ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಡಂಬಿ ಸಂಸ್ಕರಣೆಯ ಮಹಿಳೆಯರ ಉದ್ಯಮ ಸಫಲಂ ಹತ್ತನೇ ವರ್ಷಕ್ಕೆ

Last Updated 12 ಡಿಸೆಂಬರ್ 2018, 12:25 IST
ಅಕ್ಷರ ಗಾತ್ರ

ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್ ಮತ್ತು ಜಿಲ್ಲಾಪಂಚಾಯಿತಿಯ ಜಂಟಿ ಆಶ್ರಯದಲ್ಲಿ ಜಿಲ್ಲೆಯ ವಿವಿಧ ಪಂಚಾಯಿತಿಗಳಲ್ಲಿ ಕಾರ್ಯಾಚರಿಸುತ್ತಿರುವ ಮಹಿಳೆಯರ ಉದ್ಯಮವಾದ ' ಸಫಲಂ ' ಗೇರುಬೀಜ ಸಂಸ್ಕರಣಾ ಘಟಕ ಜಿಲ್ಲೆಯ ನಿರುದ್ಯೋಗಿಗಳಾದ ಹಲವಾರು ಮಹಿಳೆಯರಿಗೆ ಜೀವನಾಧಾರವಾಗಿ ಬೆಳೆದು ನಿಂತಿದೆ.

ಜಿಲ್ಲೆಯ 13 ಗ್ರಾಮಪಂಚಾಯಿತಿ ಗಳಲ್ಲಿ 2009ನೇ ಇಸವಿಯಲ್ಲಿ ಈ ಘಟಕ ಆರಂಭವಾಗಿತ್ತು. ಹಂತ ಹಂತವಾಗಿ ಬೆಳೆದ ಈ ಸಂಸ್ಥೆ ಇಂದು ಬೆಳೆದು ಅನೇಕ ಮಹಿಳೆಯರಿಗೆ ಆಸರೆಯಾಗಿದೆ. ಸಂಸ್ಕರಿಸಲ್ಪಟ್ಟ ಗೋಡಂಬಿ ಮಾರಾಟದಲ್ಲಿ 2017-18 ವರ್ಷದಲ್ಲಿ ₹1.07 ಕೋಟಿ ಆದಾಯವನ್ನು ಗಳಿಸಿದೆ. ಈ ವರ್ಷ ಮಳೆ ದುರಂತದ ಹಿನ್ನೆಲೆಯಲ್ಲಿ ವ್ಯಾಪಾರಕ್ಕೆ ಅಪಾರ ಹೊಡೆತಬಿದ್ದರೂ , ₹68 ಲಕ್ಷ ವ್ಯವಹಾರವನ್ನು ಸಂಸ್ಥೆ ನಡೆಸಿದೆ. ಡಿಸೆಂಬರ್ ತಿಂಗಳು ಅಂತ್ಯದೊಳಗೆ ₹1 ಕೋಟಿ ವ್ಯಾಪಾರ ನಿರೀಕ್ಷಿಸಲಾಗುತ್ತಿದೆ’ ಎಂದು ಪದಾಧಿಕಾರಿಗಳು ತಿಳಿಸಿದರು.

ಆರಂಭದಲ್ಲಿ 65 ಮಹಿಳೆಯರು ದುಡಿಯುತ್ತಿದ್ದ ಘಟಕದಲ್ಲಿ ಇಂದು ನೂರಾರು ಮಂದಿ ದುಡಿಯುತ್ತಿದ್ದಾರೆ. ಇವರಲ್ಲಿ ಸುಮಾರು 70 ಮಂದಿ ಪೂರ್ಣಾವಧಿ ನೌಕರಿಯಲ್ಲಿದ್ದಾರೆ. ಆರಂಭದ ಹಂತದಲ್ಲಿ ಇವರಿಗೆ ದಿನವೇತನ 80 ರೂ. ಇದ್ದುದು ಇಂದು ಕನಿಷ್ಠ 350 ರೂ. ಆಗಿ ಹೆಚ್ಚಳಗೊಂಡಿದೆ. ಗೇರುಬೀಜ ಸಂಸ್ಕರಣೆಗಾಗಿಯೇ 11 ಘಟಕಗಳು ಜಿಲ್ಲೆಯಲ್ಲಿ ಇವೆ.

ಎಣ್ಮಕಜೆ, ಕಾರಡ್ಕ, ಚೆಮ್ನಾಡ್, ಪಳ್ಳಿಕ್ಕರೆ, ಕುತ್ತಿಕೋಲು, ಪನತ್ತಡಿ, ಅಜಾನೂರು, ಬೇಡಡ್ಕ, ಕಳ್ಳಾರ್, ಕಯ್ಯೂರು-ಚೀಮೇನಿ, ಕೋಡೋಂ-ಬೇಳೂರು ಎಂಬಲ್ಲಿ ಗೇರುಬೀಜ ಸಂಸ್ಕರಣಾ ಘಟಕಗಳು ಕಾರ್ಯಾಚರಿಸುತ್ತಿವೆ . ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಬೆಳೆಯುವ ಗೇರುಬೀಜಗಳನ್ನು ಸಂಗ್ರಹಿಸಿ ಈ ಘಟಕಗಳಲ್ಲಿ ಸಂಸ್ಕರಿಸಿ ,ಗೋಡಂಬಿ ತಿರುಳಿನ ಪ್ಯಾಕ್ ಮಾಡಿ, "ಪರಂಗಿನಟ್ಸ್" ಎಂಬ ಹೆಸರಲ್ಲಿ ಮಾರುಕಟ್ಟೆಗೆ ತಲಪಿಸುತ್ತಿದ್ದು ಇದಕ್ಕೆ ಭಾರೀ ಬೇಡಿಕೆಯಿದೆ.

2019 ರಲ್ಲಿ ಸಫಲಂ ಕುಟುಂಬಶ್ರೀ ಘಟಕಕ್ಕೆ 10 ವರ್ಷ ಪೂರ್ಣಗೊಳ್ಳಲಿದೆ. ದಿಲ್ಲಿಯ ಆಜೀವಿಕ ಮೇಳ, ಸರಸ್ ಮೇಳ, ಬೆಂಗಳೂರು ಫೆಸ್ಟ್, ಕರ್ನಾಟಕದ ಹಾಗೂ , ದೇಶದ ಇತರ ಕಡೆಗಳಲ್ಲಿ ನಡೆದ ಮಾರಾಟ ಪ್ರದರ್ಶನ ಮಳಿಗೆಗಳಲ್ಲಿ ಈ ಘಟಕದ ಉತ್ಪನ್ನಗಳಿಗೆ ಭಾರೀ ಬೇಡಿಕೆಗಳಿದ್ದುವು. ವಯನಾಡು ಮತ್ತು ಇಡುಕ್ಕಿ ಹೊರತಾಗಿ ರಾಜ್ಯದ ಎಲ್ಲ ಜಿಲ್ಲೆಗಳ ಕುಟುಂಬಶ್ರೀ ಮೇಳಗಳಲ್ಲಿ ಈ ಘಟಕಗಳ ಉತ್ಪನ್ನಗಳ ಪ್ರದರ್ಶನ ಮಾರಾಟ ನಡೆದಿದ್ದುವು.ಮಹಿಳೆಯರ ಅತ್ಯುತ್ತಮ ಉದ್ದಿಮೆ ಎಂಬ ಖ್ಯಾತಿ ಹೊಂದಿರುವ ಈ ಸಂಸ್ಥೆ ಹಲವಾರು ಬಹುಮಾನಗಳನ್ನೂ ತನ್ನ ಬಗಲಿಗೆ ಹಾಕಿರುವುದು ಇದರ ಯಶೋಗಾಥೆಗೊಂದು ನಿದರ್ಶನ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT