ಶನಿವಾರ, ಜೂನ್ 6, 2020
27 °C
ಯಕ್ಷಗಾನ ತಾಳಮದ್ದಳೆ

ಕೊರೊನಾ ವಿರುದ್ಧ ಜನಜಾಗೃತಿ | ‘ನಾರಾಯಣಾಸ್ತ್ರ - ಕೊರೊನಾಸ್ತ್ರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಹಾಮಾರಿ ಕೊರೊನಾ ಸೋಂಕಿನಿಂದ ಪಾರಾಗಲು ಮುನ್ನೆಚ್ಚರಿಕೆಯ ಸಂದೇಶಗಳು ವಿವಿಧ ಮಾಧ್ಯಮಗಳಲ್ಲಿ ನಿರಂತರ ಹರಿದಾಡುತ್ತಿವೆ. ಇದಕ್ಕೆ ಯಕ್ಷಗಾನವೂ ಹೊರತಾಗಿಲ್ಲ. ಈ ಹಿಂದೆ ‘ಘೋರ ಮಾರಕ‘, ‘ಗುನ್ಯಾಸುರ ವಧೆ‘, ‘ಸಾವಯವ ವಿಜಯ‘ ಮೊದಲಾದ ಜನಜಾಗೃತಿ ಯಕ್ಷಗಾನಗಳನ್ನು ನೀಡಿದ ಕಲಾವಿದರ ತಂಡ, ಇದೀಗ ಕೋವಿಡ್-19 ‘ಕೊರೊನಾ’ ಸಾಂಕ್ರಾಮಿಕ ರೋಗದ ವಿರುದ್ಧ ಜಾಗೃತಿ ಸಂದೇಶ ನೀಡುವ ವಿಶೇಷ ಯಕ್ಷಗಾನ ತಾಳಮದ್ದಳೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸುತ್ತಿದೆ.

ಮಹಾಭಾರತ ಯುದ್ಧದಲ್ಲಿ ದ್ರೋಣ ವಧೆಯಾದ ಬಳಿಕ ಕುಪಿತನಾದ ಅಶ್ವತ್ಥಾಮನು, ಮಾರಣಾಂತಿಕ ನಾರಾಯಣಾಸ್ತ್ರ ಪ್ರಯೋಗ ಮಾಡಿದಾಗ, ಶ್ರೀಕೃಷ್ಣನ ಮುನ್ನೆಚ್ಚರಿಕೆಯಂತೆ ಪಾಂಡವರು ಆ ಮಹಾಸ್ತ್ರಕ್ಕೆ ಶರಣಾಗಿ ಜೀವ ಉಳಿಸಿಕೊಂಡಿದ್ದರು. ಘಟನೆಗೆ ಸಂವಾದಿಯಾಗಿ ‘ನಾರಾಯಣಾಸ್ತ್ರ - ಕೊರೊನಾಸ್ತ್ರ’ ಎಂಬ ಪ್ರಸಂಗ ಹೆಣೆಯಲಾಗಿದೆ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಕಥಾ ಸಂಯೋಜನೆಗೆ ಡಾ.ದಿನಕರ ಎಸ್. ಪಚ್ಚನಾಡಿ ಹಾಡುಗಳನ್ನು ರಚಿಸಿದ್ದಾರೆ. ವಿದ್ಯಾಧರ ಶೆಟ್ಟಿ ಕಾರ್ಯಕ್ರಮವನ್ನು ನಿರ್ಮಿಸಿ ಪ್ರಸ್ತುತ ಪಡಿಸಿದ್ದಾರೆ.

ಈ ಜನಜಾಗೃತಿ ಯಕ್ಷಗಾನ ತಾಳಮದ್ದಳೆಯಲ್ಲಿ ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ, ಅರ್ಥದಾರಿ ಭಾಸ್ಕರ ರೈ ಕುಕ್ಕುವಳ್ಳಿ, ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಪ್ರಮುಖ ಪಾತ್ರವಹಿಸಿದ್ದಾರೆ. ಡಾ.ದಿನಕರ ಎಸ್. ಪಚ್ಚನಾಡಿ, ಸದಾಶಿವ ಆಳ್ವ ತಲಪಾಡಿ, ವಿದ್ಯಾಧರ ಶೆಟ್ಟಿ, ಪ್ರಶಾಂತ ಸಿ.ಕೆ. ಅವರೂ ಅರ್ಥಧಾರಿಗಳಾಗಿದ್ದಾರೆ. ಹಿಮ್ಮೇಳದಲ್ಲಿ ಭಾಗವತರಾಗಿ ದೇವಿಪ್ರಸಾದ ಆಳ್ವ ತಲಪಾಡಿ ಹಾಗೂ ಚೆಂಡೆ-ಮದ್ದಳೆಯಲ್ಲಿ ರೋಹಿತ್ ಉಚ್ಚಿಲ್ ಮತ್ತು ರಾಜೇಶ್ ಜೆಪ್ಪು ಕುಡುಪಾಡಿ ಸಹಕರಿಸಿದ್ದಾರೆ. ಶಿವಶಂಕರ್ ಮತ್ತು ಧನುಷ್ ಪೊಸಕುರಲ್ ಚಿತ್ರೀಕರಣ, ಕೃತಿ ಸೌಂಡ್ಸ್‌ನ ಎಡ್ವರ್ಡ್ ಲೋಬೋ ತೊಕ್ಕೊಟ್ಟು ಧ್ವನಿ-ಬೆಳಕು ನೀಡಿದ್ದು, ಸ್ಥಳಾವಕಾಶವನ್ನು ಕುಂಪಲ ಬಾಲಕೃಷ್ಣ ಮಂದಿರದವರು ನೀಡಿದ್ದಾರೆ.

ಲಾಕ್‌ಡೌನ್‌ ಅವಧಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ, ನಿರ್ಮಿಸಲಾಗಿರುವ ಈ ಕಾರ್ಯಕ್ರಮ ತೊಕ್ಕೊಟ್ಟಿನ ಪೊಸಕುರಲ್ ಸುದ್ದಿವಾಹಿನಿ, ಮಂಗಳೂರಿನ ರೆಡಿಯೊ ಸಾರಂಗ್ ಸಮುದಾಯ ಬಾನುಲಿ ಹಾಗೂ ಯೂಟ್ಯೂಬ್, ಫೇಸ್‌ಬುಕ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು