ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡದಲ್ಲಿ ಒಂದೇ ದಿನ 147 ಪ್ರಕರಣ ದೃಢ

20 ಸಾವಿರ ದಾಟಿದ ಮಾದರಿ ಸಂಗ್ರಹ: ಐಎಲ್‌ಐ ಪ್ರಕರಣ ಹೆಚ್ಚು
Last Updated 5 ಜುಲೈ 2020, 15:18 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ ಗರಿಷ್ಠ 147 ಮಂದಿಗೆ ಕೋವಿಡ್‌–19 ದೃಢವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,242ಕ್ಕೆ ಏರಿದೆ.

ಭಾನುವಾರ ಸೋಂಕು ದೃಢಪಟ್ಟಿರುವ 147 ಮಂದಿಯ ಪೈಕಿ, 35 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದೆ. ಇನ್ನು ಐಎಲ್‌ಐನ 40 ಹಾಗೂ ಎಸ್‌ಎಆರ್‌ಐನ 2 ಪ್ರಕರಣಗಳು ವರದಿಯಾಗಿವೆ. ರ‍್ಯಾಂಡಮ್‌ ತಪಾಸಣೆಯಲ್ಲಿ 48 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಶಸ್ತ್ರಚಿಕಿತ್ಸೆಗೆ ಬಂದಿದ್ದ ಐವರಲ್ಲಿ ಹಾಗೂ ಹಡಗಿನ ಮೂಲಕ ಮಲೇಷ್ಯಾ ಪ್ರವಾಸ ಮಾಡಿದ್ದ ಇಬ್ಬರಿಗೆ ಕೋವಿಡ್–19 ತಗಲಿದೆ.

ಐಸಿಯು ಚಿಕಿತ್ಸೆ ಹೆಚ್ಚಳ: ವೆನ್ಲಾಕ್‌ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 10ಕ್ಕೆ ಏರಿದೆ. 57 ಹಾಗೂ 50 ವರ್ಷದ ಮಹಿಳೆಯರಿಗೆ ಐಸಿಯುನಲ್ಲಿ ವೆಂಟಿಲೇಟರ್‌ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇವರಿಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

86, 84, 64 ವರ್ಷದ ವೃದ್ಧೆಯರು, 72, 65 ವರ್ಷದ ವೃದ್ಧರು, 52 ವರ್ಷದ ಇಬ್ಬರು ಪುರುಷರು, 31 ವರ್ಷದ ವ್ಯಕ್ತಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.

38 ಮಂದಿ ಗುಣಮುಖ: ಜಿಲ್ಲೆಯಲ್ಲಿ ಒಟ್ಟು 38 ಮಂದಿ ಗುಣಮುಖರಾಗಿದ್ದು, ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

2 ವರ್ಷದ ಗಂಡು ಮಗು, 6 ವರ್ಷದ ಇಬ್ಬರು ಬಾಲಕರು, 15 ಮತ್ತು 17 ವರ್ಷದ ಬಾಲಕಿಯರು, 80, 65, 62, 60 ವರ್ಷದ ವೃದ್ಧರು ಗುಣಮುಖರಾದವರಲ್ಲಿ ಸೇರಿದ್ದಾರೆ.

ಲಕ್ಷಣ ಇಲ್ಲದವರಿಗೆ ಮನೆಯಲ್ಲೇ ಚಿಕಿತ್ಸೆ

ರಾಜ್ಯ ಸರ್ಕಾರದ ಸುತ್ತೋಲೆಯಂತೆ ರೋಗ ಲಕ್ಷಣ ಇಲ್ಲದ ಕೋವಿಡ್–19 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲು ಮಾರ್ಗಸೂಚಿ ಹೊರಡಿಸಲಾಗಿದೆ.

ಅದರಂತೆ ಕೋವಿಡ್–19ನ ರೋಗ ಲಕ್ಷಣ ಇಲ್ಲದವರಿಗೆ ಅವರ ಮನೆಯಲ್ಲೇ ಪ್ರತ್ಯೇಕವಾಗಿ ಆರೈಕೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೇ ರೋಗಿಯ ಚಿಕಿತ್ಸೆಗೆ ನೆರವಾಗಲು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT