ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪತ್ಕಾಲದ ಬೆಸುಗೆ ಕೊಂಡಿ ‘ವೆಬಿನಾರ್‌’

ಲಾಕ್‌ಡೌನ್‌ ಕಾಲಘಟ್ಟದಲ್ಲಿ ಸಂವಹನ– ಸಂಪರ್ಕಕ್ಕಾಗಿ ಆನ್‌ಲೈನ್‌ ವೇದಿಕೆ
Last Updated 27 ಸೆಪ್ಟೆಂಬರ್ 2020, 6:20 IST
ಅಕ್ಷರ ಗಾತ್ರ

‌ಲಾಕ್‌ಡೌನ್‌ ಕಾಲಘಟ್ಟದಲ್ಲಿ ಸಂವಹನ– ಸಂಪರ್ಕಕ್ಕಾಗಿ ‘ವೆಬಿನಾರ್‌’ ಆಪತ್ಕಾಲದ ಬೆಸುಗೆ ಕೊಂಡಿಯಾಗಿದೆ. ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿದ್ದ ವಿಚಾರಸಂಕಿರಣ, ಪುಸ್ತಕ ಬಿಡುಗಡೆ, ಯಕ್ಷಗಾನ, ತಾಳಮದ್ದಲೆ, ಸಂಗೀತ ಕಚೇರಿ, ಭಗವದ್ಘೀತಾ ಪ್ರವಚನ, ನೃತ್ಯ, ಯೋಗ, ಅಡುಗೆ ತರಗತಿಗಳನ್ನು ತಾವಿರುವ ಸ್ಥಳದಿಂದಲೇ ಆನ್‌ಲೈನ್‌ನಲ್ಲಿ ಕಲಿಯಲು, ವೀಕ್ಷಿಸಲು, ಪಾಲ್ಗೊಳ್ಳಲು ‘ವೆಬಿನಾರ್‌’ ಸಂಪರ್ಕ ಸೇತುವಾಗಿದೆ. ಕಲಿತ, ಕಲಿಸಿದ ಕಥನವೇ ಈ ಭಾನುವಾರದ ‘ಪ್ರಜಾವಾಣಿ’ಯ ವಿಶೇಷ.

‘ನಾನು ಮೈಸೂರಿನಲ್ಲಿ ವಿದೇಶಿಗರಿಗೆ ಯೋಗ ತರಬೇತಿ ನೀಡುತ್ತಿದ್ದೆ. ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ಕೆಲಸವೂ ಇರಲಿಲ್ಲ. ಈ ಸಂದರ್ಭ ವಿದೇಶಿ ಯೋಗಾಸಕ್ತರಿಗೆ ಆನ್‌ಲೈನ್‌ ಮೂಲಕ ಯೋಗ ತರಬೇತಿ ನೀಡಲು ಆರಂಭಿಸಿದೆ. ಇದರಿಂದ ನಮ್ಮ ಕುಟುಂಬ ನಿರ್ವಹಣೆಗೆ ಆದಾಯವೂ ದೊರೆಯಿತು’.

ಇದು ಉಜಿರೆಯ ಯೋಗ ಶಿಕ್ಷಕಿ ಶೋಭಾ ಬೊಂಟ್ರಪಾಲ್‌ ಅವರ ಮಾತು. ಕೋವಿಡ್‌ ಕಾರಣಕ್ಕಾಗಿ ಜನರು ಮನೆಯಲ್ಲೇ ಇರಬೇಕು, ಅಂತರ ಕಾಪಾಡಬೇಕು ಮುಂತಾದ ನಿಯಮಗಳನ್ನು ಸರ್ಕಾರ ವಿಧಿಸಿತ್ತು. ಹೀಗಾಗಿ, ಸಭೆ, ಸಮಾರಂಭ, ತರಬೇತಿಗಳನ್ನು ಅಂಗಳಗಳಲ್ಲಿ ನಡೆಸಲು ಅವಕಾಶ ಇರಲಿಲ್ಲ. ಈ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ತಾವಿರುವ ಸ್ಥಳದಿಂದಲೇ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಮಾಜಿಕ ಜಾಲತಾಣ ಹಾಗೂ ಹಲವು ಆ್ಯಪ್‌ಗಳು ವೇದಿಕೆಯನ್ನು ಕಲ್ಪಿಸಿವೆ. ಉಜಿರೆಯ ಶೋಭಾ ಅವರಂತೆ ಹಲವು ಸಂಘಸಂಸ್ಥೆಗಳು, ಸಾರ್ವಜನಿಕರು ವಿವಿಧ ಕಾರ್ಯಕ್ರಮಗಳನ್ನು ಆನ್‌ಲೈನ್‌ ವೇದಿಕೆಯಲ್ಲಿ ಹಮ್ಮಿಕೊಂಡಿದ್ದಾರೆ.

‘ಲಾಕ್‌ಡೌನ್‌ ಅವಧಿಯಲ್ಲಿ ಅಮೆರಿಕ ಮತ್ತು ಇಂಗ್ಲೆಂಡ್‌ನ ಆಸಕ್ತರಿಗೆ ಯೋಗ ತರಬೇತಿಯನ್ನು ನೀಡಲು ಆರಂಭಿಸಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನೂ ಹಲವರು ತರಬೇತಿ ಪಡೆಯಲು ಮುಂದೆ ಬಂದಿದ್ದಾರೆ. ಯೋಗವೂ ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಕಾರಿ’ ಎನ್ನುತ್ತಾರೆ ಶೋಭಾ.

ಮಂಗಳೂರಿನ ಕೂಳೂರಿನಲ್ಲಿ ಸನಾತನ ಯಕ್ಷಾಲಯ ನೃತ್ಯ ಶಾಲೆಯನ್ನು ನಡೆಸುತ್ತಿರುವ ರಾಕೇಶ್‌ ರೈ ಅಡ್ಕ ಅವರನ್ನು ಮಾತಿಗೆಳೆದಾಗ, ‘ನಮ್ಮಲ್ಲಿ 108 ವಿದ್ಯಾರ್ಥಿಗಳು ನೃತ್ಯ ಕಲಿಯುತ್ತಿದ್ದಾರೆ. ಲಾಕ್‌ಡೌನ್‌ ಸಂದರ್ಭ ತರಗತಿಯನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಲಾಯಿತು. ನಂತರ ‘ಝೂಮ್‌’ ಮೂಲಕ ಆನ್‌ಲೈನ್‌ ತರಗತಿ ಆರಂಭಿಸಲು ಮುಂದಾದೆ. ಇದಕ್ಕೆ ವಿದ್ಯಾರ್ಥಿಗಳಿಂದಲೂ ನಿರೀಕ್ಷೆಗೆ ಮೀರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವೊಂದು ಅನನುಕೂಲತೆ ಇದ್ದರೂ ಲಾಕ್‌ಡೌನ್‌ ಸಂದರ್ಭ ಇದು ಪ್ರಯೋಜನವಾಯಿತು’ ಎನ್ನುತ್ತಾರೆ ಅವರು.

‘ಮಂಗಳೂರಿನ ಇಸ್ಕಾನ್‌ ಶ್ರೀರಾಧಾ ಗೋವಿಂದ ಮಂದಿರದಲ್ಲಿ ಪ್ರತಿದಿನ ಭಗವದ್ಘೀತಾ ಪ್ರವಚನ ನಡೆಸುತ್ತಿದ್ದೆವು. ಲಾಕ್‌ಡೌನ್‌ನ ಬಿಸಿ ಅದಕ್ಕೂ ತಟ್ಟಿದ್ದರಿಂದ ‘ವೆಬಿನಾರ್‌’ನ ಮೊರೆ ಹೋದೆವು. ತುಳು, ಕನ್ನಡ, ಇಂಗ್ಲಿಷ್‌ ಸೇರಿದಂತೆ ಎಂಟು ಭಾಷೆಯಲ್ಲಿ ಆನ್‌ಲೈನ್‌ ಸಂವಾದಾತ್ಮಕ ಪ್ರವಚನ ಆರಂಭಿಸಿದೆವು. ಈತನಕ 5 ತಂಡಗಳಿಗೆ ಪ್ರವಚನ ನೀಡಲಾಗಿದೆ. 5ನೇ ತಂಡದಲ್ಲಿ 18 ಸಾವಿರಕ್ಕೂ ಅಧಿಕ ಮಂದಿ ನೋಂದಾಯಿಸಿದ್ದರು. ಅದನ್ನು 300 ಮಂದಿಯಂತೆ ವಿಭಾಗಿಸಿ ಪ್ರವಚನ ನೀಡಲಾಗುತ್ತಿದೆ. ಒಂದೇ ಬಾರಿ 68ಕ್ಕೂ ಅಧಿಕ ದೇಶಗಳಿಂದ ಭಕ್ತರು ಪಾಲ್ಗೊಂಡ ದಾಖಲೆಯೂ ಇದೆ’ ಎಂದು ಸಂಸ್ಥೆಯ ಮುಖ್ಯಸ್ಥ ನಾಮನಿಷ್ಠಾ ದಾಸ್‌ ಮಾಹಿತಿ ನೀಡಿದರು.

‘ಲಾಕ್‌ಡೌನ್‌ಗಿಂತ ಮುಂಚೆ ಹಲವು ಸಂಘಸಂಸ್ಥೆಗಳು ಸಂಪನ್ಮೂಲ ವ್ಯಕ್ತಿಯಾಗಿ ನನ್ನನ್ನು ಆಹ್ವಾನಿಸಿದ್ದವು. ಆದರೆ, ಕಾರ್ಯದ ಒತ್ತಡದಿಂದ ಪಾಲ್ಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ವೆಬಿನಾರ್‌ನಲ್ಲಿ ಮನೆಯಿಂದಲೇ ಭಾಗವಹಿಸಲು ಅವಕಾಶ ಇರುವ ಕಾರಣ ಹತ್ತಾರು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ್ದೇನೆ. ಇಲ್ಲಿ ಕಾರ್ಯಕ್ರಮದ ಯಶಸ್ಸು ವೀಕ್ಷಕರ ಮೇಲೆ ಅವಲಂಬನೆಯಾಗಿರುತ್ತದೆ’ ಎನ್ನುತ್ತಾರೆ ಆಳ್ವಾಸ್‌ ಕಾಲೇಜಿನ ಪ್ರಾಧ್ಯಾಪಕ ಡಾ.ಯೋಗೀಶ್‌ ಕೈರೋಡಿ.

‘ವೆಬಿನಾರ್‌ ಎಂಬುದು ಹೊಸ ಪರಿಕಲ್ಪನೆಯೇನಲ್ಲ. ಕಾರ್ಪೊರೇಟ್‌ ಸಂಸ್ಥೆಗಳಲ್ಲಿ ದಶಕದ ಹಿಂದೆಯೂ ಬಳಕೆಯಲ್ಲಿತ್ತು. ಲಾಕ್‌ಡೌನ್‌ ಸಂದರ್ಭ ಅದರ ಪ್ರಯೋಜನ ಎಲ್ಲರಿಗೂ ತಿಳಿಯಿತು. ಲಾಕ್‌ಡೌನ್‌ ಸಂದರ್ಭ ವಿಶ್ವವಿದ್ಯಾಲಯ ಮಟ್ಟದಲ್ಲಿ ಹಲವು ವೆಬಿನಾರ್‌ಗಳನ್ನು ಹಮ್ಮಿಕೊಳ್ಳಲಾಗಿದೆ. ವೆಬಿನಾರ್‌ ಆಯೋಜಿಸುವ ಕುರಿತು ಹಲವು ಸಂಘಸಂಸ್ಥೆಗಳಿಗೂ ಮಾಹಿತಿಯನ್ನು ನೀಡಲಾಗಿದೆ. ಇದು ಭವಿಷ್ಯದಲ್ಲಿ ಬದುಕಿನ ಒಂದು ಭಾಗವಾದರೂ ಅಚ್ಚರಿ ಪಡಬೇಕಿಲ್ಲ’ ಎನ್ನುತ್ತಾರೆ ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜಿನ ಮಾಹಿತಿ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ರಾಕೇಶ್‌ ಕುಮಾರ್‌.

ಯಕ್ಷಗಾನ, ತಾಳಮದ್ದಳೆಯೂ ಯೂಟ್ಯೂಬ್‌/ ಫೇಸ್‌ಬುಕ್‌ ಲೈವ್‌ ವರ್ಚುವಲ್‌ ಮೂಲಕ ಮನೆ–ಮನೆಗೆ ಲಗ್ಗೆಯಿಟ್ಟಿದೆ. ಹಿರಿಯ ಜೀವಗಳು ತಾವಿರುವ ಸ್ಥಳದಿಂದಲೇ ನೇರವಾಗಿ ವೀಕ್ಷಿಸಿ, ಸಂಭ್ರಮಿಸುತ್ತಿದ್ದಾರೆ. ಲಾಕ್‌ಡೌನ್‌ ವೇಳೆಯಲ್ಲಿ ಧಾರ್ಮಿಕ ಕೇಂದ್ರಗಳಿಗೆ ಪ್ರವೇಶ ನಿಷೇಧ ಮಾಡಿದ್ದರಿಂದ ಅಲ್ಲಿನ ಪೂಜೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರದ ಮೂಲಕ ಭಕ್ತರನ್ನು ಕೊಂಚ ಸಮಾಧಾನ ಮಾಡುವ ಪ್ರಯತ್ನವೂ ನಡೆಯಿತು.

****

ಲಾಕ್‌ಡೌನ್‌ ಸಂದರ್ಭ ಮನಸ್ಸಿನ ಹಸಿವನ್ನು ನೀಗಿಸಲು ವೆಬಿನಾರ್‌ ಉತ್ತಮ ವೇದಿಕೆಯಾಗಿ ಬಳಕೆಯಾಗಿದೆ. ಭೌತಿಕವಾಗಿ ದೂರವಿದ್ದು, ಮಾನಸಿಕವಾಗಿ ಹತ್ತಿರವಾಗಲು ಇದು ಸಹಕಾರಿಯಾಗಿದೆ.
-ಡಾ.ಯೋಗೀಶ್‌ ಕೈರೋಡಿ ಪ್ರಾಧ್ಯಾಪಕ, ಸಂಪನ್ಮೂಲ ವ್ಯಕ್ತಿ

***

’ಗುರುವಿನ ಅರಿವು’ ಎಂಬ ವಿಶೇಷ ಕಾರ್ಯಕ್ರಮವನ್ನು ವೆಬಿನಾರ್‌ ಮೂಲಕ ಆಯೋಜಿಸಿದ್ದೇವು. ಕಾರ್ಯಕ್ರಮ ಆಯೋಜನೆ ನಿಟ್ಟಿನ ಶ್ರಮ ಕಡಿಮೆಯಾಗಿದೆ. ಸಮಯ, ಖರ್ಚು ಉಳಿತಾಯವಾಗುತ್ತಿದೆ.
-ಪ್ರೊ.ರಾಕೇಶ್‌ ಕುಮಾರ್‌ ಕಾರ್ಯಕ್ರಮ ಸಂಯೋಜಕ

***

ಆಧುನಿಕ ಕಾಲದಲ್ಲಿ ‘ವೆಬಿನಾರ್‌’ ಹೊಸ ಸಂಪರ್ಕ ಸಾಧನವಾಗಿದೆ. ಯೋಗ ತರಬೇತಿಗೆ ಇದು ಸೂಕ್ತ ವೇದಿಕೆ ಕಲ್ಪಿಸುತ್ತದೆ. ವಿದೇಶಿ ವಿದ್ಯಾರ್ಥಿಗಳು ಈ ರೀತಿಯ ತರಗತಿಯನ್ನು ಮೆಚ್ಚಿಕೊಂಡಿದ್ದಾರೆ.
-ಶೋಭಾ ಬೊಂಟ್ರಪಾಲ್‌,ಯೋಗ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT