ಸೋಮವಾರ, ಅಕ್ಟೋಬರ್ 18, 2021
22 °C
ಕಲಾವಿದೆ ಐಶ್ವರ್ಯಾರಿಂದ 15 ಗಂಟೆಯಲ್ಲಿ ನಿರ್ಮಾಣವಾದ ಕಲಾಕೃತಿ * ವಿಷ್ಣು ಕುಟುಂಬಕ್ಕೆ ಚಿತ್ರ ಸಮರ್ಪಿಸಲು ತೀರ್ಮಾನ

5 ಕಿ.ಮೀ ಉದ್ದದ ದಾರದಲ್ಲಿ ಅರಳಿದ ವಿಷ್ಣುವರ್ಧನ್, ಅಳಿಯ ಅನಿರುದ್ಧ್ ಮೆಚ್ಚುಗೆ

ಕೆ.ಎಸ್.ಪ್ರಣವಕುಮಾರ್ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಒಂದು ಬಿಳಿ ಕಾರ್ಡ್‌ ಬೋರ್ಡ್‌ ಮೇಲೆ ಸುತ್ತಲೂ ಮೊಳೆ ಹೊಡೆಯಲಾಗಿದೆ. ಒಂದೆಡೆಯಿಂದ ಮತ್ತೊಂದೆಡೆ ದಾರವನ್ನು ಎಳೆಯುತ್ತಲೇ ಯುವತಿಯೊಬ್ಬರು ಚಿತ್ರ ಬಿಡಿಸುತ್ತಾರೆ. ಎಷ್ಟು ಹೊತ್ತಾದರೂ ಇದು ಯಾರ ಚಿತ್ರ ಎಂಬುದು ಗೊತ್ತಾಗುವುದಿಲ್ಲ. ಕೊನೆಯಲ್ಲಿ ಕನ್ನಡದ ಮೇರುನಟ ವಿಷ್ಣುವರ್ಧನ್ ಚಿತ್ರ ಧುತ್ತೆಂದು ಅನಾವರಣಗೊಳ್ಳುತ್ತದೆ.

ಅತ್ಯಂತ ಕಷ್ಟದ ಕಲೆಯಾದ ದಾರವನ್ನು ಹೆಣೆಯುತ್ತಲೇ ರಚಿಸುವ ಸ್ಟ್ರಿಂಗ್ ಆರ್ಟ್‌ ಮೂಲಕವೇ ಬರೋಬ್ಬರಿ 5 ಕಿ.ಮೀ ಉದ್ದದ ದಾರದಲ್ಲಿ ದಿ. ವಿಷ್ಣುವರ್ಧನ್ ಅವರ ಭಾವಚಿತ್ರ ಹೊರಹೊಮ್ಮಿದೆ. ಇದೇ ಮೊದಲ ಬಾರಿ ಕನ್ನಡದ ಹೆಸರಾಂತ ಕಲಾವಿದರೊಬ್ಬರ ಚಿತ್ರ ದಾರದಲ್ಲಿ ಸುಂದರವಾಗಿ ಅರಳಿದೆ.

ವಿಷ್ಣು ಅವರ ದಾರದ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್ ಪದವೀಧರೆ ಜಿ.ಜಿ. ಐಶ್ವರ್ಯಾ ಅವರು ಈ ಚಿತ್ರ ರಚಿಸಿದ್ದಾರೆ. ನಟ ಅನಿರುದ್ಧ್‌ ಅವರ ಮೂಲಕ ವಿಷ್ಣು ಕುಟುಂಬಕ್ಕೆ ಈ ಚಿತ್ರವನ್ನು ಸಮರ್ಪಿಸಲು ತೀರ್ಮಾನಿಸಿದ್ದಾರೆ.

ಬಿಳಿ ಕಾರ್ಡ್‌ ಬೋರ್ಡ್‌ ಒಂದರಲ್ಲಿ ಅರಳಿರುವ ಈ ಚಿತ್ರದ ಸುತ್ತಲೂ ಸುಮಾರು 300ಕ್ಕೂ ಹೆಚ್ಚು ಮೊಳೆ ಹೊಡೆದಿದ್ದಾರೆ. ನಂತರ ಕಪ್ಪು ವರ್ಣದ ದಾರ ಎಳೆಯುತ್ತ ಸುಮಾರು 15 ಗಂಟೆ ಅವಧಿಯೊಳಗೆ ಚಿತ್ರಕ್ಕೆ ವಿಷ್ಣುವರ್ಧನ್ ರೂಪ ನೀಡಿದ್ದಾರೆ.

ಚಿತ್ರದುರ್ಗದ ಜಯಲಕ್ಷ್ಮಿ ಬಡಾವಣೆಯ ಐಶ್ವರ್ಯಾ ಈ ಚಿತ್ರ ರಚಿಸಿದ್ದಾರೆ. ಇಲ್ಲಿಯ ಎಸ್‌ಜೆಎಂಐಟಿ ಕಾಲೇಜಿನಲ್ಲಿ ಪದವಿ ಮುಗಿಸಿದ ಬಳಿಕ ಬೆಂಗಳೂರಿನಲ್ಲಿ ಫ್ಯಾಶನ್‌ ಡಿಸೈನಿಂಗ್ ಕೋರ್ಸ್‌ ಮಾಡುತ್ತಿದ್ದಾರೆ. ಇದರ ಜತೆಯಲ್ಲಿ ಸ್ಟ್ರಿಂಗ್ ಆರ್ಟ್‌ ಕುರಿತು ಒಲವು ಮೂಡಿದೆ. ಯಾರ ಬಳಿಯೂ ತರಬೇತಿ ಪಡೆಯದೇ ಕಲಿತಿರುವುದು ಮತ್ತೊಂದು ವಿಶೇಷ.

ದೇಶ–ವಿದೇಶಗಳಲ್ಲಿ ಅತ್ಯಂತ ಪ್ರಸಿದ್ಧವಾದ ಈ ಕಲೆಯನ್ನು ಹೇಗಾದರೂ ಕಲಿಯಬೇಕು ಎಂಬ ಹಂಬಲದಿಂದ ಒಂದು ವರ್ಷದಿಂದ ಪ್ರಯತ್ನಿಸಿದ್ದಾರೆ. ಅದಕ್ಕಾಗಿ ಯುಟ್ಯೂಬ್‌ ಮೂಲಕ ಹಲವು ವಿಡಿಯೊ ವೀಕ್ಷಿಸಿದ್ದಾರೆ. ಆದರೂ ಸಾಧ್ಯವಾಗಲಿಲ್ಲ. ಕೊನೆಗೆ ಸಾಮಾಜಿಕ ಜಾಲತಾಣಗಳನ್ನೆಲ್ಲ ಕೆದಕಿ, ಸ್ಟ್ರಿಂಗ್ ಆರ್ಟ್‌ ಕಲಾವಿದರ ಚಿತ್ರಗಳನ್ನು ವೀಕ್ಷಿಸಿ ಕಲಿತಿದ್ದಾರೆ.

ಕಲಾವಿದೆಯ ಮೊದಲ ಚಿತ್ರವಾದ ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಸ್ಟ್ರಿಂಗ್ ಆರ್ಟ್‌ನಲ್ಲಿ ದೊಡ್ಡ ಕಲಾವಿದೆಯಾಗಿ ಹೊರಹೊಮ್ಮಿ ದೇಶ ಮತ್ತು ರಾಜ್ಯಕ್ಕೆ ಕೀರ್ತಿ ತರಬೇಕು ಎಂಬ ಗುರಿ ಹೊಂದಿದ್ದಾರೆ.

ಹೊಸ ಕಲೆಯಲ್ಲಿ ಆಸಕ್ತಿ ಹೆಚ್ಚು: ‘ಹೊಸದನ್ನು ಕಲಿತು ಅದರಲ್ಲಿ ಏನಾದರೂ ಸಾಧಿಸಬೇಕು ಎಂಬ ಹಂಬಲ ಚಿಕ್ಕಂದಿನಿಂದಲೂ ಇದೆ. ಎಂಜಿನಿಯರಿಂಗ್‌ ಪದವಿ ಪಡೆದರೂ ಕಲೆಯಲ್ಲಿ ನನಗೆ ಹೆಚ್ಚು ಆಸಕ್ತಿ. ನಾನೂ ವಿಷ್ಣು ಸರ್ ಅಭಿಮಾನಿ. ಏನೇ ಹೊಸತನ್ನು ಮಾಡಿದರು ಮೊದಲು ವಿಷ್ಣು ಅವರನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಸ್ಟ್ರಿಂಗ್‌ ಆರ್ಟ್‌ ಮೂಲಕ ಅವರ ಜನ್ಮದಿನಾಚರಣೆಗೆ ಅಭಿಮಾನಿಯಾಗಿ ಈ ಚಿತ್ರವನ್ನೇ ರಚಿಸಬೇಕು ಎಂದು ಪ್ರಯತ್ನಿಸಿ ಕೊನೆಗೂ ಅದರಲ್ಲಿ ಯಶಸ್ವಿಯಾಗಿದ್ದೇನೆ. ಲಕ್ಷಾಂತರ ವಿಷ್ಣು ಅಭಿಮಾನಿಗಳಿಗೆ ಇದು ಖಂಡಿತ ಇಷ್ಟವಾಗಲಿದೆ’ ಎನ್ನುತ್ತಾರೆ ಜಿ.ಜಿ. ಐಶ್ವರ್ಯಾ.

ವಿಷ್ಣು ಚಿತ್ರಕ್ಕೆ ಅನಿರುದ್ಧ್ ಮೆಚ್ಚುಗೆ

ಸಾಮಾಜಿಕ ಜಾಲತಾಣದಲ್ಲಿ ದಾರದಲ್ಲಿ ಅರಳಿದ ವಿಷ್ಣು ಅವರ ಚಿತ್ರ ನೋಡಿ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ವಿಷ್ಣುವರ್ಧನ್ ಅವರ ಅಳಿಯ ನಟ ಅನಿರುದ್ಧ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಲಾವಿದೆಗೆ ಸಂದೇಶ ಕಳಿಸಿರುವ ಅವರು, ನಿಜಕ್ಕೂ ನಿಮ್ಮ ಕಲೆ ಹಾಗೂ ತಾಳ್ಮೆಯಿಂದ ವಿಷ್ಣು ಚಿತ್ರ ರಚಿಸಿದ್ದಕ್ಕೆ ಸೆಲ್ಯೂಟ್‌ ಎಂದು ಪ್ರಶಂಸಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು