ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದಾವತಿ ನದಿಯಲ್ಲಿ ಹೆಚ್ಚುತ್ತಿರುವ ನೀರಿನ ಹರಿವು, ಪ್ರವಾಹದ ಭೀತಿ

Last Updated 22 ಅಕ್ಟೋಬರ್ 2022, 4:49 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನಲ್ಲಿ ಹಾದು ಹೋಗಿರುವ ವೇದಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಿದ್ದು, ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಭೀತಿ ನದಿ ತೀರದಲ್ಲಿ ನೆಲೆಸಿರುವವರನ್ನು ಕಾಡುತ್ತಿದೆ.

ತಾಲ್ಲೂಕಿನ ವಾಣಿವಿಲಾಸ ಜಲಾಶಯ 89 ವರ್ಷಗಳ ನಂತರ ಎರಡನೇ ಬಾರಿಗೆ ಸೆ. 2ರಂದು ಕೋಡಿ ಬಿದ್ದಿತ್ತು. ಕೋಡಿ ಬಿದ್ದ ದಿನದಂದು ಜಲಾಶಯಕ್ಕೆ 1,694 ಕ್ಯುಸೆಕ್ ಇದ್ದ ಒಳಹರಿವು, ಜಲಾಶಯದ ಮೇಲ್ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದರಿಂದ ಸೆ. 8ರ ವೇಳೆಗೆ 14,892 ಕ್ಯುಸೆಕ್‌ಗೆ ಏರಿತ್ತು. ಜಲಾಶಯದ ಎರಡೂ ನಾಲೆಗಳು, ಕೋಡಿಯಲ್ಲಿ ಹರಿದು ಬರುತ್ತಿದ್ದ ನೀರು, ಅಣೆಕಟ್ಟೆಯ ಕೆಳಗಿನ ಪ್ರದೇಶದಲ್ಲಿ ಮಳೆಯಿಂದ ಹರಿದು ಬಂದ ನೀರು ಒಟ್ಟುಗೂಡಿ ವೇದಾವತಿ ನದಿಯಲ್ಲಿ ಪ್ರವಾಹ ಉಂಟಾಗಿ ನದಿ ತೀರದಲ್ಲಿನ 132 ಮನೆಗಳಿಗೆ ನೀರು ನುಗ್ಗಿದ್ದರೆ, 30 ಮನೆಗಳು ಸಂಪೂರ್ಣ ಜಲಾವೃತವಾಗಿದ್ದವು.

ಸೆ. 14ರಿಂದ ಜಲಾಶಯದ ಒಳಹರಿವು ಕಡಿಮೆಯಾಗುತ್ತ ಹೋಯಿತಾದರೂ ವೇದಾವತಿ ನದಿ ಹರಿಯುವುದು ನಿಂತಿರಲಿಲ್ಲ. ಅ. 11ರಿಂದ ಮತ್ತೊಮ್ಮೆ ಜಲಾಶಯದ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ 2,717 ಕ್ಯುಸೆಕ್ ಇದ್ದ ಒಳಹರಿವಿನ ಪ್ರಮಾಣ ಅ. 21ರ ವೇಳೆಗೆ 13,162 ಕ್ಯುಸೆಕ್‌ಗೆ ಏರಿದೆ. ಹಿರಿಯೂರು ನಗರದಲ್ಲಿ ವೇದಾವತಿ ಸೇತುವೆ ಪಕ್ಕದ ನದಿಯಲ್ಲಿರುವ ಈಶ್ವರನ ದೇವಸ್ಥಾನ ವರ್ಷದಲ್ಲಿ ಎರಡನೇ ಬಾರಿಗೆ ಮುಳುಗಿದೆ. ಮಾಂಸ ಮಾರುಕಟ್ಟೆ ಕೆಳಭಾಗದಲ್ಲಿ ನದಿಯ ಅಂಚಿನಲ್ಲಿ ಕಟ್ಟಿಕೊಂಡಿರುವ ಹತ್ತಾರು ಮನೆಗಳಿಗೆ ಶುಕ್ರವಾರ ಬೆಳಗಿನ ಜಾವ ನೀರು ನುಗ್ಗಿದೆ.

ಹಠಮಾರಿತನ ಸಲ್ಲ: ‘ಸೆ. 8ರಂದು ವೇದಾವತಿ ನದಿಯಲ್ಲಿ ಪ್ರವಾಹ ಉಂಟಾದಾಗ, ನದಿ ತೀರದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದವರಿಗೆ ಹರಿಶ್ಚಂದ್ರಘಾಟ್ ಬಡಾವಣೆ ಮೇಲ್ಭಾಗದಲ್ಲಿ ನಿರ್ಮಿಸುತ್ತಿರುವ ವಸತಿ ಸಮುಚ್ಚಯದಲ್ಲಿ ಮನೆ ಕೊಡಿಸುವ ಭರವಸೆಯನ್ನು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ನೀಡಿದ್ದರು. ನದಿಯಲ್ಲಿ ನೀರು ಇಳಿಮುಖವಾಗುತ್ತಿದ್ದಂತೆ ಮತ್ತೆ ಹಳೆಯ ಮನೆಗೆ ಹೋಗಿದ್ದಾರೆ. ಇಂತಹ ಹಠಮಾರಿತನ ಸಲ್ಲ. ಸರ್ಕಾರ ಇಂತಹವರಿಗೆ ಪದೇಪದೇ ಪರಿಹಾರ ನೀಡುವುದಿಲ್ಲ. ವಿಶ್ವೇಶ್ವರಯ್ಯ ನೀರಾವರಿ ನಿಗಮದವರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ನಗರಸಭೆಯಿಂದಲೂ ನದಿ ಪಾತ್ರದಿಂದ ಹೊರಬರುವಂತೆ ಮನವಿ ಮಾಡಿದ್ದೇವೆ’ ಎಂದು ಪೌರಾಯುಕ್ತ ಉಮೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT