ಮಂಗಳವಾರ, ಜುಲೈ 27, 2021
21 °C
ಪ್ರಾಣಿ ದಯಾ ಸಂಘದ ಸಭೆ

ಪ್ರಾಣಿಗಳಿಗೆ ಹಿಂಸೆ ನೀಡಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಕೋವಿಡ್ ಅಥವಾ ಇತರ ಕಾರಣಗಳಿಂದ ಸಾಕು ಪ್ರಾಣಿ, ಪಕ್ಷಿಗಳ ಪೋಷಣೆ, ರಕ್ಷಣೆ ನಿಲ್ಲಬಾರದು, ಅವುಗಳ ಪೋಷಣೆಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ಜಿಲ್ಲಾಡಳಿತದಿಂದ ನೀಡಲಾಗುವುದು. ಪ್ರಾಣಿಗಳ ಮಾರಾಟ
ಅಥವಾ ಕೊಲ್ಲುವುದು ಕಂಡುಬಂದಲ್ಲಿ ಪ್ರಾಣಿ ದಯಾ ಸಂಘದ ಸದಸ್ಯರು ಪ್ರಕರಣ ದಾಖಲಿಸಬೇಕು’ ಎಂದು
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.

ಬುಧವಾರ ಹಮ್ಮಿಕೊಳ್ಳಲಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಪ್ರಾಣಿ ದಯಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳು ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿರುವುದು ಕಂಡುಬರುತ್ತಿದ್ದು, ಅಂತಹ ಪ್ರಾಣಿಗಳ ರಕ್ಷಣೆ ಹಾಗೂ ಪೋಷಣೆಗೆ ಪ್ರಾಣಿ ದಯಾ ಸಂಘವು ಕಾರ್ಯನಿರ್ವಹಿಸುವುದರೊಂದಿಗೆ, ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು, ಪ್ರಾಣಿ ಹಿಂಸೆಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.

ಕಸ ವಿಂಗಡಣೆ ಸರಿಯಾದ ಕ್ರಮದಲ್ಲಿ ಆಗದಿರುವ ಕಾರಣ ಗಾಜು, ಪ್ಲಾಸ್ಟಿಕ್, ಮೂಳೆ ಇನ್ನಿತರ ಅಪಾಯಕಾರಿ ವಸ್ತುಗಳನ್ನು ಪ್ರಾಣಿಗಳು ಸೇವಿಸಿ ಸಾವಿಗೀಡಾಗುತ್ತಿವೆ, ಹಾಗಾಗಿ ತ್ಯಾಜ್ಯ ವಿಂಗಡಣೆಗೆ ಸರಿಯಾದ ಕ್ರಮ ಆಗಬೇಕು, ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲೂ ವೈಜ್ಞಾನಿಕ ಕಸ ವಿಂಗಡಣೆ,  ವಿಲೇವಾರಿ ಮಾಡುವ ವ್ಯವಸ್ಥೆ ಆಗಬೇಕು ಎಂದು ತಿಳಿಸಿದರು.

ನಗರದ ಫುಟ್‍ಪಾತ್‍ಗಳಲ್ಲಿ ಇರುವ ಪೆಟ್ ಶಾಪ್‍ಗಳಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ, ಅವುಗಳು ನೋಂದಣಿಯಾಗಿರುವ ಬಗ್ಗೆ ಮಾಹಿತಿ ಪಡೆಯಬೇಕು, ನೋಂದಣಿ ಆಗದ ಪೆಟ್ ಶಾಪ್‍ಗಳ ವಿರುದ್ಧ ಕಾನೂನು ರೀತ್ಯ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ಗ್ರಾಮಕ್ಕೊಂದು ಗೋಮಾಳ’: ಗೋಶಾಲೆ ನಿರ್ಮಾಣಕ್ಕೆ ಸ್ಥಳ ಗುರುತಿಸಲು ಅಧಿಕಾರಿಗಳು ಕಾಳಜಿ ವಹಿಸಬೇಕು, ಜಿಲ್ಲೆಯಲ್ಲಿ ಪ್ರತಿ ಗ್ರಾಮದಲ್ಲಿ ಗೋಮಾಳ ನಿರ್ಮಿಸಿ ಅದರ ನಿರ್ವಹಣೆಯನ್ನು ಸ್ಥಳೀಯ ದೇವಸ್ಥಾನಗಳಿಗೆ ನೀಡಬೇಕು, ಅದಕ್ಕೆ ಸಂಬಂಧಿಸಿದ ಖರ್ಚು-ವೆಚ್ಚವನ್ನು ಜಿಲ್ಲಾಡಳಿತದ ವತಿಯಿಂದ ಭರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಋಷಿಕೇಶ್ ಭಗವಾನ್ ಸೋನಾವಣೆ, ನಗರ ಎಸಿ‍ಪಿ ಹರಿರಾಮ್ ಶಂಕರ್, ಮಹಾನಗರಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು, ಪ್ರಾಣಿ ದಯಾ ಸಂಘದ ಸದಸ್ಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.