ಉಳ್ಳಾಲ: ವಿದೇಶಿ ಸಂಶೋಧನಾ ವರದಿಗಳಿಗೆ ಪ್ರಾಧಾನ್ಯತೆ ನೀಡುವ ಬದಲಿಗೆ ದೇಶದೊಳಗಿನ ಜನಸಂಖ್ಯೆಗೆ ಅನುಗುಣವಾಗಿ ಸಂಶೋಧನೆ ನಡೆಸಿ ವರದಿಗಳನ್ನು ರಚಿಸಬೇಕಿದೆ ಎಂದು ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ.ಬಿ.ಎಲ್.ಸುಜಾತಾ ರಾಥೋಡ್ ಹೇಳಿದರು.
ಯೆನೆಪೋಯ ನರ್ಸಿಂಗ್ ಕಾಲೇಜಿನ ಆಶ್ರಯದಲ್ಲಿ ದೇರಳಕಟ್ಟೆಯಲ್ಲಿ ಶುಕ್ರವಾರ ನಡೆದ ‘ಮಿಶ್ರ ವಿಧಾನ ಸಂಶೋಧನೆಗಳ ಅಸೀಮ ದಿಕ್ಕುಗಳ ಅನ್ವೇಷಣೆ, ಒಳನೋಟಗಳ ಸಮಕಾಲೀನಗೊಳಿಸುವಿಕೆ ಹಾಗೂ ಆರೋಗ್ಯ ಸೇವೆ ವೃದ್ಧಿ’ ಕುರಿತ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆ ಪ್ರಮುಖ ಪಾತ್ರ ವಹಿಸುತ್ತದೆ. ಮಿಶ್ರ ಸಂಶೋಧನೆಗಳು ಪರಿಣಾಮಕಾರಿ ವರದಿಗಳ ರಚನೆಗೆ ಸಹಕಾರಿ. ಸಾಕ್ಷ್ಯಾಧಾರಿತ ಚಿಕಿತ್ಸೆ ನೀಡಲು ವರದಿಗಳು ಸಹಕಾರಿ, ಈ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದರು.
ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ವರ್ಚುವಲ್ ಮಾಧ್ಯಮದ ಮೂಲಕ ಮಾತನಾಡಿ, ‘ಯೆನೆಪೋಯ ವಿ.ವಿ ನರ್ಸ್‌ಗಳ ಕುರಿತು ವಹಿಸಿಕೊಂಡಿರುವ ಕಾಳಜಿ ಶ್ಲಾಘನೀಯಎಂದರು.
ಮೈಸೂರು ವಿಭಾಗದ ಮಾಜಿ ವಿಭಾಗೀಯ ಜಂಟಿ ನಿರ್ದೇಶಕಿ ಡಾ.ರಾಜೇಶ್ವರಿ ದೇವಿ ಮಾತನಾಡಿ, ಸಂಶೋಧನೆಗಳ ಆಧಾರದ, ಸಾಕ್ಷ್ಯಾಧಾರಿತ ಚಿಕಿತ್ಸಗಳಿಂದಾಗಿ ಅಲೋಪತಿ ಔಷಧಿ ವಿಧಾನಗಳಲ್ಲಿ ಬದಲಾವಣೆಗಳು ನಡೆಯುತ್ತಲೇ ಬಂದಿದೆ. ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ತಲೆ ಹಾಗೂ ಕುತ್ತಿಗೆ ಭಾಗದ ಕ್ಯಾನ್ಸರ್ ರೋಗಗಳು ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ರಾಜ್ಯ ಆರೋಗ್ಯ ಇಲಾಖೆಯೂ ಈ ಕುರಿತು ಕಾರಣಗಳ ಅನ್ವೇಷಣೆಯನ್ನು ನಡೆಸುತ್ತಿದೆ. ಈ ಕುರಿತು ಯೆನೆಪೋಯ ವಿ.ವಿ ಬೆಳಕು ಚೆಲ್ಲಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ಸ್ವಾಯುತ್ತೆಗೊಳ್ಳಲಿರುವ ವಿ.ವಿ.ಯ ಕುಲಾಧಿಪತಿ ವೈ.ಅಬ್ದುಲ್ಲಾ ಕುಞಿ ಮಾತನಾಡಿ, ಸಮ್ಮೇಳನಗಳ ಮೂಲಕ ಸಂಶೋಧನೆಳಿಗೆ ಒತ್ತು ಹಾಗೂ ಜ್ಞಾನವಿನಿಮಯಕ್ಕೆ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
ವಿ.ವಿ.ಯ ಕುಲಪತಿ ಡಾ.ಎಂ.ವಿಜಯ್ ಕುಮಾರ್, ಉಪಕುಲಪತಿ ಡಾ.ಬಿ.ಎಚ್.ಶ್ರೀಪತಿ ರಾವ್, ಕುಲಸಚಿವ ಡಾ.ಗಂಗಾಧರ ಸೋಮಯಾಜಿ ಭಾಗವಹಿಸಿದ್ದರು.
ರೆನಿಟಾ ತಾವ್ರೊ, ಪವಿತ್ರಾ ನಿರೂಪಿಸಿದರು. ನರ್ಸಿಂಗ್ ಕಾಲೇಜಿನ ಡೀನ್ ಡಾ.ಲೀನಾ ಕೆ.ಸಿ.ಸ್ವಾಗತಿಸಿದರು. ಡಾ.ಬಿನ್ಷಾ ಪಾಪಚ್ಚನ್ ವಂದಿಸಿದರು. ಸಮ್ಮೇಳನದ ಸ್ಮರಣಿಕಾ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.