ಬುಧವಾರ, ಆಗಸ್ಟ್ 4, 2021
23 °C
ನ.1ರಿಂದಲೇ ನಿರ್ವಹಣೆ ಆರಂಭ ಸಾಧ್ಯತೆ

ಅದಾನಿ ಸಮೂಹಕ್ಕೆ ಮಂಗಳೂರು ವಿಮಾನ ನಿಲ್ದಾಣ ನಿರ್ವಹಣೆಯ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಇಲ್ಲಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ್ದು, 69 ವರ್ಷಗಳಿಂದ ಸರ್ಕಾರಿ ಸ್ವಾಮ್ಯದಲ್ಲಿದ್ದ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯನ್ನು ನವೆಂಬರ್ 15ರೊಳಗೆ ಅದಾನಿ ಸಮೂಹ ಸಂಸ್ಥೆ ವಹಿಸಿಕೊಳ್ಳಬೇಕಿದೆ.

ಅಗತ್ಯವಿರುವ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ನವೆಂಬರ್ 1ರಿಂದಲೇ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಂಸ್ಥೆಗೆ ನೀಡುವ ಸಾಧ್ಯತೆ ಇದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಮಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆ ಬಗ್ಗೆ ಅದಾನಿ ಸಂಸ್ಥೆ ಹಲವು ತಿಂಗಳಿನಿಂದ ಅಧ್ಯಯನ ನಡೆಸಿದೆ. ನಿಲ್ದಾಣದ ನಿರ್ದೇಶಕ ಹುದ್ದೆ ಕೆಲವು ತಿಂಗಳು ಮಾತ್ರ ಇರಲಿದ್ದು, ಬಳಿಕ ಅದಾನಿ ಸಂಸ್ಥೆ ನಿಲ್ದಾಣದ ಉಸ್ತುವಾರಿ ನೋಡಿಕೊಳ್ಳಲು ಸಿಇಒ ನೇಮಕ ಮಾಡಲಿದೆ.

ಅದಾನಿ ಸಂಸ್ಥೆ ಮತ್ತು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರಗಳು ಜಂಟಿಯಾಗಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಲಿವೆ. ಹೂಡಿಕೆ, ಟರ್ಮಿನಲ್ ಕಟ್ಟಡದ ವಾಣಿಜ್ಯ ಚಟುವಟಿಕೆ, ಲಾಭ-ನಷ್ಟದ ವ್ಯವಹಾರ, ವಿಮಾನಯಾನ ಸಂಸ್ಥೆಗಳು ನೀಡುವ ಬಾಡಿಗೆಯಂತಹ ವಿಷಯಗಳನ್ನು ಅದಾನಿ ಸಂಸ್ಥೆ ನೋಡಿಕೊಳ್ಳಲಿದೆ. ವಿಮಾನಗಳ ಆಗಮನ, ನಿರ್ಗಮನವನ್ನು ವಿಮಾನ ನಿಲ್ದಾಣ ಪ್ರಾಧಿಕಾರ ನೋಡಿಕೊಳ್ಳಲಿದ್ದು, ಅದಾನಿ ಸಂಸ್ಥೆಗೆ ಮಾರ್ಗದರ್ಶನ ನೀಡಲಿದೆ.

ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಂಸ್ಥೆ ಆರಂಭಿಸಿದರೂ, ಈಗಿರುವ ಉದ್ಯೋಗಿಗಳು ಹಿಂದಿನಂತೆಯೇ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಒಂದು ವರ್ಷಗಳ ಬಳಿಕ ಸಂಸ್ಥೆ ಹೊಸ ನೇಮಕಾತಿಯನ್ನು ಮಾಡಿಕೊಳ್ಳಲಿದೆ ಎಂದು ಅದಾನಿ ಸಮೂಹದ ಮೂಲಗಳು ತಿಳಿಸಿವೆ.

ದರ ಪರಿಷ್ಕರಣೆ ಸಾಧ್ಯತೆ: ವಿಮಾನ ನಿಲ್ದಾಣದ ವಾಣಿಜ್ಯ ಚಟುವಟಿಕೆಗಳು ಅದಾನಿ ಸಂಸ್ಥೆ ಪಾಲಾದ ನಂತದ ಟರ್ಮಿನಲ್ ಕಟ್ಟಡದ ಬಾಡಿಗೆ ಪರಿಷ್ಕರಣೆ ಆಗುವ ನಿರೀಕ್ಷೆ ಇದೆ. ಪ್ರತ್ಯೇಕ ಏರ್‌ಪೋರ್ಟ್ ಕಾಂಪ್ಲೆಕ್ಸ್, ಮಾಲ್ ನಿರ್ಮಾಣವಾಗಲಿವೆ. ಅದಾನಿ ಸಂಸ್ಥೆ ನಿಲ್ದಾಣದ ಅಭಿವೃದ್ಧಿಗಾಗಿ ಹೂಡಿಕೆ ಮಾಡಲಿದೆ.

ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ವಹಣೆ ಮಾಡಲಾಗುತ್ತದೆ. 2018ರಲ್ಲಿ ಇದಕ್ಕಾಗಿ ಟೆಂಡರ್ ಆಹ್ವಾನಿಸಲಾಗಿತ್ತು. 2019ರ ಜುಲೈನಲ್ಲಿ ಕೇಂದ್ರ ಸರ್ಕಾರ ಅದಾನಿ ಸಂಸ್ಥೆಗೆ 50 ವರ್ಷಗಳ ಕಾಲ ನಿರ್ವಹಣೆಗೆ ಗುತ್ತಿಗೆ ನೀಡಿ ಆದೇಶ ಹೊರಡಿಸಿತ್ತು.

ಮಂಗಳೂರು– ಮೈಸೂರು ವಿಮಾನ

ಮಂಗಳೂರಿನಿಂದ ಮೈಸೂರಿಗೆ ಇದೇ 25ರಿಂದ ವಿಮಾನ ಸೇವೆ ಪ್ರಾರಂಭಿಸಲು ಏರ್ ಇಂಡಿಯಾ ತೀರ್ಮಾನಿಸಿದೆ.

25ರಿಂದ ಮಂಗಳೂರು-ಮೈಸೂರು ನಡುವೆ ಪ್ರಾಯೋಗಿಕವಾಗಿ ವಿಮಾನ ಸಂಚಾರ ಆರಂಭವಾಗಲಿದ್ದು, ಕಾರ್ಯಸಾಧ್ಯತಾ ವರದಿಯನ್ನು ಆಧರಿಸಿ ವಿಮಾನ ಸೇವೆಯನ್ನು ಮುಂದುವರಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ.

ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ವಿಮಾನ ಮೈಸೂರು ಮಾರ್ಗವಾಗಿ ಹಾರಾಟ ನಡೆಸಲಿದೆ. ಬೆಂಗಳೂರಿನಿಂದ ಬೆಳಿಗ್ಗೆ 6.50ಕ್ಕೆ ಹೊರಡುವ ವಿಮಾನ ಮೈಸೂರು ತಲುಪಲಿದ್ದು, 7.55ಕ್ಕೆ ಮೈಸೂರಿನಿಂದ ಹೊರಟು 8.50ಕ್ಕೆ ಮಂಗಳೂರು ತಲುಪುವ ನಿರೀಕ್ಷೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು