ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ 2,300ಕ್ಕೂ ಅಧಿಕ ಹಾಸಿಗೆಗಳು ಖಾಲಿ

ಕೋವಿಡ್ ಆರೈಕೆ ಕೇಂದ್ರ: ಯಥಾಸ್ಥಿತಿಯಲ್ಲಿಡಲು ಯೋಚನೆ
Last Updated 25 ಜೂನ್ 2021, 3:03 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್ ಪ್ರಕರಣಗಳು ಇಳಿಮುಖ ಆಗುತ್ತಿರುವುದರಿಂದ ಜಿಲ್ಲೆಯಲ್ಲಿರುವ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಬಹುತೇಕ ಹಾಸಿಗೆಗಳು ಖಾಲಿ ಇವೆ. ಆದರೆ, ಮೂರನೇ ಅಲೆ ಬರುವ ಸಾಧ್ಯತೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿರುವ ಕಾರಣಕ್ಕೆ ಆರೋಗ್ಯ ಇಲಾಖೆ, ಆರೈಕೆ ಕೇಂದ್ರಗಳನ್ನು ಯಥಾಸ್ಥಿತಿಯಲ್ಲಿಡಲು ಯೋಚಿಸುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 35 ಕೋವಿಡ್ ಆರೈಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಗರಿಷ್ಠ ಕೇಂದ್ರಗಳು ಮಂಗಳೂರಿನಲ್ಲೇ ಇವೆ. ಈ ಎಲ್ಲ ಕೇಂದ್ರಗಳಿಂದ ಒಟ್ಟು 2,680 ಹಾಸಿಗೆಗಳ ವ್ಯವಸ್ಥೆ ಇದೆ. ಪ್ರಸ್ತುತ 280 ಜನರು (ಬುಧವಾರದ ವರೆಗೆ) ಮಾತ್ರ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇ 81ರಷ್ಟು ರೋಗಿಗಳು ಹೋಂ ಐಸೊಲೇಷನ್‌ನಲ್ಲಿದ್ದರೆ, ಶೇ 12.5 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶೇ 6.5ರಷ್ಟು ಕೋವಿಡ್ ಬಾಧಿತರು ಆರೈಕೆ ಕೇಂದ್ರದಲ್ಲಿದ್ದಾರೆ.

‘ಕೋವಿಡ್ ಎರಡನೇ ಅಲೆಯ ಆರಂಭದಲ್ಲಿ ರೋಗ ಲಕ್ಷಣ ಗಳಿದ್ದವರೂ ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದರು. ಆಸ್ಪತ್ರೆಯ ವಾತಾವರಣ, ಅಲ್ಲಿನ ಯಂತ್ರೋಪಕರಣಗಳು, ಕೋವಿಡ್ ವಾರ್ಡ್‌ನಲ್ಲಿ ಒಂಟಿಯಾಗಿ ಇರಬೇಕಾದ ಕಾರಣಕ್ಕೆ ಹಲವರು ದಾಖಲಾಗಲು ಹಿಂಜರಿಕೆ ವ್ಯಕ್ತಪಡಿಸುತ್ತಿದ್ದರು. ಆ ಸಂದರ್ಭದಲ್ಲಿ ಶೇ 87ರಷ್ಟು ಜನರು ಹೋಂ ಐಸೊಲೇಷನ್‌ನಲ್ಲಿ ಇದ್ದರು. ಆಗ ಎಲ್ಲ ರೋಗಿಗಳ ನಿರಂತರ ನಿಗಾ ಇಲಾಖೆಗೆ ಸವಾಲಾಯಿತು. ವೈದ್ಯಕೀಯ ಕಾಲೇಜುಗಳ ಜತೆ ಒಪ್ಪಂದ ಮಾಡಿಕೊಂಡು ವೈದ್ಯರ ತಂಡವನ್ನು ರೋಗಿಗಳ ಮನೆಗೇ ಕಳುಹಿಸಿ, ತಪಾಸಣೆ ನಡೆಸಲಾಯಿತು’ ಎನ್ನುತ್ತಾರೆ ಆರೋಗ್ಯ ಇಲಾಖೆ ಪ್ರಮುಖರು.

‘ರೋಗಿಗಳ ದೈಹಿಕ ತಪಾಸಣೆ ನಡೆಸಿದ ವೈದ್ಯರ ತಂಡ ನಿಗದಿಪಡಿಸಿದ ಆಧಾರದ ಮೇಲೆ, ಆಸ್ಪತ್ರೆ, ಆರೈಕೆ ಕೇಂದ್ರ ಅಥವಾ ಹೋಂ ಐಸೊಲೇಷನ್ ಇವುಗಳಲ್ಲಿ ಯಾವುದು ಉತ್ತಮ ಎಂಬುದನ್ನು ನಿರ್ಧರಿಸಲಾಯಿತು. ಮೊಬೈಲ್‌ ಫೋನ್, ಇಂಟರ್‌ನೆಟ್ ಸಂಪರ್ಕ ಇಲ್ಲದ ಕುಗ್ರಾಮಗಳಲ್ಲಿ ರಾತ್ರಿಯ ವೇಳೆ ರೋಗಿಯ ಅನಾರೋಗ್ಯ ಉಲ್ಬಣಿಸಿದರೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಇಂತಹ ರೋಗಿಗಳನ್ನು ಆರೈಕೆ ಕೇಂದ್ರಕ್ಕೆ ಸೇರಿಸಲು ಸಲಹೆ ನೀಡಲಾಯಿತು’ ಎನ್ನುತ್ತಾರೆ ಅವರು.

‘ಆರೈಕೆ ಕೇಂದ್ರಗಳಲ್ಲಿ ದಿನವಿಡೀ ಒಬ್ಬರು ವೈದ್ಯರು ಲಭ್ಯ ಇರುವುದರಿಂದ, ರೋಗಿಗಳ ಆರೋಗ್ಯದಲ್ಲಿ ಏರುಪೇರು ಆದರೆ ನಿಗಾವಹಿಸಲು ಅನುಕೂಲವಾಗುತ್ತದೆ ಎಂಬ ತಿಳಿವಳಿಕೆ ನೀಡಿದ ಪರಿಣಾಮ, ಆರೈಕೆ ಕೇಂದ್ರಕ್ಕೆ ಬರುವವರ ಸಂಖ್ಯೆ ಹೆಚ್ಚಾಯಿತು’ ಎಂದು ಕೋವಿಡ್ ನೋಡಲ್ ಅಧಿಕಾರಿ ಡಾ. ಅಶೋಕ್ ತಿಳಿಸಿದರು.

‘ವೈರಾಣು ಕಾಯಿಲೆಗಳು ಉಳಿದ ಕಾಯಿಲೆಗಳಿಗಿಂತ ಭಿನ್ನ. ಅದರ ತೀವ್ರತೆ ಮೊದಲೇ ನಿರ್ಧರಿಸಲು ಸಾಧ್ಯ ವಾಗುವುದಿಲ್ಲ. ಒಮ್ಮೆಲೇ ರೋಗಿಗಳ ಸಂಖ್ಯೆ ಹೆಚ್ಚಾದರೆ, ಆ ಸಂದರ್ಭದಲ್ಲಿ ಆರೈಕೆ ಕೇಂದ್ರಗಳನ್ನು ಅಣಿಗೊಳಿಸಲು ಕಷ್ಟವಾಗುತ್ತದೆ. ಹೀಗಾಗಿ, ಈಗ ಇರುವ ಆರೈಕೆ ಕೇಂದ್ರ ಗಳನ್ನು ಹಾಗೆಯೇ ಉಳಿಸಿ ಕೊಳ್ಳಲು ಆರೋಗ್ಯ ಇಲಾಖೆ ಯೋಚಿಸಿದೆ. ಜಿಲ್ಲಾಡಳಿತ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುತ್ತದೆ’ ಎಂದು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT