ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು: ಕೆಸಿಎಗೆ ಜಾಗದ ದಾಖಲೆ, ಷರತ್ತು ಪತ್ರ ಹಸ್ತಾಂತರ

ಪುತ್ತೂರಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ
Published 30 ಜನವರಿ 2024, 14:16 IST
Last Updated 30 ಜನವರಿ 2024, 14:16 IST
ಅಕ್ಷರ ಗಾತ್ರ

ಪುತ್ತೂರು: ತಾಲ್ಲೂಕಿನ ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ ನಿರ್ಮಾಣವಾಗಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕಾಗಿ ಜಾಗದ ದಾಖಲೆ ಹಾಗೂ ಷರತ್ತು ಪತ್ರಗಳನ್ನು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)ಗೆ ಹಸ್ತಾಂತರಿಸುವ ಕಾರ್ಯಕ್ರಮ ಇಲ್ಲಿನ ಉಪವಿಭಾಗಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.

ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಅವರು ದಾಖಲೆಗಳನ್ನು ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಅವರಿಗೆ ಹಸ್ತಾಂತರಿಸಿದರು.

ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಪುತ್ತೂರಿನ ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ 23.25 ಎಕರೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನ  ಮೂರು ವರ್ಷದೊಳಗೆ ₹ 25 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಕೆಎಸ್‌ಸಿಎಯಿಂದ ನಿರ್ಮಾಣವಾಗಲಿದೆ. ಜಿಲ್ಲಾಧಿಕಾರಿ, ಪುತ್ತೂರು ಉಪವಿಭಾಗಾಧಿಕಾರಿ, ಕಂದಾಯ ಇಲಾಖೆ ಸರ್ವೆ ನಡೆಸಿ ಪರಿಶೀಲಿಸಿದ್ದು, ಜಾಗದ ಹಸ್ತಾಂತರ ಮಾಡಲಾಗುತ್ತಿದೆ. ಈ ಪ್ರಸ್ತಾವ ಸರ್ಕಾರದಲ್ಲಿ ಬಾಕಿಯಾಗಿತ್ತು. ಇದೀಗ ಅದಕ್ಕೆ ಚಾಲನೆ ನೀಡಿದ್ದು, 30 ವರ್ಷಗಳ ಅವಧಿಗೆ ಲೀಸ್ ಆಧಾರದಲ್ಲಿ ಜಾಗ ಹಸ್ತಾಂತರ ಮಾಡಲಾಗುತ್ತಿದೆ ಎಂದರು.

2 ಕ್ರೀಡಾಂಗಣ: ‘ಕೇವಲ ಒಂದು ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಪ್ರಸ್ತಾವ ಹಿಂದಿನ ಪ್ರಸ್ತಾವದಲ್ಲಿ ಇತ್ತು. ಇದಕ್ಕಾಗಿ ಆರಂಭದಲ್ಲಿ ನಾನು ವಿರೋಧ ವ್ಯಕ್ತಪಡಿಸಿದ್ದೆ. ಇದೀಗ ಪ್ರಮುಖವಾದ ಎರಡು ಷರತ್ತುಗಳೊಂದಿಗೆ 2 ಕ್ರೀಡಾಂಗಣ ನಿರ್ಮಾಣವಾಗಲಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದ ಜತೆಗೆ ಸ್ಥಳೀಯ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಕ್ರಿಕೆಟ್ ಆಟವಾಡಲು ಮತ್ತೊಂದು ಮೈದಾನ ನಿರ್ಮಾಣವಾಗಲಿದೆ. ಆದರೆ, ಈ ಮೈದಾನದಲ್ಲಿ ಓವರ್‌ಆರ್ಮ್‌ಗೆ ಮಾತ್ರ ಅವಕಾಶ ಇದೆ. ಅಂಡರ್‌ಆರ್ಮ್‌ ಕ್ರಿಕೆಟ್‌ಗೆ ಸೀಮಿತ ಚೌಕಟ್ಟು ಇದ್ದು, ಕ್ರಿಕೆಟ್‌ನಲ್ಲಿ ಸಾಧನೆ ಮಾಡಬೇಕಾದರೆ ಓವರ್‌ಆರ್ಮ್‌ ಅನಿವಾರ್ಯ ಎಂದು ಈ ತೀರ್ಮಾನಕ್ಕೆ ಬರಲಾಗಿದೆ’ ಎಂದರು.

ಉಪವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರ ಮಾತನಾಡಿ, ಈ ಮೈದಾನದಿಂದ ಯುವಕ್ರಿಕೆಟ್ ಪ್ರತಿಭೆಗಳಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದರು.

ಕೆಎಸ್‌ಸಿಎ ಅಧ್ಯಕ್ಷ ರಘುಪತಿ ಭಟ್ ಮಾತನಾಡಿ, ದಯಾನಂದ ಪೈ, ಬ್ರಿಜೇಶ್ ಪಟೇಲ್ ಅವರು ಇಲ್ಲಿ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣಕ್ಕಾಗಿ ಆರಂಭದಲ್ಲಿ ಪ್ರಯತ್ನಿಸಿದ್ದರು. ಯೂನಿಯನ್ ಕ್ರಿಕೆಟರ್ಸ್ ಸಂಸ್ಥೆ, ಜಿಲ್ಲಾಧಿಕಾರಿಯಾಗಿದ್ದ ರಾಜೇಂದ್ರಕುಮಾರ್, ಉಪವಿಭಾಗಾಧಿಕಾರಿಗಳು ಹಾಗೂ ಶಾಸಕರ ಸಹಕಾರದಿಂದ ಕನಸು ನನಸಾಗುವಂತಾಗಿದೆ. ಕೆಎಸ್‌ಸಿಎ ಸಭೆಯಲ್ಲಿ ತೀರ್ಮಾನಕೈಗೊಂಡು ಕೆಲಸ ಆರಂಭಿಸಲಾಗುವುದು ಎಂದರು.

ತಹಶೀಲ್ದಾರ್ ಶಿವಶಂಕರ್, ಕೆಎಸ್‌ಸಿಎ ಮಂಗಳೂರು ವಲಯದ ಸಂಯೋಜಕ ರತನ್, ಯೂನಿಯನ್ ಕ್ರಿಕೆಟರ್ಸ್ ಸಂಸ್ಥೆಯ ಕಾರ್ಯದರ್ಶಿ ವಿಶ್ವನಾಥ ನಾಯಕ್, ಉಪಾಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಕೋಶಾಧಿಕಾರಿ ಶ್ರೀಕಾಂತ್ ಕೊಳತ್ತಾಯ, ತರಬೇತುದಾರ ಎಲಿಯಾಸ್ ಪಿಂಟೊ, ಸದಸ್ಯರಾದ ವಾಮನ ಪೈ, ಪ್ರತಾಪ್, ಕಾಂಗ್ರೆಸ್‌ ಮುಖಂಡರಾದ ಎಂ.ಬಿ.ವಿಶ್ವನಾಥ ರೈ, ಉಮಾನಾಥ ಶೆಟ್ಟಿ ಪೆರ್ನೆ, ಅಮಲ ರಾಮಚಂದ್ರ, ಕೃಷ್ಣಪ್ರಸಾದ್ ಆಳ್ವ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT