ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಸರ್ಕಾರಿ ಶಾಲೆ ಉಳಿವಿಗೆ ಹಳೇ ವಿದ್ಯಾರ್ಥಿಗಳು ಪಣ

ವಿನೂತನ ಯೋಜನೆ ಅನುಷ್ಠಾನಕ್ಕೆ ಮುಂದಾದ ಹಳೇ ವಿದ್ಯಾರ್ಥಿಗಳು
Last Updated 29 ಏಪ್ರಿಲ್ 2022, 2:20 IST
ಅಕ್ಷರ ಗಾತ್ರ

ಮಂಗಳೂರು: ವಿದ್ಯಾರ್ಥಿಗಳಿಲ್ಲದೆ ಸೊರಗಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದಕ್ಕೆ ಹಳೆಯ ವಿದ್ಯಾರ್ಥಿಗಳು ಸೇರಿ ಜೀವಕಳೆ ತುಂಬಲು ಅಣಿಯಾಗಿದ್ದಾರೆ.

ಶತಮಾನ ಕಂಡಿರುವ ಸುರತ್ಕಲ್ ಸಮೀಪದ ಚೇಳ್ಯಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಳ್ಯಾರು ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ವಿದ್ಯಾರ್ಥಿಗಳಿಲ್ಲದೆ ಬಾಗಿಲು ಮುಚ್ಚುವ ಹಂತ ತಲುಪಿತ್ತು. ತಾವು ಅಕ್ಷರ ಕಲಿತ ಶಾಲೆ ಬಾಗಿಲು ಮುಚ್ಚುವುದನ್ನು ಕಂಡು ಮರುಗಿದ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಸುಧಾಕರ್ ಶೆಟ್ಟಿ ಹಾಗೂ ಇನ್ನುಳಿದ 14 ಜನರು ಸರ್ಕಾರಕ್ಕೆ ಪತ್ರ ಬರೆದು ಈ ಶಾಲೆ ಮುಚ್ಚದಂತೆ ವಿನಂತಿಸುವುದರ ಜತೆಗೆ, ಟ್ರಸ್ಟ್‌ ಒಂದನ್ನು ರಚಿಸಿ, ಶಾಲೆಯನ್ನು ನಡೆಸುವುದಾಗಿ ತಿಳಿಸಿದರು. ಸರ್ಕಾರ ಇದಕ್ಕೆ ಸಮ್ಮತಿ ಸೂಚಿಸಿದ್ದು, ಈಗ ಟ್ರಸ್ಟ್ ಕೂಡ ರಚನೆಯಾಗಿದೆ.

ಶಾಲೆಗೆ ಹೆಚ್ಚು ಮಕ್ಕಳನ್ನು ಸೆಳೆಯಲು ಈ ಟ್ರಸ್ಟ್ ಅನೇಕ ವಿನೂತನ ಯೋಜನೆಗಳನ್ನು ರೂಪಿಸಿದೆ. ಈ ವರ್ಷದಿಂದ ಎಲ್‌ಕೆಜಿ, ಯುಕೆಜಿ ಜತೆಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣ ನೀಡಲು ಮುಂದಾಗಿದೆ. ಇದಕ್ಕೆ ಅಗತ್ಯವಿರುವ ಶಿಕ್ಷಕರನ್ನು ಕೂಡ ನೇಮಕ ಮಾಡಿಕೊಳ್ಳಲಿದೆ.

‘ನನ್ನ ತಂದೆ ಈ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ನಾನು ಕಲಿತಿದ್ದು ಕೂಡ ಇದೇ ಶಾಲೆಯಲ್ಲಿ. ಈ ಶಾಲೆ ಉಳಿಯಬೇಕು ಎಂಬ ಕಾರಣಕ್ಕೆ ನಾವು ಹೊಸ ಯೋಜನೆಗಳನ್ನು ಸಿದ್ಧಪಡಿಸಿದ್ದೇವೆ. ಸೈಬರ್ ಕ್ರೈಂ ತಜ್ಞ ಡಾ. ಅನಂತ ಪ್ರಭು ಅವರು ದೆಹಲಿ ಮಾದರಿಯ ಸರ್ಕಾರಿ ಶಾಲೆ ರೂಪಿಸಲು ಟ್ರಸ್ಟ್‌ಗೆ ಹಲವಾರು ಸಲಹೆಗಳನ್ನು ನೀಡಿದ್ದಾರೆ. ಒಂದು ವರ್ಷದಲ್ಲಿ ಸಾಕಷ್ಟು ಬದಲಾವಣೆ ತರಲು ಪಣತೊಟ್ಟಿದ್ದೇವೆ.
ಈಗಾಗಲೇ ಒಂದನೇ ತರಗತಿಗೆ 20 ಮಕ್ಕಳ ಹೆಸರು ನೋಂದಣಿಯಾಗಿದೆ. ಪ್ರತಿ ಮನೆಗೆ ಭೇಟಿ ನೀಡಿ, ಶೈಕ್ಷಣಿಕ ವರ್ಷದ ಆರಂಭದ ವೇಳೆಗೆ ಇನ್ನಷ್ಟು ಮಕ್ಕಳು ಬರುವಂತೆ ಮಾಡುತ್ತೇವೆ’ ಎಂದು ಸುಧಾಕರ ಶೆಟ್ಟಿ ತಿಳಿಸಿದರು.

‘ಶಾಲಾ ಮಕ್ಕಳ ಹಾಜರಾತಿ ಬಗ್ಗೆ ಪಾಲಕರಿಗೆ ಎಸ್‌ಎಂಎಸ್‌ ಕಳುಹಿಸುವುದು, ಶಾಲೆ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಸಾವಯವ ತರಕಾರಿ ವನ ನಿರ್ಮಾಣ, ಶುದ್ಧ ಕುಡಿಯುವ ನೀರು ಸೌಲಭ್ಯ, ಮಕ್ಕಳು ಹಾಗೂ ಪಾಲಕರಿಗೆ ನಿಯಮಿತವಾಗಿ ಕೌನ್ಸೆಲಿಂಗ್, ಕ್ರೀಡೆ ಮತ್ತು ಯೋಗ ತರಬೇತಿ, ಮಕ್ಕಳಿಗೆ ಶಾಲೆಗೆ ಬರಲು ಉಚಿತ ವಾಹನ ಮತ್ತು ಅದಕ್ಕೆ ಜಿಪಿಎಸ್‌ ಅಳವಡಿಕೆ, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಅನಂತ ಪ್ರಭು ಸಲಹೆ ನೀಡಿದ್ದಾರೆ. ಸಮವಸ್ತ್ರ, ನೋಟ್‌ಬುಕ್ ಸಹಿತ ಎಲ್ಲವನ್ನೂ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತದೆ’ ಎಂದು ಅವರು ವಿವರಿಸಿದರು.

‘ಉತ್ಸುಕರಾಗಿರುವ ದಾನಿಗಳು’

‘ಸ್ಪರ್ಧಾತ್ಮಕವಾಗಿ ಮಕ್ಕಳನ್ನು ರೂಪಿಸುವ ಶಿಕ್ಷಣ ನೀಡಿದರೆ ಮಕ್ಕಳು ಶಾಲೆಗೆ ಬಂದೇ ಬರುತ್ತಾರೆ. ಇದನ್ನು ಸವಾಲಾಗಿ ಸ್ವೀಕರಿಸಿದ್ದು, ಒಂದು ವರ್ಷದಲ್ಲಿ ಶಾಲೆಯಲ್ಲಿ ಸಾಕಷ್ಟು ಬದಲಾವಣೆ ತರಲಾಗುತ್ತದೆ. ಈಗಾಗಲೇ ಹಲವಾರು ದಾನಿಗಳು ಶಾಲೆಗೆ ಕಂಪ್ಯೂಟರ್ ಸಹಿತ ಅನೇಕ ಕೊಡುಗೆಗಳನ್ನು ನೀಡಲು ಮುಂದೆ ಬಂದಿದ್ದಾರೆ’ ಎಂದು ಡಾ. ಅನಂತ ಪ್ರಭು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT