ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ: ಕೆಪಿಎಸ್‌ಸಿ ಪರೀಕ್ಷೆಗೆ 1,602 ಅಭ್ಯರ್ಥಿಗಳು ಗೈರು

Published 28 ಆಗಸ್ಟ್ 2024, 5:49 IST
Last Updated 28 ಆಗಸ್ಟ್ 2024, 5:49 IST
ಅಕ್ಷರ ಗಾತ್ರ

ಮಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು 340 ಕೆಎಎಸ್‌ ಹುದ್ದೆಗಳೂ ಸೇರಿದಂತೆ 384 ಗಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಪರೀಕ್ಷೆಯು ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕೇಂದ್ರಗಳಲ್ಲಿ ನಡೆಯಿತು.

ಒಟ್ಟು 3,625 ಅಭ್ಯರ್ಥಿಗಳಿಗೆ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಇವರಲ್ಲಿ 1,663 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 1,602 ವಿದ್ಯಾರ್ಥಿಗಳು ಗೈರಾದರು.

‘300 ಕಿ.ಮೀಗೂ ಹೆಚ್ಚು ದೂರದ ಊರುಗಳ ವಿದ್ಯಾರ್ಥಿಗಳಿಗೂ ಇಲ್ಲಿ ಪರೀಕ್ಷಾ ಕೇಂದ್ರವನ್ನು ಹಂಚಿಕೆ ಮಾಡಲಾಗಿತ್ತು. ಹಾಗಾಗಿ ಅನೇಕರು ಪರೀಕ್ಷೆ ಬರೆಯುವುದಕ್ಕೇ ಬಂದಿಲ್ಲ’ ಎಂದು ಕೆಲವು ಅಭ್ಯರ್ಥಿಗಳು ದೂರಿದರು.

‘ನಾನು ಇಲ್ಲಿ ಪರೀಕ್ಷೆ ಬರೆಯಲು 320 ಕಿ.ಮೀ. ಪ್ರಯಾಣಿಸಬೇಕಿತ್ತು. ಹಾಗಾಗಿ ಒಂದು ದಿನ ಮೊದಲೇ ಬಂದು ಇಲ್ಲಿ ಲಾಡ್ಜ್‌ನಲ್ಲಿ ಉಳಿದುಕೊಂಡು ಪರೀಕ್ಷೆ ಬರೆದೆ. ಇದರ ಸಲುವಾಗಿ ₹ 2 ಸಾವಿರ ಖರ್ಚಾಯಿತು’ ಎಂದು ಚಿತ್ರದುರ್ಗ  ಹಿರಿಯೂರಿನ ಕುಮಾರಸ್ವಾಮಿ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ನಾನು ಬಿಇಡಿ ವಿದ್ಯಾರ್ಥಿ. ಈ ಪರೀಕ್ಷೆ ಶುಲ್ಕ ಕಟ್ಟಲು ಪೋಷಕರಿಂದ ಹಣ ಕೇಳಿದ್ದೆ. ಪರೀಕ್ಷೆ ಬರೆಯಲು ಮತ್ತೆ ಪೋಷಕರಿಂದ ಹಣ ಕೇಳಲು ಮುಜುಗರವಾಗುತ್ತದೆ. ನಾನು ಇಲ್ಲಿನ ಪಿ.ಜಿ.ಯಲ್ಲಿ ಉಳಿದುಕೊಂಡು ಪರೀಕ್ಷೆ ಬರೆದೆ. ಅಭ್ಯರ್ಥಿಗಳಿಗೆ ಅವರದೇ ಜಿಲ್ಲೆಯ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಕೆಪಿಎಸ್‌ಸಿ ಅವಕಾಶ ನೀಡಬೇಕೆಂದು ಹೇಳುವುದಿಲ್ಲ. ಕನಿಷ್ಠ ಪಕ್ಷ ಅಕ್ಕ ಪ‍ಕ್ಕದ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದರೆ ಒಳ್ಳೆಯದು’ ಎಂದು ಚಿತ್ರದುರ್ಗದ ಉದಯ್‌ ಕಿರಣ್ ಅಭಿಪ್ರಾಯಪಟ್ಟರು.

‘ಪೂರ್ವಭಾವಿ ಪರೀಕ್ಷೆ ಕಠಿಣವಾಗಿತ್ತು. ಪೂರ್ವತಯಾರಿ ಸಾಲಲಿಲ್ಲ ಎನಿಸುತ್ತದೆ. ಇನ್ನಷ್ಟು ಹೆಚ್ಚಿನ ಅಧ್ಯಯನದ ಅಗತ್ಯವಿತ್ತು’ ಎಂದು ಅವರು ತಿಳಿಸಿದರು.

‘ಪ್ರಚಲಿತ ವಿದ್ಯಮಾನ ಹಾಗೂ ವಿಜ್ಞಾನಕ್ಕೆ ಸಂಬಂಧಿ ಪ್ರಶ್ನೆಗಳು ಹೆಚ್ಚು ಇದ್ದವು. ಪರೀಕ್ಷೆ ತುಸು ಕ್ಲಿಷ್ಟಕರ ಎನಿಸಿತು’ ಎಂದು ಅಭ್ಯರ್ಥಿ ಗಿರೀಶ್‌ ಹೇಳಿದರು.

ನಗರದ ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜು, ರಥಬೀದಿಯ ಡಾ.ಪಿ.ದಯಾನಂದ ಪೈ, ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿಯ ಬಾಲಕಿಯರ ಸರ್ಕಾರಿ ಪಿ.ಯು. ಕಾಲೇಜು, ಬಲ್ಮಠದ ಬಾಲಕಿಯರ ಸರ್ಕಾರಿ ಪಿ.ಯು. ಕಾಲೇಜು, ಬಲ್ಮಠದ ಮಹಿಳೆಯರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಡಿಯಾಲ್‌ಬೈಲ್‌ನ ಕೆನರಾ ಪಿ.ಯು.ಕಾಲೇಜು, ಡೊಂಗರಕೇರಿಯ ಕೆನರಾ ಪ್ರೌಢಶಾಲೆ, ಉರ್ವದ ಕೆನರಾ ಪ್ರೌಢಶಾಲೆಗಳಲ್ಲಿ ಕೆಪಿಎಸ್‌ಸಿ ಪರೀಕ್ಷಾ ಕೇಂದ್ರಗಳಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT