ಗುರುವಾರ , ಜೂಲೈ 9, 2020
23 °C
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಿರು ಮೃಗಾಲಯ, ವನ್ಯಜೀವಿ ಪೋಷಣೆ ಸವಾಲು

ಕರಡಿ ದತ್ತು ಪಡೆದ ಮಾದಾರ ಗುರುಪೀಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೊರೊನಾ ಸೋಂಕು ನಿಯಂತ್ರಿಸಲು ಪ್ರವಾಸೋದ್ಯಮ ಸ್ಥಗಿತಗೊಳಿಸಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಮೃಗಾಲಯಕ್ಕೆ ನೆರವಾಗಲು ಪ್ರಾಣಿ ಪ್ರಿಯರು ಮುಂದೆ ಬರುತ್ತಿದ್ದಾರೆ. ಆಡುಮಲ್ಲೇಶ್ವರ ಕಿರು ಮೃಗಾಲಯದ ಕರಡಿಯನ್ನು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸೋಮವಾರ ದತ್ತು ಸ್ವೀಕರಿಸಿದರು.

ಮೃಗಾಲಯಕ್ಕೆ ಇತ್ತೀಚೆಗೆ ಬಂದಿದ್ದ ಮೂರು ಕರಡಿಗಳಲ್ಲಿ ಒಂದನ್ನು ಗುರುಪೀಠ ದತ್ತು ಸ್ವೀಕರಿಸಿದೆ. ಒಂದು ವರ್ಷದ ಕರಡಿ ಆಹಾರ, ನಿರ್ವಹಣೆ ಹಾಗೂ ವೈದ್ಯಕೀಯ ವೆಚ್ಚವಾದ ₹ 97 ಸಾವಿರದ ಚೆಕ್‌ ಅನ್ನು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ನಾಯಕ ಅವರಿಗೆ ಹಸ್ತಾಂತರಿಸಲಾಯಿತು.

ಕಿರು ಮೃಗಾಲಯದಲ್ಲಿ 22 ಪ್ರಭೇದದ ಪ್ರಾಣಿ ಮತ್ತು ಪಕ್ಷಿಗಳಿವೆ. 48 ಪಕ್ಷಿಗಳು ಹಾಗೂ 49 ಪ್ರಾಣಿಗಳು ಆಶ್ರಯ ಪಡೆದಿವೆ. ಮೂರು ಕರಡಿ, ಏಳು ಚಿರತೆ ಇದ್ದು, ಇವುಗಳ ನಿರ್ವಹಣಾ ವೆಚ್ಚ ಇತರ ಪ್ರಾಣಿಗಳಿಗಿಂತ ಹೆಚ್ಚಾಗಿದೆ. ಕೃಷ್ಣಮೃಗ, ಜಿಂಕೆ, ಮೊಸಳೆ, ನರಿ, ಹೆಬ್ಬಾವು, ಕಾಡುಕೋಳಿ ಸೇರಿ ಹಲವು ವನ್ಯಜೀವಿಗಳನ್ನು ದತ್ತು ನೀಡಲು ಮೃಗಾಲಯ ಸಿದ್ಧವಿದೆ.

‘ಲಾಕ್‌ಡೌನ್‌ ಘೋಷಣೆಯಾದ ಬಳಿಕ ಪ್ರವಾಸಿ ಚಟುವಟಿಕೆ ಸ್ಥಗಿತಗೊಂಡಿವೆ. ಎರಡು ತಿಂಗಳಲ್ಲಿ ಅಂದಾಜು ₹ 7 ಲಕ್ಷ ನಷ್ಟವುಂಟಾಗಿದೆ. ಪ್ರಾಣಿ–ಪಕ್ಷಿಗಳ ಪೋಷಣೆ ತುಂಬಾ ಕಷ್ಟವಾಗುತ್ತಿದೆ. ವನ್ಯಜೀವಿ ಪ್ರೇಮಿಗಳು ‍ಪ್ರಾಣಿಗಳನ್ನು ದತ್ತು ಪಡೆದರೆ ಮೃಗಾಲಯ ಸಶಕ್ತವಾಗಲು ಸಾಧ್ಯ’ ಎಂದು ಆರ್‌ಎಫ್‌ಒ ವಸಂತಕುಮಾರ್‌ ತಿಳಿಸಿದರು.

ಪ್ರಾಣಿ–ಪಕ್ಷಿಗಳನ್ನು ದತ್ತು ಪಡೆದರೆ ಆದಾಯ ತೆರಿಗೆಯಿಂದ ವಿನಾಯಿತಿ ಸಿಗಲಿದೆ. ಕುಟುಂಬದ ಐವರು ಸದಸ್ಯರಿಗೆ ಉಚಿತ ಪ್ರವೇಶ ಕಲ್ಪಿಸಲಾಗುತ್ತದೆ. ದತ್ತು ಸ್ವೀಕರಿಸಿದವರ ಹೆಸರನ್ನು ಪ್ರಾಣಿಯ ಆವರಣದಲ್ಲಿ ಬಿತ್ತರಿಸಲಾಗುತ್ತದೆ. ಆಮೆ ಮತ್ತು ಮೊಲವನ್ನು ಕೆಲವರು ಈಗಾಗಲೇ ದತ್ತು ಪಡೆದಿದ್ದಾರೆ.

‘ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಪ್ರವಾಸೋದ್ಯಮ ಸ್ಥಗಿತಗೊಂಡಿತು. ಇದರಿಂದ ರಾಜ್ಯದ 9 ಮೃಗಾಲಯ ಸಂಕಷ್ಟಕ್ಕೆ ಸಿಲುಕಿವೆ. ಮೃಗಾಲಯಗಳ ಅಭಿವೃದ್ಧಿಗೆ ವಾರ್ಷಿಕ ₹ 115 ಕೋಟಿ ಅನುದಾನದ ಅಗತ್ಯವಿದೆ. ಪ್ರಸಕ್ತ ವರ್ಷ ಅಂದಾಜು ₹ 60 ಕೋಟಿ ಅನುದಾನ ಕೊರತೆ ಉಂಟಾಗುವ ಸಾಧ್ಯತೆ ಇದೆ. ಸಾರ್ವಜನಿಕರು ಪ್ರಾಣಿಗಳನ್ನು ದತ್ತು ಸ್ವೀಕರಿಸಿದರೆ ಅನುಕೂಲವಾಗುತ್ತದೆ’ ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮನವಿ ಮಾಡಿದರು.

‘ಮೃಗಾಲಯಗಳನ್ನು ತೆರೆಯಲು ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನಯ ಕೈಗೊಳ್ಳಲಾಗುತ್ತದೆ. ಪ್ರವಾಸೋದ್ಯಮ ಸ್ಥಗಿತಗೊಂಡಿದ್ದರಿಂದ ಸಹಜ ಸ್ಥಿತಿಗೆ ಬರಲು ಇನ್ನೂ ಕಾಲಾವಕಾಶ ಹಿಡಿಯಲಿದೆ’ ಎಂದು ಅಭಿಪ್ರಾಯಪಟ್ಟರು.

ಮೃಗಾಲಯಕ್ಕೆ ಬರಲಿದೆ ಝೀಬ್ರಾ: ಮೈಸೂರು ಮೃಗಾಲಯದಿಂದ ಝೀಬ್ರಾ ತರುವ ಪ್ರಯತ್ನ ನಡೆಯುತ್ತಿದ್ದು, ಹೊಸದಾಗಿ ನಿರ್ಮಾಣವಾಗಿರುವ ಆವರಣಕ್ಕೆ ಇದನ್ನು ಬಿಡಲಾಗುತ್ತದೆ.

ಆಡುಮಲ್ಲೇಶ್ವರ ಕಿರು ಮೃಗಾಲಯದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಪಶುವೈದ್ಯಕೀಯ ಆಸ್ಪತ್ರೆ ಹಾಗೂ ಸ್ಟೋರ್‌ ನಿರ್ಮಾಣ ಹಂತದಲ್ಲಿವೆ. ಶೀಘ್ರವೇ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಕರಡಿ, ಚಿರತೆ, ಜಿಂಕೆ, ಝೀಬ್ರಾ ಹಾಗೂ ಕೃಷ್ಣಮೃಗಗಳ 18 ಆವರಣ ನಿರ್ಮಾಣವಾಗಿವೆ. ಪ್ರಸಕ್ತ ಆರ್ಥಿಕ ವರ್ಷ ಹುಲಿ ಸೇರಿ ಇತರ ಆವರಣಗಳನ್ನು ನಿರ್ಮಿಸಲು ಮೃಗಾಲಯ ಪ್ರಾಧಿಕಾರ ಉದ್ದೇಶಿಸಿತ್ತು. ಲಾಕ್‌ಡೌನ್‌ ಕಾರಣಕ್ಕೆ ಆರ್ಥಿಕ ಸಂಕಷ್ಟ ಎದುರಾಗಿರುವುದರಿಂದ ಹೊಸ ಆವರಣಗಳ ನಿರ್ಮಾಣ ಕಾರ್ಯ ನನೆಗುದಿಗೆ ಬೀಳುವ ಸಾಧ್ಯತೆ ಇದೆ.

ಎಸಿಫ್ ರಾಘವೇಂದ್ರ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕೆ.ಎಸ್. ನವೀನ್, ಸಂಸದರ ಆಪ್ತ ಸಹಾಯಕರಾದ ಷಣ್ಮುಖ, ಮೋಹನ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು