ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: 'ಆಟಿ ಅಮಾವಾಸ್ಯೆ' ಗೆ ‘ಕಷಾಯ’ದ ಘಮ

ನಸುಕಿನಲ್ಲಿ ಎದ್ದು ಹಾಲೆ ಮರದ ಕಷಾಯ ಸೇವಿಸುವ ತುಳುನಾಡಿನ ವಿಶಿಷ್ಟ ಆಚರಣೆ
Published 17 ಜುಲೈ 2023, 15:43 IST
Last Updated 17 ಜುಲೈ 2023, 15:43 IST
ಅಕ್ಷರ ಗಾತ್ರ

ಮಂಗಳೂರು: ಪ್ರಕೃತಿಯೊಂದಿಗೆ ಬದುಕು ಬೆಸೆದುಕೊಂಡಿರುವ ತುಳುನಾಡಿನಲ್ಲಿ ‘ಆಟಿ ಅಮಾವಾಸ್ಯೆ’ ಎಂಬ ಆಚರಣೆ ಮತ್ತು ಅಂದು ಮನೆಮಂದಿಯೆಲ್ಲ ನಸುಕಿನಲ್ಲೇ ಎದ್ದು ಸೇವಿಸುವ ‘ಆಟಿ ಕಷಾಯ’ ಬಲು ವಿಶೇಷ.

ತುಳುನಾಡಿನಲ್ಲಿ ಸೋಮವಾರ ಬೆಳಕು ಹರಿಯುವ ಮುನ್ನವೇ ಎಲ್ಲ ಮನೆಗಳಲ್ಲಿ ಹಬ್ಬದ ವಾತಾವರಣ. ಅಡುಗೆ ಮನೆಯಲ್ಲಿ ರುಬ್ಬುವ ಕಲ್ಲುಗಳ ನರ್ತನ, ಹಾಲೆ ಮರದ ತೊಗಟೆಯ ಘಮ. ಮಕ್ಕಳು, ಮನೆ ಮಂದಿಗೆ ಕಷಾಯ ಕುಡಿಯುವ ಸಂಭ್ರಮ.

ಆಷಾಢ ಮಾಸವನ್ನು ತುಳುನಾಡಿನಲ್ಲಿ ನಿಷೇಧದ, ಸಂಕಷ್ಟದ ತಿಂಗಳು ಎಂದು ಗುರುತಿಸುತ್ತಾರೆ‌. ಎಡೆಬಿಡದೆ ಸುರಿವ ಮಳೆ, ಹವಾಮಾನ ವೈಪರೀತ್ಯದಿಂದ ಆರೋಗ್ಯ ಸಮಸ್ಯೆಗಳು ಬರಬಾರದೆಂದು ಆಟಿ ಅಮಾವಾಸ್ಯೆಯಂದು ‘ಕಷಾಯ’ ಸೇವಿಸುತ್ತಾರೆ. ಇದು ಇಲ್ಲಿ ಸಾಂಪ್ರದಾಯಿಕವಾಗಿ ಬೆಳೆದು ಬಂದಿರುವ ಮನೆಮದ್ದು ಸೇವಿಸುವ ಆಚರಣೆ.

ಆಟಿ ಅಮಾವಾಸ್ಯೆಯಂದು ನಸುಕಿನಲ್ಲಿ ಎದ್ದು ಹಾಲೆ (ತುಳುವಿನಲ್ಲಿ ಪಾಲೆ– ವೈಜ್ಞಾನಿಕ ಹೆಸರು– ಅಲ್ ಸ್ಟೋನಿಯಾ ಸ್ಕಾಲರಿಸ್) ಮರದ ತೊಗಟೆಯ ಕಷಾಯ ಸೇವನೆ ಮಾಡುವ ಪದ್ಧತಿ ಇಲ್ಲಿದೆ. ಈ ಮೂಲಕ ಪ್ರತಿಕೂಲ ಹವಾಮಾನದಲ್ಲಿ ಕಾಡುವ ಸೋಂಕು, ಸಾಂಕ್ರಾಮಿಕಗಳು ಶಮನವಾಗುತ್ತವೆ ಎಂಬ ನಂಬಿಕೆ ತುಳುವರದು.

ತೊಗಟೆ ತರುವುದು ಹೇಗೆ?:

ಅಮಾವಾಸ್ಯೆಯ ಮೊದಲ ದಿನ ಸಂಜೆ ಮರಕ್ಕೆ ಗುರುತು ಹಾಕಿ, ಆ ಮರಕ್ಕೆ ಬಾಳೆಗಿಡದ ಹಗ್ಗ ಅಥವಾ ನೂಲನ್ನು ಕಟ್ಟಿ, ಅದರ ಬುಡದಲ್ಲಿ ಬೆಣಚು ಕಲ್ಲೊಂದನ್ನು ಇಡಲಾಗುತ್ತದೆ. ಬೆಳಗಿನ ಜಾವ 4ರಿಂದ 5 ಗಂಟೆ ಅವಧಿಯಲ್ಲಿ ಗಂಡಸರು ಆ ಮರದ ಬಳಿ ಹೋಗಿ ಬೆಣಚು ಕಲ್ಲಿನಿಂದ ಮರದ ತೊಗಟೆಯ ತುಂಡನ್ನು ತೆಗೆದು ಮನೆಗೆ ತರುತ್ತಾರೆ. ಅದಕ್ಕೆ ಕರಿಮೆಣಸು, ಓಮ, ಬೆಳ್ಳುಳ್ಳಿ, ಜೀರಿಗೆ ಸೇರಿಸಿ, ಅರೆಯುವ ಕಲ್ಲಿನಲ್ಲಿ ರುಬ್ಬಿಟ್ಟು, ಸೋಸಿದ ರಸಕ್ಕೆ, ಬೆಣಚು ಕಲ್ಲನ್ನು ಕೆಂಡದಲ್ಲಿ ಕಾಯಿಸಿ ಹಾಕಿ, ಆ ಕಷಾಯವನ್ನು ಹೆಂಗಸರು ಮನೆ ಮಂದಿಗೆಲ್ಲ ಕೊಡುತ್ತಾರೆ. ನಿಗದಿತ ಅವಧಿಯಲ್ಲಿ ಕುಡಿದರೆ ಮಾತ್ರ ಅದರೊಳಗಿನ ಔಷಧೀಯ ಅಂಶ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂಬ ನಂಬಿಕೆಯೂ ಇದೆ.

ಹಸಿದ ಹೊಟ್ಟೆಯಲ್ಲಿ ಈ ಕಹಿಯಾದ ಕಷಾಯ ಕುಡಿಯಬೇಕು ಎಂಬುದು ನಿಯಮ. ಇದು ತುಸು ಉಷ್ಣ ಆಗಿರುವುದರಿಂದ ದೇಹದ ಉಷ್ಣತೆ ಕಡಿಮೆ ಮಾಡಲು ಮೆಂತೆ, ತೆಂಗಿನ ಕಾಯಿ ಹಾಕಿದ ಗಂಜಿ ಸೇವನೆ ಮಾಡಲಾಗುತ್ತದೆ. ಆಟಿ ಅಮಾವಾಸ್ಯೆಯ ದಿನ ಸಮುದ್ರ, ಹರಿವ ತೊರೆ, ನದಿಗಳೆಲ್ಲವೂ ಪವಿತ್ರ ತೀರ್ಥವಾಗುತ್ತದೆ ಎಂಬ ನಂಬಿಕೆಯಿದೆ‌. ಹೀಗಾಗಿ ಸಮುದ್ರ ಸ್ನಾನ ಅಥವಾ ತೀರ್ಥ ಸ್ನಾನ ಮಾಡುವ ಪದ್ಧತಿಯೂ ರೂಢಿಯಲ್ಲಿದೆ.

ನಗರದ ಆಯುರ್ವೇದ ಕಾಲೇಜುಗಳು, ಖಾಸಗಿ ಆಯುರ್ವೇದ ಆಸ್ಪತ್ರೆಗಳು, ಆಸಕ್ತ ಸಂಘ– ಸಂಸ್ಥೆಗಳು ನಗರದಲ್ಲಿ ಆಟಿ ಕಷಾಯ ಉಚಿತ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದವು.

‘ಚಿಕ್ಕಂದಿನಿಂದ ಒಮ್ಮೆಯೂ ಆಟಿ ಕಷಾಯ ಕುಡಿಯುವುದನ್ನು ತಪ್ಪಿಸಿದ್ದೇ ಇಲ್ಲ. ಹಳ್ಳಿಯಲ್ಲಿ ಇರುವಾಗ ಅಜ್ಜಿಯರು ಇದನ್ನು ಮನೆಯಲ್ಲೇ ಮಾಡಿಕೊಡುತ್ತಿದ್ದರು. ನಗರಕ್ಕೆ ಬಂದ ಮೇಲೆ ಹಾಲೆ ಮರದಿಂದ ತೊಗಟೆ ತರುವುದು ಕಷ್ಟವಾಯಿತು. ಆಗ ಉಚಿತವಾಗಿ ವಿತರಿಸುವ ಸ್ಥಳಕ್ಕೆ ಹೋಗಿ, ಕಷಾಯ ಕುಡಿದು ಬರುತ್ತೇವೆ’ ಎಂದು ಉರ್ವದ ಸಂದೇಶ್ ಸಾಲ್ಯಾನ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT