ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡ್ರಗ್ಸ್‌ ಮುಕ್ತ ಜಿಲ್ಲೆ’ ಆಗುವತ್ತ ದಕ್ಷಿಣ ಕನ್ನಡ ಹೆಜ್ಜೆ

ಜಿಲ್ಲಾಡಳಿತದಿಂದ ವಿಶೇಷ ಅಭಿಯಾನ, ಶಿಕ್ಷಣ ಸಂಸ್ಥೆಗಳ ‘ಡ್ರಗ್ಸ್‌ ನಿಗ್ರಹ ಕೋಶ’ಗಳಿಗೆ ಕಾಯಕಲ್ಪ
Published 17 ಜುಲೈ 2023, 0:16 IST
Last Updated 17 ಜುಲೈ 2023, 0:16 IST
ಅಕ್ಷರ ಗಾತ್ರ

ಮಂಗಳೂರು: ‘ಅವನು ನಗರದ ವೈದ್ಯಕೀಯ ಕಾಲೇಜೊಂದರ ಎಂಬಿಬಿಎಸ್‌ ವಿದ್ಯಾರ್ಥಿ. ಮೊದಲ ವರ್ಷ ಶೈಕ್ಷಣಿಕ ಚಟುವಟಿಕೆ ಚೆನ್ನಾಗಿಯೇ ಇತ್ತು. ಪ್ರತಿ ತಿಂಗಳೂ ಕುಂದಾಪುರದ ಮನೆಗೆ ಹೋಗಿ ಬರುತ್ತಿದ್ದ. ಕ್ರಮೇಣ ಈ ಪರಿಪಾಟ ಕಡಿಮೆಯಾಯಿತು. ಹಾಸ್ಟೆಲ್‌ನಲ್ಲೂ ಹೆಚ್ಚಾಗಿ ಒಬ್ಬಂಟಿಯಾಗಿರಲು ಶುರುಮಾಡಿದ. ಒಂದು ದಿನ ಯಾನ್ನೂ ಹತ್ತಿರ ಬರಗೊಡದೇ, ಕಿರುಚಿ ವಿಚಿತ್ರವಾಗಿ ವರ್ತಿಸಲಾರಂಭಿಸಿದ’

‘ಅವನ ವರ್ತನೆಗೆ ಡ್ರಗ್ಸ್‌ ಕಾರಣ ಎಂದು ತಿಳಿದ ಬಳಿಕ ಪೋಷಕರು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಚಿಕಿತ್ಸೆ ಸ್ವಲ್ಪ ತಡವಾಗಿದ್ದರೂ ಮತ್ತೆ ಸರಿದಾರಿಗೆ ಬರಲಾಗದಷ್ಟು ದೂರಕ್ಕೆ ಈ ವ್ಯಸನ ಆತನನ್ನು ಕೊಂಡೊಯ್ಯುತ್ತಿತ್ತು. ಚಿಕಿತ್ಸೆ ಬಳಿಕ ಆತನ ಬದುಕು ಹಳಿಗೆ ಮರಳಿದೆ. ಈಗ ಅವನೂ ನನ್ನಂತೆಯೇ ವೈದ್ಯ’ ನಗರದಲ್ಲಿ ವ್ಯಾಪಕವಾಗಿರುವ ಡ್ರಗ್ಸ್‌ ಹಾವಳಿ ಕರಾಳ ರೂಪವನ್ನು ಮನೋರೋಗತಜ್ಞ ಡಾ.ರವೀಶ್‌ ತುಂಗ ವಿವರಿಸಿದ್ದು ಹೀಗೆ.

‘ಇದು ಒಬ್ಬ ವಿದ್ಯಾರ್ಥಿಯ ಕಥೆಯಲ್ಲ. ನಗರದಲ್ಲಿ ಸುಮಾರು 70 ಮನೋರೋಗ ತಜ್ಞರಿದ್ದು, ಪ್ರತಿಯೊಬ್ಬರ ಬಳಿಗೂ ನಿತ್ಯ ಇಂತಹ ಐದಾರು ಪ್ರಕರಣಗಳಾದರೂ ಬರುತ್ತವೆ. ಅವರಲ್ಲಿ ಬಹುತೇಕರು ಖಿನ್ನತೆಯ ಹಂತವನ್ನು ತಲುಪಿದವರು. ಕನಸು ಕಾಣಬೇಕಾದ ಜೀವಗಳು ಕಂಗಳ ಹೊಳಪು ಕಳೆದುಕೊಂಡು ಎಳವೆಯಲ್ಲೇ ಕಮರುವುದನ್ನು ನೋಡಲಾಗುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮೂರುವರೆ ವರ್ಷಗಳಲ್ಲಿ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಡ್ರಗ್ಸ್‌ ಸೇವಿಸಿ ಸಿಕ್ಕಿ ಬಿದ್ದ 1,187 ಮಂದಿ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅವರಲ್ಲಿ ವಿದ್ಯಾರ್ಥಿಗಳ ಪಾಲು ಗಣನೀಯವಾದುದು. ಜಿಲ್ಲೆಯಲ್ಲಿ ದಿನೇ ದಿನೇ ವ್ಯಾಪಿಸುತ್ತಿರುವ ಡ್ರಗ್ಸ್‌ ಹಾವಳಿ ಕುರಿತು ಚರ್ಚಿಸಲೆಂದೇ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅಧಿಕಾರಿಗಳ ವಿಶೇಷ ಸಭೆಯನ್ನು ಈಚೆಗೆ ನಡೆಸಿದ್ದರು. ‘ಡ್ರಗ್ಸ್‌ ಹಾವಳಿಯನ್ನು ಮಟ್ಟ ಹಾಕಲು ಆ.15ರ ಗಡುವನ್ನೂ ವಿಧಿಸಿದ್ದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿನಲ್‌ ಎಂ.ಪಿ  ಅವರು ಇದಕ್ಕೆ ಕಾರ್ಯತಂತ್ರ ರೂಪಿಸಿ,  ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ಜಿಲ್ಲೆಯ ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ‘ಡ್ರಗ್ಸ್‌ ನಿಗ್ರಹ ಕೋಶ’ ನಾಮಕಾವಸ್ಥೆಯಲ್ಲಿತ್ತು. ತಮ್ಮ ವ್ಯಾಪ್ತಿಯಲ್ಲಿ ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗುವಂತೆ ಈ ಕೋಶಕ್ಕೆ ಶಕ್ತಿ  ತುಂಬಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಡ್ರಗ್ಸ್‌ ಹಾವಳಿ ಪತ್ತೆ ಹಚ್ಚಿ, ನಿಯಂತ್ರಿಸುವ ಕ್ರಮಗಳ ಬಗ್ಗೆ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳಿಗೆ ತರಬೇತಿ ನೀಡಲಾಗಿದೆ.

‘ಡ್ರಗ್ಸ್‌ ಹಾವಳಿಯ ಮೂಲವನ್ನು ಗುರುತಿಸಿ, ಅದನ್ನು ಹೇಗೆ ನಿಯಂತ್ರಿಸಬೇಕೆಂಬ ಸ್ಪಷ್ಟ ದಿಕ್ಸೂಚಿಯನ್ನು ಸಿದ್ಧಪಡಿಸಿದ್ದೇವೆ. ಪ್ರತಿ ಇಲಾಖೆಗೂ ಜವಾಬ್ದಾರಿ ನಿಗದಿಪಡಿಸಿ, ಸಮನ್ವಯದಿಂದ ಕೆಲಸ ಮಾಡುವುದಕ್ಕೆ ಕ್ರಮ ಕೈಗೊಂಡಿದ್ದೇವೆ. ಶಿಕ್ಷಣ ಸಂಸ್ಥೆಗಳ ಪಾತ್ರ ಇದರಲ್ಲಿ ಬಹಳ ಮುಖ್ಯ. ಜಿಲ್ಲೆಯ ಮನೋರೋಗ ತಜ್ಞರು, ವ್ಯಸನ ಮುಕ್ತಿ ಕೇಂದ್ರಗಳು ನಮ್ಮೊಂದಿಗೆ ಕೈಜೋಡಿಸಿವೆ. ಡ್ರಗ್ಸ್‌ ಸೇವಿಸುವಂತಹ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ, ಅವರಿಗೆ ಕೌನ್ಸೆಲಿಂಗ್‌ ನಡೆಸುವುದಕ್ಕೆ ಅವರೂ ನೆರವಾಗುತ್ತಿದ್ದಾರೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌  ‘ಪ್ರಜಾವಾಣಿ’ಗೆ ತಿಳಿಸಿದರು.

ಪೊಲೀಸ್‌ ಇಲಾಖೆ ಡ್ರಗ್ಸ್‌ ಪೆಡ್ಲರ್‌ಗಳ ಪತ್ತೆಗೆ ಕಠಿಣ ಕ್ರಮ ಕೈಗೊಂಡಿದೆ. ಡ್ರಗ್ಸ್‌ ವ್ಯಸನಮುಕ್ತರಿಗೆ ಠಾಣೆಗಳಲ್ಲಿ ವಾರಂತ್ಯದಲ್ಲಿ ಆಪ್ತ ಸಮಾಲೋಚನೆಯನ್ನೂ ನಡೆಸಲಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್‌ ಹಾವಳಿ ನಿಯಂತ್ರಣದ ಜಾಗೃತಿ ಕಾರ್ಯಕ್ರಮಗಳನ್ನೂ ಏರ್ಪಡಿಸುತ್ತಿದೆ.

ಕುಲದೀಪ್ ಕುಮಾರ್ ಆರ್.ಜೈನ್
ಕುಲದೀಪ್ ಕುಮಾರ್ ಆರ್.ಜೈನ್

‘ಡ್ರಗ್ಸ್‌ ಮುಕ್ತ ದಕ್ಷಿಣ ಕನ್ನಡ’– ತಿಂಗಳು ಪೂರ್ತಿ ವಿಶೇಷ ಅಭಿಯಾನ ಶಿಕ್ಷಣ ಸಂಸ್ಥೆಗಳ ಡ್ರಗ್ಸ್ ನಿಗ್ರಹ ಕೋಶಗಳಿಗೆ ಕಾಯಕಲ್ಪ ಡ್ರಗ್ಸ್‌ ಪೂರೈಕೆಗೆ ಕಡಿವಾಣ ಹಾಕಲು ವಿಶೇಷ ತಂಡಗಳ ರಚನೆ

ಡ್ರಗ್ಸ್‌ ಹಾವಳಿಯನ್ನು ಶಾಶ್ವತವಾಗಿ ಮಟ್ಟಹಾಕಲು ವ್ಯವಸ್ಥೆಯನ್ನು ಸಜ್ಜುಗೊಳಿಸುತ್ತಿದ್ದೇವೆ. ಈ ಕಾರ್ಯಕ್ಕೆ ಆದ್ಯತೆ ಸಿಗಬೇಕೆಂಬ ಕಾರಣಕ್ಕೆ ಆ.15ರ ಗಡುವನ್ನು ಹಾಕಿಕೊಂಡು ಯೋಜನೆ ರೂಪಿಸಿದ್ದೇವೆ.
ಮುಲ್ಲೈ ಮುಗಿಲನ್ ಎಂ.ಪಿ ಜಿಲ್ಲಾಧಿಕಾರಿ ದಕ್ಷಿಣ ಕನ್ನಡ ಜಿಲ್ಲೆ
ಡ್ರಗ್ಸ್‌ ಪೆಡ್ಲರ್‌ಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಡ್ರಗ್ಸ್‌ ಪೂರೈಕೆ ತಡೆಯಲು ಠಾಣಾ ಹಂತದಲ್ಲಿ ವಿಶೇಷ ತಂಡಗಳನ್ನು ರಚಿಸಿದ್ದೇವೆ.
ಕುಲದೀಪ್‌ ಕುಮಾರ್‌ ಆರ್‌.ಜೈನ್‌ ಪೊಲೀಸ್‌ ಕಮಿಷನರ್‌ ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT