ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | ಪ್ರವಾಹ ಕಾಲದ ಮೃತ್ಯುಕೂಪಗಳು

ಚರಂಡಿ ಪಕ್ಕದ ರಸ್ತೆಗೆ ಇಲ್ಲ ತಡೆಗೋಡೆ, ನೆರೆ ಬಂದಾಗ ಇಲ್ಲಿ ಸವಾರಿ ಬಲು ಅಪಾಯಕಾರಿ
Published 3 ಜೂನ್ 2024, 8:22 IST
Last Updated 3 ಜೂನ್ 2024, 8:22 IST
ಅಕ್ಷರ ಗಾತ್ರ

ಮಂಗಳೂರು: ನಗರದ ಕೊಟ್ಟಾರ ಚೌಕಿಯಿಂದ ಆಕಾಶ ಭವನ, ಜಲ್ಲಿಗುಡ್ಡೆ ಕಡೆಗೆ ಹೋಗುವ ರಸ್ತೆಯೊಂದು ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯು ಮುಖ್ಯ ರಸ್ತೆಯನ್ನು ಸೇರುವಲ್ಲಿನ ಕಿರುಸೇತುವೆಗೆ ತಡೆಗೋಡೆಯೇ ಇಲ್ಲ. ಮಳೆಗಾಲದಲ್ಲಿ ಪ್ರವಾಹ ಉಂಟಾದಾಗ ಇಲ್ಲಿ ರಸ್ತೆ ಯಾವುದು– ಚರಂಡಿ ಯಾವುದೆಂದೇ ತಿಳಿಯದು! 

ವಾರಗಳ ಹಿಂದೆ ನಗರದಲ್ಲಿ ಸುರಿದ ಮಳೆಗೆ ನಗರದ ಕೊಟ್ಟಾರ ಬಳಿಯ ಅಬ್ಬಕ್ಕನಗರ ಪ್ರದೇಶದಲ್ಲಿ ಸೃಷ್ಟಿಯಾದ ಪ್ರವಾಹ ಈ ವರ್ಷದ ಮೊದಲ ಜೀವಬಲಿಯನ್ನು ಪಡೆಯಿತು. ಮಳೆ ನೀರು ಹರಿಯುವ ಚರಂಡಿ ಉಕ್ಕಿ ಪಕ್ಕದ ರಸ್ತೆಗೆ ನೀರು ಆವರಿಸಿತ್ತು. ರಸ್ತೆ ಹಾಗೂ ಚರಂಡಿಗಳ ನಡುವೆ ವ್ಯತ್ಯಾಸ ತಿಳಿಯದ ಸ್ಥಿತಿ ನಿರ್ಮಾಣವಾಗಿತ್ತು. ಈ ಪ್ರವಾಹದ ಸೆಳೆತಕ್ಕೆ ಸಿಲುಕಿದ ಆಟೊ ರಿಕ್ಷಾವೊಂದು ಚರಂಡಿ ನೀರಿಗೆ ಬಿದ್ದು, ಚಾಲಕ ದೀಪಕ್ ಆಚಾರ್ಯ ಅಸುನೀಗಿದ್ದರು. ಪ್ರವಾಹ ಉಂಟಾಗುವ ಪ್ರದೇಶಗಳಲ್ಲಿ ಮಳೆ ನೀರು ಹರಿಯುವ ಚರಂಡಿಗೆ ತಡೆಗೋಡೆಯ ರಕ್ಷಣೆ ಇಲ್ಲದಿದ್ದರೆ, ಅದು ಎಷ್ಟು ಅಪಾಯಕಾರಿ ಆಗಬಲ್ಲುದು ಎಂಬುದನ್ನು ಈ ದುರ್ಘಟನೆ ಜಾಹೀರು ಮಾಡಿದೆ.

ಪ್ರವಾಹದ ಸಂದರ್ಭದಲ್ಲಿ ದುರ್ಘಟನೆಗೆ ಕಾರಣವಾಗಬಲ್ಲ ಅನೇಕ ರಸ್ತೆಗಳು, ಕಿರುಸೇತುವೆಗಳು ನಗರದಲ್ಲಿ ಅಲ್ಲಲ್ಲಿ ಇವೆ. ಮಳೆಗಾಲದಲ್ಲಿ ಇವು ಅಪಾಯಕ್ಕೆ ಕಾರಣವಾಗಬಲ್ಲವು ಎಂಬುದರ ಅರಿವಿದ್ದರೂ ಮಳೆ  ನೀರು ಹರಿಯುವ ಚರಂಡಿ ಪಕ್ಕ ತಡೆಗೋಡೆ ನಿರ್ಮಿಸುವ ಕಾರ್ಯಕ್ಕೆ ಪಾಲಿಕೆ ಇನ್ನು ಕ್ರಮ ವಹಿಸಿಲ್ಲ. ಇಂತಹ ಅಪಾಯಕಾರಿ ತಾಣಗಳ ಪೈಕಿ ಕೆಲವೊಂದರ ವಿವರಗಳು ಇಲ್ಲಿದೆ.

ಕೊಟ್ಟಾರ– ಜಲ್ಲಿಗುಡ್ಡೆ ಆಕಾಶಭವನ ಸಂಪರ್ಕ ರಸ್ತೆ ಪಂಪ್ ಹೌಸ್ ಪಕ್ಕದಲ್ಲಿ ಬಂದು ಕೊಟ್ಟಾರದ ಮುಖ್ಯ ರಸ್ತೆಗೆ ಸೇರುತ್ತದೆ. ಜೋರು ಮಳೆಯಾದಾಗ ಇಲ್ಲಿ ರಸ್ತೆ ಮೇಲೆ ಎರಡು ಅಡಿಗಳಷ್ಟು ನೀರು ಇರುತ್ತದೆ. ರಸ್ತೆ ಮತ್ತು ಚರಂಡಿ ಒಂದಾದಾಗ ಇಲ್ಲಿ ವಾಹನ ಚಲಾಯಿಸುವುದು ಬಲು ಅಪಾಯಕಾರಿ ಎನ್ನುತ್ತಾರೆ ಸ್ಥಳೀಯರಾದ ಮಂಜುನಾಥ.

‘ಈ ಕಿರು ಸೇತುವೆ ನಿರ್ಮಿಸಿ 10 ವರ್ಷ ಮೇಲಾಯಿತು. ಇಲ್ಲಿ ಒಂದು ಪುಟ್ಟ ತಡೆಯನ್ನು ಕಟ್ಟಿದ್ದರು, ಆದರೆ ಅದು ಮೂರೇ ತಿಂಗಳಲ್ಲಿ ಕಿತ್ತುಹೋಗಿದೆ. ಅಂದಿನಿಂದ ದ್ವಿಚಕ್ರ ವಾಹನ ಸವಾರರು ಇಲ್ಲಿ ಅಪಾಯವನ್ನು ಬಗಲಲ್ಲಿ ಕಟ್ಟಿಕೊಂಡೇ ಓಡಾಡುತ್ತಿದ್ದಾರೆ. ಈ ಕಿರು ಸೇತುವೆ ಬಳಿ  ದ್ವಿಚಕ್ರವಾಹನ ಚರಂಡಿಗೆ ಉರುಳಿದ ಮೂರು ದುರ್ಘಟನೆಗಳು ಸಂಭವಿಸಿವೆ. ಇಲ್ಲಿ ಕಿರು ಸೇತುವೆಗೆ ಮತ್ತು ಚರಂಡಿ ನಡುವೆ ತಡೆಗೋಡೆ ಕಟ್ಟದಿದ್ದರೆ ಮಳೆಗಾಲದಲ್ಲಿ ಮತ್ತೆ ಅವಘಡ ಸಂಭವಿಸುವ ಸಾಧ್ಯತೆ ಇದೆ’ ಎಂದರು. ಕೊಟ್ಟಾರದಿಂದ ಮುಳ್ಳಕಾಡು ಕಡೆಗೆ  ಸಾಗುವ ರಸ್ತೆಯಲ್ಲಿ 500 ಮೀ  ದೂರ ಸಾಗುವಷ್ಟರಲ್ಲಿ ಒಂದು ಕಿರು ಸೇತುವೆ ಮೇಲೆ ಹಾದು ಹೋಗಬೇಕು. ಇದಕ್ಕೂ ತಡೆ ಗೋಡೆ ಇಲ್ಲ. ಮಳೆಗಾಲದಲ್ಲಿ ಪ್ರವಾಹ ಕಾಣಿಸಿಕೊಂಡಾಗ ಈ ಪ್ರದೇಶವೂ ಜಲಾವೃತವಾಗುತ್ತದೆ. ಈ ವೇಳೆ ಯಾರಾದರೂ ಹೊಸಬರು ಈ ಕಿರುಸೇತುವೆ ಮೂಲಕ ಹಾದುಹೋದರೆ  ಅಪಾಯ ಕಟ್ಟಿಟ್ಟ ಬುತ್ತಿ.  ಕೋಡಿಕಲ್‌ ಕಡೆಯ ರಸ್ತೆ ರಾಷ್ಟ್ರಿಯ ಹೆದ್ದಾರಿ 66 ಅನ್ನು ಸಂಪರ್ಕಿಸುವಲ್ಲಿ ಹೆದ್ದಾರಿ ಪಕ್ಕದಲ್ಲೇ ಮಳೆ ನೀರು ಚರಂಡಿ ಇದೆ. ಇದಕ್ಕೂ ಸುಮಾರು 200 ಮೀ ದೂರದವರೆಗೆ ಯಾವುದೇ ತಡೆಗೋಡೆ ಇಲ್ಲ. ಭಾರಿ ಮಳೆಯಾದರೆ ಈ ಪ್ರದೇಶದಲ್ಲೂ ರಸ್ತೆಯು ನೀರಿನಿಂದ ಆವೃತವಾಗುತ್ತದೆ. ಹೆದ್ದಾರಿಯಲ್ಲಿ ಚಲಿಸುವ ವಾಹನಗಳು ಇಲ್ಲಿ ಚರಂಡಿಗೆ ಬೀಳುವ ಅಪಾಯವಿದೆ. 

ಕೊಟ್ಟಾರ ಬಳಿ ಜಿಲ್ಲಾ ಪಂಚಾಯಿತಿ ಕಚೇರಿ ಮತ್ತು ರಾಷ್ಟ್ರೀಯ ಹೆದ್ದಾರಿ ನಡುವೆಯೂ ಮಳೆ ನೀರು ಚರಂಡಿ ಹರಿಯುತ್ತದೆ. ಅದರ ಪಕ್ಕದಲ್ಲೇ ಕಿರು ಕಚ್ಚಾ ರಸ್ತೆ ಇದೆ. ಚರಂಡಿ ಉಕ್ಕಿದರೆ ರಸ್ತೆಗೂ ಚರಂಡಿಗೂ ವ್ಯತ್ಯಾಸ ತಿಳಿಯದಂತಾಗುತ್ತದೆ. 

ಆನೆಗುಂಡಿ–ಕಾಪಿಕಾಡ್‌ ನಡುವೆ  ಮಳೆ ನೀರು ಚರಂಡಿ ಪಕ್ಕದ ರಸ್ತೆಯಲ್ಲಿ ಕೆಲವೆಡೆ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಇನ್ನೂ ಕೆಲವು ಕಡೆ ಈ ರಸ್ತೆಯು ತಡೆಗೋಡೆ ಇಲ್ಲದೇ ಅಪಾಯಕಾರಿಯಾಗಿಯೇ ಇದೆ. ನಗರದ ಸುಬ್ರಹ್ಮಣ್ಯ ಪುರ, ಅಬ್ಬಕ್ಕ ನಗರದಲ್ಲಿ ಹೊಸತಾಗಿ ನಿರ್ಮಿಸಿದ ರಸ್ತೆಗಳ ಪಕ್ಕದಲ್ಲೇ ಚರಂಡಿ ಇದೆ. ಇಲ್ಲಿ ಎಲ್ಲೂ ತಡೆಗೋಡೆ ಇಲ್ಲ.

‘ರಸ್ತೆ ಪಕ್ಕದ ಮಳೆ ನೀರು ಚರಂಡಿಗೆ ತಡೆಗೋಡೆಯನ್ನೇ ನಿರ್ಮಿಸದ ಅಪಾಯಕಾರಿ ರಸ್ತೆಗಳು ನಗರದ ಅಲ್ಲಲ್ಲಿ ಕಾಣ ಸಿಗುತ್ತವೆ.  ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಕೈಗೆತ್ತಿ ಕೊಂಡ ಕಾಮಗಾರಿಯನ್ನು ಗಡುವಿನ ಒಳಗೆ ಮುಗಿಸುವ ತರಾತುರಿಯಲ್ಲಿ ಅನೇಕ ಕಡೆ ಚರಂಡಿ ಪಕ್ಕ ತಡೆಗೋಡೆ ನಿರ್ಮಿಸಿಯೇ ಇಲ್ಲ’ ಎನ್ನುತ್ತಾರೆ ಕೋಡಿಕಲ್‌ನ ರಿಕ್ಷಾ ಚಾಲಕ ಶುಭಕರ. 

‘ನಗರದಲ್ಲಿ ಮೊದಲ ಮಳೆಯಲ್ಲಿ ಜೀವ ಬಲಿ ಪಡೆದ ದುರ್ಘಟನೆ ಪಾಲಿಕೆಗೆ, ಜನಪ್ರತಿನಿಧಿಗಳಿಗೆ ಪಾಠವಾಗಬೇಕು.  ರಸ್ತೆ ನಿರ್ಮಿಸಿದರೆ ಸಾಲದು, ಅದರ ಪಕ್ಕದಲ್ಲಿ ಮಳೆ ನೀರು ಹರಿಯುವ ಚರಂಡಿಗೆ ಅಗತ್ಯವಿರುವ ಕಡೆ ತಡೆಗೋಡೆಯನ್ನೂ  ನಿರ್ಮಿಸಬೇಕು’ ಎಂದು ಅವರು ಒತ್ತಾಯಿಸಿದರು.

ದೀಪಕ್‌ ಸಾವು: ಕೇಳುವವರಿಲ್ಲ ಕುಟುಂಬದ ನೋವು

ಮೇ 24ರಂದು ಸುರಿದ ಭಾರಿ ಮಳೆಗೆ ಕೊಟ್ಟಾರ ಪ್ರದೇಶದಲ್ಲಿ ಸೃಷ್ಟಿಯಾದ ಪ್ರವಾಹ ರಿಕ್ಷಾ ಚಾಲಕ ದೀಪಕ್‌ ಆಚಾರ್ಯ (42) ಅವರನ್ನು ಬಲಿ ಪಡೆದಿದೆ. ಕುಟುಂಬದ ಆಧಾರವಾಗಿದ್ದ ದೀಪಕ್‌  ಸಾವಿನಿಂದ ಅವರ ಕುಟುಂಬವು ದಿಕ್ಕೇ ತೋಚದ ಸ್ಥಿತಿಯನ್ನು ತಲುಪಿದೆ. ‘ಮನೆಯಲ್ಲಿ ವೃದ್ಧ ತಾಯಿ ಚಿನ್ನಮ್ಮ, ಅನಾರೋಗ್ಯದ ಕಾರಣಕ್ಕೆ ಕೆಲಸ ಇಲ್ಲದೇ ಮನೆಯಲ್ಲಿರುವ ತಮ್ಮನಿಗೆ ದೀಪಕ್‌ ಆಸರೆಯಾಗಿದ್ದ. ರಿಕ್ಷಾ ದುಡಿಮೆಯಿಂದ ಕುಟುಂಬ ನಿರ್ವಹಣೆ ಕಷ್ಟ ಎಂಬ ಕಾರಣಕ್ಕೆ ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸಿದ್ದ. ಅಷ್ಟರಲ್ಲೇ ಆತನ ದುರ್ಮರಣದಿಂದ ನಮ್ಮ ಕುಟುಂಬಕ್ಕೆ ಇದ್ದ ಆಧಾರ ಸ್ತಂಬವೇ ಕಳಚಿ ಬಿದ್ದಂತಾಗಿದೆ’ ಎನ್ನುತ್ತಾರೆ ದೀಪಕ್ ಅವರ ಅಕ್ಕ ಹೇಮಲತಾ. ‘ಅಮ್ಮನಿಗೆ ಯಾವಾಗಲೂ ಹುಷಾರು ಇರುವುದಿಲ್ಲ. ಅವರನ್ನು ಈಚೆಗೆ ಆಸ್ಪತ್ರೆಗೂ ದಾಖಲಿಸಿದ್ದೆವು. ಇನ್ನೊಬ್ಬ ತಮ್ಮ ಬಾಲ್ಯದಲ್ಲೇ ಅಪಘಾತಕ್ಕೀಡಾಗಿ ಕತ್ತಿನ ಬಳಿ ಏಟಾಗಿತ್ತು. ಆತನಿಗೆ ಕಷ್ಟದ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗದು. ಆತನೂ ಕೆಲಸವಿಲ್ಲದೇ ಮನೆಯಲ್ಲೇ ಇದ್ದಾನೆ. ಕುಟುಂಬ ನಿರ್ವಹಣೆಗೂ ಕಷ್ಟಪಡಬೇಕಾದ ಸ್ಥಿತಿ ಎದುರಾಗಿದೆ’ ಎಂದು ಅವರು ಅಳಲು ತೋಡಿಕೊಂಡರು.

‘ಸಂತ್ರಸ್ತ ಕುಟುಂಬಕ್ಕೆ ಸಿಕ್ಕಿಲ್ಲ ಪರಿಹಾರ’

‘ದುರ್ಘಟನೆ ನಡೆದು 10 ದಿನಗಳು ಕಳೆದಿವೆ. ಇನ್ನೂ ಪಾಲಿಕೆಯಿಂದಾಗಲೀ ಸರ್ಕಾರದಿಂದಾಗಲೀ ಯಾವುದೇ ಪರಿಹಾರ ಸಿಕ್ಕಿಲ್ಲ. ಕುಟುಂಬದ ಸ್ಥಿತಿ ಹೇಗಿದೆ ಎಂದು ನೋಡಲೂ ಯಾವ ಅಧಿಕಾರಿಯೂ ಬಂದಿಲ್ಲ’ ಎಂದು ದೀಪಕ್ ಆಚಾರ್ಯ ಕುಟುಂಬದ ಮೂಲಗಳು ತಿಳಿಸಿವೆ. 

ಕೊಟ್ಡಾರ ರಸ್ತೆಯನ್ನು ಜಲ್ಲಿಗುಡ್ಡೆಆಕಾಶಭವನ ರಸ್ತೆಯು ಸಂಪರ್ಕಿಸುವಲ್ಲಿ ಕಿರುಸೇತುವೆಗೆ ಭದ್ರವಾದ ತಡೆಗೋಡೆ ನಿರ್ಮಿಸಬೇಕು. ಚರಂಡಿಯ ಪಕ್ಕದಲ್ಲೂ ಉದ್ದಕ್ಕೂ ತಡೆಗೋಡೆ ಕಟ್ಟುವ ಅಗತ್ಯವಿದೆ
ಜಗನ್ನಾಥ, ಕೊಟ್ಟಾರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT