ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ: ಇಬ್ಬರ ವಂಚನೆ

Last Updated 7 ಮೇ 2022, 3:02 IST
ಅಕ್ಷರ ಗಾತ್ರ

ಮಂಗಳೂರು: ನಕಲಿ ದಾಖಲೆಪತ್ರಗಳು ಹಾಗೂ ನಕಲಿ ಸಹಿ ಮಾಡಿ, ವೃದ್ಧರೊಬ್ಬರಿಗೆ ಸೇರಿದ ಜಮೀನನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಸೆನ್ ಠಾಣೆ ಪೊಲೀಸರು ಶುಕ್ರವಾರ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಬೆಂಗಳೂರಿನವರಾದ, ಸದ್ಯ ಬಜ್ಪೆ ಸಮೀಪದ ಕೊಂಪದವಿನಲ್ಲಿ ವಾಸವಾಗಿರುವ 84 ವರ್ಷದ ಕ್ರಿಸ್ಟಿನ್ ಎಡ್ವಿನ್ ಜೋಸೆಫ್ ಗೊನ್ಸಾಲ್ವಿಸ್ ಅವರಿಗೆ ಸೇರಿದ ಜಮೀನನ್ನು ಖರೀದಿಸುವ ನೆಪದಲ್ಲಿ ಆರೋಪಿಗಳು ವಂಚಿಸಿದ್ದಾರೆ.

ಈ ಬಗ್ಗೆ ಕ್ರಿಸ್ಟಿನ್‌ ಎಡ್ವಿನ್‌ ಜೋಸೆಫ್‌ ಗೊನ್ಸಾಲ್ವಿಸ್‌ ಅವರು ಸೆನ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯ ಅಶೋಕ್ ಕುಮಾರ್ ಮತ್ತು ರೇಷ್ಮಾ ವಾಸುದೇವ ನಾಯಕ್‌ ಅವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ರಾಮ ಪೂಜಾರಿಗಾಗಿ ಶೋಧ ನಡೆದಿದೆ. ಮೂವರ ವಿರುದ್ಧ ನಕಲಿ ದಾಖಲೆ ಮತ್ತು ನಕಲಿ ಸಹಿ ಮಾಡಿ ವಂಚಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ.

ಜೀವ ಬೆದರಿಕೆ: ಆರೋಪಿ ಬಂಧನ

ಉಳ್ಳಾಲ:ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಮೊಹಮ್ಮದ್ ಸಮೀರ್ ಯಾನೆಕಡಪರ ಸಮೀರ್ ಎಂಬಾತನನ್ನು ಉಳ್ಳಾಲ ಠಾಣೆಯ ಪೊಲೀಸರು ಪಂಪ್‌ವೆಲ್‌ನಲ್ಲಿ ಬಂಧಿಸಿದ್ದಾರೆ.

ತಲಪಾಡಿಯಲ್ಲಿ ಕ್ಯಾಂಟೀನ್‌ ಮಾಲೀಕರಿಗೆ ಹಾಗೂ ಸೋಮೇಶ್ವರದ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ ಆರೋಪ ಈತನ ಮೇಲಿದೆ.

ಫೆಬ್ರುವರಿ 11ರಂದು ತಡರಾತ್ರಿ 2 ಗಂಟೆಯ ಸುಮಾರಿಗೆ ಖಾದರ್‌ ಎಂಬಾತ ತಲಪಾಡಿಯ ಟೋಲ್‌ಗೇಟ್ ಬಳಿ ಮೋಟಾರ್‌ ಸೈಕಲ್‌ನಲ್ಲಿ ಎನ್‌ಎಚ್‌ಎ ಕ್ಯಾಂಟೀನ್‌ಗೆ ತಲವಾರು ಹಿಡಿದುಕೊಂಡು ಬಂದು ಮಾಲೀಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತಲವಾರಿನಿಂದ ಕಡಿದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ್ದ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಫೆಬ್ರುವರಿ 26ರಂದು ತಡರಾತ್ರಿ 2 ಗಂಟೆಗೆ ಖಾದರ್ ಮತ್ತು ಈತನ ಐವರು ಸಹಚರರು ಸೋಮೇಶ್ವರ ನಿವಾಸಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿದ್ದ ಕುರಿತು ಇನ್ನೊಂದು ಪ್ರಕರಣ ಉಳ್ಳಾಲ ಠಾಣೆಯಲ್ಲಿ ದಾಖಲಾಗಿತ್ತು. ಈ ಎರಡೂ ಪ್ರಕರಣದ ತನಿಖೆ ವೇಳೆ ಕಡಪರದ ಸಮೀರ್ ಭಾಗಿಯಾಗಿರುವುದು ತಿಳಿದು ಬಂದಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೇಣು ಹಾಕಿಕೊಂಡು ಆತ್ಮಹತ್ಯೆ

ಬೆಳ್ತಂಗಡಿ: ಇಲ್ಲಿನ ಓಡಿಲ್ನಾಳ ಗ್ರಾಮದ ಕರ್ನಂತೋಡಿ ಬಳಿ ವ್ಯಕ್ತಿಯೊಬ್ಬರು ಮನೆಯ ಕೊಟ್ಟಿಗೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕರ್ನಂತೋಡಿ ನಿವಾಸಿ ಮೋನಪ್ಪ ಗೌಡ (65) ಆತ್ಮಹತ್ಯೆ ಮಾಡಿಕೊಂಡವರು. ಇವರು ಮೂರು ವರ್ಷಗಳಿಂದ ಕಾಲು ಗಂಟುನೋವಿನ ಕಾಯಿಲೆ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಗಂಟುನೋವಿಗೆ ಹಳ್ಳಿ ಔಷಧ ಹಾಗೂ ಹೃದಯ ಸಂಬಂಧಿ ಕಾಯಿಲೆಗೆ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದಿದ್ದರು. ಪ್ರತಿದಿನ ಔಷಧ ಸೇವಿಸುತ್ತಿದ್ದರು. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾವಿಗೆ ಬಿದ್ದು ಸಾವು

ಉಜಿರೆ: ಬಾವಿಕಟ್ಟೆ ಮೇಲೆ ಕುಳಿತಿದ್ದ ವ್ಯಕ್ತಿಯೊಬ್ಬರು ಗುರುವಾರ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.

ಬಿಹಾರದ ಬಟುಸಿಂಗ್ (39) ಮೃತಪಟ್ಟ ವ್ಯಕ್ತಿ. ವಿಪರೀತ ಮದ್ಯಪಾನ ಮಾಡಿದ್ದು, ಆಯತಪ್ಪಿ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT