ಗುರುವಾರ , ಏಪ್ರಿಲ್ 2, 2020
19 °C
ಕೊರೊನಾ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ

ಹೋಂ ಕ್ವಾರಂಟೈನ್‌; ‘ನೆರೆಹೊರೆ’ ಕಣ್ಗಾವಲು: ಜಿಲ್ಲಾಧಿಕಾರಿ ಪಾಟೀಲ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್‌ದಲ್ಲಿರುವವರ (ಗೃಹ ನಿರ್ಬಂಧ) ಮೇಲೆ ತೀವ್ರ ನಿಗಾ ಇರಿಸಲು ಸಾರ್ವಜನಿಕರ ಸಹಕಾರ ಪಡೆಯಲು ನಿರ್ಧರಿಸಲಾಗಿದ್ದು, ನೆರೆಹೊರೆಯವರು ಕಣ್ಗಾವಲು ಇರಿಸುವಂತೆ ಕೋರುವ ನಿರ್ಣಯವನ್ನು ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಕುರಿತ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಕೊರೊನಾ ಮುನ್ನೆಚ್ಚರಿಕೆಯಾಗಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಹೋಂ ಕ್ವಾರಂಟೈನ್‌ನಿಂದ ಹೊರ ಹೋಗುವವರ ಬಗ್ಗೆ ತೀವ್ರ ನಿಗಾ ಇರಿಸುವ ಜೊತೆಗೆ ಅವರ ಬಗ್ಗೆ ಮಾಹಿತಿಯನ್ನು ಒದಗಿಸಲು ಕೋರಲಾಗಿದೆ. ನೆರೆಹೊರೆಯ ಸಾರ್ವಜನಿಕರು ನೀಡಿದ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು.ಕೊರೊನಾ ವಿಸ್ತಾರದಿಂದ ಆಗುವ ಅಪಾಯ ತಪ್ಪಿಸಲು ಈ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

‘ಭಾರತದ ಕೋಲ್ಕತ್ತಾ, ರಾಜ್ಯದ ಕೊಡಗು, ಮೈಸೂರು ಮತ್ತು ವಿವಿಧ ಕಡೆಗಳಲ್ಲಿ ಹೋಂ ಕ್ವಾರಂಟೈನ್‌ನಲ್ಲಿರುವವು ಕಣ್ತಪ್ಪಿಸಿ ಹೊರಗೆ ಹೋಗುವುದು ಹಾಗೂ ಸಾರ್ವಜನಿಕರ ಸ್ಥಳಗಳಲ್ಲಿ ಓಡಾಡಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರಿಂದ ಆಗಬಹುದಾದ ಅಪಾಯಗಳನ್ನು ತಪ್ಪಿಸಲು ಈ ನಿರ್ಣಯ ಕೈಗೊಳ್ಳಲಾಗಿದೆ. ಇದು ಗೃಹ ಬಂಧನವಲ್ಲ. ವಿಶ್ವ, ದೇಶ, ರಾಜ್ಯ ಹಾಗೂ ನೆರೆಹೊರೆಯ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹಾಗೂ ತುರ್ತು ಅವಶ್ಯಕತೆಯ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ’ ಎಂದರು.

‘ಕೊರೊನಾ ಮುನ್ನೆಚ್ಚರಿಕೆಗಾಗಿ ಈಗಾಗಲೇ ಮಹಾರಾಷ್ಟ್ರಕ್ಕೆ ಹೋಗುವ ಹಾಗೂ ಬರುವ ಬಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಶುಕ್ರವಾರದಿಂದ ನೆರೆಯ ಜಿಲ್ಲೆ ಕಲಬುರ್ಗಿಗೆ ಹೋಗುವ ಮತ್ತು ಬರುವ ಬಸ್‌ಗಳನ್ನು ಸಹ ಸ್ಥಗಿತಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ. ಸಾರ್ವಜನಿಕರು ತುರ್ತು ಸಂದರ್ಭ ಹೊರತುಪಡಿಸಿ ಪ್ರಯಾಣ ಬೆಳೆಸಬಾರದು. ಅನಿವಾರ್ಯ ಎಂದಾದರೆ ಮುನ್ನೆಚ್ಚರಿಕೆ ವಹಿಸಬೇಖು’ ಎಂದು ಮನವಿ ಮಾಡಿದರು.

‘ಜಿಲ್ಲೆಯಾದ್ಯಂತ ತುರ್ತು ಕೆಲಸಗಳನ್ನು ಹೊರತುಪಡಿಸಿ ಗುಂಪು ಗುಂಪಾಗಿ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಭೇಟಿಗೆ ನಿರ್ಬಂಧಿಸಲಾಗಿದೆ. ಅತ್ಯಂತ ತುರ್ತು ಕೆಲಸವಿರುವ ಬಗ್ಗೆ ಆಯಾ ಇಲಾಖೆಗಳ ಮುಖ್ಯಸ್ಥರೇ ನಿರ್ಣಯ ಕೈಗೊಳ್ಳಲಿದ್ದಾರೆ. ಮಾರುಕಟ್ಟೆಗಳಲ್ಲಿ ಅಕ್ರಮವಾಗಿ ಮತ್ತು ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿರುವ ಮಾಸ್ಕ್‌ಗಳ ಜಪ್ತಿ ಆದೇಶ ನೀಡಲಾಗಿದೆ. ಅನಧಿಕೃತ ಮಾಸ್ಕ್ ಮತ್ತು ಸ್ಯಾನಿಟೈಜಸರ್‌ಗಳ ಮಾರಾಟ ಕಂಡುಬಂದಲ್ಲಿ ತಕ್ಷಣ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚಿಸಲಾಗಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ‘ಹೋಂ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳ ಮೇಲೆ ನಿಗಾ ಇರಿಸಲು ಈಗಾಗಲೇ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ದಿನಕ್ಕೆ ಎರಡು ಬಾರಿ ಮನೆಗೆ ಭೇಟಿ ನೀಡಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಹೊರಹೋಗದಂತೆ ಅವರಿಗೆ ತಿಳಿವಳಿಕೆ ನೀಡಬೇಕು. ಅದರಂತೆ ಕರ್ತವ್ಯನಿರತ ಸಿಬ್ಬಂದಿ ಜಾಗೃತರಾಗಿ ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಂದ್ರ ಕಾಪ್ಸೆ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ.ಗಂಗಾಧರ, ವಿಶ್ವ ಆರೋಗ್ಯ ಸಂಸ್ಥೆಯ ನಿಯಂತ್ರಣಾಧಿಕಾರಿ ಡಾ.ಮುಕುಂದ ಗಲಗಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು