ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕದ್ರಿಯ ಜಾಗ ಮಾರಾಟ ಮಾಡಲಿರುವ ಬಿಎಸ್‌ಎನ್ಎಲ್

Published 28 ಜೂನ್ 2024, 3:16 IST
Last Updated 28 ಜೂನ್ 2024, 3:16 IST
ಅಕ್ಷರ ಗಾತ್ರ

ಮಂಗಳೂರು: ಭಾರತ್‌ ಸಂಚಾರ್ ನಿಗಮ್‌ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) ಸಂಸ್ಥೆಯು ಕದ್ರಿಯಲ್ಲಿ ಹೊಂದಿರುವ ಜಾಗವನ್ನು ಇ–ಹರಾಜಿನ ಮೂಲಕ ಮಾರಾಟ ಮಾಡಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಸಂಸ್ಥೆಯ ಕರ್ನಾಟಕ ವೃತ್ತದ ಮುಖ್ಯ ಮಹಾ ವ್ಯವಸ್ಥಾಪಕ ಉಜ್ವಲ್‌ ಗುಲ್‌ಹಾನೆ, ‘ಕದ್ರಿಯಲ್ಲಿ 2 ಎಕರೆ (8094 ಚ.ಮೀ) ಜಾಗವನ್ನು ಮಾರಾಟ ಮಾಡಲಾಗುತ್ತದೆ. ಇದಕ್ಕೆ ₹ 39 ಕೋಟಿ ಮೂಲ ಬೆಲೆಯನ್ನು ನಿಗದಿಪಡಿಸಿದ್ದೇವೆ. ಆನ್‌ಲೈನ್ ( https://www.mstcecommerce.com/auctionhome/propertysale/index.jsp) ಬಿಡ್‌ ಸಲ್ಲಿಕೆಗೆ ಜುಲೈ 1 ರಂದು ಮಧ್ಯಾಹ್ನ 3 ಗಂಟೆವರೆಗೆ ಅವಕಾಶವಿದೆ. ಜಾಗದ ವಿವರಗಳು ಬಿಎಸ್‌ಎನ್‌ಎಲ್‌ ವೆಬ್‌ಸೈಟ್‌ನಲ್ಲಿವೆ (https://assetmonitization.bsnl.co.in)’ ಎಂದರು.

‘ಪ್ರಸ್ತುತ ಬಿಎಸ್‌ಎನ್‌ಎಲ್‌ನ ವರಮಾನವು  ಕಾರ್ಯಚರಣೆ ವೆಚ್ಚವನ್ನು ಸರಿದೂಗಿಸಲಷ್ಟೇ ಸಾಕಾಗುತ್ತಿದೆ. ಹೊಸ ಸಂತ್ರಜ್ಞಾನ ಅಳವಡಿಕೆಗೆ ಬಂಡವಾಳ ಹೂಡಲು ಸಂಪನ್ಮೂಲದ ಅಗತ್ಯವಿದೆ. ಬಳಕೆಯಾಗದೇ ವ್ಯರ್ಥವಾಗುತ್ತಿರುವ ಆಸ್ತಿಗಳನ್ನು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮಾರಾಟ ಮಾಡುವ ಮೂಲಕ ಇದಕ್ಕೆ ಹಣ ಹೊಂದಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಸಂಸ್ಥೆಯು ಬಜಾಲ್‌, ಕುಂಜತ್ತಬೈಲ್, ಬೋಳಾರ, ಉಡುಪಿ ಜಿಲ್ಲೆಯ ಗಂಗೊಳ್ಳಿ ಹಾಗೂ ಬೆಳ್ವೆಯಲ್ಲಿ ಹೊಂದಿರುವ ಜಾಗಗಳನ್ನೂ ಭವಿಷ್ಯದಲ್ಲಿ ಮಾರಾಟ ಮಾಡುವ ಚಿಂತನೆ ಇದೆ. ಈ ಜಾಗಗಳನ್ನೆಲ್ಲ ಸಂಸ್ಥೆಯು ಮಾರುಕಟ್ಟೆ ಮೌಲ್ಯವನ್ನು ಪಾವತಿಸಿ ಖರೀದಿಸಿತ್ತು. ಇವು ಯಾವುವೂ ಸರ್ಕಾರದಿಂದ ಮಂಜೂರಾದ ಜಾಗಗಳಲ್ಲ. ಭವಿಷ್ಯದಲ್ಲಿ ಸಂಸ್ಥೆಯ ವಹಿವಾಟು ವೃದ್ಧಿಯಾದರೂ ಈ ಜಾಗಗಳ ಅಗತ್ಯ ಬೀಳುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂಸ್ಥೆಯ ಪ್ರಧಾನ ಮಹಾ ವ್ಯವಸ್ಥಾಪಕ (ಪಿಜಿಎಂ) ನವೀನ ಗುಪ್ತ, ‘ಬಿಎಸ್‌ಎನ್ಎಲ್‌ ನೆಟ್‌ವರ್ಕ್‌ ಸಮಸ್ಯೆ ನೀಗಿಸಲು ಕ್ರಮವಹಿಸಿದ್ದೇವೆ. ಉಭಯ ಜಿಲ್ಲೆಗಳಲ್ಲಿ ಒಟ್ಟು 150 ಕಡೆ ಹೊಸ ಬ್ಯಾಟರಿಗಳನ್ನು ಅಳವಡಿಸಿದ್ದೇವೆ. ಇನ್ನೂ 300 ಕಡೆ ಹಂತ ಹಂತವಾಗಿ ಹೊಸ ಬ್ಯಾಟರಿ ಅಳವಡಿಸಲಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕದ್ರಿಯ ಜಾಗ ಮಾರಾಟಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ನೋಟಿಸ್‌ ನೀಡಿದ್ದು ನಿಜ. ಆದರೆ, ಇದು ಖರೀದಿಸಿದ ಜಾಗ ಎಂಬುದನ್ನು ಮನವರಿಕೆ ಮಾಡಿದ್ದೇವೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮುಖ್ಯ ಪ್ರಧಾನ ವ್ಯವಸ್ಥಾಪಕ ಪರಮೇಶ್ವರ ದಯಾಳ್‌, ಉಪಪ್ರಧಾನ ವ್ಯವಸ್ಥಾಪಕ ಮುರುಗೇಶನ್‌ ಭಾಗವಹಿಸಿದ್ದರು.

2025ರ ಮೇ ಒಳಗೆ ಸಂಪೂರ್ಣ

4ಜಿ ಸೇವೆ ‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 2ಜಿ 3ಜಿ ಸೇವೆಗಳನ್ನು 4ಜಿಗೆ ಪರಿವರ್ತಿಸಲಾಗುತ್ತಿದ್ದು 2025ರ ಮೇ ಒಳಗೆ ಪೂರ್ಣಗೊಳ್ಳಲಿದೆ. ಈ ಸಲುವಾಗಿ 610 ಕಡೆ 4ಜಿ ಟವರ್‌ಗಳನ್ನು ಅಳವಡಿಸಲಾಗುತ್ತಿದ್ದು 20 ಟವರ್‌ಗಳ ಪ್ರಾಯೋಗಿಕ ಪರೀಕ್ಷೆಯೂ ಪೂರ್ಣವಾಗಿದೆ’ ಎಂದು ನವೀನ ಗುಪ್ತ ತಿಳಿಸಿದರು. ‘ಟಿಸಿಎಸ್‌ ಸಂಸ್ಥೆಯು ಬಿಎಸ್‌ಎನ್‌ಎಲ್‌ಗಾಗಿ 4ಜಿ ಸಾಧನವನ್ನು ಅಭಿವೃದ್ಧಿಪಡಿಸಿದೆ. ಇದನ್ನು ಕ್ರಮೇಣ 5 ಜಿ ಸೇವೆಗೂ ಬಳಸಿಕೊಳ್ಳಬಹುದು’ ಎಂದರು. ಸಂಸ್ಥೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ (ಎಜಿಎಂ) ಶಂಕರ ಎಸ್‌ ದೇವಾಡಿಗ  ‘ಯಾವುದೇ ನೆಟ್‌ವರ್ಕ್ ಲಭ್ಯವಿಲ್ಲದ 76 ಸ್ಥಳಗಳಲ್ಲಿ ನಾವು 4ಜಿ ಸೇವೆ ಒದಗಿಸುತ್ತಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ 43 ಸ್ಥಳಗಳನ್ನು ಗುರುತಿಸಿದ್ದು 40 ಕಡೆ ಹಾಗೂ ಉಡುಪಿ ಜಿಲ್ಲೆಯ 33 ಸ್ಥಳಗಳಲ್ಲಿ 30 ಕಡೆ ಹೊಸ 4ಜಿ ಟವರ್‌ ಅಳವಡಿಸಿದ್ದೇವೆ. ಪಶ್ಚಿಮ ಘಟ್ಟದಲ್ಲಿರುವ ಎಳನೀರುವಿನಂತಹ ಒಳಪ್ರದೇಶದಲ್ಲೂ ಇನ್ನು 4ಜಿ ಸೇವೆ ಲಭಿಸಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT