ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ಸನ್ನದ್ಧ: ಡಾ.ರಾಜೇಂದ್ರ

Last Updated 24 ಏಪ್ರಿಲ್ 2021, 5:13 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿದ್ದರೂ, ಮುಂದಿನ 15 ದಿನಗಳವರೆಗೆ ಎಲ್ಲ ವನ್ನೂ ಸಮರ್ಪಕವಾಗಿ ನಿಭಾಯಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

ನಗರ ಪೊಲೀಸ್ ಕಮಿಷನರ್‌ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್–19 ನಿಯಂತ್ರಣದಲ್ಲಿ ಜನರ ಸಹಕಾರ ಅಗತ್ಯ. ಸರ್ಕಾರದ ಆದೇಶಗಳನ್ನು ಪಾಲಿಸಿ ಕೊಂಡು, ಕಠಿಣ ಪರಿಸ್ಥಿತಿಯ ಲಾಕ್‌ಡೌನ್‌ಗೆ ಅವಕಾಶ ನೀಡದಂತೆ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಕೋವಿಡ್–19 ಪ್ರಕರಣಗಳು ಈಗಿನ ಪರಿಸ್ಥಿತಿಯಲ್ಲಿ ಮುಂದುವರಿದರೆ 15 ದಿನಗಳ ಬಳಿಕ ಜಿಲ್ಲೆಯ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಸೇರಿದಂತೆ ಬಿಕ್ಕಟ್ಟು ಎದುರಾಗಬಹುದು. ಆದರೆ ಅವೆಲ್ಲವನ್ನೂ ಎದುರಿಸಲು ಈಗಾಗಲೇ ಜಿಲ್ಲಾಡಳಿತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.

31 ಆಸ್ಪತ್ರೆ, 124 ನರ್ಸಿಂಗ್‌ ಹೋಂ: ಕೋವಿಡ್ ಚಿಕಿತ್ಸೆಗೆ 31 ಆಸ್ಪತ್ರೆಗಳ ಜತೆಗೆ ಜಿಲ್ಲೆಯಲ್ಲಿ 124 ನರ್ಸಿಂಗ್ ಹೋಂಗಳು ಲಭ್ಯವಿವೆ. ಇದರಲ್ಲಿ 74 ಮಂಗಳೂರಿನಲ್ಲೇ ಇವೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 5ಸಾವಿರ ಹಾಸಿಗೆಗಳು ಲಭ್ಯವಾಗಿವೆ. ಅದರಲ್ಲಿ 3,800 ಸಾಮಾನ್ಯ ಹಾಸಿಗೆಗಳು, 300 ಐಸಿಯು, ವೆನ್ಲಾಕ್ ಆಸ್ಪತ್ರೆಯಲ್ಲಿ 274 ಆಮ್ಲಜನಕಯುಕ್ತ ಹಾಸಿಗೆಗಳು, 70 ವೆಂಟಿಲೇಟರ್‌ಗಳು ಲಭ್ಯ ಇವೆ. ನೆರೆಯ ಜಿಲ್ಲೆಗಳಿಂದಲೂ ರೋಗಿಗಳು ಜಿಲ್ಲೆಗೆ ಬರುವುದರಿಂದ ಮುಂದೆ ಬೆಡ್‌ಗಳ ಕೊರತೆ ಕಾಣಿಸಿಕೊಳ್ಳಬಹುದು. ಆರೋಗ್ಯ ಸೇವೆಯನ್ನು ಇತರ ಜಿಲ್ಲೆಯ ವರಿಗೆ ನಿರಾಕರಿಸಲು ಸಾಧ್ಯವಿಲ್ಲ. ಹಾಗಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಆದ್ಯತೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಹೋಟೆಲ್‌ ಹಾಗೂ ಆಸ್ಪತ್ರೆ ಸಂಘಗಳ ಜೊತೆ ಮಾತುಕತೆ ನಡೆಸಲಾಗುವುದು. ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಬಿಕ್ಕಟ್ಟಿನ ಸಂದರ್ಭದಲ್ಲಿ ಬೆಡ್, ಆಕ್ಸಿಜನ್‌ಗೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ವೆನ್ಲಾಕ್ ವೈದ್ಯಕೀಯ ಬ್ಲಾಕ್ ಸಂಪೂರ್ಣವಾಗಿ ಕೋವಿಡ್‌ಗೆ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಗಾಬರಿ ಬೇಡ; ಪರೀಕ್ಷೆ ಮಾಡಿಸಿಕೊಳ್ಳಿ: ಜನಸಾಮಾನ್ಯರು ಯಾವುದೇ ರೀತಿ ಯಲ್ಲಿ ಗಾಬರಿಗೊಳ್ಳುವ ಅಗತ್ಯವಿಲ್ಲ. ಆದರೆ ಕೋವಿಡ್‌ಗೆ ಸಂಬಂಧಿಸಿದ ಯಾವುದೇ ರೀತಿಯ ಸಣ್ಣ ಪುಟ್ಟ ಲಕ್ಷಣ ಕಂಡು ಬಂದಾಗಲೇ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ನಗರ ಪೊಲೀಸ್ ಕಮಿಷನರ್‌ ಎನ್. ಶಶಿಕುಮಾರ್, ಡಿಸಿಪಿಗಳಾದ ಹರಿರಾಂ, ವಿನಯ್ ಗಾಂವ್ಕರ್ ಇದ್ದರು.

ರೆಮ್‌ಡಿಸಿವರ್, ಆಮ್ಲಜನಕ ಲಭ್ಯ
ವೆನ್ಲಾಕ್ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ರೆಮ್‌ಡಿಸಿವರ್ ಲಭ್ಯವಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೊರತೆಯ ಬಗ್ಗೆ ಮಾಹಿತಿ ದೊರಕಿದ್ದು, ಅವರಿಗೆ ಪೂರೈಕೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದರು.

ಆಸ್ಪತ್ರೆಯಲ್ಲಿ ಇರಿಸಿಕೊಂಡು ಚಿಕಿತ್ಸೆ ಕೊಡುವಷ್ಟು ರೋಗ ಲಕ್ಷಣವಿಲ್ಲದ ಹಾಗೂ ಮನೆಯಲ್ಲಿ ವ್ಯವಸ್ಥೆ ಇಲ್ಲದ ರೋಗಿಗಳಿಗೆ ಕೋವಿಡ್ ಸೆಂಟರ್‌ಗಳ ಮೂಲಕ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT