ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ ಘೋಷಣೆ ಶೇ 40ರಷ್ಟೂ ಈಡೇರಿಲ್ಲ: ಪ್ರತಾಪಸಿಂಹ ನಾಯಕ್‌ ಆರೋಪ

Published 29 ಮಾರ್ಚ್ 2024, 5:47 IST
Last Updated 29 ಮಾರ್ಚ್ 2024, 5:47 IST
ಅಕ್ಷರ ಗಾತ್ರ

ಮಂಗಳೂರು: ‘ರಾಜ್ಯ ಸರ್ಕಾರ 2023–24ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ ಯೋಜನೆಗಳು ಶೇ 40ರಷ್ಟೂ ಪೂರ್ಣಗೊಂಡಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್‌ ಆರೋಪಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಕೃಷಿಕರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತೇವೆ ಎಂದಿದ್ದ ಸರ್ಕಾರ ಸಾಲದ ಪ್ರಮಾಣವನ್ನು ₹ 3 ಲಕ್ಷದಿಂದ ರಿಂದ ₹ 5 ಲಕ್ಷಕ್ಕೆ ಹೆಚ್ಚಿಸುವ ಭರವಸೆಯನ್ನೂ ನೀಡಿತ್ತು. ಈ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಹಾಲು ಉತ್ಪಾದಕರಿಗೆ ನೀಡಬೇಕಿದ್ದ ₹ 1,200 ಕೋಟಿ  ಪ್ರೋತ್ಸಾಹಧನವನ್ನು ಬಾಕಿ ಉಳಿಸಿಕೊಳ್ಳಲಾಗಿದೆ’ ಎಂದರು.

‘ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ರಾಜ್ಯ ದಿವಾಳಿಯಾಗಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ರಾಜ್ಯ ಸರ್ಕಾರವೇ ನಿಜ ಮಾಡುತ್ತಿದೆ. ರಾಜ್ಯದ ಆರ್ಥಿಕ ನಿರ್ವಹಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ವೈಫಲ್ಯ ಮರೆಮಾಚಲು ಕೇಂದ್ರ ಸರ್ಕಾರವನ್ನು ದೂರುವ ನಾಟಕ ಆಡುತ್ತಿದ್ದಾರೆ.ಬರದಿಂದ ತತ್ತರಿಸಿರುವ ಜನತೆಗೆ ಪರಿಹಾರ ನೀಡಲು ಆಗುತ್ತಿಲ್ಲ’ ಎಂದು ಟೀಕಿಸಿದರು.   

‘ಕೇಂದ್ರ ಸರ್ಕಾರ ಪಡಿತರ ಅಕ್ಕಿ ಕೊಡುತ್ತಿಲ್ಲ ಎಂದು ಆರಂಭದಲ್ಲಿ ದೂರಿದರು. ನಂತರ ‘ನಮ್ಮ ತೆರಿಗೆ ನಮ್ಮ ಹಕ್ಕು’ ಎಂದು ನವದೆಹಲಿಯಲ್ಲಿ ಪ್ರತಿಭಟನೆಯ ನಾಟಕವಾಡಿದರು. ಇದೀಗ ರಾಜ್ಯದಲ್ಲಿ ಬರವಿದ್ದರೂ ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್‌) ಪರಿಹಾರ ಹಣ ಬಿಡುಗಡೆ ಮಾಡಿಲ್ಲ ಎಂದು ದೂರಿ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ. ಈ ಕೆಲಸವನ್ನು ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಮಾಡಬಹುದಿತ್ತಲ್ಲವೇ. ಅಲ್ಲಿವರೆಗೆ ಅವರು ನಿದ್ರೆ ಮಾಡುತ್ತಿದ್ದರೇ’ ಎಂದು ಪ್ರಶ್ನಿಸಿದರು.

‘ಇದೇ ಮೊದಲ ಸಲ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಬೆಳವಣಿಗೆ ದರವು ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆ ದರಕ್ಕಿಂತ  ಕಡಿಮೆ ಆಗಿದೆ. 2021-22ರಲ್ಲಿ ಜಿಡಿಪಿ ಬೆಳವಣಿಗೆ ದರ ಶೇ 9.1 ಇದ್ದಾಗ ಜಿಎಸ್‌ಡಿಪಿ ದರ ಶೇ 9.8ರಷ್ಟಿತ್ತು. 2022-23ರಲ್ಲಿ  ಜಿಡಿಪಿ ಬೆಳವಣಿಗೆ ದರ ಶೇ 7.2 ಇದ್ದಾಗ ಜಿಎಸ್‌ಡಿಪಿ ದರ ಶೇ 8.1 ಇತ್ತು. ಆದರೆ  2023-24ರಲ್ಲಿ ಜಿಡಿಪಿ ಬೆಳವಣಿಗೆ ದರ ಶೇ 7.3 ಇದ್ದು, ಜಿಎಸ್‌ಡಿಪಿ ದರ ಶೇ 6.6ಕ್ಕೆ ಕುಸಿದಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡ ಕ್ಯಾ. ಗಣೇಶ್ ಕಾರ್ಣಿಕ್, ಚುನಾವಣೆ ನಿರ್ವಹಣಾ ಸಮಿತಿಯ ದೇವದಾಸ್ ಶೆಟ್ಟಿ ಹಾಗೂ  ಜಿಲ್ಲಾ ಘಟಕದ ಮಾಧ್ಯಮ ಸಂಚಾಲಕ ವಸಂತ ಜೆ. ಪೂಜಾರಿ ಭಾಗವಹಿಸಿ‌ದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT