ಗುರುವಾರ , ಆಗಸ್ಟ್ 5, 2021
26 °C
ಜಿಲ್ಲೆಯಲ್ಲಿ ಹೆಚ್ಚಿದ ಮರಳು ಅಕ್ರಮ–ಅಪಾಯಕಾರಿ ಗಣಿಗಾರಿಕೆ: ಆರೋಪ

ಸಂಸದರು, ಬಿಜೆಪಿ ಶಾಸಕರು ಶಾಮೀಲು: ಕಾಂಗ್ರೆಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಜಿಲ್ಲೆಯಲ್ಲಿ ಡ್ರೆಜ್ಜಿಂಗ್‌ ಮೂಲಕ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಸಂಸದರು ಮತ್ತು ಬಿಜೆಪಿ ಶಾಸಕರು ನೇರವಾಗಿ ಶಾಮೀಲಾಗಿರುವ ಶಂಕೆ ಇದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ನಗರದಲ್ಲಿ  ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಹರೀಶ್‌ಕುಮಾರ್ ಹಾಗೂ ಶಾಸಕ ಯು.ಟಿ.ಖಾದರ್, ‘ಮರಳು ಗಣಿಗಾರಿಕೆಗೆ ಯಂತ್ರ ಬಳಸುವುದಕ್ಕೆ ವಿರೋಧ ಇದೆ. ಜೆಸಿಬಿ ಬಳಸುವ ಪ್ರಕರಣಗಳನ್ನು ಕಂಡಿದ್ದೇವೆ. ಆದರೆ, ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಡ್ರೆಜ್ಜಿಂಗ್ ಯಂತ್ರ ಬಳಸಿ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಿಂದ ಸೇತುವೆ ಮಾತ್ರವಲ್ಲ, ಕೃಷಿ, ರಸ್ತೆ, ಮೀನುಗಾರಿಕೆ ಸೇರಿದಂತೆ ಜಿಲ್ಲೆಗೆ ಅಪಾಯ ಕಾದಿದೆ’ ಎಂದರು.

‘ಈ ಮರಳು ಅಕ್ರಮ ಗಣಿಗಾರಿಕೆ ಮುಂದುವರಿದಲ್ಲಿ ಮಳವೂರು ಕಿಂಡಿ ಅಣೆಕಟ್ಟೆಗೂ ಅಪಾಯ ಇದೆ. ಈ ಬಗ್ಗೆ ವಿರೋಧ ವ್ಯಕ್ತಪಡಿಸುವ ಅಧಿಕಾರಿಗಳನ್ನೇ ವರ್ಗಾವಣೆ ಮಾಡಲಾಗಿದೆ. ಜಿಲ್ಲಾಡಳಿತವೇ ಮೌನವಾಗಿದೆ’ ಎಂದು ದೂರಿದ ಅವರು, ‘ಕೂಡಲೇ ಅಕ್ರಮಗಳನ್ನು ನಿಲ್ಲಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಕಾಂಗ್ರೆಸ್‌ ಪ್ರತಿಭಟನೆ ನಡೆಸಲಿದೆ’ ಎಂದರು.

ಶಾಸಕ ಯು.ಟಿ.ಖಾದರ್ ಮಾತನಾಡಿ, ‘ಹಿಂದಿನ ಸರ್ಕಾರದ ಅವಧಿಯಲ್ಲಿ ಸ್ಯಾಂಡ್ ಬಜಾರ್ ಆ್ಯಪ್‌ ಮೂಲಕ ಜನರಿಗೆ ₹8 ಸಾವಿರ ದರದಲ್ಲಿ ಮರಳು ಸಿಗುವಂತೆ ಮಾಡಿದ್ದೆವು. ಅದಕ್ಕೆ ರಾಜ್ಯಮಟ್ಟದಲ್ಲಿ ಶ್ಲಾಘನೆ ವ್ಯಕ್ತವಾಗಿತ್ತು. ಆದರೆ, ಈಗ ಅಪಾಯಕಾರಿ ಗಣಿಗಾರಿಕೆ ನಡೆಸುತ್ತಿರುವುದಲ್ಲದೇ, ಜನರಿಗೆ ₹15 ರಿಂದ ₹20 ಸಾವಿರಕ್ಕೆ ಮರಳು ಮಾರುವಂತೆ ಮಾಡಿದ್ದಾರೆ’ ಎಂದು ದೂರಿದರು.

ಡೀಸೆಲ್–ಪೆಟ್ರೋಲ್: ಪ್ರಧಾನಿ ನರೇಂದ್ರ ಮೋದಿ ಹೇರಿದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ಜನತೆಗೆ ಪರಿಹಾರ, ತೆರಿಗೆ ವಿನಾಯಿತಿ, ರಿಯಾಯಿತಿಗಳನ್ನು ನೀಡಬೇಕಾದ ಕೇಂದ್ರ ಸರ್ಕಾರವು ಡೀಸೆಲ್‌, ಪೆಟ್ರೋಲ್, ಅಡುಗೆ ಅನಿಲ ಬೆಲೆಯೇರಿಕೆ ಮೂಲಕ ಜನರ ಮೇಲೆ ಬರೆ ಎಳೆಯುತ್ತಿದೆ ಎಂದು ದೂರಿದರು.

‘ಚೀನಾ ಭಾರತದ ವಿರುದ್ಧ ಆಕ್ರಮಣ ಮಾಡುತ್ತಿದೆ. ನೇಪಾಳವೂ ಭಾರತದ ವಿರುದ್ಧ ನಿಲ್ಲುವಂತಾಗಿದೆ. ಈಗ ನಮ್ಮ 56 ಇಂಚು ಎದೆಯ ಪ್ರಧಾನಿ ಮೋದಿ ಏಕೆ ಮೌನವಾಗಿದ್ದಾರೆ?’ ಎಂದು ಲೇವಡಿ ಮಾಡಿದರು.   

ಕಾಂಗ್ರೆಸ್‌ ಮುಖಂಡರಾದ ಶುಭೋದಯ ಆಳ್ವ, ಸಂತೋಷ್ ಕುಮಾರ್ ಶೆಟ್ಟಿ, ಅಬ್ದುಲ್ ರವೂಫ್‌, ಟಿ.ಕೆ.ಸುಧೀರ್, ನಜೀರ್ ಬಜಾಲ್, ದಿನೇಶ್ ಕುಂಪಲ, ಸದಾಶಿವ ಉಳ್ಳಾಲ್ ಇದ್ದರು.

ದೇಶಪ್ರೇಮಿಗಳಿಗೆ ಮನವಿ...

ಮರಳು ಗಣಿಗಾರಿಕೆ ವಿರುದ್ಧ ಹೋರಾಟಕ್ಕಾಗಿ ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇವೆ. ನೈಜ ದೇಶಪ್ರೇಮಿಗಳು ಮರಳು ಗಣಿಗಾರಿಕೆ, ಸಾಗಾಟದ ವಿಡಿಯೊ ಮಾಡಿ ವಾಟ್ಸ್‌ ಆ್ಯಪ್ (ಮೊ. 9845491517) ಮಾಡಿ. ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ಬಳ್ಳಾರಿ ಮಾಡಲು ಬಿಡುವುದಿಲ್ಲ: ಖಾದರ್

ಬಿಜೆಪಿ ಸಂಸದರು ಮತ್ತು ಶಾಸಕರು ಸೇರಿ ದಕ್ಷಿಣ ಕನ್ನಡವನ್ನು ಬಳ್ಳಾರಿ ಮಾಡಲು ಹೊರಟಿದ್ದಾರೆಯೇ? ಎಂದು ಪ್ರಶ್ನಿಸಿದ ಶಾಸಕ ಯು.ಟಿ.ಖಾದರ್‌, ‘ನಾವೂ ಹೋರಾಟ ಮಾಡುತ್ತೇವೆ. ಜಿಲ್ಲೆಯ ಜನತೆ ಸುಮ್ಮನಿರುವುದಿಲ್ಲ. ಗಣಿಧಣಿಗಳ ಸ್ಥಿತಿ ನಿಮಗೂ ಬರಲಿದೆ’ ಎಂದರು.

‘ಕಮಿಷನರೇಟ್‌ ವ್ಯಾಪ್ತಿಯಲ್ಲೇ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ, ಪೊಲೀಸ್ ಕಮಿಷನರ್ ಏಕೆ ಕಾರ್ಯಾಚರಣೆ ಮಾಡುತ್ತಿಲ್ಲ? ಮುಂದೆ ಬಂದು ನಿಲ್ಲುತ್ತಿಲ್ಲ? ಎಂದು ಪ್ರಶ್ನಿಸಿದ ಅವರು, ಜಿಲ್ಲಾಧಿಕಾರಿ ಬದಲಾದ ಬಳಿಕ ಮರಳು ಗಣಿಗಾರಿಕೆ ಏಕೆ ಹೆಚ್ಚಿತು? ಎಂದು ಕುಟುಕಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.