ಶನಿವಾರ, ಮಾರ್ಚ್ 25, 2023
28 °C
ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ಅಭಿಯಾನ

ಜಿಲ್ಲೆಯಲ್ಲಿ 8.25 ಲಕ್ಷ ಮಂದಿಗೆ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಜಿಲ್ಲೆಯಲ್ಲಿ ಲಸಿಕೆ ಅಭಿಯಾನ ಚುರುಕಾಗಿದ್ದು, ಒಟ್ಟಾರೆ ಗುರುವಾರದವರೆಗೆ 8,25,332 ಜನರಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ 6,80,139 ಜನರು ಮೊದಲ ಡೋಸ್ ಲಸಿಕೆ ಪಡೆದಿದ್ದು, 1,45,193 ಮಂದಿ ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ.

18 ರಿಂದ 44 ವರ್ಷ ವಯೋಮಿತಿಯಲ್ಲಿ 21,948 ಜನರಿಗೆ ಮೊದಲ ಡೋಸ್‌ ಹಾಗೂ 3,538 ಮಂದಿಗೆ ಎರಡೂ ಡೋಸ್‌ ಲಸಿಕೆ ನೀಡಲಾಗಿದೆ. 45 ರಿಂದ 60 ವರ್ಷದೊಳಗಿನವರಲ್ಲಿ 2,28,255 ಜನರು ಮೊದಲ ಡೋಸ್‌ ಹಾಗೂ 36,497 ಜನರು ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ. 60 ವರ್ಷ ಮೇಲಿನವರಲ್ಲಿ 1,68,011 ಜನರು ಮೊದಲ ಡೋಸ್‌ ಹಾಗೂ 63,985 ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ.

ಶುಕ್ರವಾರ ಜಿಲ್ಲೆಯ 24 ಕಾಲೇಜುಗಳ ಒಟ್ಟು 5,649 ವಿದ್ಯಾರ್ಥಿಗಳು, 690 ಬೋಧಕರು, 718 ಬೋಧಕೇತರ ಸಿಬ್ಬಂದಿ ಸೇರಿದಂತೆ 7,057 ಜನರಿಗೆ ಲಸಿಕೆ ನೀಡಲಾಗಿದೆ.

ಇನ್ನು ಸಾರ್ವಜನಿಕರಿಗೆ ಬಂಟ್ವಾಳ ತಾಲ್ಲೂಕಿನಲ್ಲಿ 1,594, ಬೆಳ್ತಂಗಡಿ ತಾಲ್ಲೂಕಿನಲ್ಲಿ 2,862, ಮಂಗಳೂರು ತಾಲ್ಲೂಕಿನಲ್ಲಿ 9,209, ಪುತ್ತೂರು ತಾಲ್ಲೂಕಿನಲ್ಲಿ 1,401, ಸುಳ್ಯ ತಾಲ್ಲೂಕಿನಲ್ಲಿ 752 ಸೇರಿದಂತೆ ಒಟ್ಟು 15,818 ಮಂದಿಗೆ ಶುಕ್ರವಾರ ಲಸಿಕೆ ನೀಡಿದೆ.

ಎ.ಜೆ. ಕಾಲೇಜು:

ಎ.ಜೆ. ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ ಎನ್‌ಎಸ್‌ಎಸ್‌ ಘಟಕ, ರೆಡ್‌ಕ್ರಾಸ್‌ ಘಟಕಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಕೋವಿಡ್ ತಡೆ ಲಸಿಕೆ ಕಾರ್ಯಕ್ರಮ ನಡೆಸಿದವು. ಕಾಲೇಜಿನ 550ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಗೆ ಲಸಿಕೆ ನೀಡಲಾಯಿತು.

ಎ.ಜೆ. ಕಾಲೇಜಿನ ಪ್ರಾಂಶುಪಾಲ ಡಾ.ಶಾಂತಾರಾಮ ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಜಯ ಭಂಡಾರಿ ನಿರ್ದೇಶನದಂತೆ ಕೂಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ವಿದ್ಯಾಲಕ್ಷಿ ಮತ್ತು ತಂಡ ಲಸಿಕೆ ನೀಡಿದರು.

ಲಕ್ಷ್ಮಿ ಮೆಮೊರಿಯಲ್ ಎಜುಕೇಶನ್ ಟ್ರಸ್ಟ್‌ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಹಾಗೂ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ ಮಾತನಾಡಿದರು. ಇನ್‌ಸ್ಟಿಟ್ಯೂಟ್ ಮ್ಯಾನೇಜ್‍ಮೆಂಟ್ ಕಾಲೇಜಿನ ನಿರ್ದೇಶಕ ಡಾ.ಜಯಪ್ರಕಾಶ್‍ರಾವ್, ಕಾಲೇಜಿನ ಉಪ ಪ್ರಾಂಶುಪಾಲ ಡಾ.ನಾಗೇಶ್‍ ಎಚ್‍.ಆರ್., ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ರಾಜೇಶ್‍ ರೈ ಪಿ., ಡಾ.ಸುಮನ್‍ ಕೆ., ಡಾ.ಆಂಟನಿ ಪಿ.ಜೆ. ಇದ್ದರು.

336 ಜನರಿಗೆ ಲಸಿಕೆ:

ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಕೋವಿಡ್ ತಡೆ ಲಸಿಕೆ ಅಭಿಯಾನವು ಕಾಲೇಜಿನ ಸಭಾಭವನದಲ್ಲಿ ಶುಕ್ರವಾರ ನಡೆಯಿತು.

ಈ ಅಭಿಯಾನದಲ್ಲಿ ಕಾಲೇಜಿನ ಸುಮಾರು 234 ವಿದ್ಯಾರ್ಥಿಗಳು, ಸಿಬ್ಬಂದಿ, 95 ಸ್ಥಳೀಯರು ಸೇರಿ ಒಟ್ಟು 336 ಜನರಿಗೆ ಲಸಿಕೆ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಸುಜಯ ಸುವರ್ಣ, ನೋಡಲ್ ಅಧಿಕಾರಿ ಲೆಫ್ಟಿನೆಂಟ್ ಪ್ರವೀಣ್ ಎಸ್, ಲೇಡಿಹಿಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಡಾ.ಎಲಾಂಗೋ ಇದ್ದರು.

ಎಸ್‌ಡಿಎಂ ಕಾಲೇಜು:

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಉದ್ಯಮಾಡಳಿತ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಭಾಗಿತ್ವದಲ್ಲಿ ಕೋವಿಡ್ ಲಸಿಕಾ ಅಭಿಯಾನವನ್ನು ಕಾಲೇಜಿನ ವಿದ್ಯಾರ್ಥಿ ಮತ್ತು ಸಿಬ್ಬಂದಿಗೆ ಶುಕ್ರವಾರ ಆಯೋಜಿಸಲಾಗಿತ್ತು.

ಬಿಜೈ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಧನಶ್ರೀ ಮತ್ತು ತಂಡದವರು ಲಸಿಕೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಅರುಣಾ ಪಿ.ಕಾಮತ್ ಇದ್ದರು. 700 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಲಸಿಕೆ ನೀಡಲಾಯಿತು. ಶ್ವೇತಾ ವೈ., ಮುರಳೀಧರ ಹೆಗ್ಡೆ ಕಾರ್ಯಕ್ರಮ ಸಂಯೋಜಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.