ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತೆ ವಹಿಸಿ

ಮಳೆಗಾಲದ ಹಾನಿ ತಪ್ಪಿಸಲು ಈಗಿನಿಂದಲೇ ಕ್ರಮ: ಜಿಲ್ಲಾಧಿಕಾರಿ
Last Updated 22 ಮೇ 2020, 15:11 IST
ಅಕ್ಷರ ಗಾತ್ರ

ಮಂಗಳೂರು: ಈ ವರ್ಷ ಕಳೆದ ಬಾರಿಗಿಂತ ಹೆಚ್ಚುವರಿ ಮಳೆಯಾದರೆ ಸಮರ್ಥವಾಗಿ ನಿಭಾಯಿಸಲು ಅಗತ್ಯವಾದ ಸಿದ್ಧತೆಗಳನ್ನು ಆಯಾ ಇಲಾಖೆಯ ಅಧಿಕಾರಿಗಳು ಮಾಡಿಕೊಂಡಿರಬೇಕು. ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಈಗಾಗಲೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ವರ್ಷ ಅಧಿಕ ಮಳೆಯಿಂದಾಗಿ ಜಿಲ್ಲೆಯ ಹಲವು ಪ್ರದೇಶದಲ್ಲಿ ಗುಡ್ಡ ಕುಸಿತ ಹಾಗೂ ನೆರೆಯಿಂದ ಜನರು ತೀವ್ರವಾಗಿ ತೊಂದರೆಗೆ ಸಿಲುಕಿದ್ದರು. ಇಂತಹ ಸಂಭಾವ್ಯ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಪಾಯದ ಜಾಗದಲ್ಲಿ ಇರುವ ಮನೆಗಳನ್ನು ತೆರೆವುಗೊಳಿಸಿ, ಅವರಿಗೆ ಸುರಕ್ಷಿತವಾದ ಜಾಗದಲ್ಲಿ ನೆಲೆಸುವಂತೆ ಸೂಚಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದು ಹೇಳಿದರು.

ಈ ವರ್ಷ ಅಂತಹ ಯಾವುದೇ ತೊಂದರೆ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆಯಾಗಿ ಎಲ್ಲ ಕ್ರಮಗಳನ್ನು ವಹಿಸಬೇಕು. ಧಾರಾಕಾರ ಮಳೆಯಿಂದ ಅಪಾಯ ಸಂಭವಿಸುವ ಸ್ಥಳಗಳಲ್ಲಿ ತಕ್ಷಣ ನೆರವಿಗಾಗಿ ಜಿಲ್ಲಾಡಳಿತದಿಂದ ಅಗತ್ಯವಿರುವ ಬೋಟ್, ಲೈಫ್ ಜಾಕೆಟ್, ಟಾರ್ಚ್, ರೋಪ್ ಸೇರಿದಂತೆ ವಿವಿಧ ಉಪಕರಣಗಳನ್ನು ಜಿಲ್ಲಾಡಳಿತ ಒದಗಿಸಲಿದೆ ಎಂದು ತಿಳಿಸಿದರು.

ಕಡಲಕೊರೆತ ತಡೆಯಲು ಎಡಿಬಿ ವತಿಯಿಂದ ಶಾಶ್ವತ ತಡೆಗೋಡೆ ಕಾಮಗಾರಿ ನಡೆಸಿದ ಸ್ಥಳದಲ್ಲಿಯೇ ಕಳೆದ ವರ್ಷ ಮತ್ತೆ ಕಡಲಕೊರೆತ ಕಾಣಿಸಿಕೊಂಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಬಾರಿ ಅಂತಹ ಪ್ರಕರಣ ನಡೆಯದಂತೆ ಮುನ್ನಚ್ಚರಿಕೆ ವಹಿಸಲು ಸೂಚಿಸಿದರು.

ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಮಾತನಾಡಿ, ನಗರದಲ್ಲಿ ಅಪಾರ ಮಳೆಯಿಂದ ತೊಂದರೆಗೀಡಾಗುವ ಪ್ರದೇಶವನ್ನು ಈಗಾಗಲೇ ಗುರುತಿಸಲಾಗಿದೆ. ನಗರದಲ್ಲಿರುವ 11 ರಾಜಕಾಲುವೆಗಳ ಹೂಳೆತ್ತಲು ₹1.68 ಕೋಟಿ ಮೊತ್ತದ ಕಾಮಗಾರಿ ನಡೆಯುತ್ತಿದ್ದು, ಶೇ 80 ರಷ್ಟು ಕಾಮಗಾರಿ ಮುಗಿದಿವೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ. ಸೆಲ್ವಮಣಿ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಕರಾವಳಿ ಕಾವಲು ಪಡೆ ಡಿಐಜಿ ವೆಂಕಟೇಶ್, ಡಿಸಿಪಿ ಅರುಣಾಂಗ್ಷುಗಿರಿ, ವಿಪತ್ತು ನಿರ್ವಹಣಾ ಘಟಕದ ಅಧಿಕಾರಿ ವಿಜಯಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT