ಮಂಗಳವಾರ, ಜೂಲೈ 7, 2020
28 °C
ಇಂದು ಕೇರಳಕ್ಕೆ ಮುಂಗಾರು ಪ್ರವೇಶ: ಸಿದ್ಧತೆ ಆರಂಭಿಸಿದ ದ.ಕ. ಜಿಲ್ಲಾಡಳಿತ

ಮುಂಗಾರಿಗೆ ದಕ್ಷಿಣ ಕನ್ನಡ ಸಿದ್ಧತೆ: 2 ದಿನಗಳಲ್ಲಿ ಎನ್‌ಡಿಆರ್‌ಎಫ್‌ ತಂಡದ ಆಗಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮುಂಗಾರು ಮಳೆ ಈ ಬಾರಿ ಸೋಮವಾರ ಕೇರಳದ ಕರಾವಳಿ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆಗೆ ಅಗತ್ಯ ಸಿದ್ಧತೆಗಳು ಆರಂಭವಾಗಿವೆ. ಇನ್ನೆರಡು ದಿನದಲ್ಲಿ ಎನ್‌ಡಿಆರ್‌ಎಫ್‌ ತಂಡ ಕೂಡ ಜಿಲ್ಲೆಗೆ ಬರುವ ಸಾಧ್ಯತೆ ಇದೆ. ತಗ್ಗು ಪ್ರದೇಶಗಳು ಹಾಗೂ ಕಳೆದ ಬಾರಿ ಅನಾಹುತಕ್ಕೆ ಒಳಗಾದ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ರಾಜ್ಯದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತು ಪ್ರಕೃತಿ ವಿಕೋಪವನ್ನು ಸಮರ್ಪಕವಾಗಿ ಎದುರಿಸಲು ಎನ್‌ಡಿಆರ್‌ಎಫ್‌ ಬೆಟಾಲಿಯನ್‌ ನಿಯೋಜಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಒಂದೆರಡು ದಿನದೊಳಗೆ ರಾಜ್ಯಕ್ಕೆ ತಂಡಗಳು ಬರುವ ಸಾಧ್ಯತೆ ಇದೆ.

ಎನ್‌ಡಿಆರ್‌ಎಫ್‌ ದಕ್ಷಿಣ ವಲಯದ ಕಚೇರಿ ಆಂಧ್ರಪ್ರದೇಶದ ಗುಂಟೂರಿನಲ್ಲಿದ್ದು, ತುರ್ತು ಸಂದರ್ಭಗಳಲ್ಲಿ ಅತಿವೃಷ್ಟಿ ಪ್ರದೇಶಗಳಿಗೆ ತಲುಪಲು ವಿಳಂಬವಾಗುತ್ತದೆ. ಹೀಗಾಗಿ ಈ ವರ್ಷ ಮುಂಚಿತವಾಗಿಯೇ ಎನ್‌ಡಿಆರ್‌ಎಫ್‌ ಬೆಟಾಲಿಯನ್‌ ತರಿಸಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿ, ಆಂಧ್ರದ ಗುಂಟೂರು ಎನ್‌ಡಿಆರ್‌ಎಫ್‌ ಮುಖ್ಯಸ್ಥರಿಗೆ ಪತ್ರ ಬರೆದು ರಾಜ್ಯಕ್ಕೆ ಬೆಟಾಲಿಯನ್‌ ಕಳುಹಿಸಿಕೊಡುವಂತೆ ಮನವಿ ಮಾಡಿದ್ದು, 4 ತಂಡಗಳನ್ನು ಕಳುಹಿಸಿಕೊಡಲಾಗುತ್ತಿದೆ.

ದ.ಕ.-ಉಡುಪಿಗೆ 1 ಬೆಟಾಲಿಯನ್‌: ಕಳೆದ ಎರಡು ವರ್ಷಗಳಲ್ಲಿ ಮಳೆಯಿಂದಾಗಿ ಸಂಭವಿಸಿದ ಅನಾಹುತಗಳನ್ನು ಪರಿಗಣಿಸಿ, ದಕ್ಷಿಣ ಕನ್ನಡ, ಕೊಡಗು, ಬೆಳಗಾವಿ, ಧಾರವಾಡ ಜಿಲ್ಲೆಗಳನ್ನು 4 ಕೇಂದ್ರಗಳನ್ನಾಗಿ ವಿಭಿಜಿಸಿದ್ದು, ನಾಲ್ಕು ಎನ್‌ಡಿಆರ್‌ಎಫ್‌ ಬೆಟಾಲಿಯನ್‌ ನಿಯೋಜಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಟಾಲಿಯನ್‌ ಉಡುಪಿ ಮತ್ತು ಉತ್ತರ ಕನ್ನಡದ ಮೇಲೂ ನಿಗಾ ಇರಿಸಿದರೆ, ಕೊಡಗಿನ ಬೆಟಾಲಿಯನ್‌ ಮೈಸೂರು, ಹಾಸನ ಮತ್ತು ಮಲೆನಾಡಿನ ಇತರ ಜಿಲ್ಲೆಗಳಲ್ಲಿ ಕಾರ್ಯಾಚರಣೆಗೆ ಇಳಿಯಲಿದೆ.

ಮಳೆಗಾಲದ ಪೂರ್ವ ಸಿದ್ಧತಾ ಸಭೆ: ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಡಾ. ಮುರಲೀ ಮೋಹನ್‌ ಚೂಂತಾರು ನೇತೃತ್ವದಲ್ಲಿ ಮುಂಗಾರು ಸಿದ್ಧತಾ ಸಭೆ ನಡೆಸಲಾಯಿತು. ಸಮುದ್ರದ ತೀರಗಳಾದ ಸೋಮೇಶ್ವರ, ಉಳ್ಳಾಲ, ಮೊಗವೀರ ಪಟ್ಣ, ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು, ಸುರತ್ಕಲ್ ಮತ್ತು ಫಾತಿಮ ಬೀಚ್‌ಗಳಲ್ಲಿ ಗೃಹರಕ್ಷಕರನ್ನು ಮುಂಜಾಗ್ರತೆ ಕ್ರಮವಾಗಿ ನಿಯೋಜಿಸಲಾಗುವುದು ಎಂದು ಡಾ.ಚೂಂತಾರು ತಿಳಿಸಿದರು.

ನೆರೆ ಪೀಡಿತ ಪ್ರದೇಶಗಳಾದ ಉಪ್ಪಿನಂಗಡಿ, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ಪ್ರದೇಶಗಳಲ್ಲಿ ಗೃಹರಕ್ಷಕರು ಸನ್ನದ್ಧರಾಗಬೇಕು. ಎಲ್ಲ ಘಟಕಗಳಲ್ಲಿಯೂ ಲೈಫ್ ಜಾಕೆಟ್, ರೋಪ್, ವುಡ್‌ಕಟರ್‌, ಟಾರ್ಚ್ ಲೈಟ್‌ಗಳನ್ನು ಸಿದ್ಧಪಡಿಸಿ, ಮುಂಜಾಗರೂಕತೆ ತೆಗೆದುಕೊಳ್ಳಲು ಘಟಕಾಧಿಕಾರಿಗಳಿಗೆ ಆದೇಶಿಸಿದರು.

ಎಚ್ಚರದಿಂದ ಇರಲು ಸೂಚನೆ

ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಇದರ ಪ್ರಭಾವದಿಂದ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ದಿನಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಕರಾವಳಿ ಭಾಗದಲ್ಲಿ ಸೋಮವಾರ ಆರೆಂಜ್‌ ಅಲರ್ಟ್ ಘೋಷಿಸಲಾಗಿದ್ದು, ಸಾರ್ವಜನಿಕರು ಎಚ್ಚರದಿಂದ ಇರಬೇಕು. ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದಲ್ಲಿ ಕಂಟ್ರೋಲ್‌ ರೂಂಗೆ ಕರೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

***

ಎನ್‌ಡಿಆರ್‌ಎಫ್‌ ತಂಡ ಒಂದೆರಡು ದಿನದಲ್ಲಿ ಮಂಗಳೂರಿಗೆ ಬರಲಿದ್ದು, ಮಳೆಯ ಸಂದರ್ಭದಲ್ಲಿ ಅನಾಹುತ ಸಂಭವಿಸಿದರೂ ಜನರ ಸುರಕ್ಷತೆಗೆ ಈ ತಂಡ ಆದ್ಯತೆ ನೀಡಲಿದೆ.

– ಸಿಂಧೂ ಬಿ.ರೂಪೇಶ್‌

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು