ಮಂಗಳೂರು: ‘ದೈವ ನಂಬಿಕೆಗಳು ದುಡ್ಡು ಮಾಡುವ ಸಾಧನವಾಗುತ್ತಿವೆ. ದೈವಾರಾಧನೆ ಹೆಸರಿನಲ್ಲಿ ನಡೆಯುತ್ತಿರುವ ದಂಧೆ ನಿಲ್ಲದೆ ಹೋದಲ್ಲಿ ತುಳುನಾಡಿನ ಮೂಲ ನಂಬಿಕೆಗಳು ನಾಶವಾಗಲಿವೆ’ ಎಂದು ಹಿಂದುತ್ವವಾದಿ ಶ್ರೀಕಾಂತ ಶೆಟ್ಟಿ ಕಾರ್ಕಳ ಹೇಳಿದರು.
ತುಳುನಾಡು ದೈವಾರಾಧನೆ ಸಂರಕ್ಷಣಾ ವೇದಿಕೆ ವತಿಯಿಂದ ಭಾನುವಾರ ಕಾವೂರಿನಲ್ಲಿ ಆಯೋಜಿಸಿದ್ದ ‘ದೈವಾರಾಧನೆಗೆ ಒಂಜಿ ದಿನ– ನಂಬಿಕೆ ಒರಿಪಾಗ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೈವಾರಾಧನೆಯ ಸಾಂಸ್ಕೃತೀಕರಣ ತಡೆಯಬೇಕು. ದೈವಗಳು ನಮ್ಮ ನಂಬಿಕೆಯ ಭಾಗವೇ ಹೊರತು ಮನರಂಜನಾ ಚಟುವಟಿಕೆಯಲ್ಲ. ದೈವದ ಕೊಡಿಯಡಿಯಲ್ಲಿ ಛಾಯಾಗ್ರಹಣ, ವಿಡಿಯೊ ಚಿತ್ರೀಕರಣ ನಿಷೇಧಿಸಬೇಕು ಎಂದರು.
ದೈವ ನರ್ತಕ ಲೋಕಯ್ಯ ಸೇರ ಮಾತನಾಡಿ, ದೈವಾರಾಧನೆ ಈಗ ಹಿಂದಿನಂತಿಲ್ಲ. ಕಾಲ ಬದಲಾಗುತ್ತಿದ್ದಂತೆ ಈಗ ದೈವಾರಾಧನೆಯೂ ಬದಲಾಗುತ್ತಿದೆ. ಜನರಲ್ಲಿ ಈ ಹಿಂದೆ ಇದ್ದ ಭಯ– ಭಕ್ತಿ ಈಗ ಮಾಯವಾಗಿದೆ. ಹಿರಿಯ ದೈವ ನರ್ತಕರಿಗೆ ಈ ಕಾಲದಲ್ಲಿ ಬೆಲೆಯಿಲ್ಲದಂತಾಗುತ್ತಿದೆ. ನೇಮ ನಡೆಸುವವರು ನಿಯಮ ಬದ್ಧವಾದ ನೇಮಕ್ಕಿಂತ ಅಬ್ಬರದ ನೇಮ ಅಪೇಕ್ಷಿಸುತ್ತಿದ್ದಾರೆ. ಇದರಿಂದಾಗಿ ಯುವ ದೈವ ನರ್ತಕರು ಅನಿವಾರ್ಯವಾಗಿ ಬಣ್ಣಗಾರಿಕೆ, ಕುಣಿತ, ವೇಷಭೂಷಣಗಳಲ್ಲಿ ಬದಲಾವಣೆ ತರುವಂತಾಗಿದೆ ಎಂದರು.
ನೇಮ ಒಪ್ಪಿಸುವ ಮನೆಯವರು, ಗುತ್ತಿನವರು ತಮ್ಮ ಮನೆಯ, ಊರಿನ ದೈವಗಳಿಗೆ ಹೀಗೆಯೇ ನೇಮ ನಡೆಯಬೇಕು ಎಂದು ಹೇಳಿದ್ದಲ್ಲಿ ದೈವ ಚಾಕರಿಯವರು ಅದೇ ರೀತಿ ಮಾಡುವ ಅನಿವಾರ್ಯತೆಗೆ ಸಿಲುಕುತ್ತಾರೆ. ಆಗ ಖಂಡಿತ ಬದಲಾವಣೆ ಸಾಧ್ಯವಿದೆ ಎಂದರು.
ಮಧ್ಯಸ್ಥರಾದ ಮನ್ಮಥ ಶೆಟ್ಟಿ ಅವರು ಮಾತನಾಡಿ, ದೈವಾರಾಧನೆಯಲ್ಲಿ ಮಧ್ಯಸ್ಥನ ಪಾತ್ರ ಪ್ರಮುಖವಾಗಿದೆ. ಇತ್ತೀಚೆಗೆ ಕೆಲವರು ದೈವಾರಾಧನೆಯಲ್ಲಿ ಮಧ್ಯಸ್ಥರು ಇತ್ತೀಚೆಗೆ ಸೇರ್ಪಡೆಗೊಂಡಿದ್ದಾರೆ ಎಂದು ವಾದಿಸುತ್ತಾರೆ. ಅದು ತಪ್ಪು ಮದಿಪು ಎನ್ನುವುದು ಆರಂಭದಿಂದಲೂ ಇತ್ತು ಎಂದರು.
ದೈವ ನರ್ತಕರಾದ ಚಂದು ನಲಿಕೆ, ಎನ್‌ಕೆ ಸಾಲಿಯಾನ್, ಶಾಸಕ ವೇದವ್ಯಾಸ್ ಕಾಮತ್, ವಕೀಲೆ ಸಹನಾ ಕುಂದರ್ ಸೂಡಾ, ತಮ್ಮಣ್ಣ ಶೆಟ್ಟಿ, ಮುಂಬೈಯ ಚಂದ್ರಕಾಂತ್ ಶೆಟ್ಟಿ ಬೆರ್ಮೊಟ್ಟು, ದಯಾನಂದ್ ಕತ್ತಲ್‌ಸಾರ್, ತುಳುನಾಡ ದೈವರಾಧನೆ ಸಂರಕ್ಷಣಾ ವೇದಿಕೆ ಗೌರವಾಧ್ಯಕ್ಷ ದಿಲ್‌ರಾಜ್ ಆಳ್ವ, ಅಧ್ಯಕ್ಷ ಭರತ್ ಬಳ್ಳಾಲ್‌ಬಾಗ್, ಕಾರ್ಯಕ್ರಮದ ಸಂಯೋಜಕ ಧನುಷ್ ಶೆಟ್ಟಿ ಇದ್ದರು. ಜೀವಿತಾ ಕುತ್ತಾರ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.