದ್ರಕ್ಕೆ ಸೇರಬೇಕಾದ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಪ್ರಾಣಿ, ಪಕ್ಷಿ, ಅರಣ್ಯವನ್ನು ವಿವಿಧ ಕಾರಣ ನೀಡಿ ನಾಶ ಮಾಡಲಾಗುತ್ತಿದೆ. ಈ ಎಲ್ಲದರಿಂದ ಶೇ 35ರಷ್ಟು ಜನರಿಗೆ ಪ್ರಯೋಜನವಾಗಿದ್ದು, 65ರಷ್ಟು ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಅಭಿವೃದ್ಧಿಯಿಂದ ಹೊಸ ಪ್ರಳಯ ಸೃಷ್ಟಿಯಾಗುತ್ತಿದೆ’ ಎಂದು ಹೇಳಿದರು.

‘ಪರಿಸರದಲ್ಲಿನ ನಿರಂತರ ಬದಲಾವಣೆಯಿಂದ ಚಂಡಮಾರುತುಗಳ ಹೆಚ್ಚಾಗಿ ಬೀಸುತ್ತಿದ್ದು, ಸಮುದ್ರ ಕೊರೆತವೂ ಹೆಚ್ಚಾಗುತ್ತಿದೆ. ಶ್ರೀಮಂತರು ಮಾಡುವ ಕೆಲಸಕ್ಕೆ ಸಾಮಾನ್ಯನ ಬದುಕು ದುಸ್ತರವಾಗುತ್ತಿದೆ. ಈ ಮೂಲಕ ಅತಿಮಾನವ ಯುಗವೊಂದು ಸೃಷ್ಟಿಯಾಗುತ್ತಿದೆ’ ಎಂದು ತಿಳಿಸಿದರು.

‘ಕಲ್ಲಿದ್ದಲು, ಕಚ್ಚಾತೈಲ, ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯಿಂದ ಭೂಮಿ ಸುಡುತ್ತಿದೆ. ಬಂಗಾರದ ವ್ಯಾಮೋಹಕ್ಕೆ ಸಿಲುಕಿ ಭೂಗರ್ಭವನ್ನು ಸೀಳುತ್ತಿದ್ದೇವೆ. ಇದರಿಂದ ಮನುಷ್ಯನಿಗೆ ಬೇಡವಾದ ಕಾಮ, ಕ್ರೋಧ, ಮೋಹ, ಲೋಭ, ಅಸೂಯೆಯನ್ನು ನಾವೇ ಹೆಚ್ಚಿಸಿಕೊಳ್ಳುತ್ತಿದ್ದೇವೆ’ ಎಂದರು.

ಪೂರ್ಣಪ್ರಜ್ಞ ಕಾಲೇಜು ಪ್ರಾಚಾರ್ಯ ಗುರುರಾಜ್‌ ಎಸ್‌. ದಾವಣಗೆರೆ ಮಾತನಾಡಿ, ‘ಒಂದು ಕಾಲದಲ್ಲಿ ಸಿರಿಧಾನ್ಯಗಳ ಬೀಡಾಗಿದ್ದ ಚಿತ್ರದುರ್ಗದಲ್ಲಿ ಈಗ ಸಿರಿಧಾನ್ಯ ಹುಡುಕಬೇಕಾದ ಸ್ಥಿತಿ ಎದುರಾಗಿದೆ. ಪರಿಸ್ಥಿತಿ ಹೀಗೆ ಸಾಗಿದರೆ 20 ವರ್ಷದಲ್ಲಿ ‘ಕೃಷಿ’ ಪದವನ್ನು ನಾವೆಲ್ಲ ಮರೆಯಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸರ್ಕಾರಗಳು ಕೃಷಿ ನಾಶ ಮಾಡಲು ಕಾನೂನು ರೂಪಿಸುತ್ತಿವೆ. ಈಗಾಗಲೇ 40 ಕೋಟಿ ಗ್ರಾಮೀಣ ಜನರು ನಗರ ಸೇರಿದ್ದಾರೆ. ಅವರ ಮಕ್ಕಳಿಗೆ ಕೃಷಿಯನ್ನು ಕಲಿಸದೆ ಕೈಗಾರಿಕೆಗಳಿಗೆ ನೂಕುತ್ತಿದ್ದಾರೆ. ಕೃಷಿ ತಜ್ಞರು ಸಹ ರೈತರ ಆತ್ಮಹತ್ಯೆಗೆ ನಿರ್ಲಕ್ಷ್ಯದ ಕಾರಣ ನೀಡುತ್ತಿದ್ದಾರೆ’ ಎಂದು ಬೇಸರಿಸಿದರು.

‘ಸೈನಿಕರಂತೆ ರೈತರ ಸೇವೆಯನ್ನು ‘ರಾಷ್ಟ್ರೀಯ ಸೇವೆ’ ಎಂದು ಸರ್ಕಾರ ಘೋಷಿಸಬೇಕು. ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಕೃಷಿ ವಲಯಕ್ಕೆ ಮೀಸಲಿಡಬೇಕು. ಆಗ ಮಾತ್ರ ಆಹಾರದ ಸಮಸ್ಯೆ ನೀಗಿ ರೈತರ ಬದುಕು ಹಸನಾಗುತ್ತದೆ’ ಎಂದು ತಿಳಿಸಿದರು.

ಸಂವಾದ ನಡೆಸಿಕೊಟ್ಟ ಪತ್ರಕರ್ತ ಗಾಣಧಾಳು ಶ್ರೀಕಂಠ, ‘ಜಾಗತಿಕ ತಾಪಮಾನ ಮತ್ತು ಕೃಷಿ ಬಿಕ್ಕಟ್ಟು ಕುರಿತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಚರ್ಚೆಯಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಕೃಷಿ ತಜ್ಞ ಟಿ.ಜಿ.ಎಸ್‌. ಅವಿನಾಶ್‌, ರೈತ ಮುಖಂಡ ಈಚಘಟ್ಟ ಸಿದ್ದವೀರಪ್ಪ, ಉಳುಮೆ ಸಂಘಟನೆಯ ಉಜನಿಗೌಡ ಇದ್ದರು.

ಒಂದೆಡೆ ಪ್ರವಾಹ ಪಕ್ಕದಲ್ಲೆ ಬರ

‘ಇಂದು ಭೂಮಿಯೇ ಮನುಷ್ಯನ ದಾಹಕ್ಕೆ ಸಿಲುಕಿ ದಹಿಸುತ್ತಿದೆ. ಭೂಮಿ ಬಾಯಾರಿಕೆಯನ್ನು ನೀಗಿಸಬಹುದು. ದಾಹವನ್ನಲ್ಲ. ಇಂದಿನ ಮನುಷ್ಯನ ದಾಹದಿಂದಾಗಿ ತಾಪಮಾನ ಹೆಚ್ಚಾಗಿ- ಹಿಮಗಡ್ಡೆ ಕರಗುತ್ತಿವೆ. ಸಮುದ್ರದ ಮಟ್ಟ ಏರುತ್ತಿದೆ. ಚಂಡಮಾರುತಗಳು ಅಪ್ಪಳಿಸುತ್ತಿವೆ. ಹುಚ್ಚು ಮಳೆ ಬರುತ್ತಿದೆ. ಭೂಮಿ ಕುಸಿಯುತ್ತಿದೆ. ಎಲ್ಲವೂ ಕೊಚ್ಚಿಹೋಗುತ್ತಿದೆ. ವಿಪರ್ಯಾಸವೆಂದರೆ ಒಂದು ಕಡೆ ಪ್ರವಾಹ. ಅದರ ಪಕ್ಕದಲ್ಲೆ ನೀರಿಲ್ಲದ ಬರ. ಬದುಕುವುದೆಂತು’ ಎಂದು ನಾಗೇಶ ಹೆಗಡೆ ಪ್ರಶ್ನಿಸಿದರು.

***

ಪ್ರಸಕ್ತ ಸನ್ನಿವೇಶದಲ್ಲಿ ರೈತರು ಕೃಷಿಯನ್ನು ತ್ಯಜಿಸಬೇಕೋ, ಮುಂದುವರಿಸಬೇಕೋ ಎಂಬ ಗೊಂದಲದಲ್ಲಿದ್ದಾರೆ. ಈ‌ ಸಂದರ್ಭದಲ್ಲಿ ಕೃಷಿ ವಿಜ್ಞಾನಿಗಳು ರೈತರ ನೆರವಿಗೆ ನಿಲ್ಲಬೇಕು.

-ಬಸ್ತಿಹಳ್ಳಿ ಜಿ. ಸುರೇಶ್‌ ಬಾಬು, ಜಿಲ್ಲಾಧ್ಯಕ್ಷ, ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT