ಮಂಗಳೂರು: ಅಡಿಕೆಗೆ ಕೊಳೆರೋಗ ತಗುಲಿದೆ, ಅಲ್ಲಲ್ಲಿ ಎಲೆಚುಕ್ಕಿ ರೋಗವೂ ಕಾಣಿಸಿಕೊಂಡಿದ್ದು, ಏನು ಮಾಡಬೇಕೆಂದು ತೋಚುತ್ತಿಲ್ಲ, ಹೇಗೆ ರೋಗ ನಿಯಂತ್ರಿಸಬೇಕು, ಭತ್ತಕ್ಕೆ ಸುಳಿ ರೋಗ ಹರಡಿದೆ, ಏನು ಮಾಡಬೇಕು...

ಇಂತಹ ಹಲವಾರು ಪ್ರಶ್ನೆಗಳಿಗೆ ರೈತರು ನೇರವಾಗಿ ಅಧಿಕಾರಿಗಳ ಜೊತೆ ಮಾತನಾಡಲು ‘ಪ್ರಜಾವಾಣಿ’ ಫೋನ್ ಇನ್ ಕಾರ್ಯಕ್ರಮ ವೇದಿಕೆ ಕಲ್ಪಿಸಿತು. ಪ್ರಜಾವಾಣಿ ಮಂಗಳೂರು ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಗೆ ಸಂಬಂಧಿತ ಪ್ರಶ್ನೆಗಳಿಗೆ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ, ತೋಟಗಾರಿಕೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಡಿ ಉತ್ತರಿಸಿದರು. ಅದರ ಆಯ್ದ ಭಾಗ ಇಲ್ಲಿದೆ.

ಶಶಿಧರ್ ಶೆಟ್ಟಿ ಮಂಗಳೂರು

* ಸಾವಯವ ಗೊಬ್ಬರ ಬಳಸಿ ಬೆಳೆ ಬೆಳೆಯಲು ಆದ್ಯತೆ ನೀಡಬೇಕು. ಆದರೆ, ರೌಂಡ್ ಅಪ್ ಎನ್ನುವ ಕಳೆನಾಶಕವನ್ನು ಬಳಸುವಂತೆ ಇಲಾಖೆಗಳು ಸಲಹೆ ನೀಡುತ್ತಿವೆಯಲ್ಲ...

–ರೌಂಡ್ ಅಪ್ ಬಳಕೆಯಿಂದ ದುಷ್ಪರಿಣಾಮಗಳು ಹೆಚ್ಚು, ಕಾಲುವೆ, ಕೆರೆ ದಂಡೆಯ ಕಳೆ ನಾಶ ಮಾಡಲು ಬಳಸಿರಬಹುದು. ಅದರ ಬಳಕೆಯಿಂದ ಕಳೆ ನಾಶ ಮಾತ್ರವಲ್ಲ, ಸೂಕ್ಷ್ಮ ಜೀವಿಗಳೂ ಸಾಯುತ್ತವೆ. ಕೃಷಿ ಇಲಾಖೆಯು 130 ಕೀಟನಾಶಕಗಳನ್ನು ನಿಷೇಧಿಸಿದೆ. ನಿಷೇಧಿತ ಕೀಟನಾಶಕಗಳನ್ನು ಅಂಗಡಿಯಲ್ಲಿಟ್ಟು ಮಾರಾಟ ಮಾಡುವಂತಿಲ್ಲ, ಮಾರಾಟ ಕಂಡುಬಂದಲ್ಲಿ ನೋಟಿಸ್ ಜಾರಿಗೊಳಿಸಲಾಗುತ್ತದೆ. ಕಳೆದ ವರ್ಷ ಐದು ಪ್ರಕರಣ ದಾಖಲಿಸಲಾಗಿದೆ. ಯಾವ ತಾಲ್ಲೂಕಿನಲ್ಲಿ ಇದೆ ಎಂದು ಮಾಹಿತಿ ನೀಡಿದರೆ ಪರಿಶೀಲಿಸಲಾಗುವುದು.

ವೀರಭದ್ರ ನಾಯ್ಕ

* ಅಡಿಕೆಗೆ ಕೊಳೆರೋಗ ವ್ಯಾಪಿಸಿದೆ, ಏನು ಮಾಡಬೇಕು?

– ಮಳೆಗಾಲ ಪ್ರಾರಂಭವಾಗುವ ಮೊದಲು ಮೇ ಕೊನೆಯ ವಾರದಲ್ಲಿ ಅಡಿಕೆಗೆ ಬೋರ್ಡೊ ದ್ರಾವಣ ಸಿಂಪಡಣೆ ಮಾಡಬೇಕು. ಈ ಬಾರಿ ಮುಂಗಾರು ಬೇಗ ಪ್ರವೇಶಿಸಿದ ಕಾರಣ ಕೆಲವು ರೈತರಿಗೆ ಬೋರ್ಡೊ ಸಿಂಪಡಣೆ ಸಾಧ್ಯವಾಗಿಲ್ಲ. ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಒಂದನೇ ಸಿಂಪಡಣೆಯಾಗಿ 45 ದಿನಗಳಿಗೆ ಎರಡನೇ ಸ್ಪ್ರೇಗೆ ಸಿದ್ಧತೆ ಮಾಡಿಕೊಳ್ಳಬೇಕು. ಈಗ ಮಳೆ ಸ್ವಲ್ಪ ಬಿಡುವು ನೀಡಿದ್ದು, ವಿಳಂಬವಿಲ್ಲದೆ ಬೋರ್ಡೊ ಸ್ಪ್ರೇ ಮಾಡಿ, ರೋಗ ನಿಯಂತ್ರಣಕ್ಕೆ ಬರುತ್ತದೆ.

ಗಂಗಾಧರ ರೈ ಬೆಳ್ಳಾರೆ

* ಸಕಾಲದಲ್ಲಿ ಗೊಬ್ಬರ ಹಾಕಿದರೂ ತೆಂಗಿನ ಇಳುವರಿ ಕುಂಠಿತವಾಗಿದೆ.

– ಹೆಚ್ಚು ಮಳೆ ಬೀಳುವ ಈ ಪ್ರದೇಶದಲ್ಲಿ ರೈತರು ಕಡ್ಡಾಯವಾಗಿ ಎರಡು ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಬೇಕು. ಅಗತ್ಯ ಪೋಷಕಾಂಶ, ಸುಣ್ಣ ನೀಡಬೇಕು. ಮಣ್ಣಿನ ಫಲವತ್ತತೆ ಕಡಿಮೆಯಾದರೂ ಇಳುವರಿ ಕಡಿಮೆಯಾಗಬಹುದು.

ಲೋಕೇಶ್ ನಾಯ್ಕ್, ಬೆಳ್ತಂಗಡಿ

* ಬೆಳ್ತಂಗಡಿ ತಾಲ್ಲೂಕಿನಲ್ಲಿ ಅಡಿಕೆ ಕೃಷಿ ಮಧ್ಯೆ ಕಾಫಿ ಬೆಳೆಯಬಹುದೇ? ತಾಳೆ ಬೆಳೆಗೆ ಅವಕಾಶ ಹೇಗಿದೆ?

– ಸಮುದ್ರ ಮಟ್ಟಕ್ಕಿಂತ 500 ಅಡಿ ಎತ್ತರದ ಪ್ರದೇಶ ಕಾಫಿ ಬೆಳೆಗೆ ಸೂಕ್ತ. ತಂಪು ವಾತಾವರಣ ಇದ್ದಲ್ಲಿ ಉತ್ತಮ ಬೆಳೆ ಬರುತ್ತದೆ. ಸಕಲೇಶಪುರಕ್ಕೆ ಹೊಂದಿಕೊಂಡಿರುವ ಪ್ರದೇಶ ಆಗಿದ್ದರೆ ಕಾಫಿ ಕೃಷಿ ಮಾಡಬಹುದು. ಬೆಳ್ತಂಗಡಿ ಸುತ್ತಮುತ್ತಲಿನ 11 ಹಳ್ಳಿಗಳನ್ನು ಕಾಫಿ ಬೆಳೆಯ ಪ್ರಯೋಗ ನಡೆಸಬಹುದೆಂದು ಗುರುತಿಸಲಾಗಿದೆ. ಪುತ್ತೂರು, ಸುಳ್ಯದಲ್ಲೂ ಸರ್ವೆ ನಡೆಯುತ್ತಿದೆ.

ತಾಳೆ ಆಶಾದಾಯಕ ಬೆಳೆ. ಸರ್ಕಾರ ಇದಕ್ಕೆ ಕನಿಷ್ಠ ಬೆಂಬಲ ಬೆಲೆ ನೀಡಿದೆ. ಬೆಳೆಗೆ ರಕ್ಷಣೆಯನ್ನು ಸರ್ಕಾರವೇ ಕೊಡುತ್ತಿದೆ. ಅಡಿಕೆಗೆ ಉತ್ತಮ ಪರ್ಯಾಯ ಬೆಳೆ ಇದು. ಕೀಟ–ರೋಗದ ಬಾಧೆಯೂ ಇಲ್ಲ. ರೈತರು ತಾಳೆ ಕೃಷಿಯತ್ತ ಚಿತ್ತ ಹರಿಸಬೇಕು.

ಅಶೋಕ್ ಸುಬ್ರಹ್ಮಣ್ಯ

* ತೆಂಗಿನ ಮರದಲ್ಲಿ ಸುಳಿಕೊಳೆ ರೋಗ ಕಾಣಿಸಿಕೊಂಡಿದೆ, ವರ್ಷಕ್ಕೆ 2–3 ಮರಗಳು ಸಾಯುತ್ತವೆ.

– ಸುಳಿಕೊಳೆ ರೋಗ ತಗುಲಿ ಕೆಲವು ದಿನಗಳ ನಂತರ ರೋಗ ಬಂದಿರುವುದು ಅರಿವಿಗೆ ಬರುತ್ತದೆ. ಮರ ಹತ್ತಿ ಸುಳಿ ತೆಗೆಯುವುದು ತ್ರಾಸದಾಯಕ. ಆದರೆ, ಕೊಳೆತ ಸುಳಿ ತೆಗೆದು, ಇಲಾಖೆ ಸೂಚಿಸುವ ಔಷಧ ಹಚ್ಚಿದರೆ, ರೋಗ ನಿಯಂತ್ರಣಕ್ಕೆ ಬಂದು, ಹೊಸ ಸುಳಿ ಮೂಡುತ್ತದೆ.

ಅರುಣ್

* ಭತ್ತಕ್ಕೆ ಎಲೆಸುಳಿ ರೋಗ ತಗುಲಿದ್ದು, ಪರಿಹಾರ ಕ್ರಮಗಳೇನು?

– ಪತಂಗ ಎಲೆಯೊಳಗೆ ಸೇರಿ ಸುರುಳಿ ಸುತ್ತಿ, ಮೊಟ್ಟೆ ಇಡುತ್ತದೆ. ಇವುಗಳ ಜೀವಿತಾವಧಿ 15 ದಿನ. ಗದ್ದೆಯಲ್ಲಿ ಭತ್ತದ ಗಿಡಗಳಿಗೆ ಮುಳ್ಳಿನ ಗಿಡ ಹೊಡೆದು, ನಂತರ ಔಷಧ ಸಿಂಪಡಣೆ ಮಾಡಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ. ಜೈವಿಕ ಕ್ರಮ ಉತ್ತಮ.

ವಿನೋದ್ ಸುಳ್ಯ

* ಅಡಿಕೆ ಮಂಡಳಿ ರಚನೆ ಆಗಬಹುದಾ?

–ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಸರ್ಕಾರದ ಹಂತದಲ್ಲಿ ನಿರ್ಧಾರವಾಗಬೇಕಾಗುತ್ತದೆ.

ಲೀಲಾ ಪುಂಜಾಲಕಟ್ಟೆ, ಮಂಜುನಾಥ ಸುಳ್ಯ

* ಅಡಿಕೆಗೆ ಬಂದಿರುವ ಕೊಳೆರೋಗ ನಿಯಂತ್ರಣಕ್ಕೆ ಬರುತ್ತಿಲ್ಲ, ಏನು ಮಾಡಬೇಕು?

– ನಿಮಗೆ ಸಮೀಪ ಇರುವ ನಮ್ಮ ಇಲಾಖೆಯ ಕಚೇರಿಗೆ ಹೋಗಿ, ಅಲ್ಲಿ ಬೋರ್ಡೊ ಮಿಶ್ರಣದ ಸರಿಯಾದ ಕ್ರಮ ಹೇಳಿಕೊಡುತ್ತಾರೆ.

ರಾಘವೇಂದ್ರ ನಾಯ್ಕ, ಸಿದ್ದಾಪುರ ಉತ್ತರ ಕನ್ನಡ

* ಅಡಿಕೆಗೆ ಎಲೆಚುಕ್ಕಿ ರೋಗ ತಗುಲಿದೆ, ಔಷಧ ಸಿಂಪಡಣೆ ಮಾಡಿದರೂ ಪ್ರಯೋಜನವಾಗಿಲ್ಲ, ಅಡಿಕೆ ಬೆಳೆಯನ್ನೇ ಬಿಡುವ ಯೋಚನೆ ಬರುತ್ತಿದೆ.

– ಎಲೆಚುಕ್ಕಿ ರೋಗ ಮೊದಲು ಕಾಣಿಸಿಕೊಂಡಿದ್ದು ಚಿಕ್ಕಮಗಳೂರು ಜಿಲ್ಲೆ ಕಳಸ ಭಾಗದಲ್ಲಿ. ನಂತರ ದಕ್ಷಿಣ ಕನ್ನಡ ಜಿಲ್ಲೆಗೂ ಬಂದಿದೆ. ರೋಗದ ಲಕ್ಷಣಗಳು ಕಂಡ ತಕ್ಷಣ ಔಷಧ ಸಿಂಪಡಣೆ ಮಾಡಿದರೆ, ನಿಯಂತ್ರಣಕ್ಕೆ ತರಬಹುದು. ಆತಂಕ ಪಡುವ ಅಗತ್ಯವಿಲ್ಲ. ರೋಗಾಣು ಗಾಳಿಯಲ್ಲಿ ಹರಡುವುದರಿಂದ ಬೇರೆ ತೋಟಗಳಿಗೂ ವ್ಯಾಪಿಸುತ್ತದೆ. ಅಡಿಕೆಗೆ ಬೋರ್ಡೊ ಸಿಂಪಡಣೆ ಮಾಡುವಾಗ ತೆಂಗಿನ ಗರಿಗಳಿಗೂ ಸಿಂಪಡಣೆ ಮಾಡಬೇಕು.

ರಾಮಚಂದ್ರ ಮಣಿಯಾಣಿ, ಉಪ್ಪಿನಂಗಡಿ

* ತೆಂಗಿನ ಇಳುವರಿ ತುಂಬಾ ಕಡಿಮೆಯಾಗಿದೆ.

– ಇಲ್ಲಿನ ಮಣ್ಣಿನಲ್ಲಿ ಯೂರಿಯಾ ಪ್ರಮಾಣ ಹೆಚ್ಚಿದೆ, ಒಮ್ಮೆ ಮಣ್ಣು ಪರೀಕ್ಷೆ ಮಾಡಿಸಿ, ಅಗತ್ಯ ಪೋಷಕಾಂಶ ನೀಡಿ.

ಅಮೃತ್ ಪ್ರಭು

* ತೆಂಗಿನ ಮರಕ್ಕೆ ಹಟ್ಟಿ ಗೊಬ್ಬರ ನೀಡುತ್ತೇವೆ, ಆದರೆ, ಕಾಯಿ ಗಾತ್ರ ತುಂಬಾ ಚಿಕ್ಕದಾಗಿದೆ.

– ಹಟ್ಟಿಗೊಬ್ಬರವೊಂದೇ ಸಾಲದು, ಸಾರಜನಕ, ರಂಜಕ, ಪೊಟ್ಯಾಷ್ ಒಳಗೊಂಡ ಪೋಷಕಾಂಶ ನೀಡಬೇಕು. ತೆಂಗಿನ ಜೊತೆ ಅಂತರ ಬೆಳೆ ಬೆಳೆಯಿರಿ, ಅಡಿಕೆಯಷ್ಟೇ ಆದಾಯ ಪಡೆಯಬಹುದು.

ಪೌಲ್ ಡಿಸೋಜ, ಕಡಂಗಡಿ

* ಇಡೀ ಅಡಿಕೆ ತೋಟಕ್ಕೆ ಕೊಳೆರೋಗ ಬಂದಿದೆ.

– ಈಗ ಮಳೆ ಸ್ವಲ್ಪ ಕಡಿಮೆ ಇದೆ, ವಿಳಂಬವಿಲ್ಲದೆ ಬೋರ್ಡೊ ಮಿಶ್ರಣದ ಎರಡನೇ ಸ್ಪ್ರೇ ಕೊಡಿ.

ಮೋಹಿನಿ ಮರಕಂಜ

* ಬಸವನ ಹುಳದ ಕಾಟ ಹೆಚ್ಚಾಗಿದೆ.

ಸುಳ್ಯ ಸುತ್ತಮುತ್ತ ಬಸವನ ಹುಳಗಳ ಕಾಟ ಹೆಚ್ಚಿದೆ. ಗೋಣಿಚೀಲಕ್ಕೆ ಗಂಜಳ ಹಾಕಿ ತೋಟದಲ್ಲಿಡಿ. ಇದಕ್ಕೆ ಆಕರ್ಷಿತವಾಗುವ ಹುಳಗಳು ಒಂದೆಡೆ ಬಂದು ಸೇರಿಕೊಳ್ಳುತ್ತವೆ, ನಂತರ ಅದನ್ನು ತಂದು ಸುಟ್ಟು ಹಾಕಬೇಕು. ಭತ್ತದ ಹೊಟ್ಟು ಮತ್ತು ಬೆಲ್ಲದ ಮಿಶ್ರಣವನ್ನು ಸೇರಿಸಿ ಇದೇ ಮಾದರಿಯಲ್ಲಿ ಮಾಡಬಹುದು. ರಾಸಾಯನಿಕ ಸಿಂಪಡಣೆಗಿಂತ ಇಂತಹ ಸಾವಯವ ಪದ್ಧತಿ ಉತ್ತಮ.

ಬೋರ್ಡೊ ದ್ರಾವಣದ ಸಿದ್ಧತೆ ಹೇಗೆ?

ಹಲವಾರು ರೈತರು ಬೋರ್ಡೊ ಮಿಶ್ರಣವನ್ನು ಸಮರ್ಪಕವಾಗಿ ಮಾಡುವಲ್ಲಿ ಎಡವುತ್ತಿದ್ದಾರೆ. ಮೈಲುತುತ್ತಕ್ಕೆ (ಕಾಪರ್ ಸಲ್ಪೇಟ್) ಅತಿಯಾಗಿ ಸುಣ್ಣ ಸೇರಿಸುವುದರಿಂದ ಕಾಪರ್ ಸಲ್ಫೇಟ್ನ ಸತ್ವ ಕಡಿಮೆಯಾಗುತ್ತದೆ. ಸಿಂಪಡಣೆ ಫಲಿತಾಂಶ ನೀಡುವುದಿಲ್ಲ. ಒಂದು ಕೆ.ಜಿ. ಮೈಲುತುತ್ತಕ್ಕೆ ಅರ್ಧ ಕೆ.ಜಿ. ಸುಣ್ಣ 100 ಲೀಟರ್ ನೀರು ಬೆರೆಸಿ ದ್ರಾವಣ ಸಿದ್ಧಪಡಿಸುವುದು ಸರಿಯಾದ ಕ್ರಮ. ಸಿಂಪಡಿಸುವ ದ್ರಾವಣದ ರಸಸಾರ 7 ಇರಬೇಕು ಎಂದು ಮಂಜುನಾಥ ಡಿ ಹೇಳಿದರು. ಅಡಿಕೆಗೆ ಕೊಳೆ ರೋಗದ ಜೊತೆಗೆ ಕೊಕ್ಕೊಗೆ ಕಾಯಿಕೊಳೆ ರೋಗ ಮತ್ತು ಕಾಳು ಮೆಣಸಿಗೂ ಕೊಳೆ ರೋಗ ತಗುಲಿದೆ. ನಿಯಂತ್ರಣ ಕ್ರಮಗಳ ಬಗ್ಗೆ ರೈತರು ಗಮನ ಹರಿಸಬೇಕು. ಅಡಿಕೆಗೆ ಬೋರ್ಡೊ ಸಿಂಪಡಿಸುವಾಗ ಕಾಳುಮೆಣಸಿನ ಬಳ್ಳಿಗೂ ಸಿಂಪಡಣೆ ಮಾಡಬೇಕು ಎಂದು ಸಲಹೆ ನೀಡಿದರು.

- ಭತ್ತ ಬಿತ್ತನೆ ಪ್ರದೇಶ ಹೆಚ್ಚಳ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9750 ಹೆಕ್ಟೇರ್ ಭತ್ತ ಬಿತ್ತನೆ ಗುರಿ ಹೊಂದಲಾಗಿತ್ತು. ಪ್ರಸ್ತುತ ಶೇ 95ರಷ್ಟು ನಾಟಿ ಕಾರ್ಯ ಪೂರ್ಣಗೊಂಡಿದೆ. ಈ ಬಾರಿ 11500 ಹೆಕ್ಟೇರ್ ನಾಟಿ ಆಗಿರಬಹುದೆಂದು ಅಂದಾಜಿಸಲಾಗಿದೆ. ಬಿತ್ತನೆ ಪ್ರದೇಶ ವಿಸ್ತರಣೆಯಾಗಿದೆ. ಬಿತ್ತನೆ ಬೀಜ ಸಕಾಲದಲ್ಲಿ ಪೂರೈಕೆಯಾಗಿದ್ದು 580 ಕ್ವಿಂಟಲ್ ವಿತರಣೆಯಾಗಿದೆ. ಪ್ರಾತ್ಯಕ್ಷಿಕೆ ಪ್ರದೇಶ 100 ಹೆಕ್ಟೇರ್ನಿಂದ 200 ಹೆಕ್ಟೇರ್ಗೆ ವಿಸ್ತರಣೆಯಾಗಿದೆ ಎಂದು ಹೊನ್ನಪ್ಪ ಗೌಡ ಹೇಳಿದರು.

ರಾಸಾಯನಿಕ ಬಳಕೆ ಕಡಿಮೆ

ನೈಸರ್ಗಿಕ ಕೃಷಿ ಪದ್ಧತಿ ಮಿಷನ್ (ಎನ್ಎಂಎನ್ಎಫ್) ನೈಸರ್ಗಿಕ ಕೃಷಿ ಉತ್ತೇಜಿಸುವ ಯೋಜನೆಯಾಗಿದೆ. ಎಕರೆಗೆ ₹4000 ಸಹಾಯಧನವನ್ನು ಕೃಷಿ ಇಲಾಖೆ ನೀಡುತ್ತದೆ. ರಾಸಾಯನಿಕ ಬಳಕೆ ಕಡಿಮೆ ಮಾಡಲು ಈ ಯೋಜನೆ ಜಾರಿಗೊಂಡಿದೆ ಎಂದು ಹೊನ್ನಪ್ಪ ನಾಯ್ಕ ಹೇಳಿದರು.

- ಸಾವಯವ ಪದ್ಧತಿಗೆ ಪ್ರೇರಣೆ

ಪರಂಪರಾಗತ ಕೃಷಿ ವಿಕಾಸ ಯೋಜನೆಯ ಮೂರನೇ ಹಂತ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿದೆ. ಮೂಡುಬಿದಿರೆ ವಿಟ್ಲ ಸುಳ್ಯದ ಪಂಜ ಸುಳ್ಯದ ಕಸಬಾದಲ್ಲಿ ತಲಾ 250 ಹೆಕ್ಟೇರ್ನಲ್ಲಿ ಜೀವಾಮೃತ ಬಳಕೆ ಸಾವಯವ ಗೊಬ್ಬರ ಸೇರಿದಂತೆ ಸಾವಯವ ಪದ್ಧತಿ ಉತ್ತೇಜಿಸುವ ಕಾರ್ಯಕ್ರಮಗಳು ನಡೆಯಲಿವೆ. ಕಾಳುಮೆಣಸು ಬೆಳೆ ಕೇಂದ್ರೀಕರಿಸಿ ಜಿಲ್ಲೆಯಲ್ಲಿ ಯೋಜನೆ ಜಾರಿಯಾಗುತ್ತಿದೆ ಎಂದು ಮಂಜುನಾಥ ಡಿ ಹೇಳಿದರು.

₹60.59 ಲಕ್ಷ ಅನುದಾನ

ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯ ಸಮಗ್ರ ಕೀಟ ನಿರ್ವಹಣೆ ಕಾರ್ಯಕ್ರಮದ ಅಡಿಯಲ್ಲಿ ಮೈಲುತುತ್ತ ಖರೀದಿಗೆ ಜಿಲ್ಲೆಗೆ ₹60.59 ಲಕ್ಷ ಅನುದಾನ ಮಂಜೂರು ಆಗಿದೆ. ಒಬ್ಬ ರೈತನಿಗೆ ಗರಿಷ್ಠ 2 ಹೆಕ್ಟೇರ್ಗೆ ₹3000 ಸಹಾಯಧನ ನೀಡಲಾಗುತ್ತದೆ. ಆಸಕ್ತ ರೈತರು ಪ್ರುಟ್ಸ್ ದಾಖಲೆ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯ ವಿವರ ಅಧಿಕೃತ ಅಂಗಡಿಯಿಂದ ತುತ್ತ ಖರೀದಿಸಿದ ಬಿಲ್ ನೀಡಿದರೆ ಅವರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದು ಮಂಜುನಾಥ ಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.