ಮಂಗಳವಾರ, ಜನವರಿ 31, 2023
19 °C

ಸಂವಿಧಾನ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದ ವಿಎಚ್‌ಪಿ: ಡಾ.ಎಲ್.ಹನುಮಂತಯ್ಯ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಅನುಷ್ಠಾನವನ್ನು ವಿರೋಧಿಸಿದ್ದ ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ), ಮನುಸ್ಮೃತಿಯೇ ಸಂವಿಧಾನ ಆಗಬೇಕು ಎಂದು ಪ್ರತಿಪಾದಿಸಿತ್ತು. ಇದೇ ಸಂಘಪರಿವಾರ ಸಂವಿಧಾನ ಬದಲಾವಣೆಗೆ ಹುನ್ನಾರ ನಡೆಸುತ್ತಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬ ಸಂಕಲ್ಪ ಮಾಡಬೇಕಿದೆ ಎಂದು ರಾಜ್ಯಸಭೆಯ ಸದಸ್ಯ ಡಾ.ಎಲ್.ಹನುಮಂತಯ್ಯ ತಿಳಿಸಿದರು.

ಇಲ್ಲಿನ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಭಾನುವಾರ ಹಮ್ಮಿಕೊಂಡಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಐಕ್ಯತಾ ಸಮಾವೇಶದಲ್ಲಿ ಅವರು ಮಾತನಾಡಿದರು.

'ದೇಶಕ್ಕೆ ಮಾದರಿ ರಾಜ್ಯವಾಗಿರುವ ಕರ್ನಾಟಕ ಸರ್ವಧರ್ಮ ಪಾಲನೆ ಮಾಡಿಕೊಂಡು ಬಂದಿದೆ. ಇಂತಹ ರಾಜ್ಯದ ಆಡಳಿತ ಜನಪರವಾಗಿ, ಜಾತ್ಯತೀತ, ಧರ್ಮಾತೀತವಾಗಿ ಇರಬೇಕಿತ್ತು. ಇದನ್ನು ಪುನರ್ ಪ್ರತಿಷ್ಠಾಪನೆ ಮಾಡಬೇಕಾದ ಅಗತ್ಯವಿದೆ. ನಾಡಿನ ಶೇ 25 ರಷ್ಟು ಪರಿಶಿಷ್ಟ ಜಾತಿ, ಪಂಗಡದ ಜನರು ಇದ್ದೇವೆ. ನಮ್ಮನ್ನು ಹೊರಗೆ ಇಟ್ಟು ದೇಶ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶ ರಾವಾನೆ ಮಾಡಬೇಕಿದೆ' ಎಂದು ಹೇಳಿದರು.

'ಸಾವಿರಾರು ವರ್ಷಗಳ ಕಾಲ ದಲಿತ ಸಮುದಾಯ ಅಕ್ಷರ ಜ್ಞಾನದಿಂದ ವಂಚಿತರವಾಗಿತ್ತು. ಮನುಷ್ಯರಾಗಿ ಬದುಕಲು ಕೆಲ ಸಮುದಾಯ ಬಿಟ್ಟಿರಲಿಲ್ಲ. ದಲಿತ ಸಮುದಾಯವನ್ನು ಇಡೀ ವ್ಯವಸ್ಥೆ ತುಳಿದು ಇಟ್ಟುಕೊಂಡಿತ್ತು. ಸಂವಿಧಾನದ ಫಲವಾಗಿ ಎಲ್ಲರಿಗೂ ಸಮಾನ ಶಿಕ್ಷಣ ಸಿಗಲು ಸಾಧ್ಯವಾಯಿತು. ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಸಾಕ್ಷರತೆ ಪ್ರಮಾಣ ಶೇ 20 ಮಾತ್ರ ಇತ್ತು. ಮುಂದುವರಿದ ಸಮುದಾಯದ ಜನರು ಮಾತ್ರ ಶಿಕ್ಷಣ ಪಡೆದಿದ್ದರು' ಎಂದು ಹೇಳಿದರು.

'ದೇಶದ ಪ್ರತಿ ಹಳ್ಳಿಯಲ್ಲಿ ಶಾಲೆ ಸ್ಥಾಪಿಸಿ ಶಿಕ್ಷಣಕ್ಕೆ ಅವಕಾಶ ನೀಡಿದ್ದು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ. ಇಂದಿರಾಗಾಂಧಿ ಅವರ ಕಾಲದಲ್ಲಿ ದಲಿತ ಸಮುದಾಯಕ್ಕೆ ಭೂಮಿ ಸಿಕ್ಕಿತು. ದೇಶದಲ್ಲಿ ಸಂಪೂರ್ಣ ಭೂಸುಧಾರಣೆ ಜಾರಿಯಾಗದಿದ್ದರೂ ದೇವರಾಜ ಅರಸು ಅವಧಿಯಲ್ಲಿ ದಲಿತ ಸಮುದಾಯಕ್ಕೆ ಭೂಮಿಯ ಒಡೆತನ ಸಿಕ್ಕಿತು. ಇದು ಕಾಂಗ್ರೆಸ್ ಕೊಡುಗೆ' ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು