ಚಿತ್ರದುರ್ಗ: ಇಲ್ಲಿನ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ತೀವ್ರವಾಗಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ರುದ್ರಪ್ಪ (50) ಹಾಗೂ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ ಪಾರ್ವತಮ್ಮ (75) ಶುಕ್ರವಾರ ಮೃತಪಟ್ಟಿದ್ದಾರೆ. ಇದರಿಂದ ಕಲುಷಿತ ನೀರಿನಿಂದ ಸಾವಿಗೀಡಾದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ವಾಂತಿ ಭೇದಿಯಿಂದ ಬಳಲಿದ ರುದ್ರಪ್ಪ ಅವರನ್ನು 2ರಂದು ಇಲ್ಲಿನ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿರ್ಜಲೀಕರಣ ಹಾಗೂ ರಕ್ತದೊತ್ತಡ ಕಡಿಮೆಯಾಗಿದ್ದರಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಶುಕ್ರವಾರ ನಸುಕಿನಲ್ಲಿ ಮೃತಪಟ್ಟಿದ್ದಾರೆ.
ಪಾರ್ಶ್ವವಾಯು ಪೀಡಿತರಾಗಿದ್ದ ಪಾರ್ವತಮ್ಮ ಗುರುವಾರ ಅಸ್ವಸ್ಥರಾಗಿದ್ದರು. ಕವಾಡಿಗರಹಟ್ಟಿಯ ತಾತ್ಕಾಲಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಶುಕ್ರವಾರ ಬೆಳಿಗ್ಗೆ ಇವರು ಮೃತಪಟ್ಟಿದ್ದು, ಸಾವಿಗೆ ಪಾರ್ಶ್ವವಾಯು ಕಾರಣ ಎಂಬುದಾಗಿ ಆರೋಗ್ಯ ಇಲಾಖೆ ಹೇಳುತ್ತಿದೆ. ರಘು ಹಾಗೂ ಪ್ರವೀಣ್ ಎಂಬವರ ಸಾವಿಗೆ ಕುಲುಷಿತ ನೀರು ಕಾರಣ ಎಂಬುದು ಇನ್ನೂ ದೃಢಪಟ್ಟಿಲ್ಲ.
ಅಸ್ವಸ್ಥೆಗೆ ಗರ್ಭಪಾತ: ಕಲುಷಿತ ನೀರು ಕುಡಿದು ಅಸ್ವಸ್ಥರಾಗಿದ್ದ ತುಂಬು ಗರ್ಭಿಣಿಯೊಬ್ಬರಿಗೆ ಗರ್ಭಪಾತವಾಗಿದೆ. ವಾಂತಿ–ಭೇದಿ ಹೆಚ್ಚಾಗಿದ್ದರಿಂದ 8 ತಿಂಗಳ ಶಿಶು ಹೊಟ್ಟೆಯಲ್ಲಿಯೇ ಮೃತಪಟ್ಟಿದೆ.
ಕವಾಡಿಗರಹಟ್ಟಿಯ ಉಷಾ (23) ಹೆರಿಗೆಗಾಗಿ ತವರಿಗೆ ಬಂದಿದ್ದರು. ಇದೇ 12ರಂದು ಸಂಭಾವ್ಯ ಹೆರಿಗೆ ದಿನ ಎಂದು ವೈದ್ಯರು ಸೂಚಿಸಿದ್ದರು. 1ರಂದು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು, ಗುರುವಾರ ಮಧ್ಯಾಹ್ನ ಹೊಟ್ಟೆಯಲ್ಲಿ ಮಗುವಿನ ಚಲನವಲನ ಸ್ತಬ್ಧವಾಗಿದ್ದರಿಂದ ವೈದ್ಯರು ಸ್ಕ್ಯಾನ್ ಮಾಡಿದ್ದರು. ಮಗು ಗರ್ಭದಲ್ಲಿಯೇ ಮೃತಪಟ್ಟಿದ್ದು ಖಚಿತವಾಗಿದ್ದರಿಂದ ರಾತ್ರಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ಉಷಾ ಸಹೋದರ ರಘು ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಮೃತಪಟ್ಟಿದ್ದರು.
‘ಕುಟುಂಬಕ್ಕೆ ಆಧಾರವಾಗಿದ್ದ ಪುತ್ರ ರಘು ಮೃತಪಟ್ಟಿದ್ದಾನೆ. ಹೆರಿಗೆಗೆ ಬಂದಿದ್ದ ಪುತ್ರಿಗೆ ಗರ್ಭಪಾತವಾಗಿದೆ. ಈ ನೋವನ್ನು ಹೇಗೆ ಸಹಿಸಿಕೊಳ್ಳಲಿ’ ಎಂದು ಉಷಾ ತಾಯಿ ವಿಮಲಮ್ಮ ಕಣ್ಣೀರಾದರು.
ಲೋಕಾಯುಕ್ತ ನೋಟಿಸ್ ಜಾರಿ
ಕಲುಷಿತ ನೀರು ಕುಡಿದು ಸಾವು ಸಂಭವಿಸಿರುವ ಘಟನೆಗೆ ಸಂಬಂಧಿಸಿದಂತೆ ಏಳು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಆದೇಶಿಸಿದ್ದಾರೆ. ನೋಟಿಸ್ಗೆ ಇದೇ 24ರ ಒಳಗೆ ಉತ್ತರಿಸಲು ಗಡುವು ನೀಡಲಾಗಿದೆ.
ಕಲುಷಿತ ನೀರು ಕುಡಿದು ಸಾವು ಸಂಭವಿಸಿದ ಬಳಿಕ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎನ್.ವಾಸುದೇವರಾಮ ಲೋಕಾಯುಕ್ತ ನ್ಯಾಯಮೂರ್ತಿಗೆ ವರದಿ ಸಲ್ಲಿಸಿದ್ದರು. ವರದಿ ಆಧಾರದ ಮೇರೆಗೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ನಿರ್ದೇಶಕರು, ಚಿತ್ರದುರ್ಗ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ನಗರಸಭೆ ಆಯುಕ್ತ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಾಗೂ ನಗರಸಭೆ ಆರೋಗ್ಯಾಧಿಕಾರಿ ನೋಟಿಸ್ ಜಾರಿ ಮಾಡಲಾಗಿದೆ.
ಇಬ್ಬರು ಎಂಜಿನಿಯರ್ ಅಮಾನತು
ಕಲುಷಿತ ನೀರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ ಆರ್.ಗಿರಡ್ಡಿ, ಕಿರಿಯ ಎಂಜಿನಿಯರ್ ಎಸ್.ಆರ್.ಕಿರಣ್ ಕುಮಾರ್ ಎಂಬುವರನ್ನು ಸೇವೆಯಿಂದ ಅಮಾನತುಗೊಳಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
‘ಕಲುಷಿತ ನೀರು ಕುಡಿದು ಸಾವು ಸಂಭವಿಸಿರುವ ಹಾಗೂ ಸಾರ್ವಜನಿಕರು ಅಸ್ವಸ್ಥರಾಗಿರುವ ಘಟನೆಯಲ್ಲಿ ಇಬ್ಬರು ಎಂಜಿನಿಯರುಗಳು ಕರ್ತವ್ಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ವರ್ತನೆ ತೋರಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇಬ್ಬರ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.