ಶುಕ್ರವಾರ, ಫೆಬ್ರವರಿ 3, 2023
23 °C
ಶಾಸಕರ ಸಂಧಾನದ ಬಳಿಕ ಪ್ರತಿಭಟನೆ ವಾಪಸ್‌

ಕೆಪಿಟಿ ಪ್ರಾಂಶುಪಾಲ– ಎಬಿವಿಪಿ ಮುಖಂಡರ ನಡುವೆ ಚಕಮಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನಗರ ಕರ್ನಾಟಕ ಪಾಲಿಟೆಕ್ನಿಕ್‌ನ (ಕೆಪಿಟಿ) ಸಮಸ್ಯೆಗಳ ಬಗ್ಗೆ ಚರ್ಚಿಸಲು ಹೋದ ಎಬಿವಿಪಿ ಮುಖಂಡರ ಜೊತೆ ಸಂಸ್ಥೆಯ ಪ್ರಾಂಶುಪಾಲರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಸಂಘಟನೆಯ ಕಾರ್ಯಕರ್ತರು ಸಂಸ್ಥೆಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಕೆಪಿಟಿಯ ಕಟ್ಟಡಗಳು ಹದಗೆಟ್ಟಿರುವ ಬಗ್ಗೆ ಹಾಗೂ ಸಂಸ್ಥೆಯ ಉಪನ್ಯಾಸಕರ ವರ್ಗಾವಣೆಯಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿರುವ ಬಗ್ಗೆ ಚರ್ಚಿಸಲು ಪ್ರಾಂಶುಪಾಲರನ್ನು ಭೇಟಿಯಾಗಲು ಎಬಿವಿಪಿ ಮುಖಂಡರ ನಿಯೋಗವು ತೆರಳಿತ್ತು. ‘ನಮ್ಮ ಜೊತೆ ಚರ್ಚಿಸಲು ನಿರಾಕರಿಸಿದ್ದ ಪ್ರಾಂಶುಪಾಲ ಹರೀಶ್‌ ಶೆಟ್ಟಿ ಅವರು, ‘ಗೆಟ್‌ ಔಟ್‌’ ಎಂದು ಕೂಗಾಡಿ ಅನುಚಿತ ವರ್ತನೆ ತೋರಿದ್ದಾರೆ’ ಎಂದು ಸಂಘಟನೆಯ ಮುಖಂಡರು ಆರೋಪಿಸಿದ್ದಾರೆ.

‘ಪ್ರಾಂಶುಪಾಲರು ಕ್ಷಮೆ ಕೋರಬೇಕು’ ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಕೆಪಿಟಿ ಪ್ರಾಂಗಣದಲ್ಲಿ ಪ್ರತಿಭಟನೆ ನಡೆಸಿದರು. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಪ್ರಾಂಶುಪಾಲರು, ‘ಸಂಸ್ಥೆಯ ವಿದ್ಯಾರ್ಥಿಗಳನ್ನು ಕರೆಸಿ ನಿಮ್ಮನ್ನು ಹೊರಗೆ ಕಳುಹಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದರು. ಇದು ಪ್ರತಿಭಟನಾ ನಿರತ ಎಬಿವಿಪಿ ವಿದ್ಯಾರ್ಥಿಗಳನ್ನು ಮತ್ತಷ್ಟು ಕೆರಳಿಸಿತ್ತು. ಪೊಲೀಸರು ಮಧ್ಯಪ್ರವೇಶ ಮಾತನಾಡಿ ಪ್ರತಿಭಟನೆ ಕೈಬಿಡುವಂತೆ ಒತ್ತಾಯಿಸಿದರೂ ಅವರು ಒಪ್ಪಿರಲಿಲ್ಲ. ಪ್ರತಿಭಟನೆ ಸಂಜೆವರೆಗೂ ಮುಂದುವರಿದಿತ್ತು.

ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಶಾಸಕ ವೇದವ್ಯಾಸ ಕಾಮತ್‌, ಪ್ರಾಂಶುಪಾಲರ ಜೊತೆ ಮಾತುಕತೆ ನಡೆಸಿದರು. ನಡೆದ ಘಟನೆಗೆ ಪ್ರಾಂಶುಪಾಲರು ವಿಷಾದ ವ್ಯಕ್ತಪಡಿಸಿದ ಬಳಿಕ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ವಾಪಾಸ್‌ ಪಡೆದರು ಎಂದು ಗೊತ್ತಾಗಿದೆ.

ಎಬಿವಿಪಿ ಸಂಘಟನೆಯ ‘ಅಭಿವೃದ್ಧಿಗಾಗಿ ವಿದ್ಯಾರ್ಥಿಗಳು’ ಘಟಕದ ಮಂಗಳೂರು ವಿಭಾಗ ಪ್ರಮುಖ್‌ ನಿಶಾನ್‌ ಆಳ್ವ, ಎಬಿವಿಪಿ ಜಿಲ್ಲಾ ಸಂಚಾಲಕ ಶ್ರೇಯಸ್‌ ಶೆಟ್ಟಿ, ಮಂಗಳೂರು ವಿಭಾಗ ಸಂಚಾಲಕ ಹರ್ಷಿತ್‌ ಕೊಯಿಲ, ತಾಲ್ಲೂಕು ಸಂಚಾಲಕ ಆದಿತ್ಯ ಶೆಟ್ಟಿ, ನಗರ ಘಟಕದ ಕಾರ್ಯದರ್ಶಿ ಶ್ರೀಪಾದ ತಂತ್ರಿ ನಿಯೋಗದಲ್ಲಿದ್ದರು. 

‘ಪ್ರಾಂಶುಪಾಲರು ಇಲಾಖೆಗೆ ಸಂಬಂಧಿಸಿದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸುತ್ತಿದ್ದಾಗ ಎಬಿವಿಪಿ ವಿದ್ಯಾರ್ಥಿಗಳು ಅವರನ್ನು ಭೇಟಿಯಾಗಲು ಬಯಸಿದ್ದರು. ಮೇಲಧಿಕಾರಿಗಳಿಗೆ ಕೆಲವೊಂದು ಮಾಹಿತಿಯನ್ನು ಸೋಮವಾರ ಸಂಜೆಯ ಗಡುವಿನೊಳಗೆ ನೀಡಬೇಕಾದ ಒತ್ತಡದಲ್ಲಿ ಪ್ರಾಂಶುಪಾಲರು ಇದ್ದರು. ಹಾಗಾಗಿ ಎಬಿವಿಪಿ ನಿಯೋಗವನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಆದರೂ ಎಬಿವಿಪಿಯವರು ಪ್ರತಿಭಟನೆಗೆ ಮುಂದಾಗಿದ್ದರು’ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು