ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಬಿಸಿಲ ಝಳದ ನಡುವೆ ಬಿಸುಪರ್ಬದ ಸಂಭ್ರಮ

ಫಲ–ಪುಷ್ಪದ ‘ಕಣಿ’ ಇಟ್ಟು ಸುಖ, ಸಮೃದ್ಧಿಗಾಗಿ ಪ್ರಾರ್ಥಿಸಿದ ತುಳುವರು; ಕೇರಳೀಯರಿಗೆ ‘ವಿಷು’ ಖುಷಿ
Published 15 ಏಪ್ರಿಲ್ 2024, 4:28 IST
Last Updated 15 ಏಪ್ರಿಲ್ 2024, 4:28 IST
ಅಕ್ಷರ ಗಾತ್ರ

ಮಂಗಳೂರು: ತುಳುನಾಡಿನ ‘ಬಿಸು ಪರ್ಬ’ವನ್ನು ಜಿಲ್ಲೆಯಲ್ಲಿ ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು. ತುಳುನಾಡಿನ ಜನರು ಚಾಂದ್ರಮಾನ ಯುಗಾದಿಯ ಬದಲು ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ಫಲ–ಪುಷ್ಪ, ಧನ–ಕನಕ ಒಳಗೊಂಡ ‘ಕಣಿ’ ಇಡುವುದು ಈ ಹಬ್ಬದ ವೈಶಿಷ್ಟ್ಯ.

ಬಿಸು, ತುಳು ಪಂಚಾಂಗದ ಪ್ರಕಾರ ಹೊಸವರ್ಷವೂ ಹೌದು. ಶನಿವಾರ ರಾತ್ರಿ ‘ಕಣಿ’ ಸಿದ್ಧಪಡಿಸಿ ಮಲಗಿ ಭಾನುವಾರ ಬೆಳಿಗ್ಗೆ ಎದ್ದು ಅದನ್ನು ನೋಡಿ ಇನ್ನೊಂದು ವರ್ಷ ಸುಖ ಮತ್ತು ಸಮೃದ್ಧಿಯ ಜೀವನ ನಮ್ಮದಾಗಲಿ ಎಂದು ಬೇಡಿಕೊಂಡರು. ಕಿರಿಯರಿಗೆ ಹಿರಿಯರು ಉಡುಗೊರೆ ಕೊಟ್ಟು ಆಶೀರ್ವಾದ ಮಾಡಿದರು.

ಕೆಲವು ಸಂಘಸಂಸ್ಥೆಗಳಲ್ಲೂ ಬಿಸು ಪರ್ಬವನ್ನು ಸಾಮೂಹಿಕವಾಗಿ ಆಚರಿಸಲಾಯಿತು. ಹಬ್ಬದ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮಗಳು ಕೂಡ ನಡೆದವು.

ಕೇರಳೀಯರ ಸಂಭ್ರಮ

ಕೇರಳೀಯರು ಕೃಷ್ಣನ ಆರಾಧನೆಯೊಂದಿಗೆ ವಿಷು ಆಚರಿಸಿದರು. ಮಂಗಳೂರಿನ ವಿವಿಧ ಭಾಗಗಳಲ್ಲಿ ವಾಸವಾಗಿರುವ, ಜಿಲ್ಲೆಯ ಹಲವು ಕಡೆ ಇರುವ ಮಲಯಾಳಿಗರು ಶನಿವಾರದಿಂದಲೇ ಸಂಭ್ರಮದಲ್ಲಿದ್ದರು. ರಸ್ತೆ ಬದಿಯಲ್ಲಿ ಬೆಳೆದಿರುವ ‘ಕೊನ್ನ ಪೂ’ ಕಿತ್ತುಕೊಳ್ಳುವ ದೃಶ್ಯ ಶನಿವಾರ ಸಾಮಾನ್ಯವಾಗಿತ್ತು. ಕನ್ನಡದಲ್ಲಿ ಕೊಂದೆ, ಕಕ್ಕೆ, ಸ್ವರ್ಣಪುಷ್ಪ ಎಂದೆಲ್ಲ ಕರೆಯುವ ಈ ಹೂ ವಿಷು ಕಣಿಗೆ ಅತ್ಯಗತ್ಯ. ಚಿನ್ನದ ಬಣ್ಣ ಸೂಸುವ ಹೂವಿನ ಗೊಂಚಲಿನೊಂದಿಗೆ ಚಿನ್ನ, ಹೊಸ ಬಟ್ಟೆ, ತರಕಾರಿ, ಹಣ್ಣು, ಹಣ ಇತ್ಯಾದಿಗಳನ್ನು ಒಳಗೊಂಡ ‘ಕಣಿ’ಯನ್ನು ಬೆಳಿಗ್ಗೆ ಎದ್ದ ನಂತರ ಮೊದಲು ನೋಡಬೇಕೆಂಬುದು ಹಿರಿಯರ ಆಶಯ.

ಮಕ್ಕಳನ್ನು ಎಬ್ಬಿಸಿ ಕಣ್ಣು ಮುಚ್ಚಿಕೊಂಡೇ ಕಣಿಯ ಬಳಿಗೆ ಕರೆದುಕೊಂಡು ಹೋಗಿ ಅಲ್ಲಿ ಕಣ್ಣು ಬಿಡುವಂತೆ ಹೇಳಿದರು. ಸಮೃದ್ಧವಾದ ವಸ್ತುಗಳನ್ನು ಕಂಡು ಮಕ್ಕಳು ಪುಳಕಗೊಂಡರು. ಮಧ್ಯಾಹ್ನ ಪಾಯಸ, ಹಪ್ಪಳ ಒಳಗೊಂಡ ವೈವಿಧ್ಯಮಯ ಸಸ್ಯಾಹಾರದ ಊಟದ ಸವಿಯೂ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT