ಭಾನುವಾರ, ಫೆಬ್ರವರಿ 5, 2023
21 °C
ಉಜಿರೆ, ಗೋಳ್ತಮಜಲಿನಲ್ಲಿ ನಿರ್ಮಾಣ l ಎರಡು ಘಟಕಗಳಿಗೆ ₹ 1.55 ಕೋಟಿ ವೆಚ್ಚ l ಉದ್ಘಾಟನೆಗೆ ಸಿದ್ಧ

ಗ್ರಾಮದಲ್ಲಿ ಮಾಲಿನ್ಯ ತಡೆಗೆ ಎಫ್‌ಎಸ್‌ಟಿಪಿ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಲವನ್ನು ವೈಜ್ಞಾನಿಕ ವಿಲೇವಾರಿ ಮಾಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಕೈಗೆತ್ತಿಕೊಂಡಿರುವ ಜಿಲ್ಲೆಯ ಎರಡು ಮಲತ್ಯಾಜ್ಯ ಸಂಸ್ಕರಣಾ ಘಟಕಗಳು (ಎಫ್‌ಎಸ್‌ಟಿಪಿ) ಕಾರ್ಯಾರಂಭಕ್ಕೆ ಸಿದ್ಧವಾಗಿವೆ.

ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಪ್ರಾಯೋಗಿಕವಾಗಿ 16 ಮಾದರಿ ಮಲತ್ಯಾಜ್ಯ ನಿರ್ವಹಣಾ ಘಟಕಗಳು ನಿರ್ಮಾಣಗೊಳ್ಳುತ್ತಿದ್ದು, ಅವುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಉಜಿರೆ ಮತ್ತು ಬಂಟ್ವಾಳ ತಾಲ್ಲೂಕಿನ ಗೋಳ್ತಮಜಲು ಗ್ರಾಮ ಪಂಚಾಯಿತಿ ಘಟಕಗಳು ಸೇರಿವೆ. ಪ್ರತಿ 8,000 ಕುಟುಂಬಗಳನ್ನು ಒಂದು ಕ್ಲಸ್ಟರ್ ಎಂದು ಪರಿಗಣಿಸಿ, 3 ಕೆಎಲ್‌ಡಿ ಸಾಮರ್ಥ್ಯದ ಎರಡು ಘಟಕಗಳು ಇಲ್ಲಿ ನಿರ್ಮಾಣವಾಗಿವೆ.

‘ಉಜಿರೆ ಮತ್ತು ಗೋಳ್ತಮಜಲಿನಲ್ಲಿ ಜಾಗ ಖರೀದಿಸಿ ಒಟ್ಟು ₹ 1.55 ಕೋಟಿ ವೆಚ್ಚದಲ್ಲಿ ಘಟಕಗಳನ್ನು ನಿರ್ಮಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ಪ್ರತಿ ಮನೆಯಲ್ಲಿ ಮಲ ಶೇಖರಣೆಗೆ ಒಂದೇ ಗುಂಡಿ ಇರುತ್ತದೆ. ಈ ಗುಂಡಿ ತುಂಬಿದ ಮೇಲೆ ಅದನ್ನು ಯಂತ್ರದ ಮೂಲಕ ಹೊರತೆಗೆದು (ಸಕ್‌ ಮಾಡಿ) ತೆರೆದ ಪ್ರದೇಶದಲ್ಲಿ ಬಿಡುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಈ ಮಾಲಿನ್ಯ ತಪ್ಪಿಸಿ, ಗ್ರಾಮೀಣ ಪ್ರದೇಶದ ಶುಚಿತ್ವ ಕಾಪಾಡಲು ಎಫ್‌ಎಸ್‌ಟಿಪಿ ಘಟಕ ನಿರ್ಮಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ತಿಳಿಸಿದರು.

‘ಈಗ ಇರುವ ಪದ್ಧತಿಯಲ್ಲಿ ಕೆಲವೊಮ್ಮೆ ಯಂತ್ರಗಳ ಅಲಭ್ಯತೆ, ಕೆಲವು ಮನೆಗಳಲ್ಲಿ ನಿರ್ಲಕ್ಷ್ಯದಿಂದ ಪರಿಸರ ಮಲಿನವಾಗುತ್ತದೆ. ಸುತ್ತಲೂ ದುರ್ವಾಸನೆ ಹರಡುತ್ತದೆ. ಎಫ್‌ಎಸ್‌ಟಿಪಿ ಘಟಕ ಕಾರ್ಯಾರಂಭ ಮಾಡಿದ ಮೇಲೆ, ಗ್ರಾಮ ಪಂಚಾಯಿತಿ ಹಾಗೂ ಹೊರಗುತ್ತಿಗೆ ಮೂಲಕ ಪಡೆಯುವ ಖಾಸಗಿ ವಾಹನಗಳು ನಿಗದಿತ ವೇಳಾಪಟ್ಟಿಯಂತೆ ಗ್ರಾಮಗಳಿಗೆ ಭೇಟಿ ನೀಡುವುದರಿಂದ ಇಂತಹ ಸಂದರ್ಭಗಳನ್ನು ತಪ್ಪಿಸಬಹುದು. ಪ್ರಸ್ತುತ ನಿರ್ಮಾಣವಾಗಿರುವ ಎರಡು ಘಟಕಗಳು 45 ಗ್ರಾಮ ಪಂಚಾಯಿತಿಗಳ ವ್ಯಾಪ್ತಿ ಹೊಂದಿವೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

32 ಘಟಕಗಳ ಗುರಿ: ಜಿಲ್ಲೆಯಲ್ಲಿ 32 ಘಟಕಗಳ ಗುರಿ ಹೊಂದಲಾಗಿದ್ದು, ಈಗ ಎರಡು ಸಿದ್ಧವಾಗಿವೆ. ಬಂಟ್ವಾಳ–7, ಬೆಳ್ತಂಗಡಿ–7, ಮಂಗಳೂರು–3, ಮೂಡುಬಿದಿರೆ–2, ಉಳ್ಳಾಲ–3, ಮೂಲ್ಕಿ–1, ಪುತ್ತೂರು–3, ಕಡಬ–3, ಸುಳ್ಯ–3 ಘಟಕಗಳ ನಿರ್ಮಾಣಕ್ಕೆ
ಜಿಲ್ಲಾ ಪಂಚಾಯಿತಿ ಯೋಜನೆ ರೂಪಿಸುತ್ತಿದೆ.

‘ಒಣ ತ್ಯಾಜ್ಯದಿಂದ ಗೊಬ್ಬರ’

‘ಗೋಳ್ತಮಜಲು ಘಟಕದಲ್ಲಿ ಈಗಾಗಲೇ ಪ್ರಾಯೋಗಿಕ ‍ಪರೀಕ್ಷೆ ನಡೆಸಲಾಗಿದೆ. ಯಂತ್ರಗಳು ಸಂಗ್ರಹಿಸಿ ತರುವ ಮಲವನ್ನು ಇಲ್ಲಿ ಮೂರು ಹಂತಗಳಲ್ಲಿ ವಿಲೇವಾರಿ ಮಾಡಲಾಗುತ್ತದೆ. ಮೊದಲ ಹಂತದ ಡ್ರೈಯಿಂಗ್ ಬೆಡ್‌ನಲ್ಲಿ ಹಾಕಿದಾಗ ಘನವಸ್ತು ಅಲ್ಲೇ ಉಳಿದು, ದ್ರವ ಮಾತ್ರ ಎರಡನೇ ಹಂತಕ್ಕೆ ಹರಿದು ಹೋಗುತ್ತದೆ. ಆಮ್ಲಜನಕ ರಹಿತವಾಗಿ ಇಲ್ಲಿ ಸಂಸ್ಕರಣೆಯಾಗಿ, ಮೂರನೇ ಹಂತಕ್ಕೆ ಹೋಗುತ್ತದೆ. ಇಲ್ಲಿಂದ ಶುದ್ಧ ನೀರು ಹೊರಬರುತ್ತದೆ. ಅದನ್ನು ಉದ್ಯಾನಗಳಿಗೆ, ಗಿಡಗಳಿಗೆ ಬಳಕೆ ಮಾಡಬಹುದು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಬಂಟ್ವಾಳ ಉಪವಿಭಾಗದ ಸಹಾಯಕ ಎಂಜಿನಿಯರ್ ಕುಶಕುಮಾರ್ ವಿವರಿಸಿದರು.

‘ದಿನಕ್ಕೆ ಸುಮಾರು 3,000 ಲೀಟರ್ ಮಲತ್ಯಾಜ್ಯ ಸಂಗ್ರಹದ ಅಂದಾಜು ಲೆಕ್ಕ ಹಾಕಿ ಘಟಕದಲ್ಲಿ 12 ಬೆಡ್ ರಚಿಸಲಾಗಿದೆ. ಪ್ರತಿದಿನ ಒಂದು ಬೆಡ್ ಬಳಕೆ ಮಾಡಿಕೊಳ್ಳಲಾಗುತ್ತದೆ. ವಾರಕ್ಕೊಮ್ಮೆ ಇದೇ ಬೆಡ್ ಬಳಕೆ ಪುನರಾವರ್ತನೆಯಾಗುತ್ತದೆ. ಆರು ತಿಂಗಳುಗಳ ನಂತರ, ಮೊದಲ ಆರು ಬೆಡ್‌ಗಳನ್ನು ಒಣಗಲು ಬಿಟ್ಟು, ಉಳಿದ ಆರು ಬೆಡ್‌ಗಳನ್ನು ಬಳಸಲಾಗುತ್ತದೆ. ಒಣಗಿದ ತ್ಯಾಜ್ಯವನ್ನು ಗೊಬ್ಬರವಾಗಿ ಬಳಸಬಹುದು. ಘಟಕದ ಸುತ್ತ ವಾಸನೆ ಬರದಂತೆ ಸಸಿಗಳನ್ನು ನಾಟಿ ಮಾಡುವ, ಸಕಾಲದಲ್ಲಿ ಸ್ವಚ್ಛಗೊಳಿಸುವ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು