ಸೋಮವಾರ, ಜೂನ್ 21, 2021
21 °C
ವೆನ್ಲಾಕ್ ಆಸ್ಪತ್ರೆ ವೈದ್ಯ ಶರತ್ ಬಾಬು ಜೊತೆ ಸಿ.ಎಂ ಯಡಿಯೂರಪ್ಪ ಸಂವಾದ

ಕೊರೊನಾ ವಾರಿಯರ್ಸ್ ಕಾರ್ಯಕ್ಕೆ ಪ್ರಶಂಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಜೀವದ ಹಂಗನ್ನು ತೊರೆದು ಮಾನವೀಯ ನೆಲೆಗಟ್ಟಿನಲ್ಲಿ ನಿಸ್ವಾರ್ಥ ಕಾರ್ಯ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ನಾಡಿನ ಅಮೂಲ್ಯ ಆಸ್ತಿಯಾಗಿದ್ದು, ಸರ್ಕಾರ ನಿಮ್ಮೆಲ್ಲರ ಪರವಾಗಿರುತ್ತದೆ. ನಿಮ್ಮ ಮತ್ತು ಕುಟುಂಬದ ಸದಸ್ಯರ ಆರೋಗ್ಯದ ಕಡೆಗೆ ಕೂಡ ಗಮನಹರಿಸಿ’ ಎಂದು ಮುಖ್ಯಮಂತ್ರಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೃತಜ್ಞತೆ ಸಲ್ಲಿಸಿದರು.

ಕೋವಿಡ್ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವ ರಾಜ್ಯದ ಆಯ್ದ ವೈದ್ಯರೊಂದಿಗೆ ಶನಿವಾರ ವಿಡಿಯೊ ಸಂವಾದ ನಡೆಸಿದ ಅವರು, ಜನರ ಜೀವ ಉಳಿಸಿದ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ಹೇಳಿದರು. ಈ ಸಂವಾದದಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಯ ಡಾ. ಶರತ್‌ಬಾಬು ಭಾಗವಹಿಸಿದ್ದರು. ‌

ಆಮ್ಲಜನಕ ಮತ್ತು ರೆಮ್‌ಡಿಸಿವಿರ್ ಲಭ್ಯತೆ ಬಗ್ಗೆ ಮುಖ್ಯಮಂತ್ರಿ ಪ್ರಶ್ನೆಗೆ ಉತ್ತರಿಸಿದ ಡಾ.ಶರತ್ ಬಾಬು, ‘ಜಿಲ್ಲೆಯಲ್ಲಿ ಇದುವರೆಗೆ ಆಮ್ಲಜನಕ ಕೊರತೆಯ ಗಂಭೀರ ಸಮಸ್ಯೆ ಕಂಡುಬಂದಿಲ್ಲ. ಪ್ರಸ್ತುತ 6ಸಾವಿರ ಲೀಟರ್ ಆಮ್ಲಜನಕದ ಸಂಗ್ರಹವಿದೆ. ಬಳ್ಳಾರಿಯಿಂದ ಪ್ರತಿ ಎರಡು ದಿನಕ್ಕೊಮ್ಮೆ ಆಮ್ಲಜನಕ ಬರುತ್ತಿದೆ. ಮುಂಜಾಗ್ರತೆಯಾಗಿ ಜಂಬೊ ಸಿಲೆಂಡರ್‌ಗಳಲ್ಲಿ ಆಮ್ಲಜನಕ ಸಂಗ್ರಹ ಮಾಡಿಟ್ಟುಕೊಳ್ಳಲಾಗಿದೆ. ರೆಮ್‌ಡಿಸಿವಿರ್ ಕೊರತೆಯಾಗಿಲ್ಲ. ಜಿಲ್ಲಾಡಳಿತದ ಆದೇಶದಂತೆ ರೆಮ್‌ಡಿಸಿವಿರ್‌ ಅನ್ನು ಜಿಲ್ಲಾ ತಜ್ಞರ ಸಮಿತಿ ಮಾರ್ಗಸೂಚಿ ಪ್ರಕಾರ ವಿವೇಚನೆಗೊಳಪಟ್ಟು, ಬಳಸಲಾಗುತ್ತಿದೆ’ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ರಿಟಿಕಲ್ ಕೇರ್ ಸಪೋರ್ಟ್ ಘಟಕದ ಮೂಲಕ ವೈದ್ಯರಿಗೆ, ಚಿಕಿತ್ಸಾ ವಿಧಾನಗಳ ಕುರಿತು ಅಗತ್ಯ ಸಲಹೆ–ಸೂಚನೆಗಳನ್ನು ಟೆಲಿಕನ್ಸಲ್ಟೇಷನ್ ಮೂಲಕ ನೀಡಲಾಗುತ್ತಿದೆ. ಇದನ್ನು ಮುಂದುವರಿಸಬೇಕು. ರಾಜೀವ್ ಗಾಂಧಿ ಆಸ್ಪತ್ರೆಯಿಂದ ಈ ಬಗ್ಗೆ ಕಾರ್ಯಾಗಾರ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

‘ಐಸಿಯು ವಾರ್ಡ್‌ನಲ್ಲಿ 30 ಮಂದಿ’

‘ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಪುರ್ನವಸತಿ ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಎಲ್ಲ ಖಾಸಗಿ ಆಸ್ಪತ್ರೆಯ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಪಿಪಿಇ ಕಿಟ್ ಬಳಕೆ ಬಗ್ಗೆ ತರಬೇತಿ ನೀಡಲಾಗಿದೆ. ಪ್ರಸ್ತುತ ಜಿಲ್ಲಾ
ಆಸ್ಪತ್ರೆಯಲ್ಲಿ 210 ಕೋವಿಡ್ ಬಾಧಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
30 ಮಂದಿ ಐಸಿಯು ವಾರ್ಡ್‌ನಲ್ಲಿದ್ದಾರೆ. ಒಂದು ಎಚ್‌ಡಿಯು ವಾರ್ಡ್ ಮಾಡಲಾಗಿದೆ. ಇದರಲ್ಲಿ 50 ರೋಗಿಗಳಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಡಾ.ಶರತ್‌ ಬಾಬು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.