ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಂಟ್ರಲ್‌ ಮಾರುಕಟ್ಟೆ ಮತ್ತೆ ಸ್ಥಗಿತ

ಜಿಲ್ಲಾಧಿಕಾರಿ ಜೊತೆ ವ್ಯಾಪಾರಿಗಳ ನಿಯೋಗದ ಚರ್ಚೆ
Last Updated 21 ಆಗಸ್ಟ್ 2020, 6:12 IST
ಅಕ್ಷರ ಗಾತ್ರ

ಮಂಗಳೂರು: ನಗರದ ಸೆಂಟ್ರಲ್ ಮಾರುಕಟ್ಟೆಯನ್ನು ಗುರುವಾರ ಮತ್ತೆ ಮಂಗಳೂರು ಮಹಾನಗರ ಪಾಲಿಕೆ ಬಂದ್ ಮಾಡಿದ್ದು, ವ್ಯವಹಾರವನ್ನು ಸ್ಥಗಿತಗೊಳಿಸಿದೆ.

ಗುರುವಾರ ಸಂಜೆ 4 ಗಂಟೆಯ ವೇಳೆಗೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ ಬಂದು, ವ್ಯವಹಾರ ಸ್ಥಗಿತಗೊಳಿಸುವಂತೆ ಸೂಚಿಸಿ ವ್ಯಾಪಾರಿಗಳನ್ನು ಹೊರಗೆ ಕಳುಹಿಸಿದರು. ಶುಕ್ರವಾರದಿಂದ ವ್ಯಾಪಾರ ಮಾಡುವಂತಿಲ್ಲ ಎಂಬ ಸೂಚನೆಯನ್ನೂ ನೀಡಿದ್ದು, ಸದ್ಯ ಮತ್ತೆ ಸೆಂಟ್ರಲ್ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ.

ಸೆಂಟ್ರಲ್ ಮಾರುಕಟ್ಟೆಗೆ ಬಂದ್ ಮಾಡಿರುವ ಆದೇಶವನ್ನು ಪಾಲಿಕೆಯು ಹಿಂಪಡೆದಿದ್ದರಿಂದ ಕಳೆದ ಗುರುವಾರದಿಂದ ವರ್ತಕರು ಸೆಂಟ್ರಲ್‌ ಮಾರುಕಟ್ಟೆಯಲ್ಲಿ ವ್ಯವಹಾರವನ್ನು ಆರಂಭಿಸಿದ್ದರು. ಈ ನಡುವೆ ಮಂಗಳವಾರ ಜಿಲ್ಲಾಧಿಕಾರಿ ಹೊಸ ಆದೇಶ ಹೊರಡಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಬಂದ್ ಮಾಡುವಂತೆ ಸೂಚಿಸಿದ್ದರು. ವ್ಯಾಪಾರಸ್ಥರು ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ತಮಗೆ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದ್ದರು.

ಆದರೆ, ಬುಧವಾರ ಪಾಲಿಕೆಯ ಅಧಿಕಾರಿಗಳು ಮಾರ್ಕೆಟ್‌ಗೆ ತೆರಳಿ ಜಿಲ್ಲಾಧಿಕಾರಿಗಳ ಆದೇಶದ ನೋಟಿಸ್‌ ಅನ್ನು ಗೋಡೆಗೆ ಅಂಟಿಸಿದ್ದರು. ಆದೇಶದ ಬಗ್ಗೆ ವ್ಯಾಪಾರಿಗಳಿಗೆ ವೈಯಕ್ತಿಕವಾಗಿ ನೋಟಿಸ್‌ ನೀಡಿ ಗುರುವಾರದಿಂದ ವ್ಯಾಪಾರ ಮಾಡದಂತೆ ಸೂಚಿಸಿದ್ದರು. ಬಳಿಕ ನಡೆದ ಬೆಳವಣಿಗೆಯಲ್ಲಿ ಗುರುವಾರ ಸಂಜೆಯವರೆಗೆ ವ್ಯಾಪಾರ ಮಾಡಲು ಪಾಲಿಕೆ ಅವಕಾಶ ಕಲ್ಪಿಸಿತ್ತು.

ಜಿಲ್ಲಾಧಿಕಾರಿ ಜತೆ ಚರ್ಚೆ: ಸೆಂಟ್ರಲ್ ಮಾರ್ಕೆಟ್ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಅಹ್ಮದ್ ಬಾವಾ ನೇತೃತ್ವದ ನಿಯೋಗ ಗುರುವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.

‘ಗುರುವಾರ ಮಧ್ಯಾಹ್ನ ವರ್ತಕರ ನಿಯೋಗ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ್ದು, ಕಾಲಾವಕಾಶ ನೀಡುವಂತೆ ಕೋರಿದೆವು. ಆದರೆ ಕೋವಿಡ್–19 ಹೆಚ್ಚಾಗುತ್ತಿರುವುದರಿಂದ ವಿಪತ್ತು ನಿರ್ವಹಣೆ ದೃಷ್ಟಿಯಿಂದ ಆದೇಶವನ್ನು ಹಿಂಪಡೆಯಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಬದಲಿ ವ್ಯವಸ್ಥೆಗೆ ಮೂರು ಜಾಗವನ್ನು ನಾವು ಸೂಚಿಸಿದ್ದೆವು. ಹಳೆ ಬಸ್‌ ನಿಲ್ದಾಣ, ಈಗಾಗಲೇ ಪುರಭವನ ಹಾಗೂ ಲೇಡಿಗೋಷನ್ ಎದುರು ಚಿಲ್ಲರೆ ವ್ಯಾಪಾರಸ್ಥರಿಗಾಗಿ ನಿರ್ಮಿಸಲಾದ ಶೆಡ್‌ಗಳಲ್ಲಿ ಅಥವಾ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಪಿಎಂಸಿ ಕಟ್ಟಡದಲ್ಲಿ ವ್ಯವಸ್ಥೆಗೆ ತಿಳಿಸಿದ್ದೆವು. ಈ ಕುರಿತು ಪಾಲಿಕೆ
ಪ್ರಭಾರ ಆಯುಕ್ತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಚಿಲ್ಲರೆ ವ್ಯಾಪಾರಸ್ಥರಿಗಾಗಿ ನಿರ್ಮಿಸಲಾದ ಶೆಡ್‌ಗಳಲ್ಲಿ ವ್ಯಾಪಾರಕ್ಕೆ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ’ ಎಂದು ಅಹ್ಮದ್ ಬಾವಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT