ಬುಧವಾರ, ಆಗಸ್ಟ್ 4, 2021
23 °C
ಸಂಪರ್ಕ ಪತ್ತೆಯಾಗದ ಕೋವಿಡ್‌-–19 ಪ್ರಕರಣಗಳ ಸಂಖ್ಯೆ ಹೆಚ್ಚಳ

ದಕ್ಷಿಣ ಕನ್ನಡದಲ್ಲಿ ಸೋಂಕು ಸಮುದಾಯಕ್ಕೆ ಹಬ್ಬುತ್ತಿರುವ ಅನುಮಾನ

ಸುಬ್ರಹ್ಮಣ್ಯ ವಿ.ಎಸ್‌. Updated:

ಅಕ್ಷರ ಗಾತ್ರ : | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸಂಪರ್ಕ ಪತ್ತೆಯಾಗದ ಕೋವಿಡ್‌–19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸೋಂಕು ಸಮುದಾಯಕ್ಕೆ ಹಬ್ಬಿರುವ ಅನುಮಾನ ವ್ಯಕ್ತವಾಗುತ್ತಿದೆ. ರ‍್ಯಾಂಡಮ್‌ ಪರೀಕ್ಷೆ ನಡೆದಿರುವಲ್ಲಿ ಹೆಚ್ಚಿನ ವರದಿಗಳು ಪಾಸಿಟಿವ್‌ ಆಗಿರುವುದು ವೈದ್ಯಕೀಯ ವಲಯವನ್ನು ಚಿಂತೆಗೆ ದೂಡಿದೆ.

ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸೋಂಕು ದೃಢಪಡುತ್ತಿರುವ ಪ್ರಕರಣಗಳ ಸಂಖ್ಯೆ ಏರುಮುಖವಾಗಿದೆ. ವಿಷಮ ಶೀತ ಜ್ವರ ಮತ್ತು ಉಸಿರಾಟದ ತೀವ್ರ ತೊಂದರೆಯಿಂದ ಆಸ್ಪತ್ರೆಗಳಿಗೆ ದಾಖಲಾಗುವ ಬಹುತೇಕರಲ್ಲಿ ಕೋವಿಡ್‌ ಸೋಂಕು ದೃಢಪಡುತ್ತಿದೆ. ವಿವಿಧ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖ
ಲಾಗುವವರಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಇವೆಲ್ಲವೂ ಜಿಲ್ಲೆಯಲ್ಲಿ ಸೋಂಕು ಸಮುದಾಯದೊಳಕ್ಕೆ ವ್ಯಾಪಿಸಿರುವುದಕ್ಕೆ ಸಾಕ್ಷಿ ಎಂದು ಹೇಳುತ್ತಾರೆ ಹಿರಿಯ ವೈದ್ಯರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 97 ಮಂದಿಗೆ ಕೋವಿಡ್‌–19 ಸೋಂಕು ತಗುಲಿರುವುದು ಶುಕ್ರವಾರ ದೃಢಪಟ್ಟಿದೆ. ಈ ಪೈಕಿ 25 ಮಂದಿಗೆ ಇತರ ಸೋಂಕಿತರ ನೇರ ಸಂಪರ್ಕವಿದ್ದರೆ, ಮೂವರು ಶಾರ್ಜಾದಿಂದ ಹಿಂತಿರುಗಿರುವವರು. ಉಳಿದ 69 ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ. ಈ ಪೈಕಿ 28 ವಿಷಮ ಶೀತ ಜ್ವರದ ಪ್ರಕರಣಗಳು. ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಏಳು ಮಂದಿಯಲ್ಲೂ ಸೋಂಕು ದೃಢಪಟ್ಟಿದ್ದು, ಮೂಲ ತಿಳಿದಿಲ್ಲ.

ಪರೀಕ್ಷೆಗೊಳಗಾದ ಬಹುತೇಕರಲ್ಲಿ ಸೋಂಕು: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕೋವಿಡ್‌ ಸೋಂಕು ಪ್ರಕರಣಗಳು ಪತ್ತೆಯಾಗಿರುವ ಕಾರಣದಿಂದ ಉಳ್ಳಾಲ ನಗರಸಭೆ ವ್ಯಾಪ್ತಿಯ ಕೋಡಿ, ಕೋಟೆಪುರ, ಆಝಾದ್‌ ನಗರ, ಮುಕ್ಕಚ್ಚೇರಿ, ಸುಭಾಷ್‌ನಗರ ಮತ್ತಿತರ ಜನವಸತಿ ಪ್ರದೇಶಗಳಲ್ಲಿ ರ‍್ಯಾಂಡಮ್‌ ಸೋಂಕು ಪರೀಕ್ಷೆ ನಡೆಸಲಾಗಿತ್ತು. ಹೀಗೆ ಗಂಟಲಿನ ದ್ರವದ ಮಾದರಿ ನೀಡಿದ್ದ ಬಹುತೇಕರಲ್ಲಿ ಸೋಂಕು ಇರುವುದು ಖಚಿತವಾಗಿದೆ.

ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ 38 ಮಂದಿಗೆ ಸೋಂಕು ತಗುಲಿರುವುದು ಶುಕ್ರವಾರ ಲಭಿಸಿರುವ ವರದಿಗಳಿಂದ ದೃಢಪಟ್ಟಿದೆ. ಈ ಪೈಕಿ 24 ಮಂದಿ ರ‍್ಯಾಂಡಮ್‌ ಪರೀಕ್ಷೆ ವೇಳೆ ಮಾದರಿಗಳನ್ನು ನೀಡಿದ್ದವರು. ಲಾಕ್‌ಡೌನ್‌ ಅವಧಿಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಹಲವು ರಾಜಕಾರಣಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

‘ರ‍್ಯಾಂಡಮ್‌ ಪರೀಕ್ಷೆ ನಡೆಸಿದವರಲ್ಲಿ ಹೆಚ್ಚಿನವರಿಗೆ ಸೋಂಕು ಇರುವುದು ಪತ್ತೆಯಾಗುತ್ತಿದೆ. ನಗರ ಪ್ರದೇಶದ ಹೆಚ್ಚಿನ ಕಡೆಗಳಲ್ಲಿ ಸೋಂಕಿತರು ಪತ್ತೆಯಾ
ಗುತ್ತಿದ್ದಾರೆ. ಸೋಂಕಿತರ ನೇರ ಸಂಪರ್ಕ ಇಲ್ಲದವರಲ್ಲೇ ಹೆಚ್ಚು ಪಾಸಿ ಟಿವ್‌ ವರದಿಗಳು ಬರುತ್ತಿವೆ. ಈ ಎಲ್ಲ ಮಾಹಿತಿಯನ್ನೂ ವಿಶ್ಲೇಷಣೆ ಮಾಡಿದಾಗ ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಸಮುದಾಯಕ್ಕೆ ಹಬ್ಬಿರುವ ಸಾಧ್ಯತೆಯೇ ಹೆಚ್ಚು ಎಂದು ಹೇಳಬಹುದು’ ಎನ್ನುತ್ತಾರೆ ಆರೋಗ್ಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹಿರಿಯ ವೈದ್ಯರೊಬ್ಬರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು