ಶುಕ್ರವಾರ, ಆಗಸ್ಟ್ 12, 2022
22 °C
ಅಭಿಯಾನ: ಬುಧವಾರ ರಾಜ್ಯದಲ್ಲಿ ದ್ವಿತೀಯ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ

ಕೋವಿಡ್ ತಡೆ ಲಸಿಕೆ: ಗರಿಷ್ಠ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್ ನಿರೋಧಕ ಲಸಿಕೆ ಅಭಿಯಾನದಲ್ಲಿ ಜಿಲ್ಲೆಯಲ್ಲಿ ಗಮನಾರ್ಹ ಸಾಧನೆಯಾಗುತ್ತಿದೆ. ಲಸಿಕೆ ನೀಡುವುದರಲ್ಲಿ ಬುಧವಾರ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿತ್ತು.

ಬೆಂಗಳೂರು ಮಹಾನಗರ ಪಾಲಿಕೆ ಮೊದಲನೇ ಸ್ಥಾನ, ದಕ್ಷಿಣ ಕನ್ನಡ 2ನೇ ಸ್ಥಾನ ಹಾಗೂ ಉಡುಪಿ ಮೂರನೇ ಸ್ಥಾನ ಪಡೆದಿದ್ದವು. ಬುಧವಾರ ಜಿಲ್ಲೆಯಲ್ಲಿ 17,109 ಜನರಿಗೆ ಲಸಿಕೆ ನೀಡಲಾಗಿದೆ. ಇದು ಜಿಲ್ಲೆಯಲ್ಲಿ ಈವರೆಗಿನ ಗರಿಷ್ಠ ದಾಖಲೆಯಾಗಿದೆ. ಕಳೆದ ವಾರ ಕೂಡ ನಾಲ್ಕು ಬಾರಿ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿತ್ತು.

‘ಹಿಂದಿನ ವಾರ ಗರಿಷ್ಠ 16,429 ಜನರಿಗೆ ಲಸಿಕೆ ನೀಡಲಾಗಿತ್ತು. ಪ್ರತಿದಿನ ಜಿಲ್ಲೆಯಲ್ಲಿ ನಡೆದ ಲಸಿಕೆ ಅಭಿಯಾನದ ಅಂಕಿ–ಸಂಖ್ಯೆ ಆಧರಿಸಿ, ರಾಜ್ಯದಲ್ಲಿ ಮೊದಲ ಮೂರು ಸ್ಥಾನ ಪಡೆದ ಜಿಲ್ಲೆಗಳ ಹೆಸರನ್ನು ಪ್ರಕಟಿಸಲಾಗುತ್ತದೆ’ ಎಂದು ನೋಡಲ್ ಅಧಿಕಾರಿ ಡಾ. ರಾಜೇಶ್ ತಿಳಿಸಿದರು.

‘ಕೋವಿಡ್ ಎರಡನೇ ಅಲೆಯ ಪೂರ್ವದಲ್ಲಿ ಲಸಿಕೆಯ ಪೂರೈಕೆ ಸಾಕ ಷ್ಟಿದ್ದರೂ, ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದರು. ಈಗ ಲಸಿಕೆ ಯ ಅಗತ್ಯ ಜನರಿಗೆ ಮನವರಿಕೆಯಾಗಿದೆ. ಹೀಗಾಗಿ, ಲಸಿಕೆಯ ಬೇಡಿಕೆ ಹೆಚ್ಚಿದೆ. ಲಸಿಕೆ ಪಡೆಯಲು, ಆನ್‌ಲೈನ್ ಮೂಲಕ ನೋಂದಣಿ ಕಡ್ಡಾಯ ಎಂದು ಜನರಿಗೆ ಗೊತ್ತಾಗಿದೆ. ನೋಂದಣಿ ಮಾಡಿಕೊಂಡು, ಶೆಡ್ಯೂಲ್ ಮಾಡಿದ ಮೇಲೆಯೇ ಲಸಿಕೆ ಪಡೆಯಲು ಜನರು ಬರುತ್ತಿದ್ದಾರೆ. ಇದರಿಂದ ಲಸಿಕಾ ಕೇಂದ್ರಗಳಲ್ಲಿ ಆಗುತ್ತಿದ್ದ ಅನಗತ್ಯ ದಟ್ಟಣೆಯೂ ಕಡಿಮೆಯಾಗಿದೆ’ ಎಂದು ವಿವರಿಸಿದರು.

‘ಬೇಡಿಕೆಗೆ ಅನುಗುಣವಾಗಿ ಜಿಲ್ಲೆಯಿಂದ ಎಲ್ಲ ತಾಲ್ಲೂಕು ಆರೋಗ್ಯ ಇಲಾಖೆಗಳಿಗೆ ಲಸಿಕೆ ಪೂರೈಕೆ ಆಗುತ್ತದೆ. ಜಿಲ್ಲೆಯಲ್ಲಿ ಒಟ್ಟು 90 ಸರ್ಕಾರಿ ಲಸಿಕಾ ಕೇಂದ್ರಗಳು ಇವೆ. ಕೆಎಂಸಿ, ಕೆ.ಎಸ್.ಹೆಗ್ಡೆ ಮತ್ತು ಕಣಚೂರಿನ ಮೂರು ಖಾಸಗಿ ಕೇಂದ್ರಗಳಲ್ಲಿ ಲಸಿಕೆ ಸಿಗುತ್ತದೆ’ ಎಂದು ಹೇಳಿದರು.

ಗ್ರಾಮೀಣದಲ್ಲೂ ಬೇಡಿಕೆ: ಜಿಲ್ಲಾಧಿಕಾರಿ

ಲಸಿಕೆ ಅಭಿಯಾನದಲ್ಲಿ ಶೇ 75ರಷ್ಟು ಆನ್‌ಲೈನ್‌ ನೋಂದಣಿ ಮತ್ತು ಶೇ 25ರಷ್ಟು 70 ವರ್ಷ ಮೇಲಿನವರಿಗೆ ಆಫ್‌ಲೈನ್ ಮೂಲಕ ನೀಡುವ ಕಾರ್ಯಕ್ರಮನ್ನು ಜಿಲ್ಲಾಡಳಿತ ರೂಪಿಸಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆನ್‌ಲೈನ್‌ ನೋಂದಣಿಗೆ ಅವಕಾಶ ಕಲ್ಪಿಸುವಂತೆ ಗ್ರಾಮೀಣ ಭಾಗಗಳಿಂದಲೂ ಬೇಡಿಕೆ ಬಂದಿದೆ. ಆದರೆ, ನಗರದ ಜನರು ಗ್ರಾಮೀಣದಲ್ಲಿ ನೋಂದಣಿ ಮಾಡಿಕೊಂಡರೆ, ಅಲ್ಲಿನ ಜನರಿಗೆ ತೊಂದರೆಯಾಗಬಹುದೆಂದು ಅದನ್ನು ಅನುಷ್ಠಾನಗೊಳಿಸಿಲ್ಲ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದರು.

60 ವರ್ಷ ಮೇಲಿನವರಿಗೆ ಅವಕಾಶ: ‘ಈವರೆಗೆ 70 ವರ್ಷ ಮೇಲಿನವರಿಗೆ ಆಫ್‌ಲೈನ್ ಮೂಲಕ ಲಸಿಕೆ ನೀಡಲಾಗುತ್ತಿತ್ತು. ಈ ವಯೋಮಾನದವರಲ್ಲಿ ಶೇ 85ರಷ್ಟು ಜನರಿಗೆ ಲಸಿಕೆ ನೀಡುವ ಕಾರ್ಯ ಪೂರ್ಣಗೊಂಡಿದೆ. ಹೀಗಾಗಿ, ಈ ವಯೋಮಾನವನ್ನು 60 ವರ್ಷಕ್ಕೆ ಇಳಿಕೆ ಮಾಡಲಾಗಿದೆ. 60 ವರ್ಷ ಮೇಲಿನವರು ಆಫ್‌ಲೈನ್ ಮೂಲಕ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಅವಕಾಶವಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು