ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿನಮನ | ಅಮೃತ ಸೋಮೇಶ್ವರ: ಆಂತರ್ಯದಲ್ಲಿದ್ದ ಸನ್ಯಾಸತ್ವದ ‘ಅಮೃತ’

Published 14 ಜನವರಿ 2024, 4:03 IST
Last Updated 14 ಜನವರಿ 2024, 4:03 IST
ಅಕ್ಷರ ಗಾತ್ರ

ಮಂಗಳೂರು: ‘ತಂದೆಯವರು ಸಣ್ಣವರಿದ್ದಾಗ ಸನ್ಯಾಸಿ ಆಗುವ ಬಯಕೆ ಹೊಂದಿದ್ದರು ಎಂದು ಕೇಳಿದ್ದೆ. ಹಾಗೆ ಆಗದೇ ಇದ್ದರೂ ಇದ್ದರೂ ಅವರ ಆಂತರ್ಯದಲ್ಲಿ ಸನ್ಯಾಸಿಯೊಬ್ಬ ಸದಾ ಜಾಗೃತನಾಗಿದ್ದ. ಆದ್ದರಿಂದಲೇ ಅವರ ವೈಯಕ್ತಿಕ ಜೀವನ ವಿಭಿನ್ನವಾಗಿತ್ತು...’

ಬಹುಮುಖಿ ಕವಿ ಮತ್ತು ವಿದ್ವಾಂಸ, ಈಚೆಗೆ ನಿಧನರಾದ ಅಮೃತ ಸೊಮೇಶ್ವರ ಅವರ ಪುತ್ರ ಚೇತನ್ ಸೋಮೇಶ್ವರ ಅವರು ಆಡಿದ ಮಾತು ಇದು.

ಅಮೃತ ಸೋಮೇಶ್ವರರಿಗೆ ನುಡಿನಮನ ಸಲ್ಲಿಸಲು ನಗರದ ತುಳು ಭವನದಲ್ಲಿ ತುಳು ಪರಿಷತ್ ಶನಿವಾರ ಆಯೋಜಿಸಿದ್ದ ‘ಅಮತ ನಮನ’ ಕಾರ್ಯಕ್ರಮದಲ್ಲಿ ನೆನಪಿನಲೆಯಿಂದ ತಂದೆಯವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟ ಅವರು ‘ನನ್ನ ತಂದೆ ಜನರ ಕವಿಯಾಗಿದ್ದರು. ಅವರು ಬರೆದ ಹಾಡುಗಳು ಮಂಗಳೂರಿನ ಸಿಟಿ ಬಸ್‌ಗಳಲ್ಲಿ ಹಿಂದೊಮ್ಮೆ ಅಲೆಯಲೆಯಾಗಿ ತೇಲುತ್ತಿದ್ದವು. ಅವರು ರಚಿಸಿದ ಯಕ್ಷಗಾನ ಪ್ರಸಂಗಗಳು ಲಕ್ಷಾಂತರ ಮಂದಿಯ ಹೃದಯ ತಣಿಸಿವೆ’ ಎಂದರು.

‘ಅಧಿಕಾರದ ದಾಹ ಇಲ್ಲದಿದ್ದ ತಂದೆ, ಫಲಾಪೇಕ್ಷೆ ಇಲ್ಲದೆ ಬದುಕಿದ ಮತ್ತು ಬದುಕಿದ ವ್ಯಕ್ತಿಯಾಗಿದ್ದರು. ಕಾಪಿ ರೈಟ್ ಬಗ್ಗೆ ತಲೆಕೆಡಿಸಿಕೊಳ್ಳದ್ದರಿಂದ ಅವರು ಸಾಹಿತ್ಯ ಎಲ್ಲ ಕಡೆ ನಿರ್ಬಂಧಗಳಿಲ್ಲದೆ ಪಸರಿಸಿತ್ತು. ಇದೇ ಕಾರಣಕ್ಕೆ ಈಗ ಅಧ್ಯಯನಕ್ಕೂ ಅವರ ಕೃತಿಗಳು ಲಭ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ವೈಚಾರಿಕತೆಯನ್ನು ಮೈಗೂಡಿಸಿಕೊಂಡಿದ್ದರೂ ದಾಕ್ಷಿಣ್ಯದಿಂದ ಕೆಲವು ಆಚರಣೆಗಳಲ್ಲಿ ಅವರು ತೊಡಗಿಸಿಕೊಳ್ಳುತ್ತಿದ್ದರು’ ಎಂದು ಚೇತನ್ ತಿಳಿಸಿದರು.

‘ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ತಿರಸ್ಕರಿಸಿದ್ದ ಅವರು ಉಡುಪಿ ಮಠದಲ್ಲಿ ಸನ್ಮಾನಕ್ಕೂ ಒಪ್ಪಿರಲಿಲ್ಲ. ಸ್ವಸ್ಥ ಸಮಾಜ ಬಯಸಿದ್ದ ಅವರ ಕನಸು ನನಸು ಮಾಡಿ ಅವರಿಗೆ ನಿಜವಾದ ಗೌರವ ಸಲ್ಲಿಸಬೇಕು’ ಎಂದು ಚೇತನ್ ಕೋರಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಯರಾಜ್ ಅಮೀನ್, ‘ಅಮೃತರ ಕೃತಿಗಳಲ್ಲಿ ವೈಚಾರಿಕತೆ ಮತ್ತು ಮಾನವೀಯ ಗುಣ ಇದೆ. ಕ್ರಾಂತಿಯ ಅಂಶವಿದ್ದರೂ ಭಾಷೆಯಲ್ಲಿ ಅಬ್ಬರವಿಲ್ಲ. ಅವರು ಎಲ್ಲವನ್ನೂ ಕಣ್ಣುಮುಚ್ಚಿ ಒಪ್ಪುವವರಾಗಿರಲಿಲ್ಲ. ಆದರೂ ಸಮಾಜದ ಅಂಕುಡೊಂಕು ಎತ್ತಿತೋರಿಸುವ ವೇಳೆ ತಿವಿಯುವ ಗುಣ ಇರಲಿಲ್ಲ’ ಎಂದರು.

ಮೇಯರ್ ಸುಧೀರ್ ಶೆಟ್ಟಿ, ರಂಗಕರ್ಮಿ ತಮ್ಮ ಲಕ್ಷ್ಮಣ, ನಿವೃತ್ತ ಪ್ರಾಧ್ಯಾಪಕ ಶಿವರಾಮ್ ಶೆಟ್ಟಿ, ಮುಖಂಡ ಅಭಯಚಂದ್ರ ಜೈನ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಶ್ರೀನಾಥ್, ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಮಹಮ್ಮದ್ ಹನೀಫ್ ಮುಂತಾದವರು ಮಾತನಾಡಿದರು.

ಅಮೃತರ ಸಾಹಿತ್ಯದ ಅಧ್ಯಯನ ಆಗಲಿ: ಮೊಯಿಲಿ

ವಿಶಿಷ್ಟ ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಅಮೃತರ ಕೃತಿಗಳು ಶಿವರಾಮ ಕಾರಂತರ ಕೃತಿಗಳಷ್ಟೇ ಪ್ರಭಾವ ಬೀರುವಂಥವು. ಹೀಗಾಗಿ ಅವುಗಳ ಅಧ್ಯಯನ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಸಲಹೆ ನೀಡಿದರು.

‘ಬಹುಮುಖ ಪ್ರತಿಭೆಯ ವಿದ್ವಾಂಸರಾಗಿದ್ದ ಅಮೃತ ಸೋಮೇಶ್ವರರಲ್ಲಿ ಸಾಂಸ್ಕೃತಿಕ ಸೆಳೆತ ಇತ್ತು. ಅವರ ಕೃತಿಗಳಲ್ಲಿ ನೆಲದ ಮೂಲ ಸತ್ವ ಇದೆ. ಅದು ಎರವಲು ಸಾಹಿತ್ಯವಲ್ಲ. ಸಮಾಜಮುಖಿ ಮತ್ತು ಮಾನವೀಯ ಕಾಳಜಿಯೇ ಅವರ ಕೃತಿಗಳ ಜೀವಾಳ. ಸಾಹಿತ್ಯದಲ್ಲಿ ಮೌಲ್ಯಗಳು ಹೃದಯದಾಳದಿಂದ ಬರಬೇಕು, ಅದರಲ್ಲಿ ನೆಲದ ಗುಣ ಇರಬೇಕು ಎಂಬುದಕ್ಕೆ ಅವರ ಸಾಹಿತ್ಯ ಉದಾಹರಣೆ. ಇಂಥ ಸಾಹಿತ್ಯದ ಅಧ್ಯಯನ, ತುಳು ಆಕಾಡೆಮಿಯ ಪ್ರಮುಖ ಕಾರ್ಯ ಆಗಬೇಕು’ ಎಂದು ಮೊಯಿಲಿ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT