ಮಂಗಳೂರು: ಜೂನ್ ತಿಂಗಳಲ್ಲಿ ಎಡೆಬಿಡದೆ ಸುರಿದ ಮಳೆಯ ವೇಳೆ ಪಾಂಡೇಶ್ವರದ ರೊಸಾರಿಯೊ ಸಮೀಪ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಆಟೊರಿಕ್ಷಾ ಚಾಲಕರಿಬ್ಬರು ಮೃತಪಟ್ಟಿದ್ದರು. ಈ ಘಟನೆ ಸಂಭವಿಸಿದ ಕೆಲವೇ ದಿನಗಳಲ್ಲಿ ನಡೆದ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನೆಲಕ್ಕುರುಳಿದ ವಿದ್ಯುತ್ ತಂತಿ ಹಾಗೂ ವಿದ್ಯುತ್ ಕಂಬಕ್ಕೆ ಸುತ್ತಿಕೊಂಡಿರುವ ಕೇಬಲ್‌ಗಳ ಸಮಸ್ಯೆ ಕಲಾಪದ ಸಮಯವನ್ನು ತಿಂದು ಹಾಕಿತ್ತು.
ಆಡಳಿತ ಮತ್ತು ಪ್ರತಿಪಕ್ಷಗಳ ವಾದ–ವಿವಾದ, ಸದಸ್ಯರ ವಿಷಯ ಮಂಡನೆಯ ನಂತರ ಮೆಸ್ಕಾಂ ಮತ್ತು ಮಹಾನಗರ ಪಾಲಿಕೆಯಿಂದ ಜಂಟಿ ಸರ್ವೆ ನಡೆಸಿ, ಕೇಬಲ್ ತೆರವಿಗೆ ಕ್ರಮ ವಹಿಸುವುದಾಗಿ ಆಗಿನ ಮೇಯರ್ ಸುಧೀರ್ ಶೆಟ್ಟಿ ಭರವಸೆ ನೀಡುವ ಮೂಲಕ ಚರ್ಚೆಗೆ ಇತಿಶ್ರೀ ಹಾಡಿದ್ದರು. ಪಾಲಿಕೆ ಸಭೆ ನಡೆದಿದ್ದು ಜೂನ್ 29ಕ್ಕೆ. ಇದಾಗಿ, ಮೂರು ತಿಂಗಳು ಸಮೀಪಿಸಿದೆ, ವಿದ್ಯುತ್ ಕಂಬಕ್ಕೆ ಸುತ್ತಿಕೊಂಡಿರುವ ಖಾಸಗಿ ಸಂಸ್ಥೆಗಳ ಕೇಬಲ್‌ಗಳು ಯಥಾಸ್ಥಿತಿಯಲ್ಲಿವೆ. ನಿರ್ವಹಣೆ ಕೊರತೆಯಿಂದ ಕೇಬಲ್‌ಗಳು ಅಲ್ಲಲ್ಲಿ ಇಳಿಬಿದ್ದುಕೊಂಡಿರುವ ದೃಶ್ಯಗಳು ಗಲ್ಲಿ ಗಲ್ಲಿಯಲ್ಲಿ ಕಾಣ ಸಿಗುತ್ತವೆ.
ನಗರದ ಬೆಂದೂರ್‌ವೆಲ್, ಕಂಕನಾಡಿ, ಬಂಟ್ಸ್ ಹಾಸ್ಟೆಲ್ ರಸ್ತೆ, ಲೋಬೊ ಲೇನ್, ಮಲ್ಲಿಕಟ್ಟೆ, ಫಳ್ನೀರ್, ಕೊಟ್ಟಾರಚೌಕಿ, ಬಿಜೈ ಕಾಪಿಕಾಡ್, ಕೊಡಿಯಾಲ್‌ಬೈಲ್, ಲಾಲ್‌ಬಾಗ್, ಮಣ್ಣಗುಡ್ಡ, ರಥಬೀದಿ, ಪಾಂಡೇಶ್ವರ, ಬಂದರು ರೋಡ್ ಹೀಗೆ ಯಾವ ಬೀದಿಯಲ್ಲಿ ನೋಡಿದರೂ, ವಿದ್ಯುತ್ ಕಂಬಗಳಿಗೆ ಜೋತಾಡುವ ಕೇಬಲ್‌ಗಳ ಸುರುಳಿಗಳು ಕಾಣ ಸಿಗುತ್ತವೆ. ಕೆಲವು ಕಡೆಗಳಲ್ಲಿ ಕೇಬಲ್‌ಗೆ ಹೊಂದಿಕೊಂಡಿರುವ ಬೂಸ್ಟರ್‌ಗಳು ನೆಲದ ಮಟ್ಟದಲ್ಲಿವೆ. ಇನ್ನು ಕೆಲವು ಕಡೆಗಳಲ್ಲಿ ಒಂದು ಕಂಬದಿಂದ ಇನ್ನೊಂದು ಕಂಬದ ನಡುವೆ ಎಳೆದಿರುವ ಕೇಬಲ್‌ಗಳು ಕೈಗೆಟುಕುವ ಎತ್ತರದಲ್ಲಿ ಇಳಿ ಬಿದ್ದಿವೆ. ದಾರಿಯಲ್ಲಿ ನಡೆದುಕೊಂಡು ಹೋಗುವ ಚಿಕ್ಕ ಮಕ್ಕಳು ಸಹ ಅದನ್ನು ಸುಲಭವಾಗಿ ಎಳೆಯುವಂತಿವೆ.
ನಿಯಮ ಏನು?: ವಿದ್ಯುತ್ ಕಂಬಗಳಿಗೆ ಕೇಬಲ್ ಅಳವಡಿಸುವ ಪೂರ್ವದಲ್ಲಿ ಕೇಬಲ್ ಕಂಪನಿಗಳು ಮೆಸ್ಕಾಂನಿಂದ ಅನುಮತಿ ಪಡೆಯಬೇಕು. ವಾರ್ಷಿಕವಾಗಿ ಪ್ರತಿ ವಿದ್ಯುತ್ ಕಂಬಕ್ಕೆ ₹100 ಶುಲ್ಕ ಪಾವತಿಸಬೇಕು ಎಂಬ ನಿಯಮ ಇತ್ತು. ಪ್ರಸ್ತುತ ಮಹಾನಗರ ಪಾಲಿಕೆಯಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದ ನಂತರ ಮಾತ್ರ ಮೆಸ್ಕಾಂ ಅನುಮತಿ ನೀಡಬೇಕು ಎಂದು ಪಾಲಿಕೆ ನಿಯಮ ಜಾರಿಗೊಳಿಸಿದೆ. ಈ ಹಿಂದೆ ಇರುವ ಕೇಬಲ್ ನೆಟ್‌ವರ್ಕ್ ಹೊರತುಪಡಿಸಿ, ಹೊಸದಾಗಿ ಯಾವುದೇ ಕಂಪನಿಗೆ ಅನುಮತಿ ನೀಡಲಾಗಿಲ್ಲ ಎನ್ನುತ್ತಾರೆ ಮೆಸ್ಕಾಂ ಅಧಿಕಾರಿಗಳು.
ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ಇಂಟರ್‌ನೆಟ್, ಟಿವಿ ಚಾನೆಲ್, ಒಎಫ್‌ಸಿ ಇನ್ನಿತರ ಖಾಸಗಿ ಕೇಬಲ್‌ಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ದೂರು ಬಂದ ಕಾರಣ ಇತ್ತೀಚೆಗೆ ಕೇಬಲ್ ಆಪರೇಟರ್‌ಗಳ ಸಭೆ ನಡೆಸಿ ಸೂಚನೆ ನೀಡಲಾಗಿದೆ. ತೀರಾ ಕೆಳಗೆ ಇರುವ ಕೇಬಲ್‌ಗಳಿಂದ ಪಾದಚಾರಿಗಳು, ವಾಹನ ಸವಾರರಿಗೆ ತೊಂದರೆ ಆಗುತ್ತಿರುವ ಬಗ್ಗೆ ದೂರು ಬಂದಿದ್ದರಿಂದ ಅದನ್ನು ತುರ್ತಾಗಿ ಸರಿಪಡಿಸುವಂತೆ ಸಹ ಸೂಚಿಸಲಾಗಿದೆ. ಈ ಕೇಬಲ್‌ಗಳಿಂದ ಯಾವುದೇ ಅನಾಹುತ ಸಂಭವಿಸಿದಲ್ಲಿ, ಆಪರೇಟರ್‌ಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ನಗರದಲ್ಲಿ ಅನುಮತಿ ಪಡೆದಿರುವ ಬೇರೆ ಬೇರೆ ಕಂಪನಿಗಳ 15ರಷ್ಟು ಕೇಬಲ್ ಸಂಪರ್ಕಗಳು ಇವೆ. ಅನಧಿಕೃತ ಕೇಬಲ್ ಕಂಡು ಬಂದಲ್ಲಿ ಅದನ್ನು ತೆರವುಗೊಳಿಸಲಾಗುತ್ತದೆ. ಆದರೆ, ಅಧಿಕೃತ ಮತ್ತು ಅನಧಿಕೃತ ಕೇಬಲ್‌ಗಳನ್ನು ಗುರುತಿಸುವುದೇ ದೊಡ್ಡ ಸವಾಲು. ನಿರ್ದಿಷ್ಟ ಕಂಪನಿಯ ಕೇಬಲ್‌ಗಳಿಗೆ ಪ್ರತ್ಯೇಕ ಬಣ್ಣದ ಗುರುತು ಇರುವುದಿಲ್ಲ. ಎಲ್ಲವೂ ಒಂದೇ ರೀತಿ ಇರುತ್ತವೆ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಮಹಾನಗರ ಪಾಲಿಕೆಯ ಸಾಮಾನ್ಯಸಭೆಯಲ್ಲಿ ಚರ್ಚೆಯಾದ ನಂತರ ಈ ವಿಚಾರವನ್ನು ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಗೆ ಕಳುಹಿಸಲಾಗಿತ್ತು. ಅಲ್ಲಿ ನಿರ್ಣಯವಾದ ಮೇಲೆ ಅದು ಕಾರ್ಯಸೂಚಿಯಾಗಿ ಸಾಮಾನ್ಯಸಭೆಯ ಮುಂದೆ ಬರಬೇಕಿತ್ತು. ಅಷ್ಟರಲ್ಲಿ ಅವಧಿ ಮುಗಿದಿದೆ. ಮುಂದಿನ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಬಹುದು ಎಂದು ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಪ್ರತಿಕ್ರಿಯಿಸಿದರು.
‘ದೈನಂದಿನ ನೆಲೆಯಲ್ಲಿ ನಿರ್ವಹಣೆ’
‘ವಿದ್ಯುತ್ ಕಂಬಗಳಿಗೆ ಕೇಬಲ್ ಅಳವಡಿಸುವ ಪೂರ್ವದಲ್ಲಿ ಅನುಮತಿ ಪಡೆದಿದ್ದೇವೆ ಮತ್ತು ನಿಯಮಿತವಾಗಿ ಶುಲ್ಕ ಪಾವತಿಸುತ್ತೇವೆ. ಅನಧಿಕೃತ ಕೇಬಲ್‌ಗಳು ನಿರ್ವಹಣೆ ಇಲ್ಲದ ಕೇಬಲ್ ಸಂಪರ್ಕಗಳಿಂದಾಗಿ ಎಲ್ಲ ಕೇಬಲ್ ಆಪರೇಟರ್‌ಗಳ ಮೇಲೆ ಸಾರ್ವಜನಿಕರು ಮುನಿಸಿಕೊಳ್ಳುವಂತಾಗಿದೆ. ಕೇಬಲ್‌ಗಳು ಒಂದೇ ರೀತಿ ಆಗಿರುವುದರಿಂದ ಪ್ರತ್ಯೇಕವಾಗಿ ಗುರುತಿಸಲು ಆಗುವುದಿಲ್ಲ. ನಾವು ದೈನಂದಿನ ನೆಲೆಯಲ್ಲಿ ಕೇಬಲ್‌ಗಳ ನಿರ್ವಹಣೆ ಮಾಡುತ್ತೇವೆ. ಪಾದಚಾರಿಗಳಿಗೆ ಸಮಸ್ಯೆಯಾಗುವ ರೀತಿ ಇದ್ದರೆ ನಮ್ಮ ಕೇಬಲ್‌ಗಳನ್ನು ಸರಿಪಡಿಸುವ ಜೊತೆಗೆ ಉಳಿದವನ್ನು ಸಮರ್ಪಕವಾಗಿ ಅಳವಡಿಸಿರುವ ಉದಾಹರಣೆಗಳಿವೆ’ ಎನ್ನುತ್ತಾರೆ ವಿ4 ಮೀಡಿಯಾ ಪಾಲುದಾರರಾಗಿರುವ ಶ್ರೀನಿವಾಸ ಕಿಣಿ.
‘ಯುಟಿಲಿಟಿ ಡಕ್ಟ್’ ಸುರಕ್ಷಿತ ವ್ಯವಸ್ಥೆ
ವಿದ್ಯುತ್ ಕಂಬಗಳಿಗೆ ಕೇಬಲ್ ಅಳವಡಿಸಲು ನಿರ್ದಿಷ್ಟ ನಿಯಮಗಳಿವೆ. ಟ್ರೇ ಅಳವಡಿಸಿ ಕೇಬಲ್ ಎಳೆಯಬೇಕು ಆದರೆ ಬಹುತೇಕ ಕಡೆಗಳಲ್ಲಿ ಇದು ಪಾಲನೆಯಾಗುತ್ತಿಲ್ಲ. ಕೇಬಲ್ ಮೇಲಿನ ಕೋಟಿಂಗ್ ಕಿತ್ತು ಹೋದರೆ ಮಳೆಗಾಲದಲ್ಲಿ ಬೆಂಕಿಯ ಕಿಡಿ ಏಳುತ್ತದೆ. ವಿದ್ಯುತ್ ತಂತಿ ಸಮೀಪ ಬೇರೆ ಕೇಬಲ್‌ಗಳು ಹಾದು ಹೋಗುವ ಹಾಗಿಲ್ಲ. ಅದರಲ್ಲೂ ಫೈಬರ್ ಆಪ್ಟಿಕಲ್ ಕೇಬಲ್‌ಗಳನ್ನು ಹಾಕುವಂತಿಲ್ಲ. ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಎಂಜಿನಿಯರ್ ಫೆಲಿಕ್ಸ್ ಜೋಸೆಫ್ ಪಿಂಟೊ. ಅಲ್ಲದೇ ಸಂಪರ್ಕ ಕಡಿತಗೊಂಡಿರುವ ಕೇಬಲ್‌ಗಳನ್ನು ಕಂಬದಿಂದ ತೆರವುಗೊಳಿಸದೆ ಹಾಗೆಯೇ ಬಿಡಲಾಗುತ್ತದೆ. ಇದು ದೊಡ್ಡ ಲೋಪ. ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಸ್ಮಾರ್ಟ್ ಸಿಟಿ ಕಾಮಗಾರಿ ಅಡಿಯಲ್ಲಿ ಪಾದಚಾರಿ ಮಾರ್ಗದ ಪಕ್ಕದಲ್ಲಿ ‘ಯುಟಿಲಿಟಿ ಡಕ್ಟ್’ ನಿರ್ಮಿಸಲಾಗುತ್ತಿದೆ. ಇನ್ನು ಮುಂದೆ ಎಲ್ಲ ಕೇಬಲ್‌ಗಳು ಇದರ ಮೂಲಕವೇ ಹಾದು ವಿತರಣಾ ಬೋರ್ಡ್‌ಗಳ ಮೂಲಕ ಸಂಪರ್ಕ ಕಲ್ಪಿಸುವಂತಾಗಬೇಕು. ಇದು ಸುರಕ್ಷಿತ ವಿಧಾನ ಎಂಬುದು ಅವರ ಸಲಹೆ.
‘ಮೆಸ್ಕಾಂ ದಂಡ ವಿಧಿಸಲಿ’
ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ಕೇಬಲ್‌ಗಳಿಂದ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿರುವ ಬಗ್ಗೆ ಅನೇಕ ಬಾರಿ ಜನಸಂಪರ್ಕ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಯಾವುದೇ ಪ್ರಯೋಜನ ಆಗಿಲ್ಲ. ನಿರ್ವಹಣೆ ಮಾಡದ ಕೇಬಲ್ ಕಂಪನಿಗೆ ಮೆಸ್ಕಾಂ ದಂಡ ವಿಧಿಸಿದರೆ ಸಮಸ್ಯೆ ಇಳಿಮುಖವಾಗಬಹುದು. ಕೇಬಲ್‌ಗಳನ್ನು ನಿರ್ದಿಷ್ಟ ಎತ್ತರಕ್ಕೆ ಕಟ್ಟುವುದನ್ನು ಕಡ್ಡಾಯಗೊಳಿಸಬೇಕು. ಪಿವಿಎಸ್ ವೃತ್ತ ಸೇರಿದಂತೆ ಬಹಳಷ್ಟು ಕಡೆಗಳಲ್ಲಿ ಕೇಬಲ್‌ಗಳು ನೆಲಕ್ಕೆ ಬಿದ್ದಿರುತ್ತವೆ. ಇದರಿಂದ ಜೀವಕ್ಕೆ ಅಪಾಯವಾಗುವ ಮೊದಲು ಸಂಬಂಧಪಟ್ಟವರು ಎಚ್ಚೆತ್ತುಕೊಂಡರೆ ಒಳಿತು ಎನ್ನುತ್ತಾರೆ ಕೊಟ್ಟಾರಚೌಕಿಯ ನಿವಾಸಿ ಭಗೀರಥ ಇಡ್ಯಾ.
‘ಸಮಿತಿ ರಚನೆ ಬಗ್ಗೆ ಚರ್ಚೆ’
ಮಹಾನಗರ ಪಾಲಿಕೆ ಸಾಮಾನ್ಯಸಭೆಯಲ್ಲಿ ಅನಧಿಕೃತ ಕೇಬಲ್ ನೆಟ್‌ವರ್ಕ್‌ಗಳ ವಿರುದ್ಧ ಕ್ರಮವಹಿಸುವ ಬಗ್ಗೆ ಚರ್ಚೆ ನಡೆದ ನಂತರ ನಮ್ಮ ಸಮಿತಿಗೆ ಈ ವಿಷಯ ಬಂದಿತ್ತು. ಈ ಸಂಬಂಧ ಮೆಸ್ಕಾಂ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಪಾಲಿಕೆಯ ಕಂದಾಯ ಎಂಜಿನಿಯರಿಂಗ್ ವಿಭಾಗ ಹಾಗೂ ಮೆಸ್ಕಾಂ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ಸಮಿತಿ ರಚಿಸಿ ಅಧ್ಯಯನ ನಡೆಸಿದ ನಂತರ ಕಾರ್ಯಾಚರಣೆ ನಡೆಸಲು ಯೋಚಿಸಲಾಗಿತ್ತು. ಅನಧಿಕೃತ ಸಂಪರ್ಕಗಳಿಗೆ ಅನುಮತಿ ಪಡೆಯುವಂತೆ ಪತ್ರಿಕಾ ಪ್ರಕಟಣೆ ನೀಡಲಾಗಿತ್ತು. ಆದರೆ ಯಾವುದೇ ನಿರ್ಣಯ ಆಗಿರಲಿಲ್ಲ. ಮುಂದೆ ರಚನೆಯಾಗುವ ಸಮಿತಿ ಈ ಬಗ್ಗೆ ನಿರ್ಧರಿಸಬಹುದು ಎಂದು ಪಾಲಿಕೆಯ ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ವರುಣ್ ಚೌಟ ಪ್ರತಿಕ್ರಿಯಿಸಿದರು. ಕೇಬಲ್ ಸಂಪರ್ಕಗಳು ಸೇವಾ ಕ್ಷೇತ್ರದ ಅಡಿಯಲ್ಲಿ ಬರುತ್ತವೆ. ಆಸ್ಪತ್ರೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಇಂಟರ್ನೆಟ್ ಬಳಕೆಯಾಗುತ್ತಿರುತ್ತದೆ. ಒಮ್ಮೆಲೇ ಕಡಿತ ಮಾಡಿದರೆ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ಮಾದರಿಯಲ್ಲಿ ಇವುಗಳನ್ನು ತೆರವುಗೊಳಿಸಲು ಸಾಧ್ಯವಾಗದು ಎಂದು ಅವರು ತಿಳಿಸಿದರು.
ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ಅನಧಿಕೃತ ಕೇಬಲ್‌ಗಳ ತೆರವು ಸಂಬಂಧ ಈಗಾಗಲೇ ಸಭೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಪಾಲಿಕೆ ಜೊತೆ ಸೇರಿ ಕಾರ್ಯಾಚರಣೆ ನಡೆಸಲಾಗುವುದು.–ಪದ್ಮಾವತಿ ಡಿ ಮೆಸ್ಕಾಂ ಎಂಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.