ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಕ್ಕೆ ಸುಬ್ರಹ್ಮಣ್ಯನ ಚಂಪಾಷಷ್ಠಿ ಮಹಾರಥೋತ್ಸವ 

Published : 19 ಡಿಸೆಂಬರ್ 2023, 4:47 IST
Last Updated : 19 ಡಿಸೆಂಬರ್ 2023, 4:47 IST
ಫಾಲೋ ಮಾಡಿ
Comments

ಸುಬ್ರಹ್ಮಣ್ಯ: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಧಾನ ದಿನವಾದ ಕಾರ್ತಿಕ ಶುದ್ಧ ಷಷ್ಠಿಯ ದಿನವಾದ ಸೋಮವಾರ ಮುಂಜಾನೆ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದ ಚಂಪಾಷಷ್ಠಿ ಮಹಾರಥೋತ್ಸವ ನಡೆಯಿತು.

ಬೆಳಿಗ್ಗೆ 7.33ರ ಧನುರ್‌ಲಗ್ನ ಸುಮುಹೂರ್ತದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರನ್ನು ಬ್ರಹ್ಮರಥಾರೋಹಣ ಮಾಡಲಾಯಿತು. ದೇವಳದ ಪ್ರಧಾನ ಅರ್ಚಕ ಸೀತಾರಾಮ ಯಡಪಡಿತ್ತಾಯ ಅವರು ಉತ್ಸವದ ವೈಧಿಕ ವಿಧಿವಿಧಾನ ನೆರವೇರಿಸಿದರು. ಜಯಘೋಷದ ನಡುವೆ ಭಕ್ತರು ದೇವರ ಮಹಾರಥವನ್ನು ಎಳೆದರು.

ವರ್ಷದಲ್ಲಿ ಒಂದು ಬಾರಿ ಮಾತ್ರ ಸೇವೆ ನೆರವೇರಿಸಲು ಅವಕಾಶವಿರುವ ಬ್ರಹ್ಮರಥೋತ್ಸವ ಸೇವೆಯನ್ನು 148 ಮಂದಿ ನಡೆಸಿದರು. ಬ್ರಹ್ಮರಥೋತ್ಸವ ಸೇವೆ ಸಲ್ಲಿಸಿದ ಭಕ್ತರಿಗೆ ರಥ ಎಳೆಯಲು ಅನುಕೂಲವಾಗುವಂತೆ ವಿಶೇಷ ಪಾಸ್ ನೀಡಲಾಗಿತ್ತು.

ದೇವಳದ ಹೊರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರಿತು. ರಾಜಬೀದಿಯಲ್ಲಿ ನಾಗಸ್ವರ, ಪಂಚವಾದ್ಯ, ಬ್ಯಾಂಡ್, ಜಾಗಟೆ, ಶಂಖ, ವಾದ್ಯ ಮತ್ತು ಚೆಂಡೆ ವಾದನಗಳ ಹಿಮ್ಮೇಳದಲ್ಲಿ ಸಾಲಂಕೃತ ಆನೆ, ಬಿರುದಾವಳಿ, ಭಕ್ತಜನರ ಜಯಘೋಷದ ನಡುವೆ ಪಂಚಮಿ ರಥದಲ್ಲಿ ಉಮಾಮಹೇಶ್ವರ ದೇವರು, ಸುಬ್ರಹ್ಮಣ್ಯ ಸ್ವಾಮಿಯು ಬ್ರಹ್ಮರಥಾರೂಢರಾದರು. ನಂತರ ದೇವರಿಗೆ ಮಹಾ ಮಂಗಳಾರತಿ ನೆರವೇರಿತು.

ಪೂಜೆಯ ಬಳಿಕ ದೇವರಿಗೆ ಸುವರ್ಣವೃಷ್ಟಿ ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ಧನ, ಕನಕ, ಹೂವು, ಫಲವಸ್ತು, ಪ್ರಸಾದವನ್ನು ರಥದಿಂದ ಅರ್ಚಕರು ಭಕ್ತರತ್ತ ಎಸೆದರು. ಭಕ್ತರು ನಾಣ್ಯ, ಕಾಳು ಮೆಣಸು, ಸಾಸಿವೆಯನ್ನು ರಥಕ್ಕೆ ಎಸೆದರು. ಬಳಿಕ ಪಂಚಮಿ ರಥೋತ್ಸವ ನೆರವೇರಿತು. ನಂತರ ಸುಬ್ರಹ್ಮಣ್ಯ ದೇವರ ಮಹಾರಥೋತ್ಸವ ನಡೆಯಿತು.

ದೇವಳದ ಹೊರಾಂಗಣದಲ್ಲಿರುವ ದ್ವಾದಶಿ ಮಂಟಪದಲ್ಲಿ ಮಯೂರ ವಾಹನದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಮತ್ತು ಉಮಾಮಹೇಶ್ವರ ದೇವರಿಗೆ ಪೂಜೆ ನಡೆಯಿತು. ದೇವರು ಗರ್ಭಗುಡಿಗೆ ಪ್ರವೇಶಿಸಿದ ನಂತರ ಪ್ರಧಾನ ಅರ್ಚಕರು ಬ್ರಹ್ಮರಥ ಹರಕೆ ಸೇವೆ ಸಲ್ಲಿಸಿದವರಿಗೆ ಪ್ರಸಾದ ವಿತರಿಸಿದರು.

ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಮಹಾರಥೋತ್ಸವ ನೆರವೇರಿತು
ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಮಹಾರಥೋತ್ಸವ ನೆರವೇರಿತು

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌, ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್‌ನಂದನ್‌, ದಾನಿಗಳಲ್ಲಿ ಒಬ್ಬರಾದ ಉದ್ಯಮಿ ಅಜಿತ್ ಶೆಟ್ಟಿ ಕಡಬ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ರಾಜಣ್ಣಭಾಗವಹಿಸಿದ್ದರು.

ಕುಮಾರಧಾರ ತೀರ್ಥ ಸ್ನಾನದಿಂದ ದೇವಳದ ವರೆಗೆ ಬೀದಿ ಉರುಳು ಸೇವೆ ಮಹಾರಥೋತ್ಸವದೊಂದಿಗೆ ಸಂಪನ್ನಗೊಂಡಿತು.

ಚಂಪಾಷಷ್ಠಿಯ ದಿನ ಕುಕ್ಕೆಗೆ ಅಪಾರ ಸಂಖ್ಯೆಯ ಭಕ್ತರು ಬಂದಿದ್ದರು. ಷಣ್ಮುಖ ಪ್ರಸಾದ ಭೋಜನ ಶಾಲೆ ಮತ್ತು ಆದಿ ಸುಬ್ರಹ್ಮಣ್ಯ ಭೋಜನ ಶಾಲೆಯಲ್ಲಿ ಬೆಳಿಗ್ಗೆ 10.30ರಿಂದ ಸಂಜೆ 5ರವರೆಗೆ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಕುಮಾರಧಾರದಲ್ಲಿಯೇ ವಾಹನ ತಡೆದು ಪಾರ್ಕಿಂಗ್‌ ಸ್ಥಳಗಳಿಗೆ ಕಳುಹಿಸುವ ವ್ಯವಸ್ಥೆಯನ್ನು ಪೊಲೀಸರು ಮಾಡಿದ್ದರು.

ಇಂದು ಅವಭೃತೋತ್ಸವ: ದೇವಳದಲ್ಲಿ ಚಂಪಾಷಷ್ಠಿ ಮಹೋತ್ಸವದ ಅಂಗವಾಗಿ ಮಾರ್ಗಶಿರ ಶುದ್ಧ ಸಪ್ತಮಿಯ ದಿನವಾದ ಮಂಗಳವಾರ ಬೆಳಿಗ್ಗೆ ಕುಮಾರಾಧಾರಾ ನದಿಯಲ್ಲಿ ದೇವರ ಅವಭೃತೋತ್ಸವ ಮತ್ತು ನೌಕಾವಿಹಾರ ನಡೆಯಲಿದೆ. ಈ ಮೊದಲು ಓಕುಳಿ ಪೂಜೆ, ಓಕುಳಿ ಸಂಪ್ರೋಕ್ಷಣೆಯ ಬಳಿಕ ದೇವರು ಅವಭೃತಕ್ಕೆ ತೆರಳಲಿದ್ದಾರೆ.

ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಮಹಾರಥೋತ್ಸವ ನೆರವೇರಿತು
ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಮಹಾರಥೋತ್ಸವ ನೆರವೇರಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT