ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ನೀತಿ ಸಂಹಿತೆಯಿಂದ ಮರಳಿತು ಅಂದ

ದಕ್ಷಿಣ ಕನ್ನಡ: 1,350 ಕಡೆ ಗೋಡೆಬರಹ, ಪೋಸ್ಟರ್‌, ಬ್ಯಾನರ್ ತೆರವು
Published 20 ಮಾರ್ಚ್ 2024, 9:11 IST
Last Updated 20 ಮಾರ್ಚ್ 2024, 9:11 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ  ಕನ್ನಡ ಜಿಲ್ಲೆಯಲ್ಲಿ ಅನಧಿಕೃತ ಬ್ಯಾನರ್‌, ಗೋಡೆಬರಹಗಳಿಂದ ಅಂದಗೆಟ್ಟಿದ್ದ ಸಾರ್ವಜನಿಕ ಪ್ರದೇಶಗಳು ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ ಈ ಹಾವಳಿಯಿಂದ ಮುಕ್ತವಾಗಿವೆ.

ನೀತಿ ಸಂಹಿತೆ ಜಾರಿಯಾದ 48 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 1,350 ಕಡೆ ಗೋಡೆಬರಹ, ಪೋಸ್ಟರ್‌, ಬ್ಯಾನರ್ ಹಾಗೂ ಇತರ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಸರ್ಕಾರಿ ಅಥವಾ ಸಾರ್ವಜನಿಕ ಜಾಗಗಳಲ್ಲಿ ಅನುಮತಿ ಪಡೆಯದೇ ಬ್ಯಾನರ್ ಅಥವಾ ಕಟೌಟ್ ಅಳವಡಿಸಲು ಅವಕಾಶವಿಲ್ಲ. ಧಾರ್ಮಿಕ ಕಾರ್ಯಕ್ರಮದ ಬ್ಯಾನರ್‌ಗಳಿಗೆ ಸ್ವಲ್ಪ ಮಟ್ಟಿನ ವಿನಾಯಿತಿ ನೀಡಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್‌ಗಳನ್ನೂ ಮನಸೋ ಇಚ್ಛೆ ಅಳವಡಿಸುವಂತಿಲ್ಲ. ದೇವಸ್ಥಾನದಲ್ಲಿ ಜಾತ್ರೆ, ಬ್ರಹ್ಮಕಲಶೋತ್ಸವ, ದೈವಸ್ಥಾನಗಳಲ್ಲಿ ಕೋಲ ನೇಮ ಹಮ್ಮಿಕೊಂಡರೆ,  ಆ ಸ್ಥಳದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಸಲುವಾಗಿ ಒಂದು ಬ್ಯಾನರ್‌ ಅನ್ನು ಮಾತ್ರ ಅಳವಡಿಸುವುದಕ್ಕೆ ಅವಕಾಶ ನೀಡಲಾಗುತ್ತದೆ. ಅದಕ್ಕೂ ಚುನಾವಣಾಧಿಕಾರಿ ಅಥವಾ ಆಯಾ ಪ್ರದೇಶದ ಸಹಾಯಕ ಚುನಾವಣಾಧಿಕಾರಿಯವರಿಂದ ಅನುಮತಿ ಪಡೆಯುವುದು ಕಡ್ಡಾಯ.

‘ಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರಿ ಸ್ವತ್ತುಗಳಲ್ಲಿದ್ದ 27 ಪ್ರಚಾರಗಳನ್ನು ತೆರವುಗೊಳಿಸಲಾಗಿದೆ. ಸಾರ್ವಜನಿಕ ಜಾಗಗಳಲ್ಲಿ 362 ಕಡೆ ಪ್ರಚಾರ ಸಾಮಗ್ರಿಗಳು ಕಂಡುಬಂದಿದ್ದು, ಅವುಗಳಲ್ಲಿ 297 ಸಾಮಾಗ್ರಿಗಳನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಖಾಸಗಿ ಜಾಗದಲ್ಲಿದ್ದ 52 ಕಡೆಗಳಲ್ಲಿದ್ದ ಪ್ರಚಾರ ಸಾಮಗ್ರಿಗಳಲ್ಲಿ 23 ಕಡೆ ತೆರವುಗೊಳಿಸಲಾಗಿದೆ’ ಎಂದು ಪಾಲಿಕೆಯ ಮೂಲಗಳು ತಿಳಿಸಿವೆ.

‘ಅನಧಿಕೃತವಾಗಿ ಬ್ಯಾನರ್‌, ಕಟೌಟ್‌ಗಳನ್ನು ಅಳವಡಿಸಿ ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸುವವರ ವಿರುದ್ಧ 1981ರ ಕರ್ನಾಟಕ ಮುಕ್ತ ತಾಣಗಳ (ವಿರೂಪಗೊಳಿಸುವಿಕೆ ತಡೆ) ಕಾಯ್ದೆಯಡಿ ಕ್ರಮ ಕೈಗೊಳ್ಳಲು ಅವಕಾಶವಿದೆ. ಇಂತಹ ಬ್ಯಾನರ್‌, ಕಟೌಟ್‌ಗಳನ್ನು ತೆರವುಗೊಳಿಸಿ ಅವುಗಳನ್ನು ಅಳವಡಿಸಿದವರಿಂದಲೇ ಅದಕ್ಕೆ ತಗಲುವ ವೆಚ್ಚವನ್ನು ವಸೂಲಿ ಮಾಡಬಹುದು. ಆದರೂ ಈ ಕಾಯ್ದೆಯನ್ನು ನಗರ ಸ್ಥಳೀಯ ಸಂಸ್ಥೆಗಳು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿಲ್ಲ. ಚುನಾವಣೆಯ ಸಂದರ್ಭದಲ್ಲಿ ಇಂತಹ ಕಟ್ಟುನಿಟ್ಟಿನ ಕ್ರಮ ಸಾಧ್ಯವಾಗುವುದಾದರೆ ಉಳಿದ ಅವಧಿಯಲ್ಲಿ ಏಕೆ ಸಾಧ್ಯವಾಗದು’ ಎಂದು ಪ್ರಶ್ನಿಸುತ್ತಾರೆ ಸೊಸೈಟಿ ಫಾರ್‌ ಫಾರೆಸ್ಟ್‌ ಎನ್‌ವಿರಾನ್‌ಮೆಂಟ್‌ ಆ್ಯಂಡ್‌ ಕ್ಲೈಮೇಟ್‌ ಚೇಂಜ್‌ನ ವಕ್ತಾರ ಭುವನ್ ಎಂ.

‘ಫ್ಲೆಕ್ಸ್‌, ಬ್ಯಾನರ್‌ಗಳ ತಯಾರಿಸಲು ಪ್ಲಾಸ್ಟಿಕ್‌ ಬಳಸಿದರೆ ಅದು ಮಣ್ಣಿನಲ್ಲಿ ಬೆರೆಯುವುದಕ್ಕೆ ನೂರಾರು ವರ್ಷಗಳು ಬೇಕು. ಸರ್ಕಾರವೇ ಇವುಗಳ ಬಳಕೆ ನಿಷೇಧಿಸಿದ್ದರೂ ನಗರದಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಏಕಬಳಕೆ ಪ್ಲಾಸ್ಟಿಕ್‌ ನಿಷೇಧ ಜಾರಿಗೊಳಿಸುವ ಸಲುವಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪಾಲಿಕೆಯ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲೂ ಈ ಬಗ್ಗೆ ಪ್ರಶ್ನೆ ಮಾಡಿದ್ದೆ. ಈ ಬಗ್ಗೆ ದೂರು ನೀಡಲು ರೂಪಿಸಿರುವ ಆ್ಯಪ್‌ ಕೂಡ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಚುನಾವಣೆ ನೀತಿ ಸಂಹಿತೆ ಇಲ್ಲದ ವೇಳೆಯೂ ನಗರದ ಅಂದಗೆಡಿಸುವ ಫ್ಲೆಕ್ಸ್‌ ಬ್ಯಾನರ್‌ಗಳನ್ನು ಅಳವಡಿಸುವುದಕ್ಕೆ ಅವಕಾಶ ನೀಡಬಾರದು. ಸಾರ್ವಜನಿಕ ಸ್ಥಳಗಳ ಅಂದವನ್ನು ಕಾಪಾಡಲು ಯಾವುದೇ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿಯದೇ ಪಾಲಿಕೆ ಆಯುಕ್ತರು ಕಾರ್ಯನಿರ್ವಹಿಸಬೇಕು. ಜಿಲ್ಲಾಧಿಕಾರಿಯವರೂ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ನಗರದಲ್ಲಿ ಕೆಲವು ಕಡೆ ಪೋಸ್ಟರ್‌ಗಳನ್ನು ಪೂರ್ತಿ ತೆರವುಗೊಳಿಸಿಲ್ಲ. ಅವುಗಳ ಮೇಲೆ ಕಾಟಾಚಾರಕ್ಕೆ ಬಿಳಿ ಬಣ್ಣವನ್ನು ಬಳಿಯಲಾಗಿದೆ ಎಂದೂ ಸಾರ್ವಜನಿಕರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT