ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೃತೀಯ ಭಾಷೆಯಾಗಿ ಬ್ಯಾರಿ ಕಲಿಕೆ

ಸುರುತೊ ಬ್ಯಾರಿ ವ್ಯಾಕರಣ ಗ್ರಂಥ ಬಿಡುಗಡೆಯಲ್ಲಿ ಕರಂಬಾರು ಆಶಯ
Last Updated 27 ಜುಲೈ 2019, 13:48 IST
ಅಕ್ಷರ ಗಾತ್ರ

ಮಂಗಳೂರು: ‘ಶಾಲೆಯಲ್ಲಿ ಮೂರನೇ ಭಾಷೆಯಾಗಿ ಬ್ಯಾರಿ ಸೇರ್ಪಡೆಯು ನಮ್ಮ ಪ್ರಮುಖ ಗುರಿಯಾಗಿದೆ’ ಎಂದು ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕರಂಬಾರು ಮಹಮದ್ ಹೇಳಿದರು.

ನಗರ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶನಿವಾರ ‘ಸುರೂತೊ ಬ್ಯಾರಿ ವ್ಯಾಕರಣ’ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬ್ಯಾರಿ ಅಕಾಡೆಮಿ ಸ್ಥಾಪನೆಗೆ ಭಾಷಿಗರೆಲ್ಲ ಕೃತಜ್ಞರಾಗಿದ್ದಾರೆ. ಪ್ರತಿಭಾ ಕಾರಂಜಿಯಲ್ಲಿ ಬ್ಯಾರಿ ಭಾಷೆ ಮತ್ತು ಸಾಂಸ್ಕೃತಿಕ ಕಲಾ ಪ್ರಕಾರಗಳ ಸೇರ್ಪಡೆ ಹಾಗೂ ಮಂಗಳೂರು ಆಕಾಶವಾಣಿಯಲ್ಲಿ ಬ್ಯಾರಿ ವಾರ್ತೆ ಹಾಗೂ ಕಾರ್ಯಕ್ರಮಗಳ ಪ್ರಸಾರವನ್ನು ಆರಂಭಿಸಬೇಕು’ ಎಂದರು.

ದಪ್ಪು ಬಡಿಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಯು.ಟಿ. ಖಾದರ್, ‘ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಾಪನೆಯ ಬೇಡಿಕೆಯನ್ನು ಇಟ್ಟಿದ್ದಾಗ, ‘ಆ ಭಾಷೆಯಲ್ಲಿ ಏನಿದೆ?’ ಎಂದು ಕೆಲವರು ಪ್ರಶ್ನಿಸಿದ್ದರು. ‘ಬ್ಯಾರಿ’ಯಲ್ಲಿ ಏನಿದೆ? ಎಂಬುದನ್ನು ಅಕಾಡೆಮಿಯು ಹಂತ ಹಂತವಾಗಿ ತೋರಿಸುತ್ತಿದೆ. ಸಾಹಿತ್ಯಿಕ ಕಾರ್ಯಗಳು ಶ್ಲಾಘನೀಯ’ ಎಂದರು.

‘ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ಹಿಂದೂಗಳು, ಕ್ರೈಸ್ತರು ಸೇರಿದಂತೆ ಹಲವಾರು ಬೆಂಬಲ ನೀಡಿದ್ದಾರೆ. ಎಲ್ಲರೂ ಪರಸ್ಪರ ಸಹಕಾರದಿಂದ ಮುಂದುವರಿಯಬೇಕು’ ಎಂದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ವಿ.ನಾವಡ ಮಾತನಾಡಿ, ‘ಬ್ಯಾರಿಗೆ ಸ್ವತಂತ್ರ ಭಾಷೆಯ ಮೊಹರು ಅಧಿಕೃತವಾಗಿ ಬೀಳಬೇಕು. 6ರಿಂದ 10ನೇ ತರಗತಿ ತನಕ ತೃತೀಯ ಭಾಷೆಯಾಗಿ ಪಠ್ಯಕ್ರಮದಲ್ಲಿ ಸೇರಬೇಕು. ಇತರ ಭಾಷೆಗಳ ಜೊತೆ ಆಮದು–ರಫ್ತು ಆಗಬೇಕು. ದಾಖಲಾತಿಯ ಕೆಲಸ ಮಾಡಬೇಕು. ಎರವಲು ಶಬ್ದಗಳ ಪದಕೋಶ ಬರಬೇಕು. ಸಾಹಿತಿ–ಕಲಾವಿದರ ಸಂಕ್ಷಿಪ್ತ ಪರಿಚಯದ ಕೃತಿ ಬರಬೇಕು. ಬ್ಯಾರಿ ಸಾಹಿತ್ಯ ಕೃತಿಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಬೇಕು’ ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್‌ ಕುಮಾರ್ ಕಲ್ಕೂರ ಮಾತನಾಡಿ, ‘ವಿದೇಶಿ ಭಾಷೆಗಳ ಬದಲಾಗಿ, ನಮ್ಮ ದೇಸೀಯ ಭಾಷೆಗಳನ್ನು ಗಟ್ಟಿಗೊಳಿಸುವ ಮೂಲಕ ಭಾರತವನ್ನು ಸದೃಢಗೊಳಿಸಬೇಕು’ ಎಂದರು.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಿ.ಎ.ಬಾವ ಮಾತನಾಡಿ, ‘ಬ್ಯಾರಿ ಭಾಷೆಯ ಅಪಾಯದ ಅಂಚಿನಲ್ಲಿದ್ದಾಗ ಅಕಾಡೆಮಿ ಸ್ಥಾಪನೆಗೊಂಡಿದ್ದು, ಈಗ ಪುನರುಜ್ಜೀವನಗೊಳ್ಳುತ್ತಿದೆ’ ಎಂದರು.

ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಎ.ಎಂ. ಖಾನ್ ಮಾತನಾಡಿ, ‘ವಿಶ್ವವಿದ್ಯಾಲಯದ ಬ್ಯಾರಿ ಪೀಠ ಹಾಗೂ ಅಕಾಡೆಮಿಯು ಜೊತೆಯಾಗಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಇನ್ನಷ್ಟು ಅಭಿವೃದ್ಧಿ ಸಾಧ್ಯ. ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಭಾಷೆಯನ್ನು ಬೆಳೆಸಬಹುದು’ ಎಂದರು.

ಗ್ರಂಥದ ಸಂಪಾದಕ ಅಬ್ದುಲ್ ರಝಾಕ್ ಅನಂತಾಡಿ ಮಾಹಿತಿ ನೀಡಿದರು. ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಬಿ.ಅಬ್ದುಲ್ ರಹ್ಮಾನ್, ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಸದಸ್ಯರಾದ ಬಶೀರ್‌ ಬೈಕಂಪಾಡಿ, ಅಬ್ದುಲ್ ರಹಿಮಾನ್ ಕುತ್ತೆತ್ತೂರು, ಬಶೀರ್ ಬೈಕಂಪಾಡಿ, ಹುಸೈನ್ ಕಾಟಿಪಳ್ಳ, ಮಾಜಿ ಮೇಯರ್ ಅಶ್ರಫ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT