ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಪೋಡಿ ಅಭಿಯಾನ; ರೈತರ ನೆರವು ಕೋರಿದ ಡಿ.ಸಿ

ಆಕಾರ್‌ ಬಂದ್‌ ದಾಖಲೆಗೂ–ವಾಸ್ತವಕ್ಕೂ ತಾಳೆಯಾಗದೇ ಸಮಸ್ಯೆ
Published 14 ಆಗಸ್ಟ್ 2024, 5:03 IST
Last Updated 14 ಆಗಸ್ಟ್ 2024, 5:03 IST
ಅಕ್ಷರ ಗಾತ್ರ

ಮಂಗಳೂರು: ‘ಪ್ರತಿ ತಾಲ್ಲೂಕಿನ ನಿರ್ದಿಷ್ಟ ಗ್ರಾಮಗಳನ್ನು ಗುರುತಿಸಿ ಒಂದೊಂದೇ ಗ್ರಾಮದಲ್ಲಿ ಸಮಗ್ರ ಸರ್ವೇ ಕೈಗೊಳ್ಳುವ ಮೂಲಕ ಅವುಗಳನ್ನು ಪೋಡಿ ಮುಕ್ತ ಗ್ರಾಮಗಳನ್ನಾಗಿ ರೂಪಿಸಲಿದ್ದೇವೆ. ಅದಕ್ಕೆ ಕೃಷಿಕರೂ ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಕೋರಿದರು.

ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಇಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಪೋಡಿಗಾಗಿ ಸಲ್ಲಿಸಿದ ಅರ್ಜಿಗಳು ವಿಲೇಯಾಗದೇ ಸಮಸ್ಯೆಯಾಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡರು.

‘ಎಲ್ಲ ಗ್ರಾಮಗಳನ್ನು ಪೋಡಿ ಮುಕ್ತ ಗೊಳಿಸಬೇಕು ಎಂದು ಸರ್ಕಾರ ಸೂಚಿಸಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕಾರ್‌ಬಂದ್‌ ದಾಖಲೆಗಳಲ್ಲಿ ಇರುವ ಜಮೀನಿನ ವಿಸ್ತೀರ್ಣಕ್ಕೂ ವಾಸ್ತವಕ್ಕೂ ತಾಳೆಯಾಗುತ್ತಿಲ್ಲ. ಒಂದೇ ಸರ್ವೇ ನಂಬರ್‌ನಲ್ಲಿರುವ ಜಮೀನುಗಳಿಗೆ ಪ್ರತ್ಯೇಕ ಸರ್ವೇ ನಂಬರ್ ನೀಡುವ ಕೆಲಸ ನಡೆದಿಲ್ಲ. ಪೋಡಿ  ನಡೆಸಲು ಸರ್ವೆಯರ್‌ಗಳು ಸ್ಥಳಕ್ಕೆ ಹೋದಾಗ ಅಕ್ಕ–ಪಕ್ಕದವರು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪೋಡಿ ನಡೆಸಲು ಕೊರಿ 7 ವರ್ಷಗಳಲ್ಲಿ ಸಲ್ಲಿಕೆಯಾದ ಅರ್ಜಿಗಳಲ್ಲಿ 8 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇಗೆ ಬಾಕಿ ಇವೆ. ಒಂದೊಂದೇ ಗ್ರಾಮಗಳನ್ನು ಸಂಪೂರ್ಣ ಪೋಡಿ ಮುಕ್ತಗೊಳಿಸಬೇಕಿದೆ’ ಎಂದರು.

ಇದಕ್ಕೆ ಸಮ್ಮತಿ ಸೂಚಿಸಿದ ರೈತ ಮುಖಂಡರು, ‘ಪೋಡಿ ನಡೆಸುವ ವೇಳೇ ಅರಣ್ಯ ಇಲಾಖೆ ಜಮೀನು ಎಷ್ಟು ಎಂಬುದನ್ನೂ ಸ್ಪಷ್ಟವಾಗಿ ಗೊತ್ತುಪಡಿಸಿ ಅರಣ್ಯ ಇಲಾಖೆಯ ಕಿರುಕುಳ ತಪ್ಪಿಸಬೇಕು’ ಎಂದು ಕೋರಿದರು. 

‘ಕೃಷಿ ಪಂಪ್‌ಸೆಟ್‌ಗೆ ಆಧಾರ್ ಜೋಡಣೆ ಮಾಡುವಾಗ ಹತ್ತಾರು ಸಮಸ್ಯೆ ಎದುರಾಗುತ್ತಿದೆ. ತಂದೆಯವರ ಹೆಸರಿನಲ್ಲಿ ಜಮೀನು ಇದ್ದರೆ, ಮಕ್ಕಳು  ₹ 500ರ  ಛಾಪಾ ಕಾಗದದಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು. ಹೆಚ್ಚುವರಿ  ಠೇವಣಿಯನ್ನು ಕಟ್ಟಬೇಕು. ಇದು ₹ 6 ಸಾವಿರದವರೆಗೂ ಬರುತ್ತಿದೆ’ ಎಂದು ರೈತರು ಒತ್ತಾಯಿಸಿದರು.

‘ಛಾಪಾ ಕಾಗದದಲ್ಲಿ ಪ್ರಮಾಣಪತ್ರ ಸಲ್ಲಿಕೆ ವೆಚ್ಚವನ್ನು ಮೆಸ್ಕಾಂ ಭರಿಸಲಿದೆ’ ಎಂದು ಅಧಿಕಾರಿಯೊಬ್ಬರು ಭರವಸೆ ನೀಡಿದರು. ಬಳಿಕ ರೈತರು ಇದಕ್ಕೆ ಸಮ್ಮತಿ ಸೂಚಿಸಿದರು.

ತುಂಬೆ ಅಣೆಕಟ್ಟೆಗಾಗಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡಲು ದಶಕಗಳಿಂದ ಸತಾಯಿಸುತ್ತಿರುವ ಬಗ್ಗೆ ರೈತರು ಅಳಲು ತೋಡಿಕೊಂಡರು. ‘ಎರಡೇ ದಿನಗಳಲ್ಲಿ ಪರಿಹಾರ ನೀಡಬೇಕು. ವ್ಯಾಜ್ಯಗಳಿರುವ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಹಣ ಠೇವಣಿ ಇಡಲು ಕ್ರಮವಹಿಸಬೇಕು’ ಎಂದು ಪಾಲಿಕೆಯ ಭೂಸ್ವಾಧೀನ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಹೊರ ರಾಜ್ಯಗಳ, ವಿದೇಶದ ಕಳಪೆ ಅಡಿಕೆಯನ್ನು ಜಿಲ್ಲೆಗೆ ತರಿಸಿ, ಇಲ್ಲಿನ ಉತ್ತಮ ಗುಣಮಟ್ಟದ ಅಡಿಕೆಗೆ ಬೆರೆಸಿ ಮಾರಾಟ ಮಾಡುವ ಬಗ್ಗೆ ಕೆಲ ಬೆಳೆಗಾರರು ‌ದೂರಿದರು. ಇದರ ಪತ್ತೆಗೆ ವಿಚಕ್ಷಣಾ ದಳ ರಚಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ಜಿಲ್ಲೆಯಲ್ಲಿ ಮಂಗಗಳು ಹಾಗೂ ನವಿಲುಗಳ ಹಾವಳಿಯಿಂದ ತತ್ತರಿಸಿದ್ದೇವೆ. ನೆಟ್ಟಣದಲ್ಲಿ ಮಂಕಿ ಪಾರ್ಕ್‌ ನಿರ್ಮಿಸುವ ಪ್ರಸ್ತಾವವನ್ನು ಜಾರಿಗೆ ತರಬೇಕು ಎಂದು ರೈತರು ಒತ್ತಾಯಿಸಿದರು.

ವಿವಿಧ ರೈತ ಸಂಘಟನೆಗಳ ಪ್ರಮುಖರಾದ ಮನೋಹರ ಶೆಟ್ಟಿ, ಶ್ರೀಧರ ಶೆಟ್ಟಿ ಬೈಲುಗುತ್ತು, ರವಿಕಿರಣ ಪುಣಚ, ಸುಬ್ರಾಯ ಶೆಟ್ಟಿ ಮತ್ತಿತರರು ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್ ಕೆ., ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರ, ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್, ಜಂಟಿ ಕೃಷಿ ನಿರ್ದೇಶಕ ಕೆಂಪೇ ಗೌಡ, ಡಿವೈಎಸ್‌ಪಿ ಮಂಜುನಾಥ್‌ ಭಾಗವಹಿಸಿದ್ದರು.

440 ಕೆ.ವಿ ವಿದ್ಯುತ್ ಮಾರ್ಗಕ್ಕೆ ವಿರೋಧ

ಉಡುಪಿ ಜಿಲ್ಲೆಯ ಯುಪಿಸಿಎಲ್‌ ಸ್ಥಾವರದಿಂದ ಕಾಸರಗೋಡಿಗೆ 440 ಕೆ.ವಿ ವಿದ್ಯುತ್ ಮಾರ್ಗ ನಿರ್ಮಿಸುವುದಕ್ಕೆ ರೈತರು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದರು.  ‘ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್‌ನ್ನು ಇತರ ರಾಜ್ಯಗಳಿಗೆ ಪೂರೈಸುವುದಕ್ಕೆ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಇದು ಖಾಸಗಿ ಯೋಜನೆಯಲ್ಲ. ಕೇಂದ್ರ ಸರ್ಕಾರದ ಯೋಜನೆ. ಆದರೂ ಈ ಯೋಜನೆ ಅನುಷ್ಠಾನದ ಹೊಣೆ ಹೊತ್ತ ನೋಡೆಲ್ ಏಜೆನ್ಸಿ ರೈತರು ಹಾಗೂ ಜನಪ್ರತಿನಿಧಿಗಳ ಜೊತೆ ಸಭೆ ಆಯೋಜಿಸಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುತ್ತೇನೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT